ದಂತ ಚಿಕಿತ್ಸೆ, ಪ್ರಸೂತಿ, ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ಕೀಲು, ಎಲುಬು ಚಿಕಿತ್ಸೆ
ಪುತ್ತೂರು; ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಏಳನೇ ತಿಂಗಳ ಶಿಬಿರವು ಅ.2ರಂದು ನಡೆಯಲಿದೆ. ಈ ಬಾರಿಯ ಶಿಬಿರದಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ದಂತ ಚಿಕಿತ್ಸೆ, ಕೀಲು ಮತ್ತು ಎಲುಬು ಚಿಕಿತ್ಸೆಗಳನ್ನು ನಡೆಸುವುದಾಗಿ ಸೆ.25ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರೋಟರಿ ಕ್ಲಬ್ ಪುತ್ತೂರು ಪೂರ್ವ, ನವಚೇತನಾ ಯುವಕ ಮಂಡಲ ಸಂಪ್ಯ, ಶ್ರೀಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಮಹಾವೀರ ಆಸ್ಪತ್ರೆ ಬೊಳುವಾರು, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ದರ್ಬೆ, ಭಾರತೀಯ ಜನೌಷಧ ಕೇಂದ್ರಗಳು ಸಹಕಾರದೊಂದಿಗೆ ನಡೆಯಲಿರುವ ಉಚಿತ ವೈದ್ಯಕೀಯ ಶಿಬಿರವನ್ನು ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಶರತ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ನವಚೇತನಾ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದಲ್ಲಿ ಪ್ರತಿ ತಿಂಗಳ ದೇವಸ್ಥಾನದ ಭಕ್ತರಿಗಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಿಗಳನ್ನು ಕಳೆದ 6 ತಿಂಗಳುಗಳಿಂದ ನಡೆಯುತ್ತಿದೆ. ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಶಿಬಿರದಲ್ಲಿ ಜನತೆಯ ಬೇಡಿಕೆಗೆ ಅನುಗುಣವಾಗಿ ವಿವಿಧ ಖಾಯಿಲೆಗಳಿಗೆ ಸಂಬಂಧಿಸಿದಂತೆ ವಿಶೇಷ ವೈದ್ಯರ ಮೂಲಕ ಜನತೆಗೆ ಉಚಿತವಾಗಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಶಿಬಿರದಲ್ಲಿ ಚಿಕಿತ್ಸೆ ಹಾಗೂ ಅವರಿಗೆ ಒಂದು ತಿಂಗಳಿಗೆ ಬೇಕಾಗುವಂತಹ ಔಷಽಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಉಚಿತ ಚಿಕಿತ್ಸೆ, ಔಷಧಗಳ ಜೊತೆಗೆ ಊಟ, ಉಪಾಹಾರಗಳು ಶಿಬಿರಾರ್ಥಿಗಳಿಗೆ ದೊರೆಯುತ್ತಿದೆ. ಶಿಬಿರದಲ್ಲಿ ಉಚಿತ ಚಿಕಿತ್ಸೆಯಲ್ಲಿ ವಿವಿಧ ವಿಭಾಗಗಳ ವೈದ್ಯರುಗಳು, ವಿವಿಧ ಔಷಧ ಕಂಪನಿಗಳು, ಜನೌಷಧ ಕೇಂದ್ರಗಳು ಕೈಜೋಡಿಸಿಕೊಳ್ಳುತ್ತಿದೆ.
ಈ ಬಾರಿಯ ಶಿಬಿರದಲ್ಲೇನಿದೆ…!
ಈ ಬಾರಿಯ ಉಚಿತ ಶಿಬಿರದಲ್ಲಿ ವಿಶೇಷವಾಗಿ ಪ್ರಸೂತಿ ಹಾಗೂ ಸ್ತ್ರೀ ರೋಗ, ದಂತ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಕೀಲು ಮತ್ತು ಎಲುಬು ಚಿಕಿತ್ಸೆಗಳ ಉಚಿತ ಚಿಕಿತ್ಸೆ ನಡೆಯಲಿದೆ. ಜೊತೆಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಉಚಿತ ಔಷಧಗಳ ವಿತರಣೆಯು ನಡೆಯಲಿದೆ. ಮಹಾವೀರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯೆ ಡಾ.ರಾಜೇಶ್ವರಿ ಪಡಿವಾಳ್, ಮಹಾವೀರ ಆಸ್ಪತ್ರೆಯ ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ.ಸಚಿನ್ ಶಂಕರ್‌ರವರಿಂದ ಕೀಲು ಮತ್ತು ಎಲುಬು ಚಿಕಿತ್ಸೆ, ಡಾ. ಮಂಜುನಾಥ ಶೆಟ್ಟಿಯವರಿಂದ ಮಕ್ಕಳ ಚಿಕಿತ್ಸೆ, ಕುಂಬ್ರ ಬಾಲಾಜಿ ಡೆಂಟಲ್ ಕ್ಲಿನಿಕ್‌ನ ಡಾ.ಯಶ್ಮೀಯವರಿಂದ ದಂತ ಚಿಕಿತ್ಸೆ ನಡೆಯಲಿದೆ. ಇದರ ಜೊತೆಗೆ ವೈದ್ಯಕೀಯ ತಜ್ಞ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ದೀಕ್ಷಾ, ಡಾ.ಸಾಯಿಪ್ರಕಾಶ್ ಹಾಗೂ ಡಾ.ಆಕಾಶ್ ಶಿಬಿರದಲ್ಲಿ ತಜ್ಞ ವೈದ್ಯರುಗಳಾಗಿ ಭಾಗವಹಿಸಲಿದ್ದಾರೆ. ಇದಲ್ಲದೆ ಮೂಳೆ ಸಾಂದ್ರತೆ ಹಾಗೂ ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯವರಿಂದ ರಕ್ತ ಪರೀಕ್ಷೆ ನಡೆಯಲಿದೆ ಎಂದು ಡಾ.ಸುರೇಶ್ ಪುತ್ತೂರಾಯ ಮಾಹಿತಿ ನೀಡಿದರು.
ವ್ಯಾಕ್ಸಿನ್, ಆಯುಷ್ಮಾನ್ ನೋಂದಣಿ: ಶಿಬಿರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಕೋವಿಡ್-19ನ ಬೂಸ್ಟರ್ ಡೋಸ್ ವಿತರಣೆ ಹಾಗೂ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯುಷ್ಮಾನ್ ಆರೋಗ್ಯ ಭಾರತ್ ಕಾರ್ಡ್ ಯೋಜನೆಯ ನೋಂದಣಿ ನಡೆಯಲಿದೆ. ನೋಂದಾಯಿಸಿಕೊಳ್ಳುವವರು ಆಧಾರ ಕಾರ್ಡ್ ಹಾಗೂ ರೇಷನ್ ಕಾರ್ಡ್‌ನೊಂದಿಗೆ ಹಾಜರಿರುವಂತೆ ವ್ಯವಸ್ಥಾಪನಾ ಸಮಿತಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಪ್ರಕಟಣೆ ತಿಳಿಸಿದೆ.
ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಭೀಮಯ್ಯ ಭಟ್, ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ,ಎಸ್., ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಕುಮಾರ್ ನಾಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಆರೋಗ್ಯ ರಕ್ಷಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ನವಚೇತನ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಸತ್ಯನಾರಾಯಣ ಪೂಜಾ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಉದಯ ಕುಮಾರ್ ರೈ ಎಸ್ ಸ್ವಾಗತಿಸಿ, ವಂದಿಸಿದರು.