ಚಾರ್ವಾಕದಲ್ಲಿ ತಲೆ ಎತ್ತಲಿದೆ 33 ಕೆವಿ ವಿದ್ಯುತ್ ಸಬ್‌ಸ್ಟೇಷನ್

0

70 ಸೆಂಟ್ಸ್ ಜಾಗದಲ್ಲಿ ಸಮತಟ್ಟಿಗೆ ಚಾಲನೆ- ವಿದ್ಯುತ್ ಸಮಸ್ಯೆಗಳಿಗೆ ಸಿಗಲಿದೆ ಶಾಶ್ವತ ಪರಿಹಾರ

ವಿಶೇಷ ವರದಿ: ಸುಧಾಕರ್ ಕಾಣಿಯೂರು

ಕಾಣಿಯೂರು: ಕಡಬ ತಾಲೂಕಿನ ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಚಾರ್ವಾಕ ಗ್ರಾಮದ ಮುದುವ ಎಂಬಲ್ಲಿ 33 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಎದ್ದು ನಿಲ್ಲಲಿದ್ದು, ಈ ಭಾಗದ ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಸರಕಾರದ ಹಂತದಲ್ಲಿ ಇಲಾಖೆಗೆ ಸೂಚನೆ ನೀಡಲಾಗಿದ್ದು ತಾಲೂಕು ಆಡಳಿತ ಈಗಾಗಲೇ ಗುರುತಿಸಿರುವ ಜಾಗವನ್ನು ಮೆಸ್ಕಾಂ ಇಲಾಖೆಗೆ ನಿಗದಿಪಡಿಸಿದಲ್ಲಿ ಮುಂದಿನ ಹಂತದ ಕಾರ್ಯಗಳು ನಡೆದು ಸಬ್‌ಸ್ಟೇಷನ್ ಅನುಷ್ಠಾನಗೊಳ್ಳಲಿದೆ. ಈಗಾಗಲೇ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಮುದುವದಲ್ಲಿರುವ ಪಂಚಾಯತ್‌ಗೆ ಸಂಬಂಧಪಟ್ಟ ಎರಡು ಎಕ್ರೆ ಜಾಗದಲ್ಲಿ 70 ಸೆಂಟ್ಸ್ ಜಾಗವನ್ನು ಈಗಾಗಲೇ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಈ ಬಗ್ಗೆ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ ಅವರ ಮುಂದಾಳತ್ವದಲ್ಲಿ ಸುಳ್ಯ ಶಾಸಕ, ಸಚಿವರೂ ಆಗಿರುವ ಎಸ್.ಅಂಗಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಸಚಿವ ಸುನಿಲ್ ಕುಮಾರ್, ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಿ ಸ್ತು ಶೀಘ್ರ ಸಬ್‌ಸ್ಟೇಷನ್ ಅನುಷ್ಠಾನಕ್ಕೆ ಒತ್ತಡ ಹೇರಲಾಗಿದೆ. ಪರಿಣಾಮ ಶೀಘ್ರ ಅನುಷ್ಠಾನಕ್ಕೆ ಕ್ರಮಗಳು ನಡೆಯುತ್ತಿವೆ. ಸರಕಾರದ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಸಂಬಂಧಪಟ್ಟ ಸಚಿವರು ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಕಡತ ಈಗ ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಲ್ಲಿದೆ. ಇನ್ನೇನು ಮಣ್ಣು ಪರೀಕ್ಷೆ ಮುಗಿದು ವಿದ್ಯುತ್ ಸಬ್‌ಸ್ಟೇಷನ್ ಮಾಡಲು ಯೋಗ್ಯ ಎಂದು ವರದಿ ಬಂದಲ್ಲಿ ಎಲ್ಲವೂ ಪಕ್ಕಾ. ಈ ದಿಸೆಯಲ್ಲಿ ಮುದುವದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಸಮತಟ್ಟುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಬ್‌ಸ್ಟೇಷನ್ ಅನುಷ್ಠಾನವಾದರೆ ಈ ಭಾಗದ ಚಾರ್ವಾಕ, ದೋಳ್ಪಾಡಿ, ಕಾಣಿಯೂರು ಹಾಗೂ ಕಾಮಣ ಗ್ರಾಮದ ಗ್ರಾಹಕರಿಗೆ ಅನುಕೂಲವಾಗಲಿದ್ದು ಈ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಪಕ್ಕ ದ ಬೆಳಂದೂರು ತನಕ ಸವಣೂರು ಸಬ್‌ಸ್ಟೇಷನ್‌ನಿಂದ ವಿದ್ಯುತ್ ರವಾನೆಯಾದರೆ, ಇತ್ತ ಮುರುಳ್ಯ ಎಡಮಂಗಲ ಕ್ಕೆ ನಿಂತಿಕಲ್‌ನಿಂದ ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುದುವ ಸಬ್‌ಸ್ಟೇಷನ್‌ನಿಂದ ಗುಣಮಟ್ಟದ ವಿದ್ಯುತ್ ದೊರೆಯಲಿದೆ.

ಚಾರ್ವಾಕದಲ್ಲಿ ಮೆಸ್ಕಾಂ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಜಾಗ ಸಮತಟ್ಟುಗೊಳಿಸಲು ಚಾಲನೆ:

ಜಾಗ ಸಮತಟ್ಟುಗೊಳಿಸಲು ಚಾಲನೆ

ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದುವದಲ್ಲಿ 33 ಕೆವಿ ವಿದ್ಯುತ್ ಸಬ್‌ಸ್ಟೇಷನ್ ನಿರ್ಮಾಣಕ್ಕಾಗಿ ಗ್ರಾ.ಪಂ. ಮೀಸಲಿಟ್ಟ 70 ಸೆಂಟ್ಸ್ ಜಾಗದಲ್ಲಿ ಸಮತಟ್ಟುಗೊಳಿಸುವ ಕಾರ್ಯಕ್ಕೆ ಅ 14 ರಂದು ಚಾಲನೆ ನೀಡಲಾಯಿತು. ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ದೇವತಾ ಪ್ರಾರ್ಥನೆ ಮಾಡಿದರು. ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ ಪ್ರಸ್ತಾವನಗೈದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಪುತ್ತೂರು ಪಿ.ಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಂಡಿಗ ಹಾಗೂ ಗ್ರಾ.ಪಂ ಸದಸ್ಯರು, ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಸಹಕಾರ ಸಂಘಗಳ ನಿರ್ದೆಶಕರು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ಚಾರ್ವಾಕದಲ್ಲಿ ವಿದ್ಯುತ್ ಸಬ್‌ಸ್ಟೇಷನ್ ಆಗಬೇಕೆನ್ನುವ ಬೇಡಿಕೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ನಮ್ಮ ಮನವಿಗೆ ಪೂರಕವಾಗಿ ಸ್ಪಂದನೆ ನೀಡಿರುವ ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು ಸರಕಾರದ ಮಟ್ಟದಲ್ಲಿ ಯೋಜನೆಗೆ ಶಿ-ರಸ್ಸು ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮ ಪಂಚಾಯತ್ ಈಗಾಗಲೇ ಜಾಗ ಗುರುತಿಸಿ ಸಬ್‌ಸ್ಟೇಷನ್‌ಗೆ ಮೀಸಲಿರಿಸಿದೆ. ಆ ಜಾಗದಲ್ಲಿ ಸಮತಟ್ಟುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಯೋಜನೆ ಅನುಷ್ಟಾನವಾಗುವ ಭರವಸೆ ಇದೆ.

ಗಣೇಶ್ ಉದನಡ್ಕ , ಉಪಾಧ್ಯಕ್ಷರು ಗ್ರಾ.ಪಂ.ಕಾಣಿಯೂರು

ಚಾರ್ವಾಕದಲ್ಲಿ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ನಿಗದಿಪಡಿಸಿದ ಜಾಗದ ಮಣ್ಣು ಪರೀಕ್ಷೆ ನಡೆಯಬೇಕಿದೆ. ಕಂದಾಯ ಇಲಾಖೆಯವರು ಜಾಗವನ್ನು ಮೆಸ್ಕಾಂ ಇಲಾಖೆಗೆ ಪಹಣಿ ಮಾಡಬೇಕಿದೆ. ಈ ಕಾರ್ಯ ಮುಗಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ರಾಮಚಂದ್ರ ಎಂ, ಕಾರ್ಯನಿರ್ವಾಹಕ ಅಭಿಯಂತರರು
ಮೆಸ್ಕಾಂ, ಪುತ್ತೂರು ಉಪವಿಭಾಗ

LEAVE A REPLY

Please enter your comment!
Please enter your name here