ಪುತ್ತೂರು:ಮಂಗಳೂರು ಬಾವುಟಗುಡ್ಡೆಯಲ್ಲಿ ನ.19ರಂದು ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಅ.19ರಂದು ಪುತ್ತೂರು ತಾಲೂಕಿನ ಪೂರ್ವ ಸಿದ್ದತಾ ಸಭೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, 1837ರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಸುಳ್ಯದ ಹಲವರಿಗೆ ಗೊತ್ತಿಲ್ಲ.ವಾಸ್ತವವಾಗಿ ಆ ಕುರಿತು ಉಲ್ಲೇಖಗಳೂ ಆಗಿರಲಿಲ್ಲ.ಸ್ವಾತಂತ್ರ್ಯಕ್ಕಾಗಿ ಹಿರಿಯರು ಹೋರಾಟ ನಡೆಸಿದ ರೀತಿ, ಅವರು ಅನುಭವಿಸಿದ ಶಿಕ್ಷೆ, ಬಲಿದಾನಗಳನ್ನು ನೆನಪಿಸುವುದು ಮತ್ತು ಅದು ಇತಿಹಾಸದ ಪುಟದಲ್ಲಿ ದಾಖಲೆಯಾಗಬೇಕು ಎಂದರು.ನ.19ರಂದು ನಡೆಯುವ ಕಾರ್ಯಕ್ರಮ ಗೌಡ ಸಮಾಜದ ಕಾರ್ಯಕ್ರಮ ಅಲ್ಲ.ಇಡೀ ಸಮಾಜದ, ದೇಶ ಭಕ್ತರ ಕಾರ್ಯಕ್ರಮ ಆಗಬೇಕು.ಈ ನಿಟ್ಟಿನಲ್ಲಿ ಪುತ್ತೂರಿನಿಂದ 15 ಸಾವಿರಕ್ಕೂ ಹೆಚ್ಚು ಜನ ಮಂಗಳೂರಿಗೆ ತೆರಳಬೇಕು.ಇದಕ್ಕಾಗಿ ಇವತ್ತಿನಿಂದಲೇ ಸಂಘದ ಮೂಲಕ ಪೂರ್ಣಾವಧಿ ಕಾರ್ಯ ನಡೆಯಬೇಕು.ಮನೆ ಮನೆಗೆ ಕರ ಪತ್ರ, ಸರ್ವ ವಿಧದಲ್ಲಿ ಜನರನ್ನು ತಲುಪುವ ಕೆಲಸ ಆಗಬೇಕೆಂದು ಶಾಸಕ ಮಠಂದೂರು ಸಲಹೆ ನೀಡಿದರು.
ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಪಕ್ಷಾತೀತವಾಗಿ ಎಲ್ಲರಿಗೂ ಮುಟ್ಟುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಕ್ಕೂ ಕಾರ್ಯಕ್ರಮದ ಕುರಿತು ಮಾಹಿತಿ ತಲುಪಿಸುವ ಕೆಲಸ ಆಗಬೇಕೆಂದರು. ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ ಪುತ್ತೂರಿನಲ್ಲಿ ಪ್ರತಿ ಗ್ರಾಮ ತಲುಪುವ ಕೆಲಸಕ್ಕೆ ವಿವಿಧ ಉಪಸಮಿತಿ ರಚನೆ ಕುರಿತು ಮಾಹಿತಿ ನೀಡಿದರು. ಒಕ್ಕಲಿಗ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಉಸ್ತುವಾರಿ ಸಮಿತಿ ಕಾರ್ಯದರ್ಶಿ ಹರ್ಷಿತ್ ಪುತ್ತಿಲ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ., ಯುವ ಗೌಡ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ವಿವಿಧ ಮಾಹಿತಿ ನೀಡಿದರು.ಸಭೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಮುಖರು ಉಪಸ್ಥಿತರಿದ್ದರು.