ಪುತ್ತೂರು:ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನ ವಿಚಾರ ಕೊಯಿಲ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿ,ಲಂಚ-ಭ್ರಷ್ಟಾಚಾರ ವಿರುದ್ಧ ಗ್ರಾಮಸ್ಥರೆಲ್ಲರೂ ಹೋರಾಡೋಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸೆ.21ರಂದು ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ಗ್ರಾಮ ಸಭೆ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರು ಇಲ್ಲಿನ ವಿಸ್ತರಣಾಧಿಕಾರಿ ರಾಜ್‌ಗೋಪಾಲ್ ಎನ್.ಎನ್.ರವರು ಮಾರ್ಗದರ್ಶಿ ಅಽಕಾರಿಯಾಗಿದ್ದರು. ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿಯವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಆಂದೋಲನ ನಡೆಯುತ್ತಿದೆ.ಲಂಚ, ಭ್ರಷ್ಟಾಚಾರದ ವಿರುದ್ಧ ನಾವೂ ಹೋರಾಡೋಣ,ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕು ಎಂದರು.ಇಲಾಖೆಯಿಂದ ಸಿಗುವ ಸಬ್ಸಿಡಿ ದುರುಪಯೋಗ ಆಗುತ್ತಿದೆ.ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಕೊಲ ಗ್ರಾಮಕ್ಕೆ ಹೆಚ್ಚು ಅನುದಾನ ತರಲು ಎಲ್ಲಾ ಸದಸ್ಯರು ಪ್ರಯತ್ನಿಸಿ ಎಂದವರು ಹೇಳಿದರು.
ಸದಸ್ಯರು ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿ: ವಳಕಡಮ ಭಾಗದ ಸಮಸ್ಯೆ ಬಗ್ಗೆ ಆ ಭಾಗದ ಸದಸ್ಯರು ಜವಾಬ್ದಾರಿ ವಹಿಸಿಕೊಂಡು ಕೆಲಸ ನಿರ್ವಹಿಸಬೇಕು. ಗ್ರಾಮಸ್ಥರು ಇದಕ್ಕೆ ಬೆಂಬಲ ನೀಡಬೇಕೆಂದು ಯದುಶ್ರೀ ಆನೆಗುಂಡಿ ಹೇಳಿದರು.
ಗುಂಡಿಕಂಡದಿಂದ ಕಿಂಡಿಅಣೆಕಟ್ಟು ಸ್ಥಳಾಂತರ ಆರೋಪ, ಆಕ್ರೋಶ: ವಳಕಡಮ ಸಮೀಪದ ಗುಂಡಿಕಂಡ ಎಂಬಲ್ಲಿಗೆ ಮಂಜೂರಾಗಿದ್ದ ಕಿಂಡಿಅಣೆಕಟ್ಟು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥ ತೇಜಸ್ ಗೌಡ ಊರಾಜೆರವರು, ವಳಕಡಮ ಸಮೀಪದ ಗುಂಡಿಕಂಡ ಎಂಬಲ್ಲಿ 2020-21ನೇ ಸಾಲಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪಾಯ ಮಾಡಲಾಗಿದೆ. ಆದರೆ ಆ ಬಳಿಕ ಅಲ್ಲಿ ಯಾವುದೇ ಕಾಮಗಾರಿ ನಡೆದಿರುವುದಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ವಳಕಡಮ ಗುಂಡಿಕಂಡ ನಿವಾಸಿಗಳಾದ ಚೇತನ್‌ಗೌಡ ಗುಂಡಿಕಂಡ, ಜಯರಾಮ ನಡುಮನೆ, ಆನಂದ ಗೌಡ ಕಟ್ಟಮನೆ, ಶಿವರಾಮ ಬಲ್ತಕುಮೇರ್, ವಸಂತ ಗುಂಡಿಜೆ, ಸಾಂತಪ್ಪ ಗೌಡ, ಸುದೇಶ್, ಚಂದ್ರಶೇಖರ, ಮನೋಹರ ಬಲ್ತಕುಮೇರ್, ವಂದೇಶ್, ಧನಂಜಯ, ಭುವನೇಶ್, ಸೋವಿತ್‌ಕುಮಾರ್, ನಾಣ್ಯಪ್ಪ, ಭಾಸ್ಕರ, ಸುಬ್ರಹ್ಮಣ್ಯ ಊರಾಜೆ, ಬಾಲಪ್ಪ ಕೆರೆಂತೆಲ್, ದೀಕ್ಷಿತ್, ನವೀನ್ ಊರಾಜೆ, ಪ್ರವೀಣ್ ಬಲ್ತಕುಮೇರ್, ದಿನೇಶ್ ಊರಾಜೆ, ಸುಂದರ ಕೆ., ಮೋಹಿತ್ ಹಾಗೂ ಇತರರು, ಈ ಕಿಂಡಿ ಅಣೆಕಟ್ಟು ಯೋಜನೆಯನ್ನು ಒಂದೆರೆಡು ಮನೆಯವರ ಅನುಕೂಲಕ್ಕಾಗಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಗ್ರಾ.ಪಂ.ಸದಸ್ಯ ಚಿದಾನಂದರವರು, ಜಲಾನಯನ ಹಾಗೂ ಕೃಷಿ ಇಲಾಖೆಯಿಂದ ಇಲ್ಲಿಗೆ ಕಿಂಡಿಅಣೆಕಟ್ಟು ಮಂಜೂರುಗೊಂಡಿತ್ತು. ಆದರೆ ಆ ಬಳಿಕ ಕೆಲವೊಂದು ಸಮಸ್ಯೆಗಳಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಈ ಯೋಜನೆ ಬೇರೆ ಕಡೆಗೆ ಸ್ಥಳಾಂತರಗೊಳಿಸಲಾಗಿಲ್ಲ. ಗ್ರಾ.ಪಂ.ಮಾಜಿ ಸದಸ್ಯ ವಿನೋದರ ಮಾಳ ಅವರ ಮನೆ ಬಳಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟಿನ ಅಂದಾಜು ಪಟ್ಟಿಯೇ ಬೇರೆ, ಗುಂಡಿಕಂಡದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕಿಂಡಿ ಅಣೆಕಟ್ಟಿನ ಅಂದಾಜುಪಟ್ಟಿಯೇ ಬೇರೆ ಎಂದು ಸ್ಪಷ್ಟಪಡಿಸಿದರು. ಆದರೂ ಸಮಾಧಾನಗೊಳ್ಳದ ಗ್ರಾಮಸ್ಥರು ಗುಂಡಿಕಂಡದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಗ್ರಾಮಸ್ಥರಿಂದಲೇ ಅಡಿಪಾಯ ತೆಗೆಸಲಾಗಿದೆ. ಇಲ್ಲಿಗೆ ಈಗ ಕಿಂಡಿ ಅಣೆಕಟ್ಟಿನ ಅವಶ್ಯಕತೆ ಇದೆ. ಆದ್ದರಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ, ಯದುಶ್ರೀ ಆನೆಗುಂಡಿ ಇದಕ್ಕೆ ಪೂರಕವಾಗಿ ಮಾತನಾಡಿದರು. ಬಳಿಕ ಪ್ರತಿಕ್ರಿಯಿಸಿದ ಅಧ್ಯಕ್ಷ ಹರ್ಷಿತ್‌ಕುಮಾರ್, ಗುಂಡಿಕಂಡದಲ್ಲಿನ ಕಿಂಡಿ ಅಣೆಕಟ್ಟು ಕಾಮಗಾರಿ ಮೊಟಕುಗೊಂಡಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಗುಂಡಿಕಂಡದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಽಸಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.
ಖಾಯಂ ವೈದ್ಯರ ನೇಮಿಸಿ: ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ ಮಾಡಬೇಕು. ಕೊಯಿಲ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮಾತ್ರ ಮನೆ ಮನೆಗೆ ಭೇಟಿ ನೀಡುತ್ತಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಬರುವುದೇ ಇಲ್ಲ ಎಂದು ಗ್ರಾಮಸ್ಥರಾದ ಸೆಲಿಕತ್, ಜುನೈದ್ ಕೆಮ್ಮಾರ ಹಾಗೂ ಇತರರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಹರ್ಷಿತ್‌ಕುಮಾರ್‌ರವರು, ವೈದ್ಯರ ನೇಮಕಕ್ಕೆ ಸಂಬಂಽಸಿ ಈಗಾಗಲೇ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಽಕಾರಿಯವರಿಗೆ ಮನವಿ ಮಾಡಲಾಗಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ನಝೀರ್ ಪೂರಿಂಗ, ಈ ಹಿಂದೆ ಆಸ್ಪತ್ರೆ ಸಮಸ್ಯೆ ಕುರಿತಂತೆ ದೂರು ಬಂದ ಸಂದರ್ಭದಲ್ಲಿ ಸದಸ್ಯರೆಲ್ಲರೂ ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಹಿಂದಿನ ವೈದ್ಯರಿಂದ ಉತ್ತಮ ಸ್ಪಂದನೆ ಸಿಗುತ್ತಿತ್ತು. ಕೊಯಿಲ ಗ್ರಾಮದಲ್ಲಿ ಸಿಸ್ಟರ್ ಇಲ್ಲ ಎಂಬುದು ಈಗಷ್ಟೇ ನಮ್ಮ ಗಮನಕ್ಕೆ ಬಂದಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕ ಮಾಡಬೇಕೆಂಬ ಗ್ರಾಮಸ್ಥರ ಮನವಿಯಂತೆ ನಿರ್ಣಯ ಕೈಗೊಳ್ಳಲಾಯಿತು.
ಸಬ್ಸಿಡಿಯಲ್ಲಿ ಗೋಲ್‌ಮಾಲ್: ಕೃಷಿ ಇಲಾಖೆಯಲ್ಲಿ ಸಬ್ಸಿಡಿ ನೆಪದಲ್ಲಿ ಯಂತ್ರೋಪಕರಣ ನೀಡಲಾಗುತ್ತಿದೆ. ಇದರಲ್ಲಿ ಗೋಲ್‌ಮಾಲ್ ನಡೆಯುತ್ತಿದೆ. ರೂ.10 ಸಾವಿರಕ್ಕೆ ಸಿಗುವ ಯಂತ್ರಕ್ಕೆ ಸಬ್ಸಿಡಿ ಬೇಕಾದಲ್ಲಿ 15 ಸಾವಿರ ರೂ. ಕೊಟ್ಟು ಖರೀದಿಸಬೇಕಾಗುತ್ತದೆ. ಅಲ್ಲದೇ ಕೆಲವೊಂದು ಸವಲತ್ತು ಇಲಾಖೆಯಿಂದ ಪಡೆದುಕೊಂಡ ಫಲಾನುಭವಿಗಳು ಬೇರೆಯವರಿಗೆ ಮಾರಾಟ ಮಾಡುತ್ತಾರೆ ಎಂದು ಯದುಶ್ರೀ ಆನೆಗುಂಡಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಽಕಾರಿ ಭರಮಣ್ಣನವರ, ಬೆಂಗಳೂರಿನಿಂದಲೇ ದರಪಟ್ಟಿ ನಿಗದಿಗೊಳಿಸಲಾಗುತ್ತದೆ ಎಂದರು.
ರಸ್ತೆ ದುರಸ್ತಿಗೆ ಮನವಿ: ವಳಕಡಮ-ಗುಂಡಿಕಂಡ ರಸ್ತೆ ನಾದುರಸ್ತಿ ವಿಚಾರ ಪ್ರಸ್ತಾಪಿಸಿದ ತೇಜಸ್‌ರವರು, ಗುಂಡಿಕಂಡ ರಸ್ತೆ ದುರಸ್ತಿಗೆ ಒತ್ತಾಯಿಸಿ ಅಲ್ಲಿ ಆ ಭಾಗದ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಲಾಗಿದೆ. ಇದು ಎಚ್ಚರಿಕೆಯಾಗಿದೆ. ಇಲ್ಲಿ ೫೦ಕ್ಕೂ ಹೆಚ್ಚು ಮನೆಗಳಿವೆ. ಮುಂದಿನ ವಿಧಾನಸಭಾ ಚುನಾವಣೆಯೊಳಗೆ ಇಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು. ವಳಕಡಮ-ಗುಂಡಿಜೆ ರಸ್ತೆ ಬಗ್ಗೆಯೂ ಗ್ರಾಮಸ್ಥ ವಸಂತ ಗುಂಡಿಜೆ ಪ್ರಸ್ತಾಪಿಸಿ, ಸದ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ, ನಡೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತುರ್ತಾಗಿ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಈ ಬಗ್ಗೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಖಾಯಂ ಪಿಡಿಒ, ವಿಎ ನೇಮಕಕ್ಕೆ ಮನವಿ: ಕೊಯಿಲ ಗ್ರಾಮಕ್ಕೆ ಖಾಯಂ ಪಿಡಿಒ, ಗ್ರಾಮಕರಣಿಕರ ನೇಮಕಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಕೆಮ್ಮಾರದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಆ ಭಾಗದ ಗ್ರಾಮಸ್ಥರು ಪ್ರಸ್ತಾಪಿಸಿದರು. ಕೊಯಿಲ ಜನತಾ ಕಾಲೋನಿ ರಸ್ತೆ ಡಾಮರೀಕರಣ, ಚರಂಡಿ ದುರಸ್ತಿ, ರಿಕ್ಷಾ ಪಾರ್ಕಿಂಗ್ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಗ್ರಾಮಕರಣಿಕ ಸತೀಶ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ವಿಠಲ್, ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕೊಯಿಲ, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ರಾಜೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಉಮಾವತಿ, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಡಾ.ರವಿಶಂಕರ ಭಟ್‌ರವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ನೀತಾ ಎನ್., ಸಫಿಯಾ, ಹಸನ್ ಸಜ್ಜಾದ್, ಜೊಹರಾಬಿ, ನಝೀರ್, ಪುಷ್ಪಾಸುಭಾಶ್‌ಕುಮಾರ್, ಸೀತಾರಾಮ ಬಲ್ತಕುಮೇರು, ಲತಾ, ಭಾರತಿ, ಶಶಿಕಲಾ, ಯತೀಶ್‌ಕುಮಾರ್ ಎಸ್.ಹೆಚ್., ಚಿದಾನಂದ ಪಿ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಪಮ್ಮು ವರದಿ ಮಂಡಿಸಿದರು. ಸಿಬ್ಬಂದಿ ರುಕ್ಮಯ್ಯರವರು ಜಮಾಖರ್ಚಿನ ವಿವರ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.
’ ಮನೆ ಬಾಗಿಲಿಗೆ ದಾಖಲೆ ಬಂದಿಲ್ಲ:
ಅಲೆದಾಟ ಬೇಕಿಲ್ಲ, ಇಂದು ನಾಳೆ ಸುತ್ತಾಟವಿಲ್ಲ. ಬಂತು ನೋಡಿ ಮನೆ ಬಾಗಿಲಿಗೆ ದಾಖಲೆ’ ಎಂಬ ಯೋಜನೆ ಸರಕಾರ ಜಾರಿಗೆ ತಂದರೂ ಕೊಯಿಲ ಗ್ರಾಮದಲ್ಲಿ ಯಾರ ಮನೆ ಬಾಗಿಲಿಗೂ ದಾಖಲೆ ಮುಟ್ಟಿಲ್ಲ ಎಂದು ಗ್ರಾಮಸ್ಥ ವಿನೋದ್‌ಕುಮಾರ್ ಹೇಳಿದರು. ಈ ದಾಖಲೆ ಪಂಚಾಯತ್ ಕಚೇರಿಯಲ್ಲಿಯೇ ಇದೆ. ಪರಿಶೀಲನೆ ನಡೆಸಿದಾಗ ಅದರಲ್ಲಿ ಬಹಳಷ್ಟು ತಪ್ಪುಗಳಿವೆ. ನನ್ನ ಜಾತಿ ಆದಾಯ ಪ್ರಮಾಣಪತ್ರದಲ್ಲಿ ತಂದೆಯ ಹೆಸರಿನ ಮುಂದೆ ಜಾತಿಯೇ ತಪ್ಪಾಗಿ ನಮೂದಾಗಿದೆ ಎಂದು ವಿನೋದ್‌ಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕ ಸತೀಶ್‌ರವರು, ಕೆಲವೊಂದು ದಾಖಲೆಗಳು ಪಂಚಾಯತ್ ಕಚೇರಿಗೆ ಬಂದಿವೆ. ತಪ್ಪಾಗಿರುವುದರಿಂದ ಗ್ರಾಮಸ್ಥರಿಗೆ ಹಂಚಿಲ್ಲ ಎಂದರು.