ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಶ್ರೀ ಭಾರತಿ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ನಡೆಯಿತು. ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಕೈತೋಟದ ನಿರ್ಮಾಣ, ಶಾಲಾ ವಠಾರದ ಸ್ವಚ್ಛತೆ ಮುಂತಾದ ಕೆಲಸಗಳನ್ನು ಮಾಡಿದರು. ಅದಲ್ಲದೇ ಶಿಬಿರದಲ್ಲಿ ನಾಯಕತ್ವ ಮತ್ತು ಸಭಾ ನಡಾವಳಿ, ಸಂವಹನ ಕಲೆ, ಪತ್ರಿಕೋದ್ಯಮ ಮುಂತಾದ ಅನೇಕ ವ್ಯಕ್ತಿತ್ವ ವಿಕಸನ ತರಬೇತಿಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಈ ಕುರಿತಾದ ಶಿಕ್ಷಣವನ್ನು ಪಡೆದುಕೊಂಡರು. ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಉಪನ್ಯಾಸಕರಿಂದ ’ಧುರ ವೀಳ್ಯ’ ಎಂಬ ಯಕ್ಷಗಾನ ತಾಳಮದ್ದಳೆ ಒಂದು ದಿನ ನಡೆಯಿತು. ಶಿಬಿರದ ವಿದ್ಯಾರ್ಥಿಗಳು ಮತ್ತು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಎನ್.ಎಸ್.ಎಸ್. ಶಿಬಿರದ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆದ ಗಿರಿಶಂಕರ್ ಸುಲಾಯರವರು ಮಾತನಾಡಿ, ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ, ಮೌಲ್ಯಗಳನ್ನು ಬೆಳೆಸುತ್ತದೆ. ಸಮಾಜದಲ್ಲಿ ಬೆರೆಯುವ, ಸಮಾಜದ ನೋವು-ನಲಿವುಗಳಲ್ಲಿ ಪಾಲು ಪಡೆದು, ಸೂಕ್ತ ಪರಿಹಾರವನ್ನು ಸೃಷ್ಠಿಸುವ ಸೃಜನಶೀಲ ಆಲೋಚನೆಗಳನ್ನು ಇಂಥಹ ಶಿಬಿರಗಳು ಕಲಿಸುತ್ತದೆ. ಈ ಶಿಬಿರದ ಯಶಸ್ಸು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ನಮಗೆ ಕಾಣಿಸುತ್ತಿದೆ. ಇಂಥಹ ಪರಿಣಾಮಕಾರಿ ಬದಲಾವಣೆಯೇ ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸಿ, ಪೋಷಿಸಲಿದೆ. ಹಾಗಾಗಿ ಕಲಿಯುವ ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಇನ್ನೂ ಸಾಧಿಸುವಂತಾಗಲಿ ಎಂದು ಹೇಳಿದರು.
ಶರವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ, ಆಲಂಕಾರು ಗ್ರಾ.ಪಂ. ಉಪಾಧ್ಯಕ್ಷೆ ರೂಪಶ್ರೀ, ಪಿಡಿಒ ಜಗನ್ನಾಥ ಶೆಟ್ಟಿ, ಆಲಂಕಾರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ, ಶ್ರೀ ಭಾರತಿ ಶಾಲೆಯ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಇಂದುಶೇಖರ ಶೆಟ್ಟಿ, ಈಶ್ವರ ಗೌಡ ಪಜ್ಜಡ್ಕ, ಜೆಸಿಐ ಆಲಂಕಾರಿನ ಅಧ್ಯಕ್ಷ ಅಜಿತ್ ರೈ, ಮೆಸ್ಕಾಂ ಜೆಇ ಪ್ರೇಮ್‌ಕುಮಾರ್, ಮಾತಾಜಿ ಆಶಾರವರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ರವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯು ನಿರಂತರವಾಗಿದ್ದು, ಮಸ್ತಕಕ್ಕೆ ವಿಷಯಗಳು ಪುಸ್ತಕದಿಂದ ಮಾತ್ರವಲ್ಲ, ಸರ್ವಕಡೆಯಿಂದಲೂ ಲಭಿಸುತ್ತದೆ. ಹಾಗಾಗಿ ಜೀವನಕ್ಕೆ ಬೇಕಾಗುವ ಶಿಕ್ಷಣವನ್ನು ಕಲಿಸುವ ಉದೇಶದಿಂದ ಹಮ್ಮಿಕೊಂಡ ಈ ಶಿಬಿರವು ಈ ಶಿಬಿರದ ಅನುಷ್ಠಾನ ಸಮಿತಿ, ಶ್ರೀ ಭಾರತಿ ಶಾಲೆ ಮತ್ತು ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ಹೇಳಿದರು. ಶಿಬಿರಾಧಿಕಾರಿ ತಿಲಕಾಕ್ಷರವರು ಶಿಬಿರದ ವರದಿಯನ್ನು ಮಂಡಿಸಿದರು. ಕಾಲೇಜಿನ ಉಪನ್ಯಾಸಕಿ ಸವಿತಾ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಸತೀಶ್ ಜಿ.ಆರ್ ವಂದಿಸಿದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ. ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಶಿಬಿರದ ಕುರಿತಾದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.