ಭಾಗಶಃ ಪೂರ್ಣಗೊಂಡ ಬಿಳಿಯೂರಿನ ಕಿಂಡಿ ಅಣೆಕಟ್ಟು ಕಾಮಗಾರಿ

0

ನೀರಾವರಿಯೊಂದಿಗೆ ಗ್ರಾಮ ಗ್ರಾಮಗಳ ಬೆಸುಗೆ ಸನ್ನಿಹಿತ

ವಿಶೇಷ ವರದಿ: ದೀಪು ಉಬಾರ್

ಉಪ್ಪಿನಂಗಡಿ: ನೀರಾವರಿ, ಅಂತರ್ಜಲ ಅಭಿವೃದ್ಧಿಯೊಂದಿಗೆ ಸಂಪರ್ಕ ಸೇತುವೆಯ ಗುರಿಯಿಟ್ಟುಕೊಂಡು ಬಿಳಿಯೂರು ಗ್ರಾಮದ ಕಡಪ್ಪು ಎಂಬಲ್ಲಿ 51.68 ಕೋಟಿ ರೂ. ಅನುದಾನದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ 2020ರಲ್ಲಿ ಆರಂಭಿಸಲಾದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯು ಭಾಗಶಃ ಮುಗಿದಿದ್ದು, ಸದ್ಯದಲ್ಲೇ ಇದು ಉದ್ಘಾಟನೆಗೊಳ್ಳುವುದರೊಂದಿಗೆ ಈ ಭಾಗದ ಜನರ ಕನಸು ನನಸಾಗಲಿದೆ.

ಶಾಸಕ ಸಂಜೀವ ಮಠಂದೂರುರವರ ವಿಶೇಷ ಮುತುವರ್ಜಿಯಿಂದಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಳಿಯೂರು ಗ್ರಾಮದ ಕಡಪ್ಪು ಎಂಬಲ್ಲಿ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ನಿರ್ವಹಿಸಲು ಕರ್ನಾಟಕ ಸರಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಪಶ್ಚಿಮವಾಹಿನಿ ಯೋಜನೆಯಡಿ 51.68 ಕೋಟಿ ರೂ. ಅನುದಾನ ಮಂಜೂರಾಗಿತ್ತು. 2020ರ ನವೆಂಬರ್ ತಿಂಗಳಲ್ಲಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಇದಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸುತ್ತಮುತ್ತಲಿನ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದರೊಂದಿಗೆ ಈ ಭಾಗದ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಸಂಪರ್ಕ ಸೇತುವೆಯ ಮೂಲಕ ನದಿಯ ಈ ದಂಡೆಯಲ್ಲಿರುವ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ಹಾಗೂ ಆ ದಂಡೆಯಲ್ಲಿರುವ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಒಂದುಗೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇಲ್ಲಿ ನದಿಯು 305.30ಮೀ. ಅಗಲವಾಗಿದ್ದು, ಈ ಅಣೆಕಟ್ಟಿನ ಎತ್ತರ 11.36ಮೀ. ಆಗಿದೆ. ಆದರೆ ಇಲ್ಲಿ ನೀರು ಶೇಖರಣಾ ಗುರಿ ಇರೋದು 4 ಮೀ. ಮಾತ್ರ. ಇದಕ್ಕೆ 42 ಕಿಂಡಿಗಳಿದ್ದು, 42 ವರ್ಟಿಕಲ್ ಲಿಫ್ಟ್ ಗೇಟ್‌ಗಳು ಅಳವಡಿಕೆಯಾಗಲಿವೆ. 120 ಹೆಕ್ಟೇರ್ ಭೂ ಪ್ರದೇಶವು ಈ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶವಾಗಿದ್ದು, 53.79 ಎಂ.ಸಿ.ಎಫ್.ಟಿ. ನೀರು ಶೇಖರಣಾ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ. ಕಿಂಡಿ ಅಣೆಕಟ್ಟಿನ ಮೇಲ್ಮೈಯನ್ನು ಸೇತುವೆಯನ್ನಾಗಿ ಮಾಡಲಾಗಿದ್ದು, ಇದರ ಅಗಲ 5.50 ಮೀ. ಇದೆ. ಈಗಾಗಲೇ ಕಿಂಡಿ ಅಣೆಕಟ್ಟಿನ ಕೆಲಸಗಳು ಮುಗಿದಿದ್ದು, ಗೇಟ್ ಅಳವಡಿಕೆ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಬಿಳಿಯೂರು ಭಾಗದಲ್ಲಿ ನದಿ ಬದಿಗೆ ತಡೆಗೋಡೆ ಕೆಲಸಗಳು ಪೂರ್ಣಗೊಂಡರೆ, ತೆಕ್ಕಾರು ಭಾಗದಲ್ಲಿ ತಡೆಗೋಡೆ ಕೆಲಸಗಳು ಪ್ರಗತಿಯಲ್ಲಿವೆ. ಆದರೆ ಪ್ರಮುಖವಾಗಿ ತೆಕ್ಕಾರಿನಿಂದ ಬಿಳಿಯೂರುಗೆ ಸಂಪರ್ಕ ಕಲ್ಪಿಸುವ ಸೇತುವೆಯ ಬದಿಯಿಂದ ಮುಖ್ಯ ರಸ್ತೆಯವರೆಗಿನ ರಸ್ತೆಯು ಇನ್ನಷ್ಟೇ ಆಗಬೇಕಿದೆ. ಇದೆಲ್ಲಾ ಕಾಮಗಾರಿ ನಡೆದ ಬಳಿಕ ಇದು ಸಾರ್ವಜನಿಕ ಉಪಯೋಗಕ್ಕೆ ಸಿಗಲಿದೆ.‌

ರಾ.ಹೆ.ಗೆ ಹತ್ತಿರದ ದಾರಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳವರಿಗೆ ಈ ಮೊದಲು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಬೇಕಾದರೆ ಉಪ್ಪಿನಂಗಡಿಗೆ ಬಂದು ಬಳಿಕ ಆ ಹೆದ್ದಾರಿಯ ಮೂಲಕ ತೆರಳಬೇಕಿತ್ತು. ಆದರೆ ಈ ಸೇತುವೆ ಉದ್ಘಾಟನೆಗೊಂಡ ಬಳಿಕ ಸ್ವಂತ ವಾಹನವುಳ್ಳವರಿಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಮಂಗಳೂರಿಗೆ ತೆರಳಲು ಉಪ್ಪಿನಂಗಡಿಯ ಮೂಲಕವಾಗಿ ಬರಬೇಕೆಂದಿಲ್ಲ. ತೆಕ್ಕಾರಿನಿಂದ ಈ ಸೇತುವೆಯ ಮೂಲಕ ನೇರವಾಗಿ ಪೆರ್ನೆಗೆ ತಲುಪಿ ಬಳಿಕ ಅಲ್ಲಿಂದ ಮಂಗಳೂರು ಕಡೆ ಪ್ರಯಾಣ ಬೆಳೆಸಬಹುದು. ಆದ್ದರಿಂದ ಈ ಕಿಂಡಿ ಅಣೆಕಟ್ಟು ನೀರಾವರಿಗಿಂತಲೂ ಹೆಚ್ಚಾಗಿ ಸಂಪರ್ಕ ಸೇತುವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿಯಾಗಲಿದೆ. ಈ ಕಾಮಗಾರಿ ಆರಂಭವಾಗಿ ಈಗ ಎರಡು ವರ್ಷವೂ ಪೂರ್ಣವಾಗಿಲ್ಲ. ಇಲ್ಲಿ ವೇಗದ ಕಾಮಗಾರಿ ನಡೆದಿದ್ದು, ಭಾಗಶಃ ಕೆಲಸಗಳು ಮುಗಿದಿವೆ. 2022 ಮುಗಿಯುವುದರೊಳಗೆ ಈ ಕಾಮಗಾರಿ ಮುಗಿದು ಜನರ ಉಪಯೋಗಕ್ಕೆ ಇದು ಸಿಗಲಿದೆ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.

51.68 ಕೋ. ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಬಿಳಿಯೂರು ಗ್ರಾಮದ ಕಡಪ್ಪು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟಿನ ಕಾಮಗಾರಿ ಭಾಗಶಃ ಮುಗಿದಿದೆ. ರಸ್ತೆ ಸಂಪರ್ಕ, ಗೇಟ್ ಅಳವಡಿಕೆ ಹೀಗೆ ಸಣ್ಣ ಸಣ್ಣ ಕೆಲಸಗಳಷ್ಟೇ ಬಾಕಿ ಉಳಿದಿವೆ. ಒಂದು ಅಥವಾ ಒಂದೂವರೆ ತಿಂಗಳಲ್ಲಿ ಇದರ ಸಂಪೂರ್ಣ ಕಾಮಗಾರಿ ಮುಗಿದು ಈ ಕಿಂಡಿ ಅಣೆಕಟ್ಟು ಉದ್ಘಾಟನೆಗೊಳ್ಳಲಿದೆ. ಸಚಿವರ ಮೂಲಕ ಇದರ ಉದ್ಘಾಟನೆ ನಡೆಸಲಾಗುವುದು. ಈ ಕಿಂಡಿ ಅಣೆಕಟ್ಟು ಹಲವು ಜನರ ಬಹುವರ್ಷದ ಬೇಡಿಕೆಯಾಗಿದ್ದು, ನನ್ನ ಅವಽಯಲ್ಲಿ ನಾನು ಅದನ್ನು ಈಡೇರಿಸಿದ್ದೇನೆ. ಇದರಿಂದ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ದೊರಕುವುದರೊಂದಿಗೆ ಅಂತರ್ಜಲ ಅಭಿವೃದ್ಧಿಯಾಗುವುದಲ್ಲದೆ, ಪ್ರಮುಖವಾಗಿ ಸಂಪರ್ಕ ಸೇತುವೆಯ ಮೂಲಕ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಈ ಭಾಗದ ಗ್ರಾಮಗಳನ್ನು ಬೆಸೆಯಲು ಸಾಧ್ಯವಾಗುತ್ತದೆ.

– ಸಂಜೀವ ಮಠಂದೂರು, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ

LEAVE A REPLY

Please enter your comment!
Please enter your name here