ಪುತ್ತೂರು: ರಥೋತ್ಸವ ಸಮಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿನಲ್ಲಿ ರಶೀದಿ ಮಾಡಿಸಿ,ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಹೋದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಶೀದಿ ಮಾಡಿಸಿದ ಹಣವನ್ನು ಕೊಡದೆ ಮಹಾಲಿಂಗೇಶ್ವರ ದೇವರಿಗೆ ವಂಚನೆ ಮಾಡಿ ಇದೀಗ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಆರೋಪಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ಅಶೋಕ ಜನಮನ ಯಶಸ್ವಿಯಾಗಿ ನಡೆದಿದೆ. ಮಳೆ ಬಂದು ಸ್ವಲ್ಪ ಅಡಚಣೆಯಾಗಿದೆ. ನಿರೀಕ್ಷೆಗೂ ಮೀರಿ ಜನ ಸೇರಿದ ಕಾರಣ ಸ್ವಲ್ಪ ಸಮಸ್ಯೆಯಾಗಿದೆ ಅದನ್ನು ಪರಿಹರಿಸಲಾಗಿದೆ. ಮುಖ್ಯಮಂತ್ರಿಗಳು ರಾಜಕೀಯ ಮಾತನಾಡಿಲ್ಲ. ಪಂಚ ಗ್ಯಾರಂಟಿಯನ್ನು ಜಾರಿಗೆ ಮಾಡಿದ್ದು ಸಿದ್ದರಾಮಯ್ಯ ಅವರು ಅದನ್ನು ಸಭೆಯಲ್ಲಿ ಹೇಳಿದ್ದಾರೆ. ಸರಕಾರದ ಯೋಜನೆಯನ್ನು ಸಾರ್ವಜನಿಕ ಸಭೆಯಲ್ಲಿ ಹೇಳುವುದು ತಪ್ಪಲ್ಲ. ಅಷ್ಟು ತಿಳುವಳಿಕೆ ಇಲ್ಲದ ಮಠಂದೂರು ದೇವರಿಗೆ ವಂಚನೆ ಮಾಡಿದ್ದು, ಯಾಕೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಚುನಾವಣೆಯ ಸಮಯದಲ್ಲಿ ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವ ಬಿಜೆಪಿಗೆ ಅಭಿವೃದ್ದಿ ಬೇಕಿಲ್ಲ ಎಂದು ಹೇಳಿದರು. ಅಶೋಕ ಜನಮನ ಕಾರ್ಯಕ್ರಮದಲ್ಲಿ ಅಡುಗೆ ಬಳಕೆಗೆ ದೇವಸ್ಥಾನದಿಂದ ತೆಂಗಿನ ಗೆರಟೆ ಕೊಂಡು ಹೋಗಿದ್ದೆ. ದುಡ್ಡು ಕೊಡದೆ ಕೊಂಡು ಹೋಗಿಲ್ಲ. ದೇವಸ್ಥಾನದ ಸೊತ್ತು ಸಮಸ್ತರದ್ದು, ಅದನ್ನು ಸ್ವಂತಕ್ಕೆ ಬಳಸುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದ ಶಾಸಕರು ದೇವಸ್ಥಾನದ ಜಾಗವನ್ನು ಒಳಗೆ ಹಾಕಿದ್ದು ಯಾರು ಎಂದು ಲೋಕಕ್ಕೆ ಗೊತ್ತಾಗಿದೆ. ದೇವರು, ಧರ್ಮಕ್ಕೆ ಅಪಚಾರ ಮಾಡಿ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ ಇವರಿಗೆ ನೈತಿಕತೆ ಎಂಬುದು ಇದೆಯೇ ಎಂದು ಶಾಸಕರು ಪ್ರಶ್ನಿಸಿದರು.