ಮೊಬೈಲ್ ಫೋನ್ ಬದಲು ಕೆಟ್ಟುಹೋದ ತಿಂಡಿಯ ಪೊಟ್ಟಣ! ಅದೃಷ್ಟದ ಹೆಸರಲ್ಲಿ ಗ್ರಾಹಕರಿಗೆ ಪಂಗನಾಮ

0

ಉಪ್ಪಿನಂಗಡಿ: ಅದೃಷ್ಟ( ಲಕ್ಕಿ ) ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 8,800 ರೂ. ಮುಖ ಬೆಲೆಯ ಮೊಬೈಲ್ ಪೋನ್ ನ್ನು 1,785 ಕ್ಕೆ ಕಳುಹಿಸಲಾಗಿದೆ ಎಂಬ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್ ಖರೀದಿಸಿದ ವ್ಯಕ್ತಿಯೋರ್ವರಿಗೆ ಮೊಬೈಲ್ ಪೋನ್ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ದೇವಳವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗಷ್ಟೇ ತನ್ನ ಮನೆ ಮಂದಿಗೆಂದು ಮೂರು ವಿವೋ ಕಂಪೆನಿಯ ಮೊಬೈಲ್ ಪೋನ್ ಅನ್ನು ಖರೀದಿಸಿದ್ದರು. ಇದರ ಬಳಿಕ ಸಂಸ್ಥೆಯ ಅಧಿಕಾರಿಯೆಂದು ಅವರ ಮೊಬೈಲ್ ಪೋನ್‌ಗೆ ಕರೆಯೊಂದನ್ನು ಮಾಡಿದ ವ್ಯಕ್ತಿಯೋರ್ವರು ಮೂರು ಮೊಬೈಲ್ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆಯಲ್ಲಿ 8,800 ರೂ ಬೆಲೆಯ ಮೊಬೈಲ್ ಪೋನ್ ನ್ನು ಕೇವಲ 1,785 ರೂಪಾಯಿಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ’ ಎಂದು ತಿಳಿಸಿದ್ದರು. ತಾನು ಪೋನ್ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದೂ ನಿಜವಾಗಿರಬಹುದೆಂದು ನಂಬಿದ ಭವಾನಿ ಶಂಕರ್ ರವರು ಸೋಮವಾರದಂದು ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡರಲ್ಲದೆ, ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ. ತಾನು ಪೋನ್ ಖರೀದಿಸಿರುವುದು ಈ ವಂಚಕರ ತಂಡಕ್ಕೆ ತಿಳಿದಿರುವ ಬಗೆ ಹೇಗೆ ಎನ್ನುವ ಪ್ರಶ್ನೆಯೊಂದಿಗೆ, ತಾನು ಮೋಸ ಹೋದಂತೆ ಇನ್ಯಾರೂ ಮೋಸ ಹೋಗಬಾರದೆಂದು ಪ್ರಕರಣವನ್ನು ಅವರು ಮಾಧ್ಯಮದ ಗಮನಕ್ಕೆ ತಂದಿರುತ್ತಾರೆ.

ಎಲ್ಲೋ ನಡೆದಿರುವ ಖರೀದಿ ಇನ್ನೆಲ್ಲೋ ಇರುವ ವಂಚಕರ ಜಾಲಕ್ಕೆ ತಿಳಿಯುತ್ತದೆ ಎನ್ನುವುದಾದರೆ ವ್ಯವಸ್ಥೆಯೊಳಗೆ ವಂಚಕರ ನೆಟ್‌ವರ್ಕ್ ಕ್ರಿಯಾಶೀಲವಾಗಿರುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷಾ ಮಾರ್ಕೆಟಿಂಗ್ ಎಂಬ ಸಂಸ್ಥೆಯ ಹೆಸರಿನಲ್ಲಿ ವಂಚಿಸಿರುವ ಈ ವಂಚಕರು ತಮ್ಮ ಕೃತ್ಯಕ್ಕಾಗಿಯೇ ನಕಲಿ ಸಂಸ್ಥೆಗಳನ್ನು ಸೃಷ್ಟಿಸಿದ್ದಾರೆಯೇ ಅಥವಾ ವ್ಯವಸ್ಥಿತ ಸಂಸ್ಥೆಯೊಂದರ ಹೆಸರು ಕೆಡಿಸಲು ತಮ್ಮ ಕೃತ್ಯಕ್ಕೆ ಅಂತಹ ಸಂಸ್ಥೆಯ ಹೆಸರು ಬಳಸಿದ್ದಾರೆಯೇ ? ಎಂಬೆಲ್ಲಾ ಸಂದೇಹಗಳನ್ನು ತನಿಖೆಯಲ್ಲಿ ಪತ್ತೆ ಹಚ್ಚಬೇಕಾಗಿದೆ.

LEAVE A REPLY

Please enter your comment!
Please enter your name here