ಕಾಂಚನ ದಿ.ಸಂಕಪ್ಪ ನಲ್ಕೆಯವರಿಗೆ ನುಡಿನಮನ

0

ಉಪ್ಪಿನಂಗಡಿ: ಹೃದಯಾಘಾತದಿಂದ ನಿಧನರಾದ ರಾಷ್ಟ್ರೀಯ ಭಾವೈಕ್ಯ ಮತ್ತು ತುಳುನಾಡ ರತ್ನ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ದೈವನರ್ತಕ ಕಾಂಚನ ದಿ.ಸಂಕಪ್ಪ ನಲ್ಕೆಯವರ ಉತ್ತಕ್ರಿಯೆ ಹಾಗೂ ನುಡಿನಮನ ಕಾರ್ಯಕ್ರಮ ಅ.15ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಮಂಟಪದಲ್ಲಿ ನಡೆಯಿತು.

ನುಡಿನಮನ ಸಲ್ಲಿಸಿದ ದೈವಗಳ ಮಧ್ಯಸ್ಥ ಶಶಾಂಕ ನೆಲ್ಲಿತ್ತಾಯರವರು ಮಾತನಾಡಿ, ಕಲ್ಲು ಅಥವಾ ಮರಕ್ಕೆ ರೂಪ ಕೊಟ್ಟು ಒಂದು ಕಲಾಕೃತಿಯನ್ನು ಮಾಡಬಹುದು. ಆದರೆ ಮನುಷ್ಯನಿಗೆ ಕಲೆಯೆನ್ನುವುದು ಹುಟ್ಟಿನಿಂದಲೇ ಬರಬೇಕು. ಇಂತಹ ಕಲಾ ಸರಸ್ವತಿ ಸಂಕಪ್ಪ ನಲ್ಕೆಯವರಿಗೆ ಒಲಿದಿದ್ದಳು. ಆದ್ದರಿಂದ ಅವರೊಬ್ಬ ಹುಟ್ಟು ಕಲಾವಿದನಾಗಿದ್ದು, ದೈವಾರಾಧನೆಯ ಮೂಲಕ ತುಳುನಾಡ ಸಂಸ್ಕೃತಿಯನ್ನು ಹತ್ತೂರಿಗೆ ಪಸರಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಗುಣಗಾನ ಮಾಡಿದರು. ಸಂಗೀತದ ಮೇಲೆ ಪ್ರೀತಿಯನ್ನು ಹೊಂದಿದ್ದ ಸಂಕಪ್ಪ ನಲ್ಕೆಯವರು ಆದರ್ಶ ವ್ಯಕ್ತಿತ್ವದವರಾಗಿದ್ದು, ಸಂಧಿ ಪಾಡ್ದನಗಳ ಕಣಜವಾಗಿದ್ದರು. ಅಲ್ಲದೆ, ಮೂಡಣದ ಸಣ್ಣ ಭೂತಗಳ ಉತ್ತಮ ಹಿಡಿತವನ್ನು ಅವರು ಹೊಂದಿದವರಾಗಿದ್ದರು ಎಂದ ಅವರು, ದೈವ ನರ್ತನವನ್ನು ಮಾಡುತ್ತಿರುವ ನಲ್ಕೆ ಹಾಗೂ ಪರವ ಜನಾಂಗದವರಿಗೆ ಸರಸ್ವತಿಯ ಕೃಪೆಯಿದ್ದು, ಅವರು ಹುಟ್ಟುತ್ತಲೇ ಕಲಾವಿದರಾಗಿರುತ್ತಾರೆ. ದೈವ ನರ್ತನದ ಮೂಲಕ ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ಶಕ್ತಿ ಅವರಿಗಿದೆ. ಆದರೆ ಇಂತಹ ಕಲಾವಿದರನ್ನು ನಮ್ಮ ಸಮಾಜವು ಇಂದಿಗೂ ಜಾತಿಯ ಮೂಲಕ ನೋಡುತ್ತಿದ್ದು, ಅದು ಸಲ್ಲದು ಎಂದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿವಿಧ ಭಾಷಿಗರ ಪ್ರಕೋಷ್ಠದ ಸಂಚಾಲಕ ಸಂತೋಷ್ ಕುಮಾರ್ ಪಂರ್ದಾಜೆ, ನಲಿಕೆಯವರ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಬ್ರಾಯ ಕಲ್ಮಂಜ, ಜಿಲ್ಲಾ ಗೌರವಾಧ್ಯಕ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಲೋಕಯ್ಯ ಸೇರ, ಪುತ್ತೂರು ತಾಲೂಕಿನ ಅಧ್ಯಕ್ಷ ರವಿ ಎಂಡೆಸಾಗು, ಉಪಾಧ್ಯಕ್ಷ ಶ್ರೀಧರ ಪೆರ್ಲಂಪಾಡಿ, ಖಜಾಂಚಿ ವಚನ್ ಸೇಡಿಯಾಪು, ಪದಾಽಕಾರಿಗಳಾದ ಡೊಂಬಯ್ಯ ಕಾಪೆಜಾಲು, ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ ಅಡೆಕ್ಕಲ್, ಜಿಲ್ಲಾ ಯುವ ವೇದಿಕೆಯ ಅಧ್ಯಕ್ಷ ದಯಾನಂದ ಸೇರ, ಕಾರ್ಯದರ್ಶಿ ಕೇಶವ ಕಬಕ, ಕಾಂಚನ ಪ್ರೌಢಶಾಲೆಯ ಹಿರಿಯ ಶಿಕ್ಷಕ ಸುಬ್ರಹ್ಮಣ್ಯ ಭಟ್, ಅಯೋಧ್ಯಾನಗರ ಶಾಲಾ ಶಿಕ್ಷಕಿ ಹೇಮಲತಾ, ಕಾಂಚನ – ಕುಡ್ತಡ್ಕ ತರವಾಡಿನ ಎಲ್ಲಾ ಕುಟುಂಬಿಕರು, ಬಂಧುಗಳು, ಮಿತ್ರರು, ಅಭಿಮಾನಿಗಳು, ಉಪಸ್ಥಿತರಿದ್ದರು. ನುಡಿನಮ ಕಾರ್ಯಕ್ರಮಕ್ಕೆ ಮೊದಲು ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ವಿಜೇತ ಗಾಯಕ ಎಲ್.ಕೆ.ಧರಣ್ ಮಾಣಿ ಮತ್ತು ಬಳಗದವರಿಂದ ನಾದ ನಮನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here