ಅಂಗವೈಕಲ್ಯ ಮೆಟ್ಟಿನಿಂತು ಮಾದರಿಯಾದ ಶಾಂತಿನಗರದ ಪ್ರದೀಪ್; ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಗ್ರಾಮಕರಣಿಕನಾಗಿ ಕರ್ತವ್ಯಕ್ಕೆ ಹಾಜರು

0

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ಅಂಗವೈಕಲ್ಯತೆಯಿದ್ದರೂ ತಂದೆಯ ಸಹಾಯದಿಂದ ಸತತ ಪ್ರಯತ್ನಪಟ್ಟು ಪದವಿ ಶಿಕ್ಷಣ ಪಡೆದು ಸಾಧನೆ ಮಾಡಿರುವ ಗೋಳಿತ್ತೊಟ್ಟು ಗ್ರಾಮದ ಬರಮೇಲು ಶಾಂತಿನಗರದ ಪ್ರದೀಪ್(23ವ.) ಈಗ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಡೋ ಸಲ್ಫಾನ್ ದುರಂತದಿಂದಾಗಿ ಹುಟ್ಟು ಅಂಗವೈಕಲ್ಯರಾದ ಪ್ರದೀಪ್ ಈಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಕಳೆದ ಮಾರ್ಚ್ 10ರಿಂದ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೋಳಿತ್ತೊಟ್ಟು ಗ್ರಾಮದ ಬರಮೇಲು ಶಾಂತಿನಗರ ನಿವಾಸಿ ಜನಾರ್ದನ ಗೌಡ ಹಾಗೂ ಬೇಬಿ ದಂಪತಿಯ ಪುತ್ರ ಪ್ರದೀಪ್ ಎಂಡೋಸಲಾನ್ ಪ್ರಭಾವದಿಂದ ಹುಟ್ಟಿನಿಂದಲೇ ಅಂಗವಿಕಲತೆಗೆ ತುತ್ತಾಗಿದ್ದರು. ಹುಟ್ಟಿದ ಬಳಿಕ ದಿನಕಳೆದಂತೆ ಪ್ರದೀಪ ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡು ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಎಡಕೈಯೂ ಬಲ ಕಳೆದುಕೊಂಡಿದೆ. ಶಾಲೆಗೂ ಹೋಗಲು ಅಸಾಧ್ಯವಾದ ಪರಿಸ್ಥಿತಿಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ಇವರ ನೆರವಿಗೆ ಬಂದ ತಂದೆ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಕೊಡಲು ಮುಂದಾದರು. ಪ್ರದೀಪನೂ ತಂದೆಯ ಆಸೆಯಂತೆ ಇಷ್ಟಪಟ್ಟು ಕಲಿಯಲು ಆರಂಭಿಸಿದ್ದರು. ೧೦ನೇ ತರಗತಿಯಲ್ಲಿ 518 ಅಂಕ ಪಡೆದು ಉತ್ತೀರ್ಣರಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಈ ನಡುವೆ ಕಲಿಕೆ ಬಗ್ಗೆ ಮಗನಿಗೆ ಇರುವ ಆಸಕ್ತಿಯಿಂದ ಆತನ ನೆರವಿಗಾಗಿ ನಿಂತ ತಂದೆ ತಾನು ಕೆಲಸ ಮಾಡುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹುದ್ದೆಗೆ ರಾಜೀನಾಮೆ ಕೊಟ್ಟು ಮಗನಿಗೆ ಸಹಾಯಕನಾಗಿ ನಿಂತರು. ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಪಿಯುಸಿ ಶಿಕ್ಷಣಕ್ಕೆ ಸೇರಿಸುತ್ತಾರೆ. ಅಲ್ಲಿಯೂ ಕಲಿಕೆಯಲ್ಲಿ ಸಾಧನೆ ಮಾಡಿದ ಪ್ರದೀಪ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 536 ಅಂಕ ಪಡೆದು ತೇರ್ಗಡೆಯಾದರು. ಉಪ್ಪಿನಂಗಡಿಯಲ್ಲಿಯೇ ಪದವಿ ವಿದ್ಯಾಭ್ಯಾಸ ಮುಂದುವರಿಸಿದ ಪ್ರದೀಪ 79.16 ಶೇ.ಅಂಕದೊಂದಿಗೆ ಉತ್ತೀರ್ಣರಾದರು. ಕರೆಸ್ಪಾಂಡೆನ್ಸ್ ಮೂಲಕ ಎಂ.ಕಾಂ. ಪದವಿ ಪಡೆಯುತ್ತಿದ್ದಾರೆ. ಈ ನಡುವೆ ಉದ್ಯೋಗದತ್ತ ಗಮನಹರಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಗ್ರಾಮಕರಣಿಕರಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಪ್ರದೀಪ್‌ಗೆ ಸಹಾಯಕರಾಗಿ ಸಂಬಂಧಿಕರೊಬ್ಬರು ಜೊತೆಗಿದ್ದಾರೆ. ಮಾನವೀಯ ನೆಲೆಯಲ್ಲಿ ಪ್ರದೀಪ್‌ಗೆ ಊರಿನಲ್ಲಿಯೇ ಕೆಲಸ ನಿರ್ವಹಿಸಲು ಅವಕಾಶ ಸಿಗಬಹುದೆಂಬ ಆಶಾಭಾವನೆ ಇದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರದೀಪ್ ಅವರ ನೆರವಿಗೆ ಬರಬೇಕಾಗಿದೆ. ಪ್ರದೀಪ್‌ನ ಸಹೋದರ ಪ್ರಜ್ವಲ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದಾರೆ.

ತೃಪ್ತಿ ಇದೆ: ಸಹಾಯಕರೊಬ್ಬರನ್ನು ಅವಲಂಬಿಸಿಕೊಂಡು ಯಾವುದೇ ಕಾರ್ಯವನ್ನು ಮಾಡಬೇಕಾದ ನನಗೆ ದೈಹಿಕ ನ್ಯೂನ್ಯತೆ ನಡುವೆ ಸರ್ಕಾರಿ ಉದ್ಯೋಗ ದೊರಕಿಸಿಕೊಂಡಿರುವ ಬಗ್ಗೆ ತೃಪ್ತಿ ಇದೆ. ನನಗಾಗಿ ನನ್ನ ತಂದೆ ಉದ್ಯೋಗವನ್ನು ಬಿಟ್ಟು ನನ್ನ ಕಲಿಕೆಗೆ ಶ್ರಮಿಸಿದ ಫಲದಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ದೊರೆತ ಉದ್ಯೋಗವನ್ನು ಆನಂದಿಸುತ್ತಿದ್ದೇನೆ. ನನ್ನ ಈ ತನಕದ ಬದುಕಿನಲ್ಲಿ ದೊರೆತ ಹೆತ್ತವರ, ಶಿಕ್ಷಕರ, ಸಹಪಾಠಿಗಳ, ಹಿತೈಷಿಗಳ ಸಹಕಾರ ಪ್ರೋತ್ಸಾಹದಿಂದ ನನಗೆ ಈ ಭಾಗ್ಯ ದೊರಕಿದೆ ಎಂದು ಪ್ರದೀಪ್ ಹೇಳುತ್ತಾರೆ.

ಮಗನ ಸಾಧನೆಗೆ ಹೆಮ್ಮೆ ಇದೆ

ಮಗ ಎಂಡೋ ಪೀಡಿತನಾಗಿ ನರಳಾಡಿದಾಗ ಮನಸ್ಸು ನೊಂದಿತ್ತು. ಕಲಿಯುವ ಆಸಕ್ತಿ ಗುರುತಿಸಿ ಶಾಲೆಗೆ ಸೇರಿಸಿದೆ. ಶಾಲೆಯ ಗುರುಗಳು ಮತ್ತು ಆತನ ಗೆಳೆಯರು ಆತನನ್ನು ಶಾಲೆಗೆ ಕರೆದೊಯ್ಯುತ್ತಿದ್ದರು. ಆತ ಬೆಳೆದಂತೆ ಆತನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನನ್ನ ಮನೆಯಿಂದ ಉಪ್ಪಿನಂಗಡಿಗೆ ನಿತ್ಯ ಕರೆದೊಯ್ಯುವ ಅನಿವಾರ್ಯತೆಯಿಂದಾಗಿ ನಾನು ಉದ್ಯೋಗ ತ್ಯಜಿಸಿ ಸಹಾಯಕನಾದೆ. ಮಗ ಸಮಸ್ಯೆಯನ್ನು ಮೆಟ್ಟಿನಿಂತು ಈ ಮಟ್ಟಕ್ಕೆ ಬೆಳೆದಿರುವುದಕ್ಕೆ ಹೆಮ್ಮೆಯಾಗುತ್ತಿದೆ.

LEAVE A REPLY

Please enter your comment!
Please enter your name here