ಪುತ್ತೂರು: ಚಾಲಕ ಹಾಗೂ ನಿರ್ವಾಹಕನಿಲ್ಲದ ಸಂದರ್ಭ ಪ್ರಯಾಣಿಕರು ತುಂಬಿದ ಬಸ್ಸೊಂದು ಏಕಾಏಕಿ ಹಿಂದಕ್ಕೆ ಚಲಿಸಿದ್ದು, ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ(ಇಸಿಬಿಎ) ವಿಭಾಗದ ವಿದ್ಯಾರ್ಥಿ ಸಿಝಾನ್ ಹಸನ್‌ರವರ ಸಮಯಪ್ರಜ್ಞೆಯಿಂದ ಉಂಟಾಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿರುವ ಘಟನೆ ಪುತ್ತೂರಿನ ಬಸ್ಸು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಸಮಯಪ್ರಜ್ಞೆ ತೋರಿದ ಕಾಲೇಜಿನ ವಿದ್ಯಾರ್ಥಿ ಸಿಝಾನ್ ಹಸನ್‌ರವರನ್ನು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಅ.1 ರಂದು ಅಭಿನಂದಿಸಲಾಯಿತು.
ಪದವಿ ಪೂರ್ವ ಇಲಾಖೆಯ ವತಿಯಿಂದ ನಡೆದಿರುವ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾಗಿರುವ ಮತ್ತು ವಿಜ್ಞಾನ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸುವ ಅಸೆಂಬ್ಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಿಝಾನ್ ಹಸನ್‌ರವರಿಗೆ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಹೂಗುಚ್ಛ ನೀಡಿ ಅಭಿನಂದಿಸಿ,ವಿದ್ಯಾರ್ಥಿಯ ಧೈರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೆ.13 ರಂದು ಸಂಜೆ 4.25ರ ವೇಳೆ ಉಪ್ಪಿನಂಗಡಿಯತ್ತ ತೆರಳಬೇಕಾದ ವಾಹನ ಸಂಖ್ಯೆ ಕೆಎ21-ಎಫ್0057 ನಂಬರಿನ ಎಕ್ಸ್‌ಪ್ರೆಸ್ ಸರಕಾರಿ ಬಸ್ಸು ಪುತ್ತೂರು ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ಇದ್ದಾಗ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕರಿಲ್ಲದ ಸಂದರ್ಭದಲ್ಲಿ ಬಸ್ಸು ಏಕಾಏಕಿ ಹಿಂದಕ್ಕೆ ಚಲಿಸಿದ್ದು, ಪ್ರಯಾಣಿಕರು ಬೊಬ್ಬೆ ಹೊಡೆಯುತ್ತಿದ್ದಂತೆ ಚಾಲಕನ ಎಡಬದಿ ಸೀಟಿನಲ್ಲಿದ್ದ ವಿದ್ಯಾರ್ಥಿ ಉಪ್ಪಿನಂಗಡಿಯ ಉದ್ಯಮಿ ಮೈನಾ ಕ್ಲೋತ್ ಸೆಂಟರ್ ಮಾಲಕ ಸಲಾಂ ಮೈನಾ ಇವರ ಪುತ್ರರಾಗಿರುವ ಸಿಝಾನ್ ಹಸನ್‌ರವರು ತಕ್ಷಣವೇ ಚಾಲಕನ ಸೀಟಿಗೆ ಜಿಗಿದು ಬ್ರೇಕ್ ಹಿಡಿದಿದ್ದು ಹಿಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ನಿಯಂತ್ರಿಸಿದ್ದರು. ಮಾತ್ರವಲ್ಲದೆ ಸಿಝಾನ್‌ರವರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಆಗಬಹುದಾದ ದೊಡ್ಡ ಅಪಘಾತವೊಂದರಿಂದ ರಕ್ಷಿಸಿರುತ್ತಾರೆ. ವಿದ್ಯಾರ್ಥಿ ಸಿಝಾನ್‌ರವರ ಈ ನಡೆಗೆ ಪ್ರಯಾಣಿಕರು ಸೇರಿದಂತೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.