ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸುದ್ದಿ ನ್ಯೂಸ್ ಕಛೇರಿಗೆ ಭೇಟಿ ನೀಡಿದ ವಿಚಾರ – ಪತ್ರಕರ್ತರ ಸಂಘದ ಕೆಲವು ಸದಸ್ಯರ ಕೆಂಗಣ್ಣು: ಅಸಮಾಧಾನ ಸ್ಫೋಟ

0

‘ಎಲ್ಲಾದರೂ ಹೋಗಿ ಸಾಯೋದನ್ನು ಆಯ್ಕೆ ಮಾಡಿಕೊಳ್ತೇನೆ’  ಎಂದು ಸಂದೇಶ ರವಾನಿಸಿ ಆತಂಕ ಸೃಷ್ಠಿಸಿದ ಜತೆ ಕಾರ್ಯದರ್ಶಿ ಅಜಿತ್ ಕುಮಾರ್

ಇಂದು ಸಭೆ ನಿಗದಿ

ಮತ್ತೆ ಕುತೂಹಲದ ಕೇಂದ್ರ ಬಿಂದುವಾದ ಪತ್ರಿಕಾ ಭವನ

ಪುತ್ತೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರು ಸೆ.10ರಂದು ಪುತ್ತೂರು ಪತ್ರಿಕಾ ಭವನಕ್ಕೆ ಭೇಟಿ ನೀಡಿ ಪತ್ರಕರ್ತರಿಗೆ ಗುರುತಿನ ಚೀಟಿ ಮತ್ತು ಆರೋಗ್ಯ ಕಾರ್ಡ್ ವಿತರಿಸಿದ ಬಳಿಕ ಸುದ್ದಿ ನ್ಯೂಸ್ ಚಾನೆಲ್ ಕಛೇರಿಗೆ ಭೇಟಿ ನೀಡಿರುವುದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕೆಲವು ಸದಸ್ಯರ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ವಿಚಾರ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವಾಟ್ಸಾಪ್ ಗ್ರೂಪ್‌ನಲ್ಲಿ ಭಾರೀ ಚರ್ಚೆ ಉಂಟು ಮಾಡಿದೆ. ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಅಜಿತ್ ಕುಮಾರ್‌ರವರು ‘ಅವರಿಗೆ ಹೆದರಿ ಬದುಕೋದಕ್ಕಿಂತ ಎಲ್ಲಾದರೂ ಹೋಗಿ ಸಾಯೋದನ್ನು ನಾನು ಆಯ್ಕೆ ಮಾಡಿಕೊಳ್ತೇನೆ’ ಎಂದು ‘ಸಾಯುವ’ ಸಂದೇಶ ಹಾಕಿ ಆತಂಕ ಸೃಷ್ಠಿಸಿದ್ದಾರೆ. ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ.ರವರು ‘ಕೈಕಾಲು ಹಿಡಿಯುವುದು ಬೇಡ, ಪ್ರೆಸ್‌ಕ್ಲಬ್ ಕಟ್ಟಡ ಅವರ ಪಾಲಾಗುವುದು ನಿಶ್ಚಿತ’ ಎಂದು ಸಂದೇಶ ಹಾಕಿದ್ದಾರಲ್ಲದೆ ಸೆ.13ರಂದು ಪತ್ರಕರ್ತರ ಸಂಘದ ಸಭೆಯನ್ನು ನಿಗದಿಪಡಿಸಿದ್ದಾರೆ. ಈ ವಿಚಾರ ಬಹಳಷ್ಟು ಕುತೂಹಲ ಮೂಡಿಸಿದೆ. ಮತ್ತೆ ಎಲ್ಲರ ಚಿತ್ತ ಪತ್ರಿಕಾ ಭವನದತ್ತ ಹರಿಯುವಂತಾಗಿದೆ.

ಪತ್ರಕರ್ತರ ಸಂಘದ ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚೆ: ಸಭೆ ನಿಗದಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರು ಸೆ.10ರಂದು ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿ ನ್ಯೂಸ್ ಚಾನೆಲ್ ಕಛೇರಿಗೆ ಭೇಟಿ ನೀಡಿರುವ ಬಗ್ಗೆ ಸೆ.12ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರತಿಯನ್ನು ಪತ್ರಕರ್ತರ ಸಂಘದ ವಾಟ್ಸಾಪ್ ಗ್ರೂಪ್‌ಗೆ ಹಾಕಿರುವ ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಅಜಿತ್ ಕುಮಾರ್‌ರವರು, ‘ಇದರ ಯಥಾ ಪ್ರತಿಯನ್ನು ರಾಜ್ಯಾಧ್ಯಕ್ಷರಿಗೆ ತಲುಪಿಸಿ, ನಿಮ್ಮ ಭೇಟಿಯ ಉದ್ಧೇಶ ಏನು ಅನ್ನೋದನ್ನು ಕೇಳಲಾಗುವುದು. ನನ್ನ ವಿಚಾರವನ್ನು ಪ್ರಶ್ನಿಸದೆ ನನ್ನ ಫೋಟೋ ಹಾಕಿ ಆರೋಪಿ ಎಂದು ವರದಿ ಪ್ರಕಟಿಸಿದ ಸುದ್ಧಿ ಬಿಡುಗಡೆ ಪತ್ರಿಕೆ ಕಛೇರಿಗೆ ಭೇಟಿ ನೀಡಿ ಅವರನ್ನು ಮೆಚ್ಚಿಸಲು ಹೊರಟ ಬಗ್ಗೆ ನೇರವಾಗಿ ಅವರಿಗೆ ವಾಟ್ಸ್‌ಅಪ್ ಅಥವಾ ಮೇಲ್ ಮೂಲಕ ಪ್ರಶ್ನಿಸಲಾಗುವುದು. ಬಕೆಟ್ ಹಿಡಿಯುವುದಕ್ಕೂ ಒಂದು ಮಿತಿ ಇದೆ’ ಎಂದು ಸಂದೇಶ ಹಾಕಿದ್ದಾರೆ. ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲ್ಪಟ್ಟಿದ್ದ ಅನೀಶ್ ಕುಮಾರ್‌ರವರು ‘ಹೌದು’ ಎಂದು ಅಜಿತ್‌ಗೆ ಬೆಂಬಲ ನೀಡಿದ್ದಾರೆ. ಬಳಿಕ ಅಜಿತ್ ಕುಮಾರ್‌ರವರು ‘ಶಿವಾನಂದ ತಗಡೂರು ಮೊಬೈಲ್ ನಂಬರ್ ಹಾಕಿ ಇದ್ದವರು’ ಎಂದು ಸಂದೇಶದ ಮೂಲಕ ವಿನಂತಿಸಿದ್ದಾರೆ. ಯಾರದ್ದೂ ಪ್ರತಿಕ್ರಿಯೆ ಬಾರದೇ ಇದ್ದ ಕಾರಣ ನಂತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆರವರಿಗೆ ವೈಯುಕ್ತಿಕ ಸಂದೇಶ ಕಳುಹಿಸಿದ ಅಜಿತ್ ಕುಮಾರ್‌ರವರು ‘ತುಂಬಾ ಚೆನ್ನಾಗಿದೆ ನಿಮ್ಮ ಮತ್ತು ರಾಜ್ಯಾಧ್ಯಕ್ಷರ ಪುತ್ತೂರು ಭೇಟಿ. ನನ್ನ ವಿಷಯವನ್ನು ಮರೆತು ಸುದ್ದಿ ಬಿಡುಗಡೆ ಪತ್ರಿಕೆಗೆ ಹೋಗಿ ಅವರನ್ನು ಮೆಚ್ಚಿಸಿದ ರಾಜ್ಯಾಧ್ಯಕ್ಷರ ಮತ್ತು ನಿಮ್ಮ ನಡೆ ನಿಗೂಢ. ಆರೋಪಿ ಅಂತ ಫೋಟೋ ಹಾಕಿ ಬರೆದ ಬಗ್ಗೆ ಮಾತಾಡುವ ಎಂದ ರಾಜ್ಯಾಧ್ಯಕ್ಷ ತರಾತುರಿಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಗೆ ಹೋಗಿ ಅಲ್ಲಿ ಅವರಿಂದ ಸನ್ಮಾನ ಸ್ವೀಕರಿಸುತ್ತಾರೆ. ನನ್ನ ವಿಚಾರವನ್ನು ಅಲ್ಲೇ ಮರೆತು ಬಿಡುತ್ತಾರೆ ಅಲ್ಲವೇ. ಹಣ, ಅಂತಸ್ತು ಇದ್ದರೆ ಮಾತ್ರವಲ್ಲವೇ ಪತ್ರಕರ್ತನಿಗೆ ಬೆಲೆ’ ಎಂದು ಬರೆದಿದ್ದಾರೆ. ನಂತರ ಅದರ ಸ್ಕ್ರೀನ್‌ಶಾಟ್ ತೆಗೆದು ಪತ್ರಕರ್ತರ ಸಂಘದ ವಾಟ್ಸಾಪ್ ಗ್ರೂಪ್‌ಗೆ ಹಾಕಿದ ಅಜಿತ್‌ರವರು ‘ಜಿಲ್ಲಾಧ್ಯಕ್ಷರಿಗೆ ಕಳುಹಿಸಿದೆ’ ಎಂದು ಬರೆದಿದ್ದಾರೆ. ಇದಕ್ಕೆ ಅನಿಶ್ ಕುಮಾರ್‌ರವರು ‘ಗುಡ್’ ಎಂಬ ಸೂಚಕ ಸಿಂಬಲ್ ಹಾಕುತ್ತಾರೆ. ನಂತರ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ.ರವರು ‘ನಾವು ಇನ್ನು ಯಾರ ಕೈಕಾಲು ಹಿಡಿಯುವುದು ಬೇಡ. ಇದೇ ರೀತಿ ಆದರೆ ಪುತ್ತೂರು ಪ್ರಸ್‌ಕ್ಲಬ್ ಕಟ್ಟಡ ಅವರ ಪಾಲಾಗುವುದು ನಿಶ್ಚಿತ. ಆದುದರಿಂದ ನಮ್ಮ ನಿರ್ಣಯವನ್ನು ನಾವೇ ತೆಗೆದುಕೊಳ್ಳೋಣ..’ ಎಂದು ಸಂದೇಶ ಹಾಕಿದ್ದಾರೆ. ಅಜಿತ್ ಕುಮಾರ್ ಪ್ರತಿಕ್ರಿಯಿಸಿ ‘ಕೆಲವರು ಸುಳ್ಸುದ್ದಿಯವರಿಗೆ ಬಕೆಟ್ ಹಿಡಿಯೋದು ನೋಡಿದ್ರೆ ಅವರು ಇರುವಲ್ಲಿ ನಮಗೆ ಇರ್ಲಿಕ್ಕೂ ಹೇಸಿಗೆ ಆಗುತ್ತದೆ. ಕಾಲ ಎಲ್ಲರ ಕಾಲೆಳೆಯುತ್ತೆ ಅನ್ನೋದನ್ನು ಅವರು ಮರೆತಂತಿದೆ. ಕುತಂತ್ರಿಗಳಿಗೆ ಅವರು ಮಾಡಿದ ಅನ್ಯಾಯಕ್ಕೆ ಸಮಾಜ ಬಡ್ಡಿ ಸಮೇತ ಕೊಡುವ ದಿನಗಳು ಬರಲಿದೆ’ ಎಂದು ಒಂದು ಸಂದೇಶ ಹಾಕಿದ್ದಾರೆ. ನಂತರ ಅಜಿತ್ ಕುಮಾರ್ ಮತ್ತೊಂದು ಸಂದೇಶ ಹಾಕಿ ‘ಸುಳ್ಸುದ್ದಿಯವರು ಇರುವಲ್ಲಿ ನಾವು ಇರಬೇಕೇ ,ಬೇಡವೇ ಅನ್ನೋದನ್ನು ಆದಷ್ಟು ಬೇಗ ತೀರ್ಮಾನಿಸಿ. ಬಾಯಿಗೆ ಬಟ್ಟೆ ಕಟ್ಟಿ ಉಸಿರು ನಿಲ್ಲುವ ಮೊದಲು ಬಟ್ಟೆ ಬಿಚ್ಚಿ ಮಾತಾಡಿ. ಎಷ್ಟು ದಿನಾಂತ ಹೀಗೆ ಮೌನಕ್ಕೆ ಶರಣಾಗುತ್ತೀರಿ. ಇವತ್ತು ನಾವು, ನಾಳೆ ನೀವು, ಅದರ ನಾಳೆ ಇನ್ನೊಬ್ಬರು’ ಎಂದು ಸಂದೇಶ ಹಾಕಿದ್ದಾರೆ. ಪತ್ರಕರ್ತರ ಸಂಘದ ಸದಸ್ಯ ರಾಜೇಶ್ ಪಟ್ಟೆ ಪ್ರತಿಕ್ರಿಯೆ ನೀಡಿ ‘ಎಲ್ಲಕ್ಕಿಂತ ಮಿಗಿಲಾಗಿ ನಮ್ಮೆಲ್ಲರ ಆರಾಧ್ಯಮೂರ್ತಿ, ಪುತ್ತೂರಿನ ಒಡೆಯ ಮಹಾಲಿಂಗೇಶ್ವರ ಅನ್ಯಾಯ ಮಾಡಿದವರಿಗೆ ಉತ್ತರ ಕೊಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಸಂದೇಶ ಹಾಕಿದ್ದಾರೆ. ಬಳಿಕ ಅಜಿತ್ ಕುಮಾರ್‌ರವರು ‘ಅವರಿಗೆ ಹೆದರಿ ಬದುಕೋದಕ್ಕಿಂತ ಎಲ್ಲಾದರೂ ಹೋಗಿ ಸಾಯೋದನ್ನು ನಾನು ಆಯ್ಕೆ ಮಾಡಿಕೊಳ್ತೇನೆ’ ಎಂದು ಸಂದೇಶ ರವಾನಿಸಿದ್ದಾರೆ. ಸಾಯುವ ಬಗ್ಗೆ ಅಜಿತ್ ಅವರು ಆತಂಕ ಸೃಷ್ಠಿಸುವ ಸಂದೇಶ ಹಾಕಿದ ಕೂಡಲೇ ಅಲರ್ಟ್ ಆದ ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ.ರವರು ‘ದಯವಿಟ್ಟು ನಾಳೆ ಬೆಳಗ್ಗೆ ೧೦.೩೦ಕ್ಕೆ ಈ ಗ್ರೂಪಿನ ಎಲ್ಲಾ ಸದಸ್ಯರು ಸಂಘದ ಕಚೇರಿಯಲ್ಲಿ ಸೇರಬೇಕಾಗಿ ವಿನಂತಿ’ ಎಂದು ಕೈ ಮುಗಿದಿದ್ದಾರೆ. ಮತ್ತೊಂದು ಸಂದೇಶ ಹಾಕಿದ ಸಂದೀಪ್ ಕುಮಾರ್ ಐ.ಬಿ.ರವರು ‘ನಾವು ಇಂದು ದೃಢ ನಿರ್ಧಾರ ಕೈಗೊಳ್ಳದಿದ್ದರೆ ಪುತ್ತೂರಿನ ಸಂಘದ ಸದಸ್ಯರು ಸಂಕಷ್ಟ ಅನುಭವಿಸಬೇಕಾದುದು ಖಚಿತ….ಆದುದರಿಂದ ಗುಂಪಿನಲ್ಲಿರುವ ಎಲ್ಲ ಸದಸ್ಯರು ಕೈಜೋಡಿಸಿ… ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಹಂಚಿಕೊಳ್ಳಿ…ನಮಗೇಕೆ ಉಸಾಬರಿ…’ ಎಂದು ಕೈಕಟ್ಟಿ ಕುಳಿತರೆ ಮುಂದಕ್ಕೆ ನಾವೇ ಅನುಭವಿಸಬೇಕಾಗುತ್ತದೆ….ನಾನು ಕಳುಹಿಸಿದ ಸಂದೇಶವನ್ನು ಪುತ್ತೂರು ಉಪ್ಪಿನಂಗಡಿ ಸಹಿತ ಎಲ್ಲ ಸದಸ್ಯರು ಕೇಳಿಕೊಂಡಿದ್ದೀರಾ ಎಂದು ನಂಬಿರುತ್ತೇನೆ…’ ಎಂದು ಸಂದೇಶ ಹಾಕಿದ್ದಾರೆ. ರಾಜೇಶ್ ಪಟ್ಟೆ, ಅಜಿತ್ ಕುಮಾರ್ ಮತ್ತು ಪ್ರಸಾದ್ ಬಲ್ನಾಡು ಬೆಂಬಲ ಸೂಚಿಸಿದ್ದಾರೆ. ಉಳಿದವರು ಮೌನಕ್ಕೆ ಶರಣಾಗಿದ್ದಾರೆ.

ರಾಜ್ಯಾಧ್ಯಕ್ಷರಿಗೆ ಬ್ಲ್ಯಾಕ್‌ಮೇಲ್, ಗುಳುಂ ನಾಯಕ ಅನೀಶ್ ತಂಡದ ಪದಾಧಿಕಾರಿಗಳ ಮನವಿ: ‘ಪುತ್ತೂರು ಪತ್ರಿಕಾ ಭವನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿರುವ ಅನೀಶ್ ಕುಮಾರ್ ಮರೀಲ್ ತಂಡದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ ನೀಡಿದ್ದ ವೇಳೆ ಪತ್ರಕರ್ತರ ಸಂಘದ ಪದಾಧಿಕಾರಿಗಳು ನೀಡಿರುವ ಮನವಿಯ ವಿಚಾರದ ವರದಿ ಮಂಗಳೂರಿನ ವೆಬ್‌ಸೈಟೊಂದರಲ್ಲಿ ಪ್ರಕಟವಾಗಿದೆ. ‘ತಾಲೂಕು ಪತ್ರಕರ್ತರ ಸಂಘ ಕಳೆದ 25 ವರ್ಷಗಳಿಂದ ಉತ್ತಮವಾಗಿ, ಸಾಮಾಜಿಕ ಕಳಕಳಿಯ ಚಟುವಟಿಕೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರವಣ ಕುಮಾರ್ ನಾಳ ಅವರು ಆಡಳಿತ ಮಂಡಳಿಯ ಒಂದು ವರ್ಷದ ನಿಗದಿತ ಅಧಿಕಾರಾವಧಿ ಮೀರಿದ್ದರೂ, ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ವಿವಿಧ ನೆಪಗಳನ್ನೊಡ್ಡಿ ಮುಂದೂಡುತ್ತಲೇ ಬಂದಿದ್ದಾರೆ. ಅವರ ಏಕಪಕ್ಷೀಯ ನಿರ್ಧಾರಗಳಿಂದಾಗಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರಬೇಕಾದ ಸಂಘ ನಿರ್ನಾಮವಾಗುವಂತಾಗಿದೆ. ಪತ್ರಕರ್ತರು ಸಮಸ್ಯೆಗೊಳಗಾದ ಸಂದರ್ಭದಲ್ಲಿ ಅವರಿಗೆ ಸಹಾಯವಾಗುವ ಉದ್ದೇಶದಿಂದ ಸಂಘದ ಹಿರಿಯ ಪತ್ರಕರ್ತರು ಮೇಘಾ ಪಾಲೆತ್ತಾಡಿ ಅಧ್ಯಕ್ಷ ಮತ್ತು ಸಂಶುದ್ದೀನ್ ಸಂಪ್ಯ ಕಾರ್ಯದರ್ಶಿಯಾಗಿದ್ದ ಅವಽಯಲ್ಲಿ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡು, ದಾನಿಗಳಿಂದ ಕಾಡಿಬೇಡಿ ಹಣ ಸಂಗ್ರಹಿಸಿ ಬ್ಯಾಂಕಿನಲ್ಲಿ ‘ಪತ್ರಕರ್ತರ ಕ್ಷೇಮ ನಿಧಿ’ ಠೇವಣಿಯಾಗಿ ಇರಿಸಿದ್ದರು. ಸಂಘದ ಬೈಲಾಕ್ಕೆ ವಿರುದ್ಧವಾಗಿ ಖಾಲಿ ಮಾಡುವ ಮೂಲಕ ಸಂಘದ ಆರ್ಥಿಕ ಸ್ಥಿತಿಯನ್ನು ಶೂನ್ಯಕ್ಕೆ ತಲುಪಿಸುವ ಮೂಲಕ ಸಂಘವನ್ನು ಬೆಳ್ಳಿಹಬ್ಬದ ಕಾಲಘಟ್ಟದಲ್ಲಿ ಅಧಃಪತನಕ್ಕೆ ತಳ್ಳಿದ್ದಾರೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಪ್ರಸ್ತುತ (ಸ್ಥಳೀಯ ಪತ್ರಿಕೆಯೊಂದನ್ನು ಹೊರತುಪಡಿಸಿ) ಉಳಿದೆಲ್ಲಾ ಪತ್ರಿಕೆಗಳ ಹಾಗೂ ದೃಶ್ಯ ಮಾಧ್ಯಮಗಳ ಪ್ರತಿನಿಽಗಳು ಸದಸ್ಯರಾಗಿದ್ದಾರೆ. ಸಂಘದ ವಿರುದ್ಧ ಹಾಗೂ ಸದಸ್ಯರ ವಿರುದ್ಧ ನಿರಂತರವಾಗಿ ಸುಳ್ಳು ವರದಿಗಳನ್ನು ಪ್ರಕಟಿಸುತ್ತಾ, ಭಯೋತ್ಪಾದನಾ ಸಂಘ ಎಂದು ಬಿಂಬಿಸುತ್ತಾ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವ ಸ್ಥಳೀಯ ಪತ್ರಿಕೆಯ ಸದಸ್ಯರನ್ನು ಮತ್ತೆ ಸಂಘದ ಸದಸ್ಯರನ್ನಾಗಿ ಸೇರಿಸಿಕೊಳ್ಳುವುದಕ್ಕೆ ನಮ್ಮ ಆಕ್ಷೇಪವಿದೆ. ಸಂಘದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಹಾಗೂ ಸಂಘದ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿರುವವರಿಗೆ ಸೂಕ್ತ ಸೂಚನೆಯನ್ನು ನೀಡಿ, ಪ್ರಸ್ತುತವಿರುವ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಲೆಕ್ಕಪತ್ರ ಮಂಡಿಸುವ ಹಾಗೂ ಚುನಾವಣೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುತ್ತೀರಿ ಎಂದು ನಂಬುತ್ತೇವೆ’ ಎಂಬಿತ್ಯಾದಿ ವಿಚಾರಗಳನ್ನು ನಮೂದಿಸಿ ಪತ್ರಕರ್ತರ ಸಂಘದಲ್ಲಿರುವ ಬ್ಲ್ಯಾಕ್‌ಮೇಲ್ ಮತ್ತು ಗುಳುಂ ತಂಡದ ನಾಯಕ ಅನೀಶ್ ಕುಮಾರ್ ತಂಡದ ಪದಾಽಕಾರಿಗಳು ರಾಜ್ಯಾಧ್ಯಕ್ಷ ಶಿವಾನಂದ ತಗಡೂರುರವರಿಗೆ ಸುದೀರ್ಘವಾಗಿ ಬರೆದು ಸಲ್ಲಿಸಿರುವ ಮನವಿಯ ಕುರಿತು ವೆಬ್‌ಸೈಟ್ ವರದಿ ಮಾಡಿದೆ.

‘ರಾಜ್ಯಾಧ್ಯಕ್ಷರು ಸುಪ್ರೀಂ ಪವರ್ ನೀಡಿದ್ದಾರೆ

ಪತ್ರಕರ್ತರೆಲ್ಲರನ್ನೂ ಸೇರಿಸಿ ಸದೃಢನನ್ನು ಅಧ್ಯಕ್ಷನಾಗಿ ಮಾಡುತ್ತೇನೆ’

ತಾಕತ್ತಿದ್ದವರು ಅದನ್ನು ತಡೆಯಲಿ-ಶ್ರವಣ್

‘ನನ್ನ ಬಗ್ಗೆ ಯಾರು ಏನೇ ಹೇಳಿದರೂ ನಾನು ಕ್ಯಾರೇ ಮಾಡೋದಿಲ್ಲ.ಪ್ರತಿಕ್ರಿಯೆ ನೀಡದೇ ಕೆಲಸದಲ್ಲಿ ಮಾಡಿ ತೋರಿಸುತ್ತೇನೆ’ ಎಂದು ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಪ್ರತಿಕ್ರಿಯಿಸಿದ್ದಾರೆ. ‘ನಾನು ನಿರ್ದೇಶನ ನೀಡಿರುವ ಶೇ.60 ಕೆಲಸಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ,ಬಾಕಿ 40 ಶೇ.ಕೆಲಸವನ್ನು ನೀವು ಯಶಸ್ವಿಯಾಗಿ ಮಾಡಿ ತೋರಿಸಬೇಕು. ಪುತ್ತೂರು ಪತ್ರಕರ್ತರ ಸಂಘದ ಎಲ್ಲ ಚಟುವಟಿಕೆಗಳು ರಾಜ್ಯ ಮತ್ತು ಜಿಲ್ಲಾ ಸಂಘದ ಮೂಲಕವೇ ನಡೆಯುವಂತಾಗಬೇಕು.ಈ ನಿಟ್ಟಿನಲ್ಲಿ ನಿಮಗೆ ಪೂರ್ತಿ ಬೆಂಬಲವಿರುವುದಾಗಿ’ ರಾಜ್ಯಾಧ್ಯಕ್ಷರು ಈಗಾಗಲೇ ನನಗೆ ತಿಳಿಸಿದ್ದಾರೆ.ಅದರಂತೆ,ಜಿಲ್ಲಾ ಸಂಘದಲ್ಲಿ ಸದಸ್ಯರಾಗಿರುವ ಪುತ್ತೂರು ಪತ್ರಕರ್ತರ ಸಂಘದ ಎಲ್ಲ ಸದಸ್ಯರನ್ನೂ ಪ್ರೆಸ್ ಕ್ಲಬ್‌ನೊಳಗೆ ಕರೆಸಿ, ಸಂಘದಲ್ಲಿ ಸೇರಿಸಿಕೊಂಡು ಓರ್ವ ಸದೃಢ ನಾಯಕತ್ವ ಇರುವ ಪತ್ರಕರ್ತನನ್ನೇ ಸಂಘದ ಅಧ್ಯಕ್ಷನಾಗಿ ಮಾಡಿಯೇ ಮಾಡುತ್ತೇನೆ.ತಾಕತ್ತಿದ್ದವರು ಅದನ್ನು ತಡೆಯಲಿ ಎಂದು ಶ್ರವಣ್ ಕುಮಾರ್ ನಾಳ ಸವಾಲು ಹಾಕಿದ್ದಾರೆ.

LEAVE A REPLY

Please enter your comment!
Please enter your name here