ಬಾಲವನದಲ್ಲಿ 364 ದಿನವೂ ಮಕ್ಕಳ ಚಿಲಿಪಿಲಿ ಇರಬೇಕು: ಶಾಸಕ ಸಂಜೀವ ಮಠಂದೂರು

0

ಬಾಲವನದಲ್ಲಿ ಡಾ| ಶಿವರಾಮ ಕಾರಂತರ ಜನ್ಮದಿನವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

*ಪಶ್ಚಿಮಘಟ್ಟದ ಆನೆ ಎಂಬ ಬಿರುದು ಕಾರಂತರಿಗೆ ಸೂಕ್ತ – ಡಾ| ನರೇಂದ್ರ ರೈ ದೇರ್ಲ
*ಸಿಮೆಂಟ್ ಕಟ್ಟಡದ ಬದಲು ಇಲ್ಲಿ ನಿಸರ್ಗ ಪ್ರೇಮ ಉಳಿಯಲಿ – ಕ್ಷಮಾ ರಾವ್
*ಮುಂದಿನ ಆರ್ಥಿಕ ವರ್ಷದಲ್ಲಿ ಮಕ್ಕಳಿಗೆ ಪ್ರೋತ್ಸಾಹ ಕಾರ್ಯಕ್ರಮ – ಕೆ.ಜೀವಂಧರ್ ಜೈನ್

ಪುತ್ತೂರು: ಡಾ| ಶಿವರಾಮ ಕಾರಂತರು ನಾಡು ನುಡಿಗೆ ಸಲ್ಲಿಸಿದ ಸೇವೆ ಅವರ ವ್ಯಕ್ತಿತ್ವ, ಅಕ್ಷರಭ್ಯಾಸಕ್ಕೆ ನೀಡಿದ ಒತ್ತು ಇವತ್ತು ಸ್ವಾಭಿಮಾನ ಬದುಕಿಗೂ ಅವರು ಪ್ರೇರಣೆ. ಅವರ ವಿಚಾರವನ್ನು ಬಾಲವನದಲ್ಲಿ ಕಾಣಬಹುದು. ಹಾಗಾಗಿ ಕೇವಲ ಜನ್ಮದಿನದಂದು ಬಂದು ಬಾಲವನದಲ್ಲಿ ಸಂಭ್ರಮಿಸಿದರೆ ಸಾಕಾಗುವುದಿಲ್ಲ. 364 ದಿವಸವೂ ಇಲ್ಲಿ ಮಕ್ಕಳ ಚಿಲಿಪಿಲಿ ಇರಬೇಕು. ಯುವಕರು ಇಲ್ಲಿಗೆ ಬಂದು ವಾಚನಾಲಯ, ಅಧ್ಯಯನ, ಪುಸ್ತಕಗಳು, ಓದಿ ಇಲ್ಲಿನ ಪರಿಸರ ಪ್ರಕೃತಿಯಲ್ಲಿ ಬೆಸೆಯಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಡಾ| ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ ಕಡಲತಡಿಯ ಭಾರ್ಗವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರ 121 ನೇ ಜನ್ಮದಿನಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳಿಗ್ಗೆ ಕಾರಂತರ ವಾಸ್ತವ್ಯದ ಮನೆಯಲ್ಲಿ ಜ್ಞಾನಪೀಠ ಪ್ರಶಸ್ತಿಯ ಮುಂದೆ ಶಾಸಕರು ದೀಪ ಪ್ರಜ್ವಲಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಶಿವರಾಮ ಕಾರಂತರ ಆಶಯಗಳನ್ನು ಇಲ್ಲಿ ಮತ್ತೊಮ್ಮೆ ಈಡೇರಿಸಬೇಕು. ಅವರ ಬೇರೆ ಬೇರೆ ವಿಚಾರಗಳು, ಕೃತಿಗಳು ಇವತ್ತಿನ ಸಮಾಜಕ್ಕೆ ಪರಿಚಯ ಆಗುವ ಜೊತೆಯಲ್ಲಿ ಶಿವರಾಮ ಕಾರಂತರಂತೆ ಹತ್ತಾರು ಸಾಹಿತಿಗಳು ಇಲ್ಲಿ ಬೆಳೆಯಬೇಕು. ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುವಲ್ಲಿ ಮತ್ತು ಕನ್ನಡ ಭಾಷೆ ಮತ್ತೆ ಉಳಿಯಲು ಬಾಲವನದಲ್ಲಿ ಒಂದಷ್ಟು ಚಟುವಟಿಕೆಗಳು ಕಾರಂತರ ಆಶಯದಂತೆ ಈಡೇರಿದಾಗ ಮತ್ತೆ ಪುತ್ತೂರಿನಲ್ಲಿ ಗರಿಗೆದರಲು ಸಾಧ್ಯ. ಇದನ್ನು ಸರಕಾರದ ಸೊತ್ತಾಗಿ ಭಾವಿಸದೆ ಪುತ್ತೂರಿನ ಜನರ ಸೊತ್ತಾಗಿ ಭಾವಿಸಿ ದಿನ ನಿತ್ಯ ಇಲಿಗೆ ಬಂದು ಬಾಲವವನ್ನು ಸವಿಸಬೇಕೆಂದರು.

ಪಶ್ಚಿಮಘಟ್ಟದ ಆನೆ ಎಂಬ ಬಿರುದು ಕಾರಂತರಿಗೆ ಸೂಕ್ತ:
ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ, ಸಾಹಿತಿ ಡಾ| ನರೇಂದ್ರ ರೈ ದೇರ್ಲ ಅವರು ಮಾತನಾಡಿ ಕಾರಂತರಿಗೆ ಕಡಲತಡಿಯ ಭಾರ್ಗವ ಬಿರುದಿಗಿಂತ ದೇಶದ ಹಿರಿಯ ಪತ್ರಕರ್ತರೋರ್ವರು ನೀಡಿದ ಪಶ್ಚಿಮಘಟ್ಟದ ಆನೆ ಎಂಬ ಬಿರುದೇ ಹೆಚ್ಚು ಸೂಕ್ತವೆನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಆನೆ ಹೊಸ ದಾರಿಗಳನ್ನು ಹುಡುಕಿಕೊಂಡು ಸಾಗುತ್ತದೆ. ಕಾರಂತರೂ ಅದೇ ರೀತಿಯಲ್ಲಿ ಸಾಗಿದವರು. ಸಮಯ ಮತ್ತು ನೈತಿಕತೆ ನಮ್ಮಲ್ಲಿದ್ದಾಗ ಅಪಾರ ಅರಿವು ಪಡೆಯಲು ಸಾಧ್ಯ ಎಂಬುದಕ್ಕೆ ಕಾರಂತರು ಉದಾಹರಣೆ ಎಂದ ಅವರು ಕಾರಂತರನ್ನು ಬಾಲವನದ ಮೂಲಕ ಬಿತ್ತಿದ್ದೇವೆ. ಅವರು ಬಾಲವನದಲ್ಲಿ ಸಮಾಜಮುಖಿ ಸಾಧನೆಗಳು ಸ್ಮರಣೆಗೆ ಬಂದು ನಮ್ಮನ್ನು ವಿನೀತಗೊಳಿಸುತ್ತವೆ ಎಂದು ದೇರ್ಲ ಹೇಳಿದರು.

ಸಿಮೆಂಟ್ ಕಟ್ಟಡದ ಬದಲು ಇಲ್ಲಿ ನಿಸರ್ಗ ಪ್ರೇಮ ಉಳಿಯಲಿ:
ಡಾ| ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್ ಅವರು ಮಾತನಾಡಿ ನನ್ನ ತಂದೆಯವರ ಜೊತೆ ನಿಡುಗಾಲ ಸ್ನೇಹದಲ್ಲಿರುವ ಕೆ.ವಿ. ಸುಬ್ಬಣ್ಣ ಅವರ ಮಗ ಅಕ್ಷರ ಅವರಿಗೆ ಪ್ರಶಸ್ತಿ ನೀಡುವುದು ನನಗೆ ಸಂತೋಷ ವಿಚಾರ. ಅವರ ತಂದೆಯವರು ಬಹಳ ಸಹಾಸಮಯ ಕೆಲಸ ಮಾಡಿದ್ದಾರೆ. ಅಕ್ಷರ ಅವರು ಅದನ್ನು ಬಹಳ ಸಮರ್ಥ ರೀತಿಯಲ್ಲಿ ಮುಂದುವರಿಸಿದ್ದಾರೆ. ನನ್ನ ತಾಯಿ
ಲೀಲಾ ಕಾರಂತ್ ಅವರು ಇಲ್ಲಿ ಕಷ್ಟಕರವಾದ ಬಹಳ ಧೈರ್ಯದಿಂದ ಕಾರಂತರಿಗೆ ಪ್ರೋತ್ಸಾಹ ನೀಡಿದ್ದರು. ಪುತ್ತೂರಿನಲ್ಲಿ ಗುಡ್ಡಗಾಡು, ಹಸಿರು ಹೊನ್ನು ಹಳ್ಳ, ಕೊಳ್ಳ, ನದಿಗಳು ತಂದೆಯವರ ಆಕರ್ಷಿಸಿದೆ. ಇಲ್ಲಿನ ಜೀವ ವೈವಿಧ್ಯದ ಕಾಡನ್ನು ನಾವು ಉಳಿಸಬೇಕು. ಇಲ್ಲಿ ಸಿಮೆಂಟ್ ಕಟ್ಟಡಗಳು ಹುಟ್ಟಿಕೊಳ್ಳಬಾರದು. ಇದೊಂದು ಸೈಂಟಿಪಿಕ್ ರಿಸ್ಟೋರ್‌ನ್ನು ಮಾಡಿ
ಲೈಪ್ ಸ್ಟೈಲ್ ಮ್ಯೂಸಿಯಂ ಮಾಡಿ, ಕಾರಂತಸ್ಮೃತಿ, ನಾಟ್ಯ ಶಾಲೆಯ ಮಾಡಬೇಕು. ಅಲ್ಲಿ ತಂದೆಯ ಆಶಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಲವಾರು ಕಾರ್ಯಕ್ರಮ ನಡೆಯಬೇಕು. ಒಟ್ಟಿನಲ್ಲಿ ಅವರ ನಿಸರ್ಗ ಪ್ರೇಮವನ್ನು ಉಳಿಸಿಕೊಳ್ಳಬೇಕೆಂದು ನನ್ನ ಆಸೆ ಎಂದರು.

ಮುಂದಿನ ಆರ್ಥಿಕ ವರ್ಷದಲ್ಲಿ ಮಕ್ಕಳಿಗೆ ಪ್ರೋತ್ಸಾಹ ಕಾರ್ಯಕ್ರಮ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಪುತ್ತೂರು ಪೇಟೆಯಲ್ಲಿ ಆರುವರೆ ಎಕ್ರೆ ಜಾಗ ಇಟ್ಟು ಕೊಂಡು ಮಕ್ಕಳಿಗಾಗಿ ಬಾಲವನದಲ್ಲಿ ಯಾವ ರೀತಿ ಮಕ್ಕಳಿಗೆ ಪ್ರೋತ್ಸಾಹ ಕೊಡುವಂತಹ ಚಟುವಟಿಕೆಗಳು ಆಗಬೇಕು ಕಾರಂತರು ಚಿಂತನೆಯಂತೆ ನಗರಸಭೆಯಿಂದ ಮುಂದಿನ ದಿನ ಸಮಾಜಮುಖಿ ಕೆಲಸಗಳು, ಮಕ್ಕಳೀಗಾಗಿ ಮೀಸಲಿಡಲಿದ್ದೇವೆ. ಮುಂದಿನ ಆರ್ಥಿಕ ವರ್ಷದಲ್ಲಿ ನಗರಸಭೆಯಿಂದ ಅಭಿವೃದ್ಧಿ ಮತ್ತು ಮಕ್ಕಳಿಗೆ ಪ್ರೋತ್ಸಾಹ ಕೊಡುವ ಕಾರ್ಯಕ್ರಮಗಳಿಗೆ ಏನು ಮಾಡಬೇಕೋ ಅದನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಇಟ್ಟು ಪ್ರೋತ್ಸಾಹ ನೀಡಲಿದ್ದೇವೆ ಎಂದರು. ಕಾರಂತರ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ ವಿ, ನಗರಸಭಾ ಸ್ಥಳೀಯ ಸದಸ್ಯೆ ದೀಕ್ಷಾ ಪೈ, ತಹಶೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತ ಮಧು ಎಸ್ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕೊಂಬೆಟ್ಟು ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಬಾಲವನ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಅವರು ಅತಿಥಿಗಳನ್ನು ಗೌರವಿಸಿದರು. ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಸ್ವಾಗತಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು. ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಡಾ| ಶಿವರಾಮ ಕಾರಂತರು ವಾಸ್ತವ್ಯವಿದ್ದ ಮನೆಯಲ್ಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಜನ್ಮದಿನಾಚರಣೆ ಆಚರಿಸಲಾಯಿತು. ಬಳಿಕ ಕಾರಂತರ ನಾಟ್ಯ ಶಾಲೆಯ ನವೀಕರಣಕ್ಕೆ ಗುದ್ದಲಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಬಾಲವನ ಅಭಿವೃದ್ಧಿ ಸಮಿತಿಯ ಹಿರಿಯ ಸಾಹಿತಿ ಬಿ ಪುರಂದರ ಭಟ್, ಡಾ| ವರದರಾಜ್ ಚಂದ್ರಗಿರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧಿಕಾರಿ ಬಿ.ಐತ್ತಪ್ಪ ನಾಯ್ಕ್, ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಬೆಳಿಗ್ಗೆ ವಿದುಷಿ ಶ್ರೀಮತಿ ನಯನಾ ವಿ ರೈ ಕುದ್ಕಾಡಿ ಇವರ ನಿರ್ದೇಶನದಲ್ಲಿ ವಿಶ್ವಕಲಾ ನಿಕೇತನ ಪುತ್ತೂರು ಇದರ ಸದಸ್ಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಮಧ್ಯಾಹ್ನ ಕಾರಂತರು ಮತ್ತು ರಂಗಭೂಮಿ ಎಂಬ ವಿಷಯದ ಬಗ್ಗೆ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಎಚ್.ಜಿ. ಶ್ರೀಧರ್ ರವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿನ ಸಹಪ್ರಾಧ್ಯಾಪಕ ಸುಬ್ಬಪ್ಪ ಕೈಕಂಬ ಇವರು ವಿಚಾರ ಮಂಡನೆ ಮಾಡಿದರು. ಡಾ| ಶೋಭಿತಾ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.ನಾಟ್ಯ ಶಾಲೆ ನವೀಕರಣ, ಮೂಲ ಕೃತಿಗಳ ಪುಸ್ತಕ ಭಂಡಾರ ಶೀಘ್ರ
ಡಾ| ಶಿವರಾಮ ಕಾರಂತರ ಹಿಂದಿನ ಮುದ್ರಣಾಲಯ ನಾಟ್ಯಶಾಲೆಯಾಗಿ ಪರಿವರ್ತನೆ ಆಗಿರುವ ಕಟ್ಟಡವನ್ನು ಪುರತತ್ವ ಇಲಾಖೆಯ ಮಾರ್ಗಸೂಚಿಯಂತೆ ಅದರ ಅಡಿಯಲ್ಲಿ ರೂ. 38ಲಕ್ಷದಲ್ಲಿ ನಾಟ್ಯ ಶಾಲೆ ನವೀಕರಿಸಲಾಗುವುದು. 50 ವರ್ಷಗಳ ಹಿಂದೆ ಕಾರಂತರು ಯಾವ ಉದ್ದೇಶವಿಟ್ಟು ಕೊಂಡಿದ್ದರೋ ಅದನ್ನು ಈಡೇರಿಸಲು ಈಗಾಗಲೇ ಶಿಲಾನ್ಯಾಸ ಮಾಡಿದ್ದೇವೆ. 6 ತಿಂಗಳಲ್ಲಿ ಅದು ನವೀಕರಣ ಆಗಿ ನೂರಕ್ಕೆ ನೂರು ಮತ್ತೆ ಲೋಕಾರ್ಪಣೆ ಆಗಲಿದೆ. ಥಿಯೇಟರ್ ತರ ಇರುವ ಕಟ್ಟಡದಲ್ಲಿ ಕಾರಂತರ ಜೀವನ ಚರಿತ್ರೆಯನ್ನು ಬಿಂಬಿಸುವ ಥಿಯೇಟರ್ ಮಾಡಬೇಕೆಂದು ಕೋವಿಡ್ ಸಂದರ್ಭದಲ್ಲಿ ನಿರ್ಣಯಿಸಿದಂತೆ ಅದನ್ನೂ ಮಾಡಲಿದ್ದೇವೆ. ಕೆಟ್ಟು ಹೋಗಿರುವ ಬಾಲವನದ ರಸ್ತೆಗಳಿಗೆ ಇಂಟರ್‌ಲಾಕ್ ಅಳವಡಿಸಲಿದ್ದೆವೆ. ಜೊತೆಗೆ ಕಾರಂತರ ಮೂಲ ಕೃತಿಯನ್ನು ಇಲ್ಲೇ ಇಡುವ ಕೆಲಸ ಮಾಡುವ ನಿಟ್ಟಿನಲ್ಲಿ ಪುಸ್ತಕ ಭಂಡಾರವನ್ನು ಇಲ್ಲೇ ಮಾಡಲಾಗುವುದು.
ಸಂಜೀವ ಮಠಂದೂರು ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here