ನಮ್ಮ ಮಣ್ಣಿನ ,ಧರ್ಮದ ಆಚರಣೆಗಳ ಮೇಲೆ ನಂಬಿಕೆ ಮುಖ್ಯ-ಎಸ್.ಅಂಗಾರ
ಸವಣೂರು : ನಮ್ಮ ಮಣ್ಣಿನ ,ಧರ್ಮದ ಆಚರಣೆಗಳ ಮೇಲೆ ನಂಬಿಕೆ ಮುಖ್ಯ.ನಾವು ನಮ್ಮ ಧರ್ಮದ ಸಂಸ್ಕೃತಿಯನ್ನು ಬೆಳೆಸಿಕೊಂಡು ಜೀವನದಲ್ಲಿ ಸಂಸ್ಕಾರವನ್ನು ಅಳವಡಿಸಿಕೊಂಡು ಮುಂದುವರಿದಾಗ ಶ್ರೇಯಸ್ಸು ದೊರಕಲು ಸಾಧ್ಯ ಎಂದು ಬಂದರು,ಒಳನಾಡು ಸಾರಿಗೆ ಹಾಗೂ ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಅ.5ರಂದು ಸವಣೂರು ಶ್ರೀಶಾರದಾಂಬಾ ಸೇವಾ ಸಂಘದ ವತಿಯಿಂದ ಸವಣೂರಿನ ವಿನಾಯಕ ಸಭಾಭವನದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾರದೋತ್ಸವ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇತರರಿಗೆ ಪ್ರೇರಣೆ ನೀಡುವ ಕೆಲಸವನ್ನು ಶಾರದಾಂಬಾ ಸೇವಾ ಸಂಘ ಮಾಡಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಜ್ಯೋತಿಷ್ಯ ವಿದ್ವಾನ್ ವಿಶ್ವಮೂರ್ತಿ ಬಡೆಕ್ಕಿಲ್ಲಾಯ ,ಅವರು ದೇವರು ಮನುಷ್ಯ ಜನ್ಮವನ್ನು ನೀಡಿರುವುದು ನಮ್ಮ ಪುಣ್ಯ.ಕಳೆದ ೧೮ವರ್ಷಗಳಿಂದ ಸವಣೂರಿನಲ್ಲಿ ನಿರಂತರವಾಗಿ ಯಶಸ್ವಿಯಾಗಿ ಶಾರದೋತ್ಸವವನ್ನು ನಡೆಸುತ್ತಿರುವುದು ಹೆಮ್ಮೆಯ ವಿಚಾರ.ಶಾರದಾ ಮಾತೆ ಜ್ಞಾನದೇವತೆ.ಶಾರದೆಯನ್ನು ಪೂಜಿಸುವ ಮೂಲಕ ಸಮಾಜದಲ್ಲಿ ಮುಂದುವರಿಯಲು ಅನುಗ್ರಹ ದೊರಕುತ್ತದೆ.ಸಾರ್ವಜನಿಕ ಉತ್ಸವಗಳಿಂದ ನಮ್ಮ ಸಂಬಂಧವೃದ್ದಿಯಾಗುತ್ತದೆ ಎಂದರು.
ಸಂಸ್ಕಾರವನ್ನು ಕಿರಿಯರಿಗೆ ತಿಳಿಸುವ ಕಾರ್ಯವನ್ನು ಹಿರಿಯರು ಮಾಡಬೇಕಿದೆ.ಸಂಸ್ಕಾರವಿಲ್ಲದ ಜೀವನ ಸಮಾಜಕ್ಕೆ ಹೊರೆಯಾಗುವ ಸಾಧ್ಯತೆ ಇದೆ.ನಮ್ಮ ಆಚಾರ-ವಿಚಾರವನ್ನು ಮುಂದುವರಿಸಿಕೊಂಡು ಹೋದಾಗ ಭವಿಷ್ಯವೂ ಉತ್ತಮವಾಗಿರಲು ಸಾಧ್ಯ ಎಂದರು.
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ,ದೇವರ ಅನುಗ್ರಹವಿದ್ದರೆ ಸಾಮಾನ್ಯ ಕೂಡ ಅಸಾಮಾನ್ಯ ಕೆಲಸ ಮಾಡಲು ಸಾಧ್ಯ.ದೇವತರಾಧನೆಯಿಂದ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯ.ದೇವರ ಅನುಗ್ರಹದಿಂದ ಸರ್ವೆ ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನ ಹಾಗೂ ಭಕ್ತಕೋಡಿ ಶ್ರೀರಾಮ ಭಜನ ಮಂದಿರ ಜೀರ್ಣೋದ್ದಾರ ಮಾಡುವ ಕೆಲಸ ಸಾಧ್ಯವಾಗಿದೆ ಎಂದರು.
ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ,ಹಳ್ಳಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಮೂಲಕ ಅವರ ಸಾಧನೆ ಇನ್ನೊಬ್ಬರಿಗೆ ತಿಳಿಯಲು ಸಾಧ್ಯ.ಇದಕ್ಕಾಗಿ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ.ವಿ.ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್‌ರೈ ಕೆರೆಕ್ಕೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ರೈ ಸವಣೂರು,ಅಭಿವೃದ್ದಿ ಶೀಲ ಸಂಶೋಧಕಿ ಆಶಾ ರೈ ಕಲಾಯಿ,ಸ್ವ ಉದ್ಯೋಗದಲ್ಲಿ ಯಶಸ್ವಿಯಾಗಿರುವ ಸುಚಿತ್ರಾ ಬೊಳ್ಳಾಜೆ,ರೋಶನ್ ಮಾಲೆತ್ತಾರು,ಪುರುಷೋತ್ತಮ ಬಂಬಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತನ್ನ ತಂದೆ ದಿ.ರಾಮಣ್ಣ ರೈ ಕೆಡೆಂಜಿ ಸ್ಮರಣಾರ್ಥ ಶಾರದಾ ದೇವಿಯ ಮೆರವಣಿಗೆಗೆ ಶಾಶ್ವತ ವಾಹನ ನಿರ್ಮಾಣಕ್ಕೆ ಜೀಪನ್ನು ಕೊಡುಗೆಯಾಗಿ ನೀಡಿದ ರಾಕೇಶ್ ರೈ ಕೆಡೆಂಜಿ ಅವರನ್ನು ಹಾಗೂ ವಾಹನ ನಿರ್ಮಾಣದ ಕೆಲಸ ಮಾಡಿದ ಈಶ್ವರ ಕೆಮ್ಮಾಯಿ ಅವರನ್ನು ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷ ಬಾಲಚಂದ್ರ ರೈ ಕೆರೆಕ್ಕೋಡಿ,ಕೋಶಾಧಿಕಾರಿ ವಸಂತ ರೈ ಸೊರಕೆ,ಸದಸ್ಯ ವಿಶ್ವನಾಥ ಮಡಿವಾಳ ಅತಿಥಿಗಳನ್ನು ಗೌರವಿಸಿದರು.
ಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ಸಂಪತ್‌ಕುಮಾರ್‌ಇಂದ್ರ ಸ್ವಾಗತಿಸಿ,ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ ವಂದಿಸಿದರು.ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ರೈ ಕೆಡೆಂಜಿ,ಸವಣೂರು ಪ್ರಾ.ಕೃ.ಪ.ಸ.ಸಂಘದ ಸಿಇಓ ಚಂದ್ರಶೇಖರ್‌ಪಿ. ಕಾರ್ಯಕ್ರಮ ನಿರೂಪಿಸಿದರು.
ಅ.5ರಂದು ಬೆಳಿಗ್ಗೆ 8ಕ್ಕೆ ಉದಯ ಕುಮಾರ್ ಸರ್ವೆ ಧ್ವಜಾರೋಹಣ ಮಾಡಿದರು. 8.30ಕ್ಕೆ ದೇವಿಯ ಪ್ರತಿಷ್ಟೆ ,ಗಣಹೋಮ ನಡೆಯಿತು.9.30ರಿಂದ ಮುಗೇರು ಶ್ರೀಮಹಾವಿಷ್ಣು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗಧ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು.ಭಾಗವತರಾಗಿ ಪ್ರಶಾಂತ್‌ರೈ ಮುಂಡಾಳಗುತ್ತು,ಭವ್ಯಶ್ರೀ ಕುಲ್ಕುಂದ ,ಚೆಂಡೆ ಮದ್ದಳೆಯಲ್ಲಿ ಜನಾರ್ಧನ ತೋಳ್ಪಾಡಿತ್ತಾಯ ಉಜಿರೆ,ಕುಮಾರ ಸುಬ್ರಹ್ಮಣ್ಯ ವಕುಂಜ,ಅರ್ಥದಾರಿಗಳಾಗಿ ಡಾ.ಪ್ರಭಾಕರ ಜೋಶಿ,ಉಜಿರೆ ಅಶೋಕ್‌ಭಟ್‌ಭಾಗವಹಿಸಿದರು. ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ವಿನೂತನ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಬಾರಿಯ ಶಾರದೋತ್ಸವದಲ್ಲಿ ಶಾರದಾ ದೇವಿಯ ಮೆರವಣಿಗೆಗೆ ನೂತನ ಶಾಶ್ವತ ಅಲಂಕೃತ ವಾಹನ ಸಮರ್ಪಣೆ ನಡೆಯಿತು.
ಸಂಜೆ ಮಹಾಪೂಜೆ,ಪ್ರಸಾದ ವಿತರಣೆ ,ಶ್ರೀಶಾರದಾ ಮೂರ್ತಿಯ ವಿಜೃಂಬಣೆಯ ಶೋಭಾಯಾತ್ರೆ ನಡೆದು ಸರ್ವೆ ಗೌರಿ ಹೊಳೆಯಲ್ಲಿ ಶಾರದಾ ಮೂರ್ತಿಯ ಜಲಸ್ಥಂಬನ ನಡೆಯಿತು.