ರಾಮಕುಂಜ ಶಾರದಾನಗರದಲ್ಲಿ 19ನೇ ವರ್ಷದ ಶಾರದೋತ್ಸವ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ, ರಾಮಕುಂಜ, ಹಳೆನೇರೆಂಕಿ ಗ್ರಾಮಗಳನ್ನೊಳಗೊಂಡ ರಾಮಕುಂಜ ವಲಯ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ರಾಮಕುಂಜ ಗ್ರಾಮದ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಪೂಜೆಯ ಅಂಗವಾಗಿ 19ನೇ ವರ್ಷದ ಶಾರದೋತ್ಸವ ಅ.3ರಿಂದ 5ರ ತನಕ ನಡೆಯಿತು.

ಅ.3ರಂದು ಶ್ರೀ ಶಾರದಾಂಬೆಯ ಪ್ರತಿಷ್ಟೆ, ಆಹ್ವಾನಿತ ಭಜನಾ ತಂಡಗಳಿಂದ ಭಜನೆ, ಮಹಾಪೂಜೆ, ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅ.೪ರಂದು ಬೆಳಿಗ್ಗೆ ವಾಹನ ಪೂಜೆ, ಮಾರಿಚಾಮುಂಡಿ, ಗುಳಿಗ ದೈವಗಳ ತಂಬಿಲ, ವಾಲಿಬಾಲ್ ಪಂದ್ಯಾಟ, ಸಾಮೂಹಿಕ ದುರ್ಗಾಪೂಜೆ, ಮಹಾಪೂಜೆ, ರಾತ್ರಿ ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು. ಅ.೫ರಂದು ಬೆಳಿಗ್ಗೆ ಸರಸ್ವತಿ ಪೂಜೆ, ವಿದ್ಯಾರಂಭ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಿತು.

ಧಾರ್ಮಿಕ ಸಭೆ:

ಅ.5ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲುರವರು ಧಾರ್ಮಿಕ ಉಪನ್ಯಾಸ ನೀಡಿ, ಧಾರ್ಮಿಕ ನಡವಳಿಕೆಗಳನ್ನು ಬೆಳೆಸಿಕೊಂಡವರು ಜೀವನದಲ್ಲಿ ಸಂಸ್ಕಾರಯುತರಾಗಿ ಬದುಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ಅವರಲ್ಲಿ ಸಂಸ್ಕಾರಯುತ ಶಿಸ್ತಿನ ಜೀವನಕ್ಕೆ ಪ್ರೇರಣೆ ನೀಡುವ ಕೆಲಸ ಹಿರಿಯರಿಂದ ನಡೆಯಬೇಕು. ಪರಂಪರಗತವಾಗಿ ಬೆಳೆದುಬಂದ ಪ್ರಕೃತಿ ಮತ್ತು ಮನುಷ್ಯನ ನಡುವಿನ ಅನ್ಯೋನ್ಯ ಸಂಬಂಧವನ್ನು ಗಟ್ಟಿಗೊಳಿಸಿ ಮುನ್ನಡೆಸಲು ಧಾರ್ಮಿಕ ಕಾರ್ಯದಲ್ಲಿ ಮಕ್ಕಳು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು. ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎಸ್ ಕೆ ಅಧ್ಯಕ್ಷತೆ ವಹಿಸಿದ್ದರು. ಶಾರಾದೋತ್ಸವ ಸಮಿತಿ ಗೌರವಾಧ್ಯಕ್ಷ ಯಲ್ಲಪ್ಪ ಪೂಜಾರಿ, ಅಧ್ಯಕ್ಷ ಪ್ರದೀಪ್ ಬಾಂತೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಮೆಸ್ಕಾಂ ಪವರ್‌ಮ್ಯಾನ್ ವಿಶ್ವನಾಥ ರಾಮಕುಂಜ, ಜೆ.ಇ.ಇ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಉತ್ತಿರ್ಣರಾಗಿ ಪ್ರಸ್ತುತ ಸುರತ್ಕಲ್ ಎನೈಟಿಕೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ರಾಹುಲ್ ತಾವೂರು ಅವರನ್ನು ಸನ್ಮಾನಿಸಲಾಯಿತು. 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವಲಯ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮೀಕ್ಷಾ ಪಾಣಿಗ, ಜೀವನ್ ಸಂಪ್ಯಾಡಿ, ಪಿಯುಸಿ ಕಲಾ ವಿಭಾಗದ ಅಭಿಷೇಕ್ ಆತೂರು, ವಾಣಿಜ್ಯ ವಿಭಾಗದ ಮಯೂರಿ ಎಂ.ಜಿ ರಾಮಕುಂಜ, ವಿಜ್ಞಾನ ವಿಭಾಗದ ಅನಿಲ್ ಎಸ್.ಡಿ ಸುಣ್ಣಾಲರವನ್ನು ಗೌರವಿಸಲಾಯಿತು.

ಶಾರದೋತ್ಸವ ಸಮಿತಿಯ ಗೌರವ ಸಲಹೆಗಾರ ಗಣರಾಜ ಕುಂಬ್ಳೆಯವರು ಪ್ರಸ್ತಾವಿಸಿ ಸ್ವಾಗತಿಸಿದರು. ಎಚ್.ವೆಂಕಟೇಶ್ ಭಟ್ ವಂದಿಸಿದರು. ನಿಶ್ಚಿತ್ ಶಾರದನಗರ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಜಯಪ್ರಕಾಶ್ ಅಮೈ ನಿರೂಪಿಸಿದರು. ಬಳಿಕ ವಿವಿಧ ಮಹಿಳಾ ಮತ್ತು ಪುರುಷ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶಾರದಾ ನಗರದಿಂದ, ಗೋಳಿತ್ತಡಿ, ಗಣೇಶ ನಗರ ಮೂಲಕ ಆತೂರಿನವರೆಗೆ ಶಾರದಾಂಬೆಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here