ಜ.22ಕ್ಕೆ ಪುತ್ತೂರಿನಲ್ಲಿ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 75ನೇ ಜಯಂತ್ಯೋತ್ಸವ

0
  • ಪುತ್ತೂರು ಗೌಡ ಸಮಾಜ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ನಿರ್ಣಯ – ಜಿಲ್ಲಾ ಮಟ್ಟದ ಸಮಿತಿ ರಚನೆ
  • ಜನ್ಮದಿನೋತ್ಸವದ ಜೊತೆಗೆ ವಿದ್ಯಾಸಂಸ್ಥೆಗೆ ಅಡಿಗಲ್ಲು – ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ
  • ಸಮಾಜಮುಖಿ ಕಾರ್ಯಕ್ರಮ ಇವತ್ತಿನ ಪೀಳಿಗೆಗೆ ಪರಿಚಯವಾಗಬೇಕು – ಸಂಜೀವ ಮಠಂದೂರು
  • ಏನಾಗಬೇಕೆಂಬ ಆದೇಶ ಕೊಟ್ಟರೆ ನಾನು ಸಿದ್ಧ – ಡಾ.ರೇಣುಕಾಪ್ರಸಾದ್
  • ನಮ್ಮಿಂದ ಪೂರ್ಣ ಸಹಕಾರ ನೀಡುತ್ತೇವೆ – ಗಂಗಾಧರ ಗೌಡ
  • ಶಕ್ತಿ ಕೊಡುವ ಕೆಲಸ ಮಾಡೋಣ – ನಿತ್ಯಾನಂದ ಮುಂಡೋಡಿ
  • ಶಕ್ತಿ ತೋರಿಸುವ ಅವಕಾಶ ಸಿಕ್ಕಿದೆ – ಅಕ್ಷಯ ಕೆ.ಸಿ

ಪುತ್ತೂರು: ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಬ್ರಹ್ಮೈಕ್ಯ ಡಾ|ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿ ಜ.22ರಂದು ಪುತ್ತೂರಿನಲ್ಲಿ ನಡೆಯಲಿದ್ದು, ಪುತ್ತೂರು ಗೌಡ ಸಮಾಜದ ನೇತೃತ್ವದಲ್ಲಿ ಎಲ್ಲರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡುವ ಕುರಿತು ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸೆ.೧೮ರಂದು ಸಂಜೆ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ, ಮಂಗಳೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಬ್ರಹ್ಮೈಕ್ಯರಾದ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ ಮತ್ತು ಶ್ರೀಗಳ ಕುರಿತು ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬರೆದಿರುವ ಮಹಾಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಸಮಾರಂಭವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದ್ದು, ಇದರ ಜೊತೆ ಪೆರಿಯಡ್ಕದ ಕನ್ನಡ ಶಾಲೆಯಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು.

ಜನ್ಮದಿನೋತ್ಸವದ ಜೊತೆಗೆ ವಿದ್ಯಾಸಂಸ್ಥೆಗೆ ಅಡಿಗಲ್ಲು: ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಮಾತನಾಡಿ ೨ ಸಾವಿರ ವರ್ಷಗಳ ಇತಿಹಾಸವುಳ್ಳ ಪ್ರಾಚೀನ ಪರಂಪರೆಯ ಆದಿ ಚುಂಚನಗಿರಿ ಮಠವು ಬಾಲಗಂಗಾಧರನಾಥ ಶ್ರೀಗಳು ಪೀಠಕ್ಕೆ ಬಂದ ಬಳಿಕ ೧೯೭೪ರಲ್ಲಿ ಪ್ರಚಲಿತಕ್ಕೆ ಬಂತು.ಆಗ ೫೪ ಮಂದಿ ಮಕ್ಕಳಿದ್ದ ಮಠ ಅವರು ಕಾಲೈಕ್ಯರಾಗುವ ಸಂದರ್ಭದಲ್ಲಿ ೧.೩೮ ಲಕ್ಷ ಮಂದಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರು.ಅವರು ಅನ್ನ, ಅಕ್ಷರ, ಆರೋಗ್ಯ, ಅರಣ್ಯ, ಪರಿಸರ ಸೇರಿದಂತೆ ಅನೇಕ ಜನಪರ ಕೆಲಸ ಕಾರ್ಯ ಮಾಡಿದರು.ಸಮಾಜಮುಖಿ ಆಗಿರುವ ಹಲವು ಕಾರ್ಯಕ್ರಮಗಳನ್ನು ಮಾಡಿರುವುದರಿಂದ ಇವತ್ತು ೪೮೦ಕ್ಕೂ ಹೆಚ್ಚು ವಿದ್ಯಾಸಂಸ್ಥೆಯನ್ನು ಮತ್ತು ೧.೫೫ ಲಕ್ಷ ಸಾವಿರ ಮಂದಿ ಮಠದಿಂದ ವ್ಯಾಸಂಗ ಮಾಡುತ್ತಿದ್ದಾರೆ.ಇಂತಹ ನಾಥ ಪರಂಪರೆಯುಳ್ಳ ಧರ್ಮಪೀಠದ ಪ್ರಭಾವ ರಾಷ್ಟ್ರಮಟ್ಟದಲ್ಲಿ ಗುರುತಿಸಲು ಸಾಧ್ಯವಾಗಿದೆ. ಅವರು ಅಂದು ವಿವಿಧ ತಾಲೂಕಗಳಿಗೆ ಭೇಟಿ ನೀಡಿ, ಭಿಕ್ಷೆ ಪಡೆದ ತಾಲೂಕಿಗೆ ವಿದ್ಯಾಸಂಸ್ಥೆಯನ್ನು ನಿರ್ಮಾಣ ಮಾಡುವ ಮೂಲಕ ಪ್ರತಿಯೊಬ್ಬರ ಮನಗಳನ್ನು ಬಡಿದೆಬ್ಬಿಸುವ ನಿಟ್ಟನಲ್ಲಿ ಜಾಗೃತ ಸಮಾಜ ಕಟ್ಟುವ ಪವಾಡ ಮಾಡಿದರು. ಸ್ವಾಮೀಜಿಯವರು ಇದ್ದಂತಹ ಸಂದರ್ಭದಲ್ಲಿ ೫೮ನೇ ವರ್ಧಂತ್ಯುತ್ಸವವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದೇವೆ. ಆ ನಂತರದ ದಿನದಲ್ಲಿ ಮಂಗಳೂರಿನಲ್ಲಿ ೬೮ನ್ನು ಮಾಡಿದ್ದೇವೆ. ಈಗ ೭೮ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮ ಮಾಡುವುದು ನಮ್ಮ ಕರ್ತವ್ಯ. ಜ.೧೮ಕ್ಕೆ ಸ್ವಾಮೀಜಿಯವರ ಜನ್ಮದಿನ. ಈ ನಿಟ್ಟಿನಲ್ಲಿ ಈಗಿನ ದೊಡ್ಡ ಸ್ವಾಮೀಜಿಯವರ ದಿನಾಂಕ ಪಡೆದು ಜ.೨೨ಕ್ಕೆ ೭೮ನೇ ಜಯಂತ್ಯೋತ್ಸವವನ್ನು ಇದೇ ಜಿಲ್ಲೆಯಲ್ಲಿ ಮಾಡಬೇಕೆಂದು ನಿರ್ಧಾರ ಮಾಡಿದ್ದು, ಅದನ್ನು ಪುತ್ತೂರಿನಲ್ಲೇ ಮಾಡುವ ಎಂದರಲ್ಲದೆ, ಸ್ವಾಮೀಜಿಯವರ ಕುರಿತು ನಾನು ಬರೆದಂತಹ ೪೭೧ ಪುಟದ ಅಪೂರ್ವವಾದ ಗ್ರಂಥ ‘ಸಂಸ್ಕೃತ, ಸಂಸ್ಕೃತಿಗೆ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ ಕೊಡುಗೆ ಅಧ್ಯಯನ’ ಈ ಮಹಾ ಪ್ರಬಂಧವನ್ನು ಇದೇ ಜಿಲ್ಲೆಯಲ್ಲಿ ಲೋಕಾರ್ಪಣೆ ಮಾಡಲು ನನ್ನ ಮಹಾದಾಸೆ ಇದೆ. ಡಾ| ಬಾಲಗಂಗಾಧರನಾಥ ಶ್ರೀಗಳ ೩೮ ವರ್ಷದ ಅನುಭವದ ನುಡಿಗಳನ್ನು, ಅವರಿಂದ ಬೆಳೆದಂತಹ ವಿಚಾರ, ಅವರ ಕನಸಿನ ಕಲ್ಪನೆ, ಅವರ ಕೊಡುಗೆಗಳು ಈ ಪ್ರಬಂಧದಲ್ಲಿದೆ. ಈ ಪ್ರಬಂಧದ ಲೋಕಾರ್ಪಣೆ ಮತ್ತು ಪೆರಿಯಡ್ಕದಲ್ಲಿ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗೆ ಅಡಿಗಲ್ಲು ಹಾಕುವ ಕನಸು ಇದೆ. ಅದನ್ನು ಮಾಡೋಣ ಎಂದರು.

ಸಮಾಜಮುಖಿ ಕಾರ್ಯಕ್ರಮ ಇವತ್ತಿನ ಪೀಳಿಗೆಗೆ ಪರಿಚಯವಾಗಬೇಕು: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಎರಡು ಜಯಂತ್ಯೋತ್ಸವ ಇತಿಹಾಸ ನಿರ್ಮಾಣ ಮಾಡಿದೆ. ಇವತ್ತು ೭೮ನೇ ಜಯಂತ್ಯೋತ್ಸವವನ್ನು ಪುತ್ತೂರಿನಲ್ಲಿ ಮಾಡುವ ಎಂಬ ಅಭಿಪ್ರಾಯ ಇದೆ. ಸ್ವಾಮೀಜಿಯವರ ಸಮಾಜಮುಖಿ ಕಾರ್ಯಕ್ರಮ ಧಾರ್ಮಿಕ ದೃಷ್ಟಿಯಿಂದ ಹಾಕಿಕೊಂಡ ಹತ್ತಾರು ಕಾರ್ಯಕ್ರಮ ಇವತ್ತಿನ ಪೀಳಿಗೆಗೆ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಅದ್ಭುತ ಕಾರ್ಯಕ್ರಮ ನಡೆಯಬೇಕು. ಇದರ ಜೊತೆಗೆ ಪುತ್ತೂರು ಜಿಲ್ಲೆಯಾಗುವ ಕನಸು ನನಸಾಗಲಿ ಎಂದರು.

ಏನಾಗಬೇಕೆಂಬ ಆದೇಶ ಕೊಟ್ಟರೆ ನಾನು ಸಿದ್ಧ: ಸುಳ್ಯದ ಅಕಾಡೆಮಿ ಆ- ಲಿಬರಲ್ ಎಜ್ಯುಕೇಶನ್ ಇದರ ಆಡಳಿತ ನಿರ್ದೇಶಕ ಡಾ. ರೇಣುಕಾ ಪ್ರಸಾದ್ ಕೆ.ವಿ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ನಮ್ಮಲ್ಲಿ ಒಗ್ಗಟ್ಟನ ಪ್ರದರ್ಶನ ಆಗಬೇಕು. ಇದರ ಜೊತೆಗೆ ಸಂಖ್ಯೆಯು ಮುಖ್ಯ ಆಗುತ್ತದೆ. ಕಾರ್ಯಕ್ರಮ ಮಾಡುವಾಗ ಎಲ್ಲರನ್ನು ಸೇರಿಸಿಕೊಂಡು ಯುವಕರನ್ನು ಮುಂದಿಟ್ಟು ಮಾಡೋಣ. ನನ್ನ ಪರಿಮಿತಿಯೊಳಗೆ ಏನಾಗಬೇಕೆಂಬ ಆದೇಶ ಕೊಟ್ಟರೆ ನಾನು ಸಿದ್ದ ಎಂದರು.

ನಮ್ಮಿಂದ ಪೂರ್ಣ ಸಹಕಾರ ನೀಡುತ್ತೇವೆ: ರಾಜ್ಯದ ಮಾಜಿ ಸಚಿವ ಬೆಳ್ತಂಗಡಿಯ ಗಂಗಾಧರ ಗೌಡ ಅವರು ಮಾತನಾಡಿ ಬಾಲಗಂಗಾಧರನಾಥ ಶ್ರೀಗಳು ಹಲವು ಮಠಕ್ಕೆ ಸ್ವಾಮೀಜಿಯವರನ್ನು ಕೊಟ್ಟಂತಹ ಮಹಾನ್ ಶಕ್ತಿ. ಅವರ ಜಯಂತ್ಯೋತ್ಸವ ಉತ್ತಮವಾಗಿ ಜರುಗಬೇಕು. ಈ ನಿಟ್ಟಿನಲ್ಲಿ ನಮ್ಮಿಂದಾದ ಸಹಕಾರ ನೀಡುತ್ತೇವೆ ಎಂದರು.

ಶಕ್ತಿ ಕೊಡುವ ಕೆಲಸ ಮಾಡೋಣ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ ಶ್ರೀಗಳ ಜಯಂತ್ಯೋತ್ಸವದ ಜೊತೆಗೆ ಪುತ್ತೂರನ್ನು ಜಿಲ್ಲೆಯನ್ನಾಗಿ ಪರಿವರ್ತಿಸುವ ಕಾರ್ಯಕ್ರಮ ಆಗಬೇಕೆಂದು ಶಾಸಕರು ಹೇಳಿರುವುದು ನಮಗೆ ಸಂತೋಷದ ವಿಚಾರ. ಈ ನಿಟ್ಟಿನಲ್ಲಿ ಅವರಿಗೆ ಏನು ಶಕ್ತಿ ಬೇಕೋ ಅದನ್ನು ಕೊಡುವ ಕೆಲಸ ಮಾಡುತ್ತೇವೆ ಎಂದರು.

ಶಕ್ತಿ ತೋರಿಸುವ ಅವಕಾಶ ಸಿಕ್ಕಿದೆ: ಜಿಲ್ಲಾ ಯುವ ಗೌಡ ಸಂಘದ ಅಧ್ಯಕ್ಷ ಅಕ್ಷಯ ಕೆ ಸಿ ಅವರು ಮಾತನಾಡಿ ಸಿಕ್ಕಿದ ಅವಕಾಶ ಉಪಯೋಗಿಸಿಕೊಳ್ಳುವುದು ನಮ್ಮ ಕರ್ತವ್ಯ. ಶಕ್ತಿ ತೋರಿಸುವ ಅವಕಾಶ ಸಿಕ್ಕಿದೆ ಎಂದರು. ಕೆಎ-ಡಿಸಿ ಅಧ್ಯಕ್ಷ ಎ.ವಿ. ತೀರ್ಥರಾಮ, ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಬೆಳ್ಳಾರೆಯ ಉಮೇಶ್, ಸುಳ್ಯದ ಪಿ.ಸಿ ಜಯರಾಮ ಗೌಡ, ಕೆಮ್ಮಾರ ಗಂಗಾಧರ ಗೌಡ, ದ.ಕ ಗೌಡ ವಿದ್ಯಾ ಸಂಘದ ಡಾ.ರೇವತಿ ನಂದನ್, ಗೌಡ ವಿದ್ಯಾ ಸಂಘದ ನಿರ್ದೇಶಕಿ ಡಾ.ಸಾಯಿಗೀತಾ, ಭರತ್ ಮುಂಡೋಡಿ, ಪ್ರವೀಣ್ ಕುಂಟ್ಯಾನ, ಕಿರಣ್ ಬುಡ್ಲೆಗುತ್ತು, ಡಾ| ಜ್ಞಾನೇಶ್, ಮಹಿಳಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ವಾರಿಜ ಗೌಡ, ಸೀತಾರಾಮ ಬೊಳ್ಳಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ದಿನೇಶ್ ಮಡಪ್ಪಾಡಿ, ಯು.ಪಿ.ರಾಮಕೃಷ್ಣ ಅಭಿಪ್ರಾಯ ಮಂಡಿಸಿದರು. ಕಡಬ ಗೌಡ ಸಂಘಧ ಅಧ್ಯಕ್ಷ ಸೀತಾರಾಮ ಪೊಸವಳಿಕೆ, ಸುಳ್ಯ ಗೌಡ ಸಂಘದ ಕಾರ್ಯದರ್ಶಿ ಬೆಳಿಯಪ್ಪ ಗೌಡ, ಮಹಿಳಾ ಗೌಡ ಸಂಘದ ಜಿಲ್ಲಾ ಸಮಿತಿಯ ಗೌರಿ ಬನ್ನೂರು, ಪುತ್ತೂರು ತಾಲೂಕು ಯುವ ಗೌಡ ಸೇವಾ ಸಂಘಧ ಅಧ್ಯಕ್ಷ ನಾಗೇಶ್ ಕೆಡೆಂಜಿ, ವಿಟ್ಲ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಮೋನಪ್ಪ ಗೌಡ, ಪುತ್ತೂರು ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮೆರವಣಿಗೆ ಉಸ್ತುವಾರಿಯಲ್ಲಿ ಪ್ರಧಾನ ಮಾತ್ರ ವಹಿಸಿದ ಕಿರಣ್ ಬುಡ್ಲೆಗುತ್ತು, ಪ್ರೇರಣಾ ಸಂಸ್ಥೆಯ ರೂವಾರಿ ಪ್ರವೀಣ್ ಕುಂಟ್ಯಾನ ಮತ್ತು ನಾಗೇಶ್ ಕೆಡೆಂಜಿಯವರನ್ನು ಶ್ರೀಗಳು ಗೌರವಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿ, ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ರವಿ ಮುಂಗ್ಲಿಮನೆ, ಯುವ ಗೌಡ ಸೇವಾ ಸಂಘದ ಕಾರ್ಯದರ್ಶಿ ಸುಬ್ರಾಯ ಪಾಲ್ತಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಂಘದ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ ಸಭೆ
ಪುತ್ತೂರಿನಲ್ಲಿ ಕಾರ್ಯಕ್ರಮ ಮಾಡುವ ಅಭಿಪ್ರಾಯಕ್ಕೆ ಬಂದಿದ್ದೇವೆ, ಕಾರ್ಯಕ್ರಮ ಜಿಲ್ಲಾಮಟ್ಟದ್ದಾಗಬೇಕು, ನಮ್ಮ ಸಮಾಜ ಇದರ ನೇತೃತ್ವ ವಹಿಸುವುದು, ವಿಶೇಷವಾಗಿ ಪುತ್ತೂರು ಗೌಡ ಸಮಾಜ ನೇತೃತ್ವ ವಹಿಸಿ, ಎಲ್ಲರನ್ನು ಸೇರಿಸುವುದು ಎಂದು ನಿರ್ಣಯ ಮಾಡಲಾಗಿದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಪ್ರಸ್ತಾಪಿಸಿದರು. ಈ ಸಂದರ್ಭ ಸಭೆಯಲ್ಲಿದ್ದವರು ಸಹಮತ ವ್ಯಕ್ತಪಡಿಸಿದರು. ಬಳಿಕ ವಿವಿಧ ಸಮಿತಿ ರಚನೆ ಮಾಡಲಾಯಿತು. ಸಂಚಾಲಕರಾಗಿ ಆಯಾ ತಾಲೂಕಿನಿಂದ ಒಬ್ಬರನ್ನು ಆಯ್ಕೆ ಮಾಡಲಾಯಿತು. ಎಲ್ಲಾ ತಾಲೂಕಿನ ಅಧ್ಯಕ್ಷರು ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ ಎಂದು ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ತಿಳಿಸಿದರು. ಉಳಿದಂತೆ ಆರ್ಥಿಕ ಸಮಿತಿ, ಸ್ವಾಗತ ಸಮಿತಿ, ಸಂಪರ್ಕ, ಪ್ರಚಾರ, ವೇದಿಕೆ ಸೇರಿದಂತೆ ವಿವಿಧ ಸಮಿತಿ ರಚನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here