ಯುವ ಸಮುದಾಯದಿಂದ ನಡೆಯಲಿ ರಾಷ್ಟ್ರನಿರ್ಮಾಣ ಕಾರ್ಯ: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಪಡೆದ ವಿದ್ಯೆಯನ್ನು ಸಮಾಜದ ಒಳಿಗೆ ಬಳಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಯುವ ಸಮುದಾಯ ಸಜ್ಜಾಗಬೇಕಿದೆ. ಸಮಾಜಕ್ಕೆ ನಾನು ನೀಡಬಹುದಾದ ಕೊಡುಗೆಗಳ ಕುರಿತು ಚಿಂತನೆ ನಡೆಸಿ ಅಭಿವೃದ್ಧಿ ಹೊಂದಬೇಕು. ಯಾವುದೇ ಮತೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗದೆ ಸಮಾಜದಲ್ಲಿ ನಿರ್ಭೀತಿಯಿಂದ ಜೀವನ ನಡೆಸುವಂತಹಾ ವಾತಾವರಣ ಸೃಷ್ಟಿಸುವತ್ತ ಚಿತ್ತ ಹರಿಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ‘ಜೀವನಕ್ಕೆ ಅಗತ್ಯವಾದ ಜೀವನ ಮೌಲ್ಯ’ ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಇಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರು ದೇಶದಲ್ಲಿ ಶಿಕ್ಷಣ ಪಡೆದು ಕೆ.ಆರ್.ಎಸ್.ಡ್ಯಾಂ ನಿರ್ಮಾಣ, ಜೋಗದ ಶರಾವತಿ ಬಳಿ ಜಲ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ರೂಪುರೇಷೆ ನಿರ್ಮಾಣ ಮೊದಲಾದ ಕಾರ್ಯಗಳ ದೇಶಾದ್ಯಂತ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ ನೀಡಿದರು. ಅದೇ ರೀತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೂ ದೊಡ್ಡ ಪದವಿ ಗಳಿಸಿದರೂ ದೇಶದ ರಕ್ಷಣೆಗೆ ಅಗತ್ಯವಾದ ಮಿಸಾಯಿಲ್ ನಿರ್ಮಾಣ ಮೊದಲಾದ ಕಾರ್ಯಗಳ ರುವಾರಿಯಾಗುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಿದರು. ದೇಶದಲ್ಲಿ ವಿದ್ಯಾಭ್ಯಾಸ ಪಡೆದು ದೇಶದ ಅಭಿವೃದ್ಧಿಗೆ ಉಪಯೋಗಿಸುವ ಮನೋಭಾವ, ಚಿಂತನೆ ವಿದ್ಯಾರ್ಥಿಗಳಲ್ಲಿ ಮೂಡಬೇಕಿದೆ ಎಂದರು.
ಭಾರತ ದೇಶಕ್ಕೆ ಭವ್ಯವಾದ ಪರಂಪರೆಯಿದ್ದು ಇತ್ತೀಚಿನ ದಿನಗಳಲ್ಲಿ ಸಮುದಾಯದ ದಾರಿತಪ್ಪಿಸುವ ಹಾಗೂ ಜನರ ನಡುವೆ ಧಾರ್ಮಿಕ ವಿಷಬೀಜ ಬಿತ್ತುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಇತರರ ಆಲೋಚನೆಗಳನ್ನು ಬಲವಂತಾಗಿ ಅಥವಾ ಆಮಿಷಗಳ ಮೂಲಕ ಯುವಜನತೆಯಲ್ಲಿ ತುಂಬುವ ಮೂಲಕ ದಾರಿತಪ್ಪಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಈ ಬಗ್ಗೆ ಯುವ ಸಮುಯದಾಯ ಎಚ್ಚರಿಕೆ ವಹಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ದೇಶದ ಉದ್ದಗಲಕ್ಕೂ ಮತೀಯ ಶಕ್ತಿಗಳು ತಮ್ಮ ಪ್ರಭಾವ ಬೀರುವ ಯತ್ನ ನಡೆಸುತ್ತಿವೆ. ಆದರೆ ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ವಹಿಸಿ ಸನ್ಮಾರ್ಗದಲ್ಲಿ ನಡೆಯುವ ಮೂಲಕ ತಕ್ಕ ಪ್ರತ್ಯುತ್ತರ ನೀಡಬೇಕಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲೂ ಕೈಜೋಡಿಸುವ ಅಗತ್ಯವಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.