ಪುತ್ತೂರು : ದ.ಕ. ಜಿಲ್ಲೆಯ ನಾನ್ ಸಿಆರ್ಝಡ್ ಪ್ರದೇಶದ ಮರಳು ಗುತ್ತಿಗೆದಾರರ ಸಭೆ ಮಂಗಳೂರು ಕದ್ರಿ ಜುಗುಲ್ ಸಭಾ ಭವನದಲ್ಲಿ ನಡೆಯಿತು. ದ.ಕ. ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸಿದ್ದರು. ನಾನ್ ಸಿಆರ್ಝಡ್ ಪ್ರದೇಶದಲ್ಲಿ ಇರುವ ಗುತ್ತಿಗೆದಾರರಿಗೆ ಇರುವ ನಿಯಮದಲ್ಲಿ ವೇ ಬ್ರೀಜ್ ಅಳವಡಿಸಲು 3 ತಿಂಗಳ ಕಾಲಾವಕಾಶ ಕೇಳುವುದೆಂದು ತೀರ್ಮಾನಿಸಲಾಯಿತು. ಗುತ್ತಿಗೆದಾರರಿಗೆ ಒಟ್ಟು ಮರಳಿನ ಪ್ರಮಾಣದ ಶೇ.50ರಷ್ಟು ರಾಜಧನ ಪಾವತಿ ಮಾಡಲು ಆದೇಶ ಇರುತ್ತದೆ. ಆದರೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಇರುವುದರಿಂದ ನಾನ್ ಸಿಆರ್ ಝಡ್ ಗುತ್ತಿಗೆದಾರರಿಗೆ ಮರಳಿನ ಬೇಡಿಕೆ ಇಲ್ಲದಂತಾಗಿದೆ. ಆದುದರಿಂದ ನಮಗೆ ಹೊರಜಿಲ್ಲೆಗೆ ಪರವಾನಿಗೆ ನೀಡಬೇಕು ಹಾಗೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಲಾಯಿತು. ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ಪಾರದರ್ಶಕವಾಗಿ ಕಾನೂನಿನ ಅಡಿಯಲ್ಲಿ ಮರಳು ನೀಡಲು ನಾವು ಬದ್ಧರಿದ್ದೇವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಚರಣ್ ಕುಮಾರ್, ಪ್ರ.ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ, ನ್ಯಾಯಾಲಯದ ಮೊರೆಹೋದ ರಾಜೇಂದ್ರ ಮೆಂಡ, ಕೋಶಾಧಿಕಾರಿ ಸುರೇಶ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.