ಕೃಷಿಕೋದ್ಯಮ-ಕೃಷಿ ಪ್ರವಾಸೋದ್ಯಮ ಕೃಷಿಕರ ಮನೆ ಬಾಗಿಲಿಗೆ ಸೇವೆ

0

ಗ್ರಾಮ ಗ್ರಾಮಗಳಲ್ಲಿ ಕೃಷಿಕರ ಸಂವಾದ, ಉತ್ಪನ್ನಗಳ, ಸೇವೆಗಳ ಪ್ರದರ್ಶನ

ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಕೃಷಿಕರಿಗೆ ಸಂಪೂರ್ಣ ಮಾಹಿತಿ ಮತ್ತು ರಕ್ಷಣೆ ನೀಡುವ ಕಾರ್ಯ ಪ್ರಾರಂಭವಾಗಿದೆ. ಪುತ್ತೂರಿನಲ್ಲಿ ಈಗಾಗಲೇ ಎರಡು ಬಾರಿ ಕೃಷಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಜೇನು ಕೃಷಿ ಬಗ್ಗೆ ಮನಮೋಹನ್ ಅರಂಬ್ಯ, ರಾಧಾಕೃಷ್ಣ ಕೋಡಿ, ಹಲಸಿನ ಕೃಷಿ ಬಗ್ಗೆ ಜಾಕ್ ಅನಿಲ್, ಕೊಕ್ಕೊ, ಗೇರುಬೀಜ ಕೃಷಿ ಬಗ್ಗೆ ತಜ್ಞರಾದ ಕಡಮಜಲು ಸುಭಾಷ್ ರೈ, ಕೃಷಿ ವಿಜ್ಞಾನಿ ಡಾ| ಗಂಗಾಧರ ನಾಯಕ್ ಮಾಹಿತಿ ನೀಡಿದ್ದಾರೆ. ಸಾವಯವ ತರಕಾರಿ ಕೃಷಿ ಮತ್ತು ಟಾರೀಸ್ ಗಾರ್ಡನ್ ಬಗ್ಗೆ ಹರಿಕೃಷ್ಣ ಕಾಮತ್ ಪ್ರಾತ್ಯಕ್ಷಿತೆ ನೀಡಿದ್ದಾರೆ. ಸತೀಶ್ ಗೌಡರವರು ಬಸಳೆ ಮತ್ತು ಇತರ ತರಕಾರಿ ಬೆಳೆಯನ್ನು ಕಮರ್ಷಿಯಲ್ ಆಗಿ ಬೆಳೆಯುವ ಬಗ್ಗೆ ವಿವರಣೆ ನೀಡಿದ್ದಾರೆ. ಆರ್ಯಾಪು ಮತ್ತು ಆರಂತೋಡು ಕೃಷಿ ಸೊಸೈಟಿಗಳ ಮಹಾಸಭೆಯಲ್ಲಿ ಕೃಷಿ ವಿಜ್ಞಾನಿ ಡಾ| ಫಝಲ್‌ರವರು ಕೃಷಿ ಉತ್ಪನ್ನಗಳ ಮೌಲ್ಯ ವೃದ್ಧೀಕರಣಕ್ಕೆ ಕೇಂದ್ರ ಸರಕಾರದಿಂದ ದೊರಕುವ ಸಾಲ ಸೌಲಭ್ಯ, ಮಾಹಿತಿ ತರಬೇತಿ ಮತ್ತು ಮಾರುಕಟ್ಟೆ ಬೆಂಬಲದ ಬಗ್ಗೆ ವಿವರಣೆ ನೀಡಿದ್ದಾರೆ. ಸುಳ್ಯದಲ್ಲಿ ನಡೆದ ಸಭೆಯಲ್ಲಿ ಅಣಬೆ ಕೃಷಿಯ ಬಗ್ಗೆ ಶ್ರೀಮತಿ ಲತಾ ಕುದ್ಪಾಜೆ, ಕೃಷಿ ಇಲಾಖಾ ಮಾಹಿತಿ ಕುರಿತು ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರು, ಸಾವಯವ ಗೊಬ್ಬರದ ಕುರಿತು ಸಂತೋಷ್ ಕುಮಾರ್, ನರ್ಸರಿ ಮತ್ತು ರಂಬುಟಾನ್ ಕೃಷಿ ಬಗ್ಗೆ ದಯಾಪ್ರಸಾದ್ ಚೀಮುಳ್ಳು, ಜೇನು ಕೃಷಿಯ ಬಗ್ಗೆ ಕಾಡುತೋಟ ಪುಟ್ಟಣ್ಣ ಗೌಡ ವಿವರಣೆ ನೀಡಿದ್ದಾರೆ.

ನಮ್ಮ ತಂಡ ಗ್ರಾಮ ಗ್ರಾಮಗಳಲ್ಲಿ ಕೃಷಿ ನರ್ಸರಿಗಳ, ಗೊಬ್ಬರ, ಕೀಟ ನಾಶಕ, ಕೃಷಿ ಯಂತ್ರೋಪಕರಣಗಳ, ಸೇವೆ ಒದಗಿಸುವ ಪರಿಣಿತರ ಹಾಗೂ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಕೃಷಿ ತಜ್ಞರ, ಇಲಾಖಾ ಸೌಲಭ್ಯಗಳ ಮಾಹಿತಿ ಸಂಗ್ರಹಿಸುತ್ತಿದೆ. ವಿವಿಧ ಕೃಷಿ ಉತ್ಪನ್ನಗಳ ಮತ್ತು ಅದರ ಮಾರಾಟ ವ್ಯವಸ್ಥೆಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಮಾಹಿತಿಗಳನ್ನು ಉಚಿತವಾಗಿ ಮುಂದಕ್ಕೆ ಸುದ್ದಿ ಕೃಷಿ ಕೇಂದ್ರದಲ್ಲಿ ನೀಡಲಾಗುತ್ತದೆ. ಅದರ ಪ್ರಯೋಜನವನ್ನು ಕೃಷಿಕರಿಗೆ ಮತ್ತು ಗ್ರಾಹಕರಿಗೆ ಒದಗಿಸಲಿಕ್ಕಾಗಿ ಪಂಚಾಯತ್‌ಗಳಲ್ಲಿ ಕೃಷಿ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿ ಅವರ ಕಸುಬು, ಉತ್ಪನ್ನಗಳ ಮಾಹಿತಿ ಪ್ರದರ್ಶನ ಏರ್ಪಡಿಸುತ್ತಿದ್ದೇವೆ. ಸುಳ್ಯದ ಉಬರಡ್ಕ ಮಿತ್ತೂರು ಗ್ರಾ.ಪಂಚಾಯತ್‌ನಲ್ಲಿ ಅಲ್ಲಿಯ ಗ್ರಾಮ ಪಂಚಾಯತ್, ಸೊಸೈಟಿ, ಸಂಘ ಸಂಸ್ಥೆ ಹಾಗೂ ಸಂಜೀವಿನಿ ಗುಂಪುಗಳ ಸಹಯೋಗದಲ್ಲಿ ಕೃಷಿಕರ ಸಂವಾದ ಮತ್ತು ಕಾರ್ಯಾಗಾರ ನಡೆಯಿತು. ಅವರೆಲ್ಲರ ಹೇಳಿಕೆಗಳನ್ನು ದಾಖಲಿಸಿ, ವಿಡೀಯೋ ರೆಕಾರ್ಡ್ ಮಾಡಿ ಅವರ ಕೃಷಿ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಅವರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಹಾಗೂ ಪ್ರಚಾರದ ಕಾರ್ಯವನ್ನು ಸುದ್ದಿ ಕೃಷಿ ಮಾಹಿತಿ ಕೇಂದ್ರದಿಂದ ವಹಿಸಿಕೊಳ್ಳಲಾಯಿತು. ಅಲ್ಲಿ ಸೇರಿದ ಕೃಷಿಕರ ಬೇಡಿಕೆಗಳನ್ನು, ಸಮಸ್ಯೆಗಳನ್ನು, ಸಲಹೆಗಳನ್ನು ಸಂಗ್ರಹಿಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸುವುದಲ್ಲದೆ, ಕೃಷಿಕರಿಗೆ ಯಾವುದೇ ಇಲಾಖೆಯಲ್ಲಿ ದೊರಕಬೇಕಾದ ಸೌಲಭ್ಯಗಳು ದೊರಕುವಂತೆ ಮಾಡುವ, ಲಂಚ, ಭ್ರಷ್ಟಾಚಾರ ಇಲ್ಲದೆ ಸೇವೆ ದೊರಕುವಂತೆ ಮಾಡುವ ಬಗ್ಗೆ ಚರ್ಚಿಸಲಾಯಿತು.

ಕೃಷಿಯನ್ನು ಉದ್ಯಮವಾಗಿ ರೂಪಿಸುವಂತೆ ಅದಕ್ಕೆ ಬೇಕಾದ ಮಾಹಿತಿ, ಸೌಲಭ್ಯ ಒದಗಿಸುವುದಲ್ಲದೆ ಉತ್ತಮ ಲಾಭದಾಯಕ ಕೃಷಿ ಮಾಡಿದ ಕೃಷಿಕರ ಸ್ಥಳಗಳಿಗೆ ಆಸಕ್ತ ಕೃಷಿಕರನ್ನು ಕರೆದೊಯ್ದು ಅಲ್ಲಿಯೇ ಅವರಿಗೆ ಪ್ರಾತ್ಯಕ್ಷತೆ ನೀಡುವ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಜೇನು ಮತ್ತು ತರಕಾರಿ ಕೃಷಿ ಬಗ್ಗೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಜಿ.ಕೆ.ವಿ.ಕೆ. ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ನವೆಂಬರ್ 3ರಿಂದ 6 ವರೆಗೆ ನಡೆಯುವ ಕೃಷಿ ಮೇಳದಲ್ಲಿ ಕೃಷಿಕರು ಭಾಗವಹಿಸಲು ಬೇಕಾದ ವ್ಯವಸ್ಥೆಯೊಂದಿಗೆ ಅವರ ವಸ್ತುಗಳನ್ನು ಅಲ್ಲಿ ಮಾರುಕಟ್ಟೆಗೆ ಸ್ಟಾಲ್‌ಗಳಲ್ಲಿ ಇರಿಸುವಂತೆ ಮಾಡುವ ಪ್ರಯತ್ನಕ್ಕೆ ಸುದ್ದಿ ಕೃಷಿ ಸೇವಾ ಮಾಹಿತಿ ಕೇಂದ್ರ ಕೈ ಹಾಕಿದೆ. ಒಟ್ಟಿನಲ್ಲಿ ಕೃಷಿಕರ ಮನೆ ಬಾಗಿಲಿಗೆ ಸೇವೆ, ಮಾಹಿತಿ, ಮಾರಾಟದಲ್ಲಿ ಉತ್ತಮ ಬೆಲೆ ದೊರಕುವಂತೆ ಮಾಡಿ ಅವರ ಕೆಲಸಗಳು ನಿರ್ವಿಘ್ನವಾಗಿ ಯಾವುದೇ ತೊಂದರೆ ಇಲ್ಲದೆ ನಡೆಯುವಂತೆ ಮಾಡುವ ಪ್ರಯತ್ನ ಸುದ್ದಿ ಕೃಷಿ ಸೇವಾ ಕೇಂದ್ರದಿಂದ ನಡೆಯಲಿದೆ. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವನ್ನು ಬಯಸುತ್ತಿದ್ದೇವೆ.

LEAVE A REPLY

Please enter your comment!
Please enter your name here