ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವದ ಸಮಾಲೋಚನಾ ಸಭೆ

0

ಫಲಾನುಭವಿಗಳ ಸಮಾವೇಶ, ವಸ್ತ್ರ ವಿತರಣೆ, ಸ್ವಾಭಿಮಾನಿ ಬಡವರಿಗೆ ಸನ್ಮಾನ ಕಾರ್ಯಕ್ರಮದ ಸಿದ್ಧತೆ

* ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು: ಅಶೋಕ್ ರೈ
* ಅಶೋಕ್ ರೈ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ: ಶಶಿಕುಮಾರ್ ರೈ
* ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಮೂಡಬೇಕು: ಈಶ್ವರ ಭಟ್
* ಅಶೋಕ್ ರೈ ವ್ಯಕ್ತಿಯಲ್ಲ, ಶಕ್ತಿ; ಶ್ರೀಕೃಷ್ಣ ಬೋಳಿಲ್ಲಾಯ

ಪುತ್ತೂರು: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅಕ್ಟೋಬರ್ 26ರಂದು ನಡೆಯಲಿರುವ ರೈ ಎಸ್ಟೇಟ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವ, ಫಲಾನುಭವಿಗಳ ಸಮಾವೇಶ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತದ ವಸ್ತ್ರ ವಿತರಣಾ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಟ್ರಸ್ಟ್‌ನ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೆ.ಯಸ್. ಮನವಿ ಮಾಡಿದರು.

ಮರೀಲ್‌ನಲ್ಲಿರುವ ಪುತ್ತೂರು ಕ್ಲಬ್‌ನಲ್ಲಿ ಅ.8ರಂದು ರಾತ್ರಿ ನಡೆದ ಕಾರ್ಯಕ್ರಮದ ಸಮಾಲೋಚನಾ ಸಭೆ ಮತ್ತು ಸ್ನೇಹಕೂಟದಲ್ಲಿ ಮಾತನಾಡಿದ ಅಶೋಕ್ ರೈಯವರು ಕಾರ್ಯಕ್ರಮದ ರೂಪುರೇಷೆಯ ಕುರಿತು ಮಾಹಿತಿ ನೀಡಿದರು. ಪ್ರತೀ ವರ್ಷ ದೀಪಾವಳಿಯಂದು ಕೋಡಿಂಬಾಡಿಯಲ್ಲಿರುವ ನಮ್ಮ ರೈ ಎಸ್ಟೇಟ್‌ನಲ್ಲಿ ವಸ್ತ್ರ ವಿತರಣೆ ಮಾಡಲಾಗುತ್ತಿತ್ತು. ಈಗ ರಸ್ತೆ ಅಗಲೀಕರಣದಿಂದಾಗಿ ಮನೆಯಂಗಳ ಕಿರಿದಾಗಿದೆ. ಹಾಗಾಗಿ ಅಲ್ಲಿ ದೊಡ್ಡ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಕಿಲ್ಲೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು ಕಿಲ್ಲೆ ಮೈದಾನದಲ್ಲಿ ನಡೆಯುವ ಟ್ರಸ್ಟ್‌ನ ದಶಮಾನೋತ್ಸವ, ಫಲಾನುಭವಿಗಳ ಸಮಾವೇಶ, ಸನ್ಮಾನ, ಸಾಂಸ್ಕೃತಿಕ ಮುಂತಾದ ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ಜರಗಲಿದೆ. 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭಗೊಳ್ಳಲಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾದಿಂದಾಗಿ ವಸ್ತ್ರ ವಿತರಣೆ ಸಾಧ್ಯವಾಗಿಲ್ಲ. ಹೀಗಾಗಿ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು ಸುಮಾರು 26 ಸಾವಿರ ಮಂದಿಗೆ ವಸ್ತ್ರ ವಿತರಿಸಲಾಗುವುದು. ಅಲ್ಲದೆ ಹೆಚ್ಚುವರಿಯಾಗಿ 5000 ಮಂದಿಗೆ ಬೇಕಾದಷ್ಟು ವಸ್ತ್ರ ಸಂಗ್ರಹಿಸಿಡಲಾಗುವುದು ಎಂದು ತಿಳಿಸಿದ ಅಶೋಕ್ ರೈಯವರು, ಈ ಎಲ್ಲಾ ಕಾರ್ಯಕ್ರಗಳ ಯಶಸ್ಸಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರಲ್ಲದೆ ದೊಡ್ಡ ಪ್ರಮಾಣದಲ್ಲಿ ನಡೆಯುವ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಕೈ ಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿದ್ದು, ಬೆಳಿಗ್ಗೆ 6.30ಕ್ಕೆ ಸ್ಪರ್ಧೆ ನಡೆಯಲಿದೆ. ಮನೆಯಲ್ಲಿ ತಯಾರಿಸಿದ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ ಅವರು ಕಾರ್ಯಕ್ರಮದಲ್ಲಿ ಅಡಿಕೆ ಕೊಯ್ಯುವವರು, ಬುಟ್ಟಿ ಹೆಣೆಯುವವರು, ಪೋಸ್ಟ್‌ಮೆನ್, ಪವರ್‌ಮೆನ್, ಆಟೋ ಚಾಲಕ, ಬೀಡಿ ಹಾಗೂ ಹೈನುಗಾರಿಕೆಯಲ್ಲಿ ಕುಟುಂಬ ನಿರ್ವಹಣೆ ಮಾಡುವಂತಹ ಸ್ವಾಭಿಮಾನಿ ಬಡವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ನಮ್ಮ ಟ್ರಸ್ಟ್‌ನಿಂದ 10 ವರ್ಷಗಳಲ್ಲಿ 15800 ಮನೆಗೆ ನೇರ ಧನಸಹಾಯ ನೀಡಲಾಗಿದೆ. ನಮ್ಮ ಟ್ರಸ್ಟ್ ದೇಣಿಗೆ ನೀಡಿರುವುದೇ ಹೊರತು ಯಾರಿಂದಲೂ ನಾವು ದೇಣಿಗೆ ಪಡೆದುಕೊಂಡಿಲ್ಲ. ನಮ್ಮ ಸಂಪಾದನೆಯ ಒಂದು ಪಾಲು ಬಡವರ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಮನೆಯಿಲ್ಲದವರಿಗೆ ವಾಸಕ್ಕೆ ಯೋಗ್ಯವಾದ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಮಾಸಾಶನ ಪಡೆಯುವವರಿಗೆ ಸಹಕಾರ ನೀಡಲಾಗಿದೆ, ವಿದ್ಯುತ್, ನೀರಿನ ಸಂಪರ್ಕವಿಲ್ಲದವರಿಗೆ ಸೌಲಭ್ಯ ಒದಗಿಸಲಾಗಿದೆ, ಮನೆ ಕಟ್ಟಲು ನಾನಾ ಕಾರಣಗಳಿಂದ ವಂಚಿತರಾಗಿದ್ದವರಿಗೆ ಮನೆ ನಿರ್ಮಿಸಲು ಸಹಕಾರ ನೀಡಲಾಗಿದೆ, ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಒದಗಿಸಿಕೊಡಲಾಗಿದೆ. ಇಂತಹ ಕಾರ್ಯಕ್ಕಾಗಿ ದರ್ಬೆಯಲ್ಲಿ ಟ್ರಸ್ಟ್‌ನ ಕಚೇರಿ ತೆರದು ಅಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. 10 ವರ್ಷಗಳಿಂದ ನಿರಂತರ ಸೇವೆ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದ ಅಶೋಕ್ ರೈಯವರು, ಟ್ರಸ್ಟ್‌ನ ಮುಖಾಂತರ 400 ಯುವಕರಿಗೆ ವಾಹನ ಚಾಲನಾ ತರಬೇತಿ ಹಾಗೂ ಲೈಸನ್ಸ್, ೪೦೦೦ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಹಾಗೂ ಮೆಶಿನ್ ವಿತರಣೆ, 3400 ಮಂದಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೋಂದಾವಣೆ, ಪಾನ್‌ಕಾರ್ಡ್ ಮತ್ತು ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳನ್ನು ಉಚಿತವಾಗಿ ಮಾಡಿಕೊಡಲಾಗಿದೆ. ನಾನಾ ಕಾರಣಗಳಿಂದ ಅಕ್ರಮ-ಸಕ್ರಮ, 94ಸಿಯ ಹಕ್ಕುಪತ್ರ ಪಡೆಯಲು ಅಸಾಧ್ಯವಾಗಿದ್ದವರಿಗೆ ಅವುಗಳನ್ನು ಒದಗಿಸಿಕೊಡುವ ಮೂಲಕ ಸಮಾಜದಲ್ಲಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಕೆಲಸವನ್ನು ಟ್ರಸ್ಟ್‌ನ ಮೂಲಕ ನಡೆಸಲಾಗಿದೆ ಎಂದು ಅಶೋಕ್ ರೈಯವರು ತಿಳಿಸಿದರಲ್ಲದೆ ನಮ್ಮ ಸೇವಾ ಕಾರ್ಯದಲ್ಲಿ ಯಾವುದೇ ರಾಜಕೀಯದ ಉದ್ದೇಶ ಇಲ್ಲ ಎಂದು ಹೇಳಿದರು.

ಅಶೋಕ್ ರೈ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ: ಶಶಿಕುಮಾರ್ ರೈ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಅಶೋಕ್ ರೈಯವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು. ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರ ಅಭಿವೃದ್ಧಿಗಾಗಿ ಮೀಸಲಿಡುವ ಅಶೋಕ್ ರೈಯವರು ತನ್ನ ಹುಟ್ಟು ಹಬ್ಬವನ್ನು ಏಡ್ಸ್ ಪೀಡಿತರೊಂದಿಗೆ ಆಚರಿಸುವಂತಹ ಸರಳ ಮನೋಭಾವದವರಾಗಿದ್ದಾರೆ ಎಂದ ಅವರು, ಬಡವರನ್ನು ಒಟ್ಟು ಸೇರಿಸುವ ಅಶೋಕ್ ರೈಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಮೂಡಬೇಕು: ಈಶ್ವರ ಭಟ್
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಾನು ಸಹಕಾರಿ ಸಂಘದ ಅಧ್ಯಕ್ಷನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅಶೋಕ್ ರೈಯವರ ಅಭಿಮಾನಿಯಾಗಿ ಭಾಗವಹಿಸಿದ್ದೇನೆ. ಪಕ್ಷ, ಜಾತಿ, ಮತ, ಬೇಧವಿಲ್ಲದೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ರಮವು ಪುತ್ತೂರಿನ ಇತಿಹಾಸದ ಪುಟದಲ್ಲಿ ಮೂಡಬೇಕು ಎಂದರು.

ಅಶೋಕ್ ರೈ ವ್ಯಕ್ತಿಯಲ್ಲ, ಶಕ್ತಿ; ಶ್ರೀಕೃಷ್ಣ ಬೋಳಿಲ್ಲಾಯ
ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕವಾಗಿ ಸ್ಪಂದಿಸುತ್ತಿರುವ ಅಶೋಕ್ ರೈಯವರು ವ್ಯಕ್ತಿಯಲ್ಲ. ಅವರು ಒಬ್ಬ ಶಕ್ತಿ ಎಂದರು. ಪಾಣಾಜೆ ರಣಮಂಗಲ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಯಶಸ್ವಿಯಾಗಿ ನೆರವೇರುವಲ್ಲಿ ಅಶೋಕ್ ರೈಯವರು ಪಾತ್ರ ಪ್ರಮುಖವಾಗಿದೆ. ಅವರ ಮೇಲೆ ದೊಡ್ಡ ಋಣವಿದೆ. ಅದರನ್ನು ತೀರಿಸುತ್ತೇವೆ ಎಂದು ಅವರು ಹೇಳಿದರು. ವಿಟ್ಲ ಮಾಮೇಶ್ವರ ಶ್ರೀಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು ಮತ್ತು ಹಿರಿಯರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ವಂದಿಸಿದರು. ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಪುತ್ತೂರು ತಾಲೂಕಿನ ಪ್ರತೀ ಗ್ರಾಮಗಳಿಂದ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಯುವ ಉದ್ಯಮಿ ನಿಹಾಲ್ ಶೆಟ್ಟಿ ಕಲ್ಲಾರೆ ಮತ್ತಿತರರು ಸಹಕರಿಸಿದರು.

ಗೌರವಾರ್ಪಣೆ:
ದೇಶ ವಿದೇಶಗಳಲ್ಲಿ ಸಂಚಲನ ಮೂಡಿಸುತ್ತಿರುವ ಕಾಂತಾರ ಕನ್ನಡ ಚಲನಚಿತ್ರದಲ್ಲಿ ಗುತ್ತಿನ ಮನೆಯ ಯಜಮಾನನಾಗಿ ಪಾತ್ರ ವಹಿಸಿ ಗಮನ ಸೆಳೆದಿರುವ ಕಂಬಳ ಕ್ಷೇತ್ರದ ಸಾಧಕರೂ ಆಗಿರುವ ಎಡ್ತೂರು ರಾಜೀವ ರೈಯವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಔತಣ ಕೂಟ ನಡೆಯಿತು. ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ರೈ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ 300ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here