ಪುತ್ತೂರು:ದ.ಕ ಜಿಲ್ಲಾ ಜೈನ ವಿದ್ಯಾವರ್ಧಕ ಸಂಘ ಇದರ ವತಿಯಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆಯು ಅ.9ರಂದು ಜೈನ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ಮಾಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜೈನ ಸಮುದಾಯವು ಪೂರ್ವದಲ್ಲಿ ಅರಸನಾಗಿ ಬದುಕಿದ ಸಮುದಾಯ. ಭೂ ಸುದಾರಣೆ ಕಾನೂನಿಂದ ಜೈನ ಸಮುದಾಯವು ದೊಡ್ಡ ಹೊಡೆತ ತಿಂದ ಸಮುದಾಯವಾಗಿದೆ. ಜಗತ್ತಿನ ಪರಿವರ್ತನೆ ಜೊತೆಗೆ ಸರಿಯಾಗಿ ನಾವು ಪರಿವರ್ತನೆಯಾಗದಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಅಧುನಿಕ ಯುಗದಲ್ಲಿಯೂ ವಿದ್ಯೆಗೆ ಆಧ್ಯತೆ ನೀಡಿರುವ ವಿದ್ಯಾವರ್ಧಕ ಸಂಘ 100 ವರ್ಷದ ಹಿಂದಿನ ಪೂರ್ವಜರ ಯೋಜನೆ ಇಂದು ಅನುಷ್ಠಾನವಾಗುತ್ತಿದೆ. ವಿದ್ಯೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಘ ಕಟ್ಟಿ ಆಧ್ಯತೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಧಾರ್ಮಿಕತೆಯ ಜೊತೆಗೆ ಸಾಮಾಜಿಕ ಪರಿವರ್ತಣೆಯಲ್ಲಿ ನೀಡಿದ ಕೊಡುಗೆಗಳನ್ನು ಗುರುತಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಪ್ರಧಾನಿಯವರು ರಾಜ್ಯ ಸಭೆಗೆ ನೇಮಕ ಮಾಡುತ್ತಾರೆ ಎಂದು ಹೇಳಿದ ಶಾಸಕರು ಜೈನ ಸಮುದಾಯ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮತೀಯ ಅಲ್ಪಸಂಖ್ಯಾತರಲ್ಲ. ದೇವಸ್ಥಾನದ ಆಡಳಿತ, ಅಭಿವೃದ್ಧಿಯಲ್ಲಿ ಜೈನ ಸಮುದಾಯ ಪ್ರಮುಖವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಸಮುದಾಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಅರ್ಥಶಾಸ್ತ್ರ ಉಪನ್ಯಾಸಕಿ ಎ.ಬಿ ಚಕ್ರೇಶ್ವರಿ ಮಾತನಾಡಿ, ಸಂಪತ್ತು ಪಡೆದರೆ ಅದರಲ್ಲಿ ಭಯವಿದೆ. ಆದರೆ ವಿದ್ಯೆ ಎಷ್ಟೇ ಪಡೆದರೆ ಯಾವುದೇ ಭಯವಿಲ್ಲ. ವಿದ್ಯೆ ಒಂದು ಬಾರಿ ಪಡೆದರೆ ಶಾಶ್ವತವಾಗಿರುತ್ತದೆ. ನಮ್ಮ ಪ್ರಯತ್ನ ಲಕ್ಷ್ಮಿಗಾಗಿರದೆ ಸರಸ್ವತಿಯ ಸಂಪಾದನೆಗೆ ಪ್ರಯತ್ನವಿರಬೇಕು. ದೇಶ ಎಲ್ಲರಿಗೂ ಅವಕಾಶ ನೀಡುತ್ತಿದ್ದು ಸದುಪಯೋಗ ಪಡಿಸಿಕೊಂಡಾಗ ಪ್ರತಿಯೊಬ್ಬರೂ ಮೇಲ್ಪಂಕ್ತಿಗೆ ಬರಬಹುದು. ನಾವು ಸಂಘಟಿತರಾಗಬೇಕು. ರಾಜಕೀಯವಾಗಿ ಭಧ್ರವಾಗಬೇಕು. ಜೀವನದ ಸವಾಲುಗಳನ್ನು ಎದುರಿಸಿ, ಬದುಕುವ ಕಲೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ವಿದ್ಯಾವರ್ಧಕ ಸಂಘವು ಹಿರಿಯರು ಕಟ್ಟಿಸಿದ ಸಂಘ. ಸಮಾಜದಲ್ಲಿ ತಲೆ ಎತ್ತಿ ನಿಲ್ಲುತ್ತಿದೆ. ಸಮುದಾಯದವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು ಇತರ ಸಮುದಾಯಗಳಿಗೆ ಪೈಪೋಟಿ ನೀಡುತ್ತಿದೆ. ಸಂಘದ ಮುಖಾಂತರ ಸಮುದಾಯದಲ್ಲಿ ಹಿಂದುಳಿದವರು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪುತ್ತಿಲ ಜಯರಾಜ್ ಹೆಗ್ಡೆ ಮಾತನಾಡಿ, 100 ವರ್ಷಗಳ ಇತಿಹಾಸ ಇದ್ದರೂ ಪ್ರಚಾರಕ್ಕೆ ಬಂದಿಲ್ಲ. ಜಿಲ್ಲ ಸಂಘವಾಗಿ ಪ್ರಾರಂಭವಾಗಿದ್ದು ಪುತ್ತೂರಿನಲ್ಲಿ. ಕಳೆದ ನಾಲ್ಕು ವರ್ಷದಿಂದ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನ ಪಡೆಯಲು ಸಹಕಾರಿಯಾಗಲಿ ಎಂದರು.
ಸನ್ಮಾನ:
ಎಸ್.ಎಸ್.ಎಲ್.ಸಿಯಲ್ಲಿ ಗರೀಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅತಿಥಿ ಹಾಗೂ ಮಧುಲಿಕಾಕರವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನವೀನ್ ಪಡಿವಾಳ್ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜಶೇಖರ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ನಿರ್ಮಲ್ ಕುಮಾರ್ ಜೈನ್, ಉಪಾಧ್ಯಕ್ಷ ಗುಣಪಾಲ ಜೈನ್, ನಿರ್ದೇಶಕರಾದ ಡಾ.ಅಶೋಕ್ ಪಡಿವಾಳ್, ಅಜಿತ್ ಕುಮಾರ್ ಜೈನ್ ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಅಶೋಕ್ ಆರಿಗ ಪ್ರತಿಭಾ ಪುರಸ್ಕೃತ ಪಟ್ಟಿ ಓದಿದರು. ಯಶೋಧರ ಜೈನ್ ಕಾರ್ಯಕ್ರಮ ನಿರೂಪಿಸಿ, ಸತೀಶ್ ಪಡಿವಾಳ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯತು.