ಪುತ್ತೂರು: ಶಿಕ್ಷಣ, ಕೈಗಾರಿಕೆ, ಕೃಷಿ, ನೀರಾವರಿ, ವಿದ್ಯುತ್ ಉತ್ಪಾದನೆ, ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಪವಾಡ ಸದೃಶ ಸಾಧನೆಯನ್ನು ಮಾಡಿದ ವಿಶ್ವದ ಶ್ರೇಷ್ಟ ಇಂಜಿನಿಯರ್ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ನಮಗೆ ಆದರ್ಶಪ್ರಾಯರು ಎಂದು ವಿಟ್ಲದ ಇಕೋ ಬ್ಲಿಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಾರಾಮ್.ಸಿ.ಜಿ.ಬಲಿಪಗುಳಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ನವದೆಹಲಿ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಇಂಜಿನಿಯರ್ಸ್ ಡೇ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಿರಂತರ ಪರಿಶ್ರಮದ ಮೂಲಕ ಸಾಧನೆಯನ್ನು ಮಾಡಿ ಅದರಲ್ಲಿ ಯಶಸ್ಸನ್ನು ಗಳಿಸಿದಾಗ ಸಿಗುವ ಆನಂದ ಅವರ್ಣನೀಯ ಎಂದರು. ಇಂಜಿನಿಯರುಗಳು ಸ್ಥಳೀಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸರ್.ಎಂ.ವಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಯಶಸ್ಸನ್ನು ಸಾಧಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ಸರ್.ಎಂ.ವಿಶ್ವೇಶ್ವರಯ್ಯನವರು ಭಾರತ ಕಂಡ ಶ್ರೇಷ್ಟ ಇಂಜಿನಿಯರ್, ಅವರು ಹೆಮ್ಮೆಯ ಕನ್ನಡಿಗ, ಅರ್ಥಶಾಸ್ತ್ರಜ್ಞ, ದೀವಾನರಾಗಿ ಗುರುತಿಸಿಕೊಂಡಿದ್ದರು. ಅವರ ದಣಿವರಿಯದ ದುಡಿಮೆ, ಸಮಯಪಾಲನೆ ಮತ್ತು ಕಾರ್ಯತತ್ಪರತೆ ಈಗಿನ ತಂತ್ರಜ್ಞರಿಗೆ ದಾರಿದೀಪವಿದ್ದಂತೆ ಎಂದರು. ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡರೆ ಇಂಜಿನಿಯರ್ಸ್ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಸ್ವಉದ್ಯೋಗದಲ್ಲಿ ಅಂತಾರಾಷ್ಟ್ರೀಯ ಸಾಧನೆಯನ್ನು ಮಾಡಿದ ರಾಜಾರಾಮ್.ಸಿ.ಜಿ.ಬಲಿಪಗುಳಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್.ಬಿ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಪ್ರಸ್ತಾವನೆಗೈದರು. ಡಾ.ಸೌಮ್ಯ.ಎನ್.ಜೆ ಸ್ವಾಗತಿಸಿ, ಪ್ರೊ.ಸುಮಂತ್.ಎ ವಂದಿಸಿದರು. ಪ್ರೊ.ಸುರೇಖಾ.ಟಿ ಕಾರ್ಯಕ್ರಮ ನಿರ್ವಹಿಸಿದರು.