ಬಣ್ಣದ ನೋಟು ಕೇಳಿದಾತನ ಮಾತಿಗೆ ಮರುಳಾಗಿ 50 ಸಾವಿರ ರೂ. ಕಳೆದುಕೊಂಡ ಉಪ್ಪಿನಂಗಡಿ ಅಡಿಕೆ ವರ್ತಕ…!

0

ಉಪ್ಪಿನಂಗಡಿ: ಮಾತಿನ ಮೋಡಿಗೆ ಮರುಳಾಗಿ, ನಂಬಿ ಹಣ ಕಳೆದುಕೊಂಡವರ ಬಗ್ಗೆ ಕೇಳಿದ್ದೇವೆ, ಪತ್ರಿಕೆಯಲ್ಲಿ ಓದಿದ್ದೇವೆ. ಆದರೆ ಅಡಿಕೆ ವರ್ತಕರೊಬ್ಬರು ಚಿಲ್ಲರೆ ಪಡೆಯುವ ನೆಪದಲ್ಲಿ ಬಂದು ಬಣ್ಣದ ನೋಟು ಕೇಳಿದ ಕಾರಣಕ್ಕೆ 50 ಸಾವಿರ ರೂಪಾಯಿ ಕಟ್ಟು ಕೊಟ್ಟು ತನ್ನ ಹಣವನ್ನು ಕಳೆದುಕೊಂಡ ಘಟನೆಯೊಂದು ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೇರಿಕೆ ಮೂಲದ ವ್ಯಕ್ತಿಯೋರ್ವರು ಹಣ ಕಳೆದು ಕೊಂಡವರಾಗಿರುತ್ತಾರೆ. ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವರು 500 ರೂಪಾಯಿ ಚಿಲ್ಲರೆ ಪಡೆಯಲು ಬಂದು 50 ಸಾವಿರ ರೂಪಾಯಿ ಪಡೆದುಕೊಂಡು ಹೋದ ಸ್ವಾರಸ್ಯಕರ ಘಟನೆಯಿದು.

ಹೆದ್ದಾರಿ ಬದಿಯಲ್ಲಿರುವ ಅಡಿಕೆ ಅಂಗಡಿಗೆ ಬೈಕ್‌ನಲ್ಲಿ ಇಬ್ಬರು ಬರುತ್ತಾರೆ. ಈ ಪೈಕಿ ಓರ್ವ ಬೈಕ್‌ನಿಂದ ಇಳಿದು ಬಂದು 500 ರೂಪಾಯಿ ನೀಡಿ ಚಿಲ್ಲರೆ ಕೇಳುತ್ತಾನೆ. ವರ್ತಕ ಚಿಲ್ಲರೆ ಕೊಡುತ್ತಾರೆ. ವ್ಯಕ್ತಿ ತನ್ನ ಬಳಿ ಇದ್ದ 500 ರೂಪಾಯಿಯ ಇನ್ನೊಂದು ನೋಟು ತೋರಿಸಿ, ಇದರ ಮಧ್ಯದಲ್ಲಿ ಹಳದಿ ಬಣ್ಣ ಇದೆ ನೋಡಿ, ಇಂತಹ ನೋಟಿಗೆ ಭಾರೀ ಬೇಡಿಕೆ ಇದೆ, ನಿಮ್ಮಲ್ಲಿ ಎಷ್ಟು ಇದ್ದರೂ ನನಗೆ ಬೇಕು, ಇದೆಯಾ? ಎನ್ನುತ್ತಾನೆ.

ಆಗ ವರ್ತಕ ತನ್ನ ಡ್ರಾಯರಿನಲ್ಲಿ ಇದ್ದ 50 ಸಾವಿರ ಮೊತ್ತದ, 500 ರೂಪಾಯಿಯ ಕಟ್ಟು ತೆಗೆದು ಈತನ ಕೈಗೆ ಕೊಟ್ಟು ಇದರಲ್ಲಿ ನಿನಗೆ ಬೇಕಾದ ನೋಟು ಎಷ್ಟು ಇದೆ ಎಂದು ನೋಡಿ ತೆಗೆದುಕೊ ಎನ್ನುತ್ತಾರೆ. ಈ ವ್ಯಕ್ತಿ ಎಣಿಸುತ್ತಿದ್ದಂತೆ ಇನ್ನೋರ್ವ ವ್ಯಕ್ತಿ ಬಂದು ಅಡಿಕೆಯ ದರ ಕೇಳುತ್ತಾನೆ, ಆಗ ವರ್ತಕ ಆ ವ್ಯಕ್ತಿಯೊಂದಿಗೆ ಮಾತು ಆರಂಭಿಸುತ್ತಿದ್ದಂತೆ ನೋಟು ಎಣಿಸುತ್ತಿದ್ದ ವ್ಯಕ್ತಿ 50 ಸಾವಿರದ ನೋಟಿನ ಕಂತೆಯೊಂದಿಗೆ ಬೈಕ್ ಏರಿ ಪರಾರಿ ಆಗುತ್ತಾನೆ.

ಘಟನೆ ಸಂಬಂಧ ವರ್ತಕ ಪೊಲೀಸ್ ಠಾಣೆಯಲ್ಲಿ ಮೌಖಿಕವಾಗಿ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡುವುದು ಬೇಡ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಗ್ರಾಹಕರ ಸೋಗಿನಲ್ಲಿ, ಚಿಲ್ಲರೆ ಕೇಳುವ ನೆಪದಲ್ಲಿ ಹೀಗೆ ವಿವಿಧ ರೀತಿಯಲ್ಲಿ ಅಂಗಡಿಗೆ ಬಂದು ಹಣ ಲಪಟಾಯಿಸುವ ಕೃತ್ಯ ನಡೆಯುತ್ತಲೇ ಇದೆ, ಆದರೂ ಕೆಲವರು ಅಂತಹ ವಂಚನೆಗೆ ಬಲಿ ಆಗುತ್ತಿರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here