ಪುತ್ತೂರು ತಾ|21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ

0

ಸರಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳಿಗೆ ರೂ.5 ಕೋಟಿ ಅನುದಾನ-ಮಠಂದೂರು

ಪುತ್ತೂರು:ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಪೂರೈಸಲು ರೂ.5 ಕೋಟಿ ಅನುದಾನ ಒದಗಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ನಡೆದ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಹೃದಯ ಭಾಷೆಯನ್ನು ಮುಂದಿನ ಪೀಳಿಗೆಗೂ ವಿಸ್ತರಿಸಿ, ಉಳಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ.ಸರಕಾರಿ ಶಾಲೆಗಳಿಗೂ ಆರ್‌ಸಿಸಿ ಕಟ್ಟಡಗಳು ಬೇಕೆಂಬ ಉದ್ದೇಶದಿಂದ 75 ಕೊಠಡಿಗಳನ್ನು ಮಂಜೂರುಗೊಳಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಉಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ ಶಾಸಕರು,ಕನ್ನಡದ ಭಾಷೆಯ ಉಳಿವಿಗಾಗಿ ಬಾಲವನದಲ್ಲಿ ಬೃಹತ್ ಗ್ರಂಥಾಲಯವನ್ನು ಪ್ರಾರಂಭಿಸಿ ಅದರಲ್ಲಿ ಓದುವವರಿಗೆ ಪ್ರಶಾಂತ ವಾತಾವರಣ ನಿರ್ಮಿಸಿಕೊಡಲಾಗುವುದು.ಶತಮಾನೋತ್ಸವ ಕಂಡ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂ.16 ಲಕ್ಷ ಅನುದಾನದಲ್ಲಿ ಪಾರಂಪರಿಕವಾದ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರಲ್ಲದೆ,ಈ ಸಮ್ಮೇಳನವು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ಇಲ್ಲಿ ಕೈಗೊಂಡ ನಿರ್ಣಯಗಳು ಅನುಷ್ಠಾನವಾಗಿ ಕನ್ನಡ ಸಮೃದ್ಧ ಭಾಷೆಯಾಗಿ ಮೂಡಿಬರಲು ಸಹಕಾರಿಯಾಗಲಿ ಎಂದು ಆಶಿಸಿದರು.

ವ್ಯಕ್ತಿತ್ವದ ಮೂಲ ಸಾಹಿತ್ಯದಲ್ಲಿ ಅಡಗಿದೆ-ಡಾ|ವರದರಾಜ ಚಂದ್ರಗಿರಿ:

ಸಮಾರೋಪ ಭಾಷಣ ಮಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|ವರದರಾಜ ಚಂದ್ರಗಿರಿ ಮಾತನಾಡಿ, ಸಾಹಿತ್ಯವೇ ಎಲ್ಲಾ ಮೌಲ್ಯಗಳ ತಾಯಿ.ವ್ಯಕ್ತಿತ್ವದ ಮೂಲ ಸಾಹಿತ್ಯದಲ್ಲಿ ಅಡಗಿದೆ.ಕನ್ನಡ ಕೇವಲ ಭಾಷೆಗೆ ಸೀಮಿತವಲ್ಲ.ಕನ್ನಡ ಸಂವಹನದ ಭಾಷೆಯಲ್ಲ.ಸಂವೇದನೆಯ ಅನೇಕ ಅಂಶಗಳಿವೆ. ಇಂದು ಜೀವನದ ಎಲ್ಲಾ ಆಗು-ಹೋಗುಗಳು ಮೊಬೈಲ್ ಸ್ಮಾರ್ಟ್ -ನ್‌ಗಳಲ್ಲಿ ನಡೆಯುತ್ತಿದ್ದು ವ್ಯಾಪಾರೀಕರಣವೂ ಕನ್ನಡದ ಮೇಲೆ ಪರಿಣಾಮ ಬೀರುತ್ತಿದೆ.ಕನ್ನಡದ ಸ್ಥಿತಿ ಆತಂಕದಲ್ಲಿದೆ.ಸವಾಲುಗಳನ್ನು ಎದುರಿಸುತ್ತಿದೆ.ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯು ಭಾಷೆಯಲ್ಲಿ ಇಂಗ್ಲಿಷ್‌ನ ಹಾಗೆ ಕನ್ನಡವನ್ನು ಇಟ್ಟುನೋಡುವ ಸಂದರ್ಭ ಬರುತ್ತದೆ.ಭಾಷೆಯ ಹಿಂದೆ ಹಲವು ಸಂವೇದನಾ ಸಂಗತಿಗಳಿವೆ ಎಂದು ತಿಳಿಯಬೇಕು.ನಮಗೆ ಎಲ್ಲವನ್ನೂ ಕಲಿಸಿದ್ದು ಸಾಹಿತ್ಯ.ಕನ್ನಡ ಭಾಷೆ ಹಾಗೂ ಕನ್ನಡವನ್ನು ಸಂವಹನಕ್ಕೆ ಮಾತ್ರ ಬಳಸುವುದು ಸರಿಯಲ್ಲ ಎಂದರು.

ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು-ಡಾ|ಎಚ್.ಜಿ.ಶ್ರೀಧರ್:

ಸಮ್ಮೇಳನಾಧ್ಯಕ್ಷ ಡಾ|ಎಚ್.ಜಿ.ಶ್ರೀಧರ್ ಮಾತನಾಡಿ,ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು.ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಿದಾಗ ನಾಡಿನ ಸಂಸ್ಕೃತಿ, ಸಾಹಿತ್ಯ ಜೀವಂತವಾಗಿ ಮುಂದಿನ ತಲೆಮಾರಿಗೆ ದಾಟಿಬರಲಿದೆ.ಓದುವಾಗ ಏಕಾಗ್ರತೆ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು.ಮನುಷ್ಯತ್ವ,ಮಾನವೀಯತೆ, ಇನ್ನೊಬ್ಬರ ಪ್ರೀತಿಸುವುದನ್ನು ಸಾಹಿತ್ಯ ತಿಳಿಸಿಕೊಡುತ್ತದೆ.ಈ ನಿಟ್ಟಿನಲ್ಲಿ ಸಾಹಿತ್ಯ ಓದಬೇಕು.ಸಾಹಿತ್ಯವನ್ನು ಓದುವಾಗ ಸಹಾನುಭೂತಿ ಇರಬೇಕು.ಕೃತಿಯು ಕೇವಲ ಕಥೆಯಲ್ಲ.ಅದು ಸಂಸ್ಕೃತಿ, ಸಮುದಾಯದ ಜೀವನ ಪದ್ದತಿಯನ್ನು ಕಟ್ಟಿಕೊಡುವುದನ್ನು ತಿಳಿಸಿಕೊಡುತ್ತದೆ ಎಂದರು.

ಜಿಲ್ಲಾ ಸಮ್ಮೇಳನದಂತೆ ಮೂಡಿ ಬಂದ ಮಾದರಿ ಸಮ್ಮೇಳನ- ಡಾ|ಎಂ.ಪಿ.ಶ್ರೀನಾಥ್:

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ|ಎಂ.ಪಿ.ಶ್ರೀನಾಥ್ ಮಾತನಾಡಿ, ತಾಲೂಕು ಮಟ್ಟದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಮಾದರಿಯಾಗಿ ನಡೆದಿದ್ದು ಜಿಲ್ಲಾ ಸಮ್ಮೇಳನದಂತೆ ಮೂಡಿಬಂದಿದೆ.ಸಮ್ಮೇಳನಗಳು ಉಳಿದ ಎಂಟು ತಾಲೂಕುಗಳಲ್ಲಿ ನಡೆಯಬೇಕು ಎಂದು ತಿಳಿಸಿದರು.ಪುತ್ತೂರಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಒದಗಿಸಿರುವುದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನ ಸುಬ್ರಹ್ಮಣ್ಯ ನಟ್ಟೋಜರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಪರಿಷತ್‌ನ ಆಜೀವ ಸದಸ್ಯರ ಸಂಖ್ಯೆ ಕಡಿಮೆಯಿದೆ.ಆನ್‌ಲೈನ್‌ನಲ್ಲಿ ಸದಸ್ಯತ್ವ ಅಭಿಯಾನ ಆರಂಭವಾಗಿದೆ.ಒಟ್ಟು ರೂ.400 ಪಾವತಿಸಿದರೆ ಸ್ಮಾರ್ಟ್ ಕಾರ್ಡ್ ದೊರೆಯಲಿದ್ದು ಮುಂದೆ ಮನೆಯಲ್ಲಿಯೇ ಕುಳಿತು ಚುನಾವಣೆಯಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಜಿಲ್ಲೆ,ರಾಜ್ಯ ಸಮ್ಮೇಳನಗಳೂ ಪುತ್ತೂರುನಲ್ಲಿ ನಡೆಯಲಿ-ಮಧು ಎಸ್.ಮನೋಹರ್:

ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡದ ಮಹಿಮೆ, ಮಹತ್ವವನ್ನು ತಿಳಿಸಲಾಗಿದ್ದು ಇದನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಾದ ಹೊಣೆ ವಿದ್ಯಾರ್ಥಿಗಳಲ್ಲಿದೆ.ಮುಂದೆ ಜಿಲ್ಲೆ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳೂ ಪುತ್ತೂರಿನಲ್ಲಿ ನಡೆಯಲಿ ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕಿ ರಾಜಶ್ರೀ ನಟ್ಟೋಜ,ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ|ಹರ್ಷ ಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷೆ ಹರಿಣಿ ಪುತ್ತೂರಾಯ, ಸದಸ್ಯರಾದ ಶಂಕರಿ ಶರ್ಮ, ಆಶಾ ಬೆಳ್ಳಾರೆ, ಕುಂಬ್ರ ದುರ್ಗಾಪ್ರಸಾದ್ ರೈ,ಕುಸುಮ್‌ರಾಜ್, ಡಾ|ವಿಜಯ ಕುಮಾರ್ ಮೊಳೆಯಾರ,ಯು.ಎಲ್.ಉದಯ ಕುಮಾರ್, ಅಬೂಬಕ್ಕರ್ ಆರ್ಲಪದವು, ಬಾಬು ಎಂ., ಯಶಸ್ವಿನಿ, ಸುಬ್ಬಪ್ಪ ಕೈಕಂಬ, ಕ.ಸಾ.ಪ ಉಳ್ಳಾಲ ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

9ನೇ ಅಧ್ಯಕ್ಷ, 9 ಸೆಂಟ್ಸ್ ಜಾಗ ಮಂಜೂರು:

ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕದ 9ನೇ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದೇನೆ. ಅದೂ ನವರಾತ್ರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕಾಕತಾಳೀಯವೆನ್ನುವಂತೆ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್‌ಗೆ 9 ಸೆಂಟ್ಸ್ ಜಾಗ ಮಂಜೂರಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು.

ಸನ್ಮಾನ: 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ|ಎಚ್.ಜಿ.ಶ್ರೀಧರ್ ಹಾಗೂ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪುಸ್ತಕ ಕೊಡುಗೆ: ಸಾಹಿತ್ಯಕ್ಕೆ ಸಂಬಂಽಸಿದ ಪುಸ್ತಕಗಳನ್ನು ಸಮ್ಮೇಳನಾಧ್ಯಕ್ಷ ಡಾ|ಎಚ್.ಜಿ ಶ್ರೀಧರ್ ಅಂಬಿಕಾ ವಿದ್ಯಾಲಯಕ್ಕೆ ಕೊಡುಗೆ ನೀಡಿದರು.ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಸ್ವಾಗತಿಸಿದರು.ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮ್ಮಜೆ ಕಾರ್ಯಕ್ರಮ ನಿರೂಪಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ವಂದಿಸಿದರು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಆದರ್ಶ ಗೋಖಲೆಯವರಿಂದ ಚಿಂತನೆ, ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಉದಯರಾಗ, ಬಳಿಕ ಯುವ ಸಮಾವೇಶ, ವಿಚಾರಗೋಷ್ಠಿ, ನೂತನ ಕೃತಿಗಳ ಲೋಕಾರ್ಪಣೆ, ಮಧ್ಯಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ, ಸಂಜೆ ಶಾಸೀಯ ಸಂಗೀತ, ಭೋಜನ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಅಭಿನಂದನೆ, ವಿಶೇಷ ಅಭಿನಂದನೆ, ಮಕ್ಕಳಿಗೆ ನಗದು ಬಹುಮಾನ ಹಾಗೂ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪುತ್ತೂರಿನಲ್ಲಿ ಭ್ರಷ್ಟಾಚಾರ ರಹಿತ ಇಲಾಖೆ
ಸುದ್ದಿ ಜನಾಂದೋಲನಕ್ಕೆ ಗೌರವ ಪೂರ್ವಕ ವಂದನೆ

ಯಾವುದೇ ಭ್ರಷ್ಟಾಚಾರ ಇಲ್ಲದೆ ಪುತ್ತೂರಿನಲ್ಲಿ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಪುತ್ತೂರಿನಲ್ಲಿ ಭ್ರಷ್ಟಾಚಾರ ರಹಿತ ಇಲಾಖೆಯಿದೆ.ಭ್ರಷ್ಟಾಚಾರದ ವಿರುದ್ದ ನಡೆಯುತ್ತಿರುವ ಸುದ್ದಿ ಜನಾಂದೋಲನಕ್ಕೆ ಗೌರವ ಪೂರ್ವಕ ವಂದನೆಗಳು.ಇದಕ್ಕೆ ಸಹಕಾರ ನೀಡಿದ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ಮೊದಲಾದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಯಾವುದೇ ಲಂಚ ನೀಡದೆ ೯ ಸೆಂಟ್ಸ್ ಜಾಗ ಮಂಜೂರಾದುದನ್ನು ಉಲ್ಲೇಖಿಸುತ್ತಾ ಹೇಳಿದರು.

LEAVE A REPLY

Please enter your comment!
Please enter your name here