ವಿಟ್ಲ: ಶೌಚಾಲಯಕ್ಕೆ ತೆರಳುತ್ತಿದ್ದ ಯುವತಿಯೋರ್ವಳ ಕೈಹಿಡಿದೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣಚ ಗ್ರಾಮ ಪಂಚಾಯತ್ ನ ನೌಕರರೋರ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಲಿತ ಹಾಗೂ ಮಹಿಳಾ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪುಣಚ ಗ್ರಾಮದ ಕುಟ್ಟಿತ್ತಡ್ಕ ನಿವಾಸಿ ಅಬ್ದುಲ್ ರಹಿಮಾನ್ ರವರ ಪುತ್ರ, ಪುಣಚ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಚತೆ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಉಸ್ಮಾನ್ (53 ವ.)ರವರು ಬಂಧಿತ ಆರೋಪಿಯಾಗಿದ್ದಾರೆ. ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ನಾನು ಅ.7ರಂದು ಗ್ರಾಮ ಪಂಚಾಯತ್ ವಠಾರದಲ್ಲಿರುವ ಶೌಚಾಲಯಕ್ಕೆ ತೆರಳಿದ್ದೆ. ಈ ವೇಳೆ ಅದಕ್ಕೆ ಬೀಗಹಾಕಲಾಗಿತ್ತು. ಅದೇ ಸಮಯ ಗ್ರಾಮಪಂಚಾಯತ್ ವಠಾರದಲ್ಲಿದ್ದ ಉಸ್ಮಾನ್ ರವರು ಗ್ರಾ.ಪಂ ಕಚೇರಿಯ ಶೌಚಾಲಯವನ್ನು ಬಳಸುವಂತೆ ನನಗೆ ತಿಳಿಸಿದ್ದರು. ಈ ವೇಳೆ ನಾನು ಅತ್ತ ಕಡೆತೆರಳಿದಾಗ ಉಸ್ಮಾನ್ ನನ್ನ ಕೈ ಹಿಡಿದು ಎಳೆದಿದ್ದರು. ನಾನು ಈ ವೇಳೆ ಬೊಬ್ಬೆಹೊಡೆದು ಅವರ ಹಿಡಿತದಿಂದ ತಪ್ಪಿಸಿ ಹೊರಬಂದಿದ್ದೇನೆ ಎಂದು ಯುವತಿ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ದಲಿತ ಹಾಗೂ ಮಹಿಳಾ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.