* ರೂ.1ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ
* ಗರ್ಭಗುಡಿ, ನಮಸ್ಕಾರ ಮಂಟಪ ಪುನರ್ ನಿರ್ಮಾಣ
* ಮುಂದಿನ ಜಾತ್ರೆ ಬಳಿಕ ಜೀರ್ಣೋದ್ಧಾರಕ್ಕೆ ಚಾಲನೆ
ಪುತ್ತೂರು: ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವರ ಗರ್ಭಗುಡಿ, ನಮಸ್ಕಾರ ಮಂಟಪ ಪುನರ್ ನಿರ್ಮಾಣ ಸೇರಿದಂತೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರ ನಡೆಸುವುದಾಗಿ ಭಕ್ತಾದಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯು ಸೆ.11ರಂದು ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ದೇವಸ್ಥಾನದಲ್ಲಿ ಈಗಿರುವ ಶಿಲಾಮಯ ಛಾವಣಿಯ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪವನ್ನು ತೆರವುಗೊಳಿಸಿ ನೂತನಾಗಿ ಮರದಲ್ಲಿ ಛಾವಣಿ ಪುನರ್ ನಿರ್ಮಿಸಲಾಗುವುದು. ಅಲ್ಲದೆ ಅಂತರ ಮಾಡಿನ ಗರ್ಭಗುಡಿ ನಿರ್ಮಿಸಲಾಗುವುದು. ವಾಸ್ತು ಶಿಲ್ಪಿ ಪ್ರಸಾದ್ ಮುಣಿಯಂಗಲರವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಜಾತ್ರೆ ಬಳಿಕ ಕಾಮಗಾರಿಗೆ ಚಾಲನೆ:
2023ರ ಫೆಬ್ರವರಿಯಲ್ಲಿ ಜರುಗುವ ವರ್ಷಾವಧಿ ಜಾತ್ರೋತ್ಸವದ ಬಳಿಕ ಅನುಜ್ಞಾ ಕಲಶ, ಬಾಳಾಲಯ ಪ್ರತಿಷ್ಠೆ ನಡೆಸಿ ಜೀರ್ಣೋದ್ಧಾರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರೂ.40ಲಕ್ಷ ವಾಗ್ದಾನ:
ಸಭೆಯಲ್ಲಿ ಭಕ್ತಾದಿಗಳಿಂದ ಸುಮಾರು ರೂ.40 ಲಕ್ಷಗಳ ವಾಗ್ದಾನ ಬಂದಿದೆ. ಜೀರ್ಣೋದ್ಧಾರದ ಕುರಿತು ಮಾರ್ಗದರ್ಶನ ನೀಡಿದ ದೇವಸ್ಥಾನದ ತಂತ್ರಿ ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವ ದೋಷಗಳನ್ನು ಶೀಘ್ರವಾಗಿ ಪರಿಹರಿಸಿಕೊಂಡು ಮುಂದಿನ ಕಾರ್ಯಕ್ರಮಗಳನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬಿ., ಪ್ರಧಾನ ಕಾರ್ಯದರ್ಶಿ ಹರಿಪ್ರಕಾಶ್ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಆಧ್ಯಕ್ಷ ಬಾಲಕೃಷ್ಣ ಭಟ್ ಘಾಟ ಸ್ವಾಗತಿಸಿದರು. ಸದಸ್ಯ ದೇವಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಿಠಲ ರೈ ಬೈಲಾಡಿ, ಮಾಜಿ ಸದಸ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.