ಉಪ್ಪಿನಂಗಡಿ: ಸಮಾಜಮುಖಿ ಚಿಂತನೆಯೊಂದಿಗೆ ಸಮುದಾಯದ ದುರ್ಬಲ ವರ್ಗದವರನ್ನು ಮೇಲೆತ್ತುವ ಕಾರ್ಯ ನಮ್ಮ ಸಮುದಾಯದವರಿಂದ ನಡೆದಾಗ ಒಕ್ಕಲಿಗ ಸಮುದಾಯವು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಗಳಿಸಲು ಸಾಧ್ಯವಲ್ಲದೆ, ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯ ಎಂದು ಕಾವೂರಿನ ಆದಿಚುಂಚನಗಿರಿ ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಪೆರಿಯಡ್ಕದ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಒಕ್ಕಲಿಗ ಗೌಡ ಸೇವಾ ಸಂಘದ ಉಪ್ಪಿನಂಗಡಿ ಗ್ರಾಮ ಸಮಿತಿ, ಉಪ್ಪಿನಂಗಡಿ ವಲಯ ಮತ್ತು ಯುವ ಒಕ್ಕಲಿಗ ಗೌಡ ಗ್ರಾಮ ಸಮಿತಿ, ಒಕ್ಕಲಿಗ ಮಹಿಳಾ ಸಮಿತಿ ಉಪ್ಪಿನಂಗಡಿ ಹಾಗೂ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಉಪ್ಪಿನಂಗಡಿ ಇವುಗಳ ೮ನೇ ವರ್ಷದ ಸಂಘದ ಮಹಾಸಭೆ ಹಾಗೂ ಒಕ್ಕಲಿಗ ಗೌಡ ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮದಲ್ಲಿ ದೀಪಪ್ರಜ್ವಲನೆಗೈದು ಅವರು ಆಶೀರ್ವಚನ ನೀಡುತ್ತಿದ್ದರು.
ಪ್ರತಿಯೋರ್ವರು ತಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ವಿಚಾರಧಾರೆಗಳನ್ನು ತಿಳಿಸಿ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ರೂಪುಗೊಳಿಸಬೇಕು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವವೆಂಬ ಧ್ಯೇಯವಾಕ್ಯದೊಂದಿಗೆ ಬದುಕಿದಾಗ ಸಮಾಜದ ಅಭಿವೃದ್ಧಿಯಾಗುವುದಲ್ಲದೆ, ನಮ್ಮ ಜೀವನವೂ ಪಾವನವಾಗಲು ಸಾಧ್ಯ ಎಂದರು.
ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಒಕ್ಕಲಿಗ ಸೇವಾ ಸ್ವಸಹಾಯ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ ಗೌಡ, ನಮ್ಮ ಸಮಾಜದ ಮಹಿಳೆಯರನ್ನು ಸದೃಢಗೊಳಿಸುವಂತಹ ಕಾರ್ಯಗಳು ಟ್ರಸ್ಟ್ ವತಿಯಿಂದ ನಡೆಯುತ್ತಿದ್ದು, ಎಲ್ಲಾ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಪಘಾತದಲ್ಲಿ ತೊಂದರೆಗೊಳಗಾದ ಸಮುದಾಯದ ಮೂವರಿಗೆ ಧನ ಸಹಾಯ ನೀಡಲಾಯಿತು. ಸರ್ವೋದಯ ಪ್ರೌಢಶಾಲೆಗೆ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಮಿತಿಯಿಂದ ಧನಸಹಾಯ ಹಾಗೂ ಅಂಗನವಾಡಿಯಿಂದ ೧೦ನೇ ತರಗತಿಯವರೆಗಿನ ಮಕ್ಕಳಿಗೆ ಈ ಸಂದರ್ಭ ಪುಸ್ತಕ ವಿತರಣೆ ಮಾಡಲಾಯಿತು. ಗ್ರಾಮದ ಮಾಗಣೆ ಗೌಡರಾದ ಆನಂದ ಕುಂಟಿನಿ, ಒಂದನೇ ಊರ ಗೌಡರಾದ ಉದಯ ಅತ್ರೆಮಜಲು, ಎರಡನೇ ಊರ ಗೌಡರಾದ ಪರಮೇಶ್ವರ ಕಂಪ ಹಾಗೂ ಸಮುದಾಯದ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಜಯಂತಿ ಕೆ. ರಂಗಾಜೆ ಅವರನ್ನು ಗುರುತಿಸಿ, ಗೌರವಿಸಲಾಯಿತು.
ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ಶೀನಪ್ಪ ಗೌಡ ಬೊಳ್ಳಾವು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ ಕೆ. ಕೆಡೆಂಜಿ, ಪುತ್ತೂರು ತಾಲೂಕು ಒಕ್ಕಲಿಗ ಮಹಿಳಾ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ಪುತ್ತೂರು ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ. ಮನೋಹರ ಗೌಡ, ಒಕ್ಕಲಿಗ ಗೌಡ ಉಪ್ಪಿನಂಗಡಿ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಧರ್ನಪ್ಪ ಗೌಡ ನೆಡ್ಚಿಲು, ಯುವ ಒಕ್ಕಲಿಗ ಗೌಡ ಉಪ್ಪಿನಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ಉಮೇಶ ಗೌಡ, ಮಹಿಳಾ ಗ್ರಾಮಸಮಿತಿಯ ಅಧ್ಯಕ್ಷೆ ಕಮಲಾಕ್ಷಿ ಬೊಳ್ಳಾವು ಉಪಸ್ಥಿತರಿದ್ದರು.
ಕಾರ್ಯದರ್ಶಿ ಲಕ್ಷ್ಮಣ ನೆಡ್ಚಿಲು ವರದಿ ವಾಚಿಸಿದರು. ಕೇಶವ ರಂಗಾಜೆ ವಂದಿಸಿದರು. ಸುರೇಶ್ ಅತ್ರೆಮಜಲು ಹಾಗೂ ಆನಂದ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.