ಗುತ್ತಿಗೆದಾರರ ವಿರುದ್ಧ ಆಕ್ರೋಶ-ಶಾಸಕರು ಮಧ್ಯಪ್ರವೇಶಿಸುವಂತೆ ಆಗ್ರಹ
ಪುತ್ತೂರು: ಕಳೆದ 8 ತಿಂಗಳ ಹಿಂದೆ ದುರಸ್ತಿಗೊಂಡ ತಿಂಗಳಾಡಿ-ಮುಂಡೂರು ರಸ್ತೆ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮತ್ತು ಈ ಬಗ್ಗೆ ಕೂಡಲೇ ಶಾಸಕರು ಗಮನಹರಿಸಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವ ಮೂಲಕ ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ತಿಂಗಳಾಡಿ ಸಮೀಪದ ದರ್ಬೆಯಲ್ಲಿ ಸೆ.11ರಂದು ನಡೆಯಿತು.
ಪರ್ಸಂಟೇಜ್ ವ್ಯವಹಾರ ನಡೆದಿರುವ ಸಂಶಯವಿದೆ-ಪುರುಷೋತ್ತಮ
ಆಮ್ ಆದ್ಮಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ ಮಾತನಾಡಿ ತಿಂಗಳಾಡಿ-ನೈತ್ತಾಡಿ ರಸ್ತೆ ಅಗಲೀಕರಣ ಮತ್ತು ದುರಸ್ತಿ ಕಾರ್ಯ 18 ಲಕ್ಷ ರೂ. ಅನುದಾನದಲ್ಲಿ 8 ತಿಂಗಳ ಹಿಂದೆ ಆಗಿದ್ದು ರಸ್ತೆಗೆ ತೇಪೆ ಹಚ್ಚಿದ ಡಾಮರು ಎದ್ದು ಹೋಗಿ ಗುಂಡಿ ನಿರ್ಮಾಣ ಆಗಿದ್ದು ಅಗಲ ಇದ್ದ ರಸ್ತೆಯನ್ನು ಕಿರಿದು ಮಾಡಲಾಗಿದೆ. ಆ ಮೂಲಕ ಟೆಂಡರ್ ಪಡೆದುಕೊಂಡವರು ರೂ.೧೮ ಲಕ್ಷ ಹಣವನ್ನು ನೀರಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಗ್ರಾ.ಪಂ. ಸದಸ್ಯರು ವಿಚಾರದ ಬಗ್ಗೆ ಶಾಸಕರಿಗೆ ತಿಳಿಸಿದ್ದರೂ ಗುತ್ತಿಗೆದಾರರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿರುವ ಶಾಸಕರು ಇದುವರೆಗೂ ಮಾತನಾಡಿಲ್ಲ. ಇಲ್ಲಿ ಪರ್ಸಂಟೇಜ್ ವ್ಯವಹಾರ ನಡೆದಿದೆಯೇ ಎನ್ನುವ ಸಂಶಯ ಕಾಡುತ್ತಿದ್ದು ಈ ರೀತಿಯ ಭ್ರಷ್ಟಾಚಾರ ಮಾಡಿ ಕಾಂಕ್ರಿಟೀಕರಣ, ಡಾಮರೀಕರಣ ಮಾಡಲು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮುಂದಕ್ಕೆ ಆಮ್ ಆದ್ಮಿ ಪಕ್ಷ ಅವಕಾಶ ಕೊಡುವುದಿಲ್ಲ. ಕಳಪೆ ಕಾಮಗಾರಿ ಆದಲ್ಲಿಗೆಲ್ಲ ನಾವು ಭೇಟಿ ಕೊಟ್ಟು ಅಲ್ಲಿನ ಜನರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.
ಶಾಸಕರು ಕೂಡಲೇ ಗಮನಹರಿಸಬೇಕು-ಜನಾರ್ದನ ಬಂಗೇರ
ಆಮ್ ಆದ್ಮಿ ಪಕ್ಷದ ಸಂಘಟನಾ ಉಸ್ತುವಾರಿ ಜನಾರ್ದನ ಬಂಗೇರ ಮಾತನಾಡಿ ಇಲ್ಲಿ 40% ಅಲ್ಲ 50% ಪರ್ಸಂಟ್ ತಿಂದಿದ್ದಾರೆ ಎಂದು ಕಾಣುತ್ತಿದ್ದು ಇಲ್ಲಿ ಯಾವುದೇ ತಾಂತ್ರಿಕ ಕಾಮಗಾರಿ ನಡೆದಿಲ್ಲ. ಕಾಮಗಾರಿ ಆಗುವ ವೇಳೆ ಯಾವುದೇ ಇಂಜಿನಿಯರ್ ಬಂದಿಲ್ಲ. ಇಲ್ಲಿ 5 ಲಕ್ಷ ರೂ. ಹಣ ಖರ್ಚಾಗಿದ್ದು ಉಳಿದ ಹಣ ಎಲ್ಲಿಗೆ ಹೋಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು
ನಾವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಕಾಮಗಾರಿ ನಡೆದು ೮ ತಿಂಗಳಲ್ಲೇ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಶಾಸಕರು ಕೂಡಲೇ ಈ ಬಗ್ಗೆ ಗಮನಹಿರಿಸಿ ಪರಿಹಾರ ಒದಗಿಸಿಕೊಡಬೇಕು ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ಕಳಪೆ ಕಾಮಗಾರಿ ವಿರುದ್ಧ ನಿರಂತರ ಹೋರಾಟ-ಡಾ.ವಿಶು ಕುಮಾರ್
ಆಮ್ ಆದ್ಮಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಡಾ.ಬಿ.ಕೆ ವಿಶು ಕುಮಾರ್ ಮಾತನಾಡಿ ಕಳಪೆ ಕಾಮಗಾರಿ ವಿರುದ್ಧ ಆಮ್ ಆದ್ಮಿ ಪಕ್ಷ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯ ಮಾಡುತ್ತೇವೆ.
ಆಮ್ ಆದ್ಮಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು, ಮುಂಡೂರು ಗ್ರಾ.ಪಂ ಸದಸ್ಯರೂ ಆದ ಮಹಮ್ಮದ್ ಆಲಿ ನೇರೋಳ್ತಡ್ಕ ಮಾತನಾಡಿ ತಿಂಗಳಾಡಿ-ನೈತ್ತಾಡಿ ರಸ್ತೆ ದುರಸ್ತಿ ಕಾಮಗಾರಿ ಮಾಡಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಇಲ್ಲಿ ಕಾಟಾಚಾರಕ್ಕೆ ಕಾಮಗಾರಿ ಆಗಿದೆ. ತೇಪೆ ಹಚ್ಚುವ ಕಾರ್ಯಕ್ಕೆ ನಾವು ಅವಕಾಶ ಕೊಡುವುದಿಲ್ಲ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲು ಶಾಸಕರಿಗೆ ಗ್ರಾ.ಪಂ.ನಿಂದ ಮನವಿ ಮಾಡಿದ್ದೇವೆಯಾದರೂ ಈ ವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು. ಇಲ್ಲಿ ಉತ್ತಮ ಗುಣಮಟ್ಟದ ರಸ್ತೆಯನ್ನು ಗುತ್ತಿಗೆದಾರರು ಮಾಡದಿದ್ದಲ್ಲಿ ಮುಂದಕ್ಕೆ ಜನರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತೇವೆ ಮತ್ತು ಕಾನೂನು ಹೋರಾಟಕ್ಕೂ ನಾವು ಹಿಂಜರಿಯುವುದಿಲ್ಲ ಎಂದು ಮಹಮ್ಮದ್ ಆಲಿ ಹೇಳಿದರು.
ಆಮ್ ಆದ್ಮಿ ಪುತ್ತೂರು ವಿಧಾನಸಭಾ ಸಮಿತಿಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಯ್ಯದ್ ನಿಝಾರ್ ಮುರ
ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಗಣೇಶ್ ನೇರೋಳ್ತಡ್ಕ, ಅಬ್ದುಲ್ ರಝಾಕ್ ತಿಂಗಳಾಡಿ, ಹಮೀದ್ ನೇರೋಳ್ತಡ್ಕ, ಚಿದಾನಂದ ತಿಂಗಳಾಡಿ, ಮಹಮ್ಮದ್ ಸಂತೋಷ್, ಶಿವರಾಮ ಎಲಿಯ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.