ಬೆಟ್ಟಂಪಾಡಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

0

ಯುವಶಕ್ತಿ ಸಬಲೀಕರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕೊಡುಗೆ ಅಪಾರ: ವಿಜಯಕುಮಾರ ಮೊಳೆಯಾರ್

ಪುತ್ತೂರು: ರಾಷ್ಟ್ರ ಉನ್ನತಿಯತ್ತ ಸಾಗಬೇಕಾದರೆ ಯುವಶಕ್ತಿಯು ಸಶಕ್ತವಾಗಬೇಕು,ಅದಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಕೊಡುಗೆ ಅಪಾರ ಎಂದು ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಮೊಳೆಯಾರ್ ಹೇಳಿದರು. ಒಬ್ಬ ವ್ಯಕ್ತಿ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಮಾಜಿಕ ಜೀವನದಲ್ಲಿ ಅಭಿವೃದ್ಧಿ ಹಾಗೂ ಪ್ರಾಯೋಗಿಕ ಜ್ಞಾನದ ಪ್ರಾಪ್ತಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಎನ್ಎಸ್ಎಸ್ ಘಟಕಗಳು ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಹರಿಪ್ರಸಾದ್ ಎಸ್ ದೇಶ ಕಂಡ ಅಪ್ರತಿಮ ವ್ಯಕ್ತಿತ್ವಗಳಾದ ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಒಳಗೊಂಡು ರೂಪುಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಶ್ರಮದಾನಕ್ಕೆ ಸೀಮಿತವಾಗದೆ, ವ್ಯಕ್ತಿತ್ವ ವಿಕಸನಕ್ಕೂ ಸಮಗ್ರ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಕಳೆದ ವರ್ಷದಲ್ಲಿ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಅತ್ಯಂತ ಸಕ್ರಿಯ ಮತ್ತು ಕ್ರಿಯಾಶೀಲವಾಗಿ ಕಾರ್ಯಪ್ರವೃತ್ತವಾಗಿದೆ. ಎನ್ಎಸ್ಎಸ್ ಏನು ಎಂದು ತಿಳಿಯುವುದು ಹೊರಗಿನಿಂದ ಚಟುವಟಿಕೆಗಳನ್ನು ವೀಕ್ಷಿಸುವುದರಿಂದ ಅಸಾಧ್ಯ, ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಲ್ಲಿ ಮಾತ್ರ ಎನ್ಎಸ್ಎಸ್ ಏನೆಂಬುದನ್ನು ತಿಳಿಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎನ್ಎಸ್ಎಸ್ ನಲ್ಲಿ ವಿಶೇಷ ಜವಾಬ್ದಾರಿಗಳನ್ನು ನಿರ್ವಹಿಸಿದ ಸ್ವಯಂಸೇವಕರನ್ನು ಗುರುತಿಸಿ ಗೌರವಿಸಲಾಯಿತು. ಅಲ್ಲದೆ ಎನ್ಎಸ್ಎಸ್ ನಲ್ಲಿ ಕಳೆದ ಮೂರು ವರ್ಷ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ರಂಜಿತಾ ಜಿ ಅವರನ್ನು 2021-22ನೇ ಸಾಲಿನ ಕಾಲೇಜಿನ ‘ಅತ್ಯುತ್ತಮ ಸ್ವಯಂಸೇವಕಿ’ ಎಂದು ಗುರುತಿಸಿ ಗೌರವಿಸಲಾಯಿತು. ಘಟಕ ನಾಯಕ ಸಾರ್ಥಕ್ ಟಿ ರಚಿಸಿದ ದೇಶಭಕ್ತಿ ಗೀತೆಯನ್ನು ಸ್ವಯಂಸೇವಕಿಯರು ಹಾಡಿದರು.

ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶಶಿಕುಮಾರ, ಗ್ರಂಥಪಾಲಕ ರಾಮ ಕೆ, ಪ್ರಾಧ್ಯಾಪಕ ವೃಂದದವರಾದ ಡಾ.ಕಾಂತೇಶ್ ಎಸ್, ತಿಮ್ಮಯ್ಯ ಎಲ್ ಎನ್,  ಮಾರಣ್ಣ, ಅನಂತ ಭಟ್, ಎನ್ ಎಸ್ಎಸ್ ಘಟಕ ನಾಯಕರುಗಳು ಮತ್ತು ಸ್ವಯಂಸೇವಕರುಗಳು ಭಾಗವಹಿಸಿದರು. ಸ್ವಯಂ ಸೇವಕಿಯರಾದ ರಕ್ಷಿತಾ ಕೆ ಸ್ವಾಗತಿಸಿದರು, ವಿದ್ಯಾಶ್ರೀ ವಂದನೆ ಸಲ್ಲಿಸಿದರು, ಅನನ್ಯ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here