ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೆ ಚಾಲನೆ

0

  • ಭಾಷಾ ಸಂರಚನೆಯ ಕ್ರಮವನ್ನು ಅರಿಯಬೇಕು : ಶಕುಂತಲಾ ನಾಯಕ್

ಪುತ್ತೂರು: ಪ್ರತಿಯೊಂದು ಭಾಷೆಗೂ ಅದರದ್ದೇ ಆದ ರಚನೆ ಇರುತ್ತದೆ. ಆ ಸಂರಚನೆಯ ಕ್ರಮವನ್ನು ಅರಿತಾಗ ಭಾಷಾ ಕಲಿಕೆ ಸುಲಭಸಾಧ್ಯವೆನಿಸುತ್ತದೆ. ಗ್ರಾಮಾಂತರ ಭಾಗದ ಮಕ್ಕಳು ಇಂಗ್ಲಿಷ್ ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ತನ್ಮೂಲಕ ಉತ್ಕೃಷ್ಟ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಪುತ್ತೂರಿನ ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಾ ನಾಯಕ್ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಇಂಗ್ಲಿಷ್ ಭಾಷೆಯನ್ನು ಕಲಿಯಬಯಸುವವರು ಇಂಗ್ಲಿಷ್‌ನಲ್ಲಿ ಆಲೋಚಿಸುವುದನ್ನು ರೂಢಿಸಿಕೊಳ್ಳಬೇಕು. ಕನ್ನಡದಲ್ಲಿ ಆಲೋಚಿಸಿ, ಇಂಗ್ಲಿಷ್‌ಗೆ ಅನುವಾದಿಸಿ ಮಾತನಾಡುವುದರಿಂದ ಭಾಷೆಯನ್ನು ಕರತಲಾಮಲಕಗೊಳಿಸುವುದು ಕಷ್ಟ. ಕ್ಲಿಷ್ಟ ಎನಿಸಿದರೂ ಇಂಗ್ಲಿಷ್‌ನಲ್ಲಿ ವ್ಯವಹರಿಸುವುದನ್ನು ಬೆಳೆಸಿಕೊಳ್ಳಬೇಕು. ಆಗ ಭಾಷೆಯ ಹಿಡಿತ ತನ್ನಿಂತಾನಾಗಿ ಒಡಮೂಡುವುದಕ್ಕೆ ಸಾಧ್ಯ ಎಂದು ಅಬಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಷೆ ಅತ್ಯಂತ ಅಗತ್ಯವಾದ ವಿಚಾರ. ಔದ್ಯೋಗಿಕ ಕ್ಷೇತ್ರಕ್ಕಂತೂ ಇಂಗ್ಲಿಷ್ ಭಾಷೆಯ ಅಗತ್ಯ ತುಂಬಾ ಇದೆ. ಕಾಲೇಜು ಶಿಕ್ಷಣದ ಜತೆಜತೆಗೆ ಇಂಗ್ಲಿಷ್ ಕಲಿಕಾ ಪ್ರಕ್ರಿಯೆಗೆ ತಮ್ಮನ್ನು ತಾವು ಒಡ್ಡಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಲಾಭ ದೊರಕುವುದಕ್ಕೆ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂಗ್ಲಿಷ್ ಸಂಸ್ಕೃತಿ ನಮಗೆ ಬೇಕಾಗಿಲ್ಲ ಆದರೆ ಭಾಷೆಯ ಅಗತ್ಯವಿದೆ. ಭಾರತೀಯತೆಯನ್ನು ಜಗತ್ತಿನಾದ್ಯಂತ ಪಸರಿಸುವುದಕ್ಕೆ ಮಾಧ್ಯಮವಾಗಿ ಇಂಗ್ಲಿಷ್ ಭಾಷೆಯನ್ನು ಬಳಸಿಕೊಳ್ಳಬೇಕು. ಹಾಗೆಂದು ಭಾಷೆಯನ್ನೂ ಭಾರತೀಯ ನೆಲೆಗಟ್ಟಿನಲ್ಲಿ ಬಳಸುವ ಸಾಧ್ಯತೆಯ ಬಗೆಗೆ ಆಲೋಚಿಸಬೇಕು. ಮಿಸ್ಟರ್, ಮಿಸ್ ಬಳಕೆಯ ಬದಲಾಗಿ ಶ್ರೀ, ಶ್ರೀಮತಿ ಬಳಕೆಯನ್ನು ಇಂಗ್ಲಿಷ್‌ನಲ್ಲೂ ಚಾಲ್ತಿಗೆ ತರಬೇಕಿದೆ ಎಂದರು.
ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ ಹಾಗೂ ಅಂಕಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here