ಪುತ್ತೂರು: ಬಂದರು ನಗರ ಮಂಗಳೂರುನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆಮಹಲು-ಮಾರನಹಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಪಡಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಧಾನ ಸಭೆ ಅಽವೇಶನದಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಗಮನ ಸೆಳೆದ ಮಠಂದೂರು:
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಳೆದ 10 ವರ್ಷಗಳಿಂದ ನಿರಂತರ ನಾದುರಸ್ತಿಯಲ್ಲಿದೆ. ಮಳೆಗಾಲದಲ್ಲಿ ಬಂದರು ನಗರವನ್ನು ಸಂಪರ್ಕಿಸುವ ಸಕಲೇಶಪುರ ರಸ್ತೆ ಬದಿ 10 ಕಿ.ಮಿ.ಭೂಕುಸಿತ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ತೀರ್ಥಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. 10 ಕಿ.ಮೀ. ಪ್ರಯಾಣಿಸಲು ಒಂದು ಗಂಟೆಯ ಕಾಲಾವಕಾಶಬೇಕಾಗುತ್ತದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಯಾತ್ರಾರ್ಥಿಗಳಿಗೆ, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿ ಜಿಲ್ಲೆಯ ಆರ್ಥಿಕತೆಗೆ ಹಿನ್ನಡೆಯಾಗಿದೆ. ಆದ್ದರಿಂದ ಈ ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಅಧಿವೇಶನದಲ್ಲಿ ಗಮನ ಸೆಳೆದರು. ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ನಲ್ಲಿ ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದಕ್ಕಾಗಿ ಬದಲಿ ರಸ್ತೆ ನಿರ್ಮಿಸಲು 4.30 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿ ರಸ್ತೆ ನಿರ್ಮಿಸಲಾಗಿದೆ. ರಸ್ತೆಯನ್ನು ಕೆಳಗಿನಿಂದ ಕಟ್ಟಿಕೊಂಡು ಬರಬೇಕಾದ ಅನಿವಾರ್ಯತೆಯಿದೆ. ಕೆಲಸ ನಿಧಾನವಾಗಿ ನಡೆಯುತ್ತಿದೆ. ಆದ್ಯತೆ ಮೇರೆಗೆ ನಡೆಯುತ್ತಿದೆ ಎಂದು ತಿಳಿಸಿದರು.