ರೋಟರಿ ಸ್ವರ್ಣಕ್ಕೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ರೋಟರಿ ಸೇವೆಗಳು ಇತರರಿಗೆ ಪ್ರೇರೇಪಣೆ, ಮಾದರಿಯಾಗುವಂತಿರಲಿ-ಪ್ರಕಾಶ್ ಕಾರಂತ್

ಪುತ್ತೂರು: ಅಂತರ್ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಜಗತ್ತಿನಲ್ಲಿ ಗುರುತಿಸಿಕೊಂಡಿದೆ. ಅದರಂತೆ ಪ್ರತಿಯೊಂದು ರೋಟರಿ ಸಂಸ್ಥೆಗಳು ಮಾಡುವ ಸೇವೆಗಳು ಇತರರಿಗೆ ಪ್ರೇರೇಪಣೆಯಾಗುವಂತಿರಲಿ ಹಾಗೂ ಮಾದರಿಯಾಗುವಂತಿರಲಿ. ಸಾಮಾಜಿಕ ಸದಭಿಪ್ರಾಯ ಬರುವುದರೊಂದಿಗೆ ವೈವಿಧ್ಯಮಯವುಳ್ಳ ಹೆಚ್ಚೆಚ್ಚು ಜನರು ರೋಟರಿಗೆ ಸೇರ್ಪಡೆಗೊಂಡು ಮತ್ತಷ್ಟು ಸಮಾಜಮುಖಿ ಕಾರ್ಯಗಳು ಹೊರ ಹೊಮ್ಮಲಿ ಎಂದು ರೋಟರಿ ಜಿಲ್ಲಾ 3181ರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.

ಅ.20 ರಂದು ಸಂಜೆ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣಕ್ಕೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಮಾರಂಭದಲ್ಲಿ ಅವರು ರೋಟರಿ ಸ್ವರ್ಣದ ಸಮಾಜಮುಖಿ ಕಾರ್ಯಕ್ರಮಗಳನ್ನು ಅನಾವರಣಗೊಳಿಸುವ ಮೂಲಕ ಮಾತನಾಡಿದರು.

ರೋಟರಿ ಜಿಲ್ಲಾ ಕಾರ್ಯಕ್ರಮಗಳಾದ ವನಸಿರಿ, ಜಲಸಿರಿ, ಆರೋಗ್ಯ ಸಿರಿ ಹಾಗೂ ವಿದ್ಯಾ ಸಿರಿ ಇವುಗಳಿಗೆ ಒತ್ತು ನೀಡುವುದರ ಜೊತೆಗೆ ರೋಟರಿಯ ಏಳು ಅಪೇಕ್ಷಿತ ಯೋಜನೆಗಳನ್ನು ಚಿಂತನ-ಮಂಥನ ಮಾಡಿಕೊಂಡು ಅಭಿವೃದ್ಧಿಗಳಿಸುವ ಮೂಲಕ ನಮ್ಮ ಸುತ್ತಮುತ್ತಲಿನ ಜನರ ಬದುಕು ಹಸನಾಗುವತ್ತ ನಾವು ಹೆಜ್ಜೆಯಿಡಬೇಕು. ನಾವು ಪರಿಪೂರ್ಣರೆನಿಸಿಕೊಳ್ಳಬೇಕಾದರೆ ಮೊದಲು ನಮ್ಮಲ್ಲಿ ಬದಲಾವಣೆಯಾಗಬೇಕು. ಯಾವುದೇ ಕಾರ್ಯ ಕೈಗೊಳ್ಳಲು ಭಾಷೆ ಮುಖ್ಯವೆನಿಸುವುದಿಲ್ಲ ಬದಲಾಗಿ ಮನಸ್ಸು ಮತ್ತು ಸಾಧನೆ ಮುಖ್ಯವೆನಿಸುತ್ತದೆ ಎಂದರು.

ಸಮಾಜಮುಖಿ ಕಾರ್ಯಗಳಿಂದ ಮುಖದಲ್ಲಿ ಸಂತಸ-ಎ.ಜೆ ರೈ:
ಮುಖ್ಯ ಅತಿಥಿ, ರೋಟರಿ ವಲಯ ಐದರ ಸಹಾಯಕ ಗವರ್ನರ್ ಎ.ಜಗಜೀವನ್‌ದಾಸ್ ರೈರವರು ಕ್ಲಬ್ ಸದಸ್ಯ ಮಹೇಶ್ ಕೆ.ಸವಣೂರು ಸಂಪಾದಕತ್ವದ ಕ್ಲಬ್ ಬುಲೆಟಿನ್ `ಸ್ವರ್ಣ ದೀಪ’ ಅನ್ನು ಅನಾವರಣಗೊಳಿಸಿ ಮಾತನಾಡಿ, ರೋಟರಿ ಜಿಲ್ಲಾ ಗವರ್ನರ್ ಭೇಟಿ ಎಂಬುದು ರೋಟರಿ ಸದಸ್ಯರಿಗೆ ಅತ್ಯಂತ ಸಂತಸದ ಕ್ಷಣಗಳಾಗಿದೆ. ರೋಟರಿ ಸ್ವರ್ಣ ತಂಡವು ಜಿಲ್ಲಾ ಗವರ್ನರ್ ತೋರಿಸಿಕೊಟ್ಟ ಹಾದಿಯಲ್ಲಿ ಧನಾತ್ಮಕವಾಗಿ ಹೆಜ್ಜೆಯನ್ನಿಡುತ್ತಿದೆ. ರೋಟರಿ ಧ್ಯೇಯವಾಕ್ಯವಾಗಿರುವ `ಇಮ್ಯಾಜಿನ್ ರೋಟರಿ’ ಪೂರಕವಾಗಿ ನಾವು ಮಾಡುವ ಪ್ರತಿಯೊಂದು ಸಮಾಜಮುಖಿ ಕಾರ್ಯಗಳು ನಮ್ಮ ಮುಖದಲ್ಲಿ ಸಂತಸ ತರುವಂತಿರಬೇಕು ಮತ್ತು ಮುಂದಿನ ದಿನಗಳಲ್ಲಿ ಅವನ್ನು ಮುಂದುವರೆಸಿಕೊಂಡು ಹೋಗುವಂತಿರಬೇಕು ಎಂದರು.


ಸ್ವರ್ಣದ ಕಾರ್ಯಕ್ರಮಗಳಿಗೆ ಡಿಜಿಯವರಿಂದ ಪ್ರಶಂಸೆ-ಸೆನೋರಿಟಾ ಆನಂದ್:
ರೋಟರಿ ವಲಯ ಸೇನಾನಿ ಸೆನೋರಿಟಾ ಆನಂದ್‌ರವರು ಮಾತನಾಡಿ, ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭ ಕ್ಲಬ್ ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಕ್ಲಬ್ ಸದಸ್ಯರು ಗವರ್ನರ್‌ರವರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿರುವುದು ಶ್ಲಾಘನೀಯ. ಕ್ಲಬ್ ಅಸೆಂಬ್ಲಿಯಲ್ಲಿ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಸ್ವರ್ಣದ ಕಾರ್ಯಕ್ರಮಗಳನ್ನು ಪ್ರಶಂಸಿಸುತ್ತ ಮುಂದಿನ ದಿನಗಳಲ್ಲಿಯೂ ಇದು ಮುಂದುವರೆಯಲಿ ಎಂದು ಗವರ್ನರ್‌ರವರು ಕ್ಲಬ್ ಸದಸ್ಯರಿಗೆ ಕಿವಿ ಮಾತು ಹೇಳಿರುವುದು ಸಮಾಜಮುಖಿ ಕಾರ್ಯಗಳು ಮುಂದುವರೆಯಲಿ ಎಂದರು.


ರೋಟರಿ ಸೇರ್ಪಡೆ ಬಯಸದೇ ಬಂದ ಭಾಗ್ಯ-ವೆಂಕಟ್ರಮಣ ಗೌಡ:
ಅಧ್ಯಕ್ಷತೆ ವಹಿಸಿದ ರೋಟರಿ ಸ್ವರ್ಣದ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ತಾನು ರೋಟರಿ ಸಂಸ್ಥೆಗೆ ಸೇರ್ಪಡೆಗೊಂಡಿರುವುದು ಮತ್ತು ಅಧ್ಯಕ್ಷನಾಗಿರುವುದು ನನಗೆ ಬಯಸದೆ ಬಂದ ಭಾಗ್ಯವಾಗಿದೆ. ರೋಟರಿ ಮೂಲಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು ನನಗೆ ಹೆಮ್ಮೆ ಎನಿಸುತ್ತಿದೆ. ನನಗೆ ಆಂಗ್ಲ ಭಾಷೆ ಎಂಬುದು ಹೆದರಿಕೆಯ ವಸ್ತುವಾಗಿದೆ. ಆದರೆ ಭಾಷೆ ಗೊತ್ತಿಲ್ಲದವರಲ್ಲೂ ವ್ಯಕ್ತಿತ್ವ ಇರುತ್ತದೆ. ಕ್ಲಬ್ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ನನಗೆ ಖುಶಿ ತಂದಿದೆ ಎಂದರು.

ಪ್ರೋತ್ಸಾಹಧನ:
ಯೂತ್ ಸರ್ವಿಸ್‌ನಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿರುವ ವಿದ್ಯಾರ್ಥಿಗಳಾದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಶ್ಮಿ ರಾವ್ ಟಿ, ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ಸಾತ್ವಿ ರೈಯವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ದೀಪಕ್ ಬೊಳ್ವಾರುರವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪರಿಚಯ ಮಾಡಿದರು.


ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ನಿವೃತ್ತ ಸರಕಾರಿ ಉದ್ಯೋಗಿ, ಬಿ.ಇ ಪದವೀಧರ, ಕಾವೇರಿಕಟ್ಟೆ ನಿವಾಸಿ ನಾರಾಯಣ ರೈಯವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಆನಂದ ಮೂವಪ್ಪರವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.

ಪಿಎಚ್‌ಎಫ್ ಪದವಿ:
ಇಂಟರ್‌ನ್ಯಾಷನಲ್ ಸರ್ವಿಸ್‌ನಡಿಯಲ್ಲಿ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಗೆ ದೇಣಿಗೆ ನೀಡಿ ಪಿಎಚ್‌ಎಫ್ ಪದವಿಗೆ ಭಾಜನರಾದ ಕ್ಲಬ್ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಹಾಗೂ ಕಾರ್ಯದರ್ಶಿ ಸುರೇಶ್ ಪಿ.ರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಪಿಎಚ್‌ಎಫ್ ಪದವಿಯ ಪ್ರಮಾಣಪತ್ರ ವಿತರಿಸಿದರು.


ಮ್ಯಾಗಝಿನ್ ಕೊಡುಗೆ:
ಕ್ಲಬ್ ಜಿಎಸ್‌ಆರ್ ಚಿದಾನಂದ ಬೈಲಾಡಿಯವರ ಕೊಡುಗೆಯಾಗಿ ಗ್ರಂಥಾಲಯಕ್ಕೆ ಸಂಬಂಧಪಟ್ಟ ಮ್ಯಾಗಝಿನ್‌ಗಳ ಸಂಗ್ರಹವನ್ನು ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಕ್ಲಬ್ ಸದಸ್ಯ ರಾಮಣ್ಣ ರೈಯವರಿಗೆ ಚಿದಾನಂದ ಬೈಲಾಡಿಯವರು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಶ್ರೀಮತಿ ಉಷಾ ಕಳುವಾಜೆ ಪ್ರಾರ್ಥಿಸಿದರು. ರೋಟರಿ ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಸ್ವಾಗತಿಸಿ, ಅತಿಥಿಗಳಿಗೆ ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ.ಎ.ಪಿ ಭಟ್‌ರವರ `ವೈದ್ಯರ ಚೌ ಚೌ ಬಾತ್’ ದ್ವಿತೀಯ ಕೃತಿಯನ್ನು ಸ್ಮರಣಿಕೆಯನ್ನಾಗಿ ನೀಡಿದರು. ಪೂರ್ವಾಧ್ಯಕ್ಷ ಮಹಾಬಲ ಗೌಡ ವಂದಿಸಿ, ಕ್ಲಬ್ ಕಾರ್ಯದರ್ಶಿ ವಾರ್ಷಿಕ ವರದಿ ಮಂಡಿಸಿದರು. ನಿರ್ಗಮನ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳರವರು ಜಿಲ್ಲಾ ಗವರ್ನರ್‌ರವರ ಪರಿಚಯ ಮಾಡಿದರು. ಸಾರ್ಜಂಟ್ ಎಟ್ ಆರ್ಮ್ಸ್ ಪ್ರವೀಣ್ ಕುಮಾರ್ ಸಾಂತ್ಯರವರು ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆಯವರಿಗೆ ಕೊರಳಪಟ್ಟಿಯನ್ನು ತೊಡಿಸುವ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು. ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು ಹಾಗೂ ಶಿಕ್ಷಕಿ ಆಶಾ ರೆಬೆಲ್ಲೋರವರು ಕಾರ್ಯಕ್ರಮ ನಿರೂಪಿಸಿದರು.

ದಾಖಲೆಗಳು `ಕನ್ನಡ’ದಲ್ಲಿರಲು ಮನವಿ…
ಅಂತರ್ರಾಷ್ಟ್ರೀಯ ಸಂಸ್ಥೆಯಾಗಿರುವ ರೋಟರಿಯ ದಾಖಲೆಗಳು ಆಂಗ್ಲ ಭಾಷೆಯಲ್ಲಿದ್ದು, ಗ್ರಾಮೀಣ ಪ್ರದೇಶದಿಂದ ಬೆಳೆದು ಬಂದ ನನಗೆ ಹಾಗೂ ಇತರರಿಗೆ ರೋಟರಿ ಸಂಸ್ಥೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆಯಾಯ ಭಾಷೆಗೆ ಅನುಗುಣವಾಗಿ ದಾಖಲೆಗಳನ್ನು ಸಿದ್ಧಪಡಿಸಲು ಅವಕಾಶವಿದ್ದರೆ ರೋಟರಿ ಸಂಸ್ಥೆಯು ಮತ್ತಷ್ಟು ಗಟ್ಟಿಯಾಗುತ್ತದೆ. ಈ ಬಗ್ಗೆ ಎಲ್ಲಾ ದಾಖಲೆಗಳು ಕನ್ನಡದಲ್ಲಿಯೇ ಇರುವಂತೆ ಕ್ಲಬ್ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರು ಗವರ್ನರ್ ಪ್ರಕಾಶ್ ಕಾರಂತ್‌ರವರಿಗೆ, ಜಿಲ್ಲಾ ಕಾರ್ಯದರ್ಶಿಗಳಿಗೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ಪದಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

`ಸ್ವರ್ಣ’ ಸನ್ಮಾನ..
ಯಕ್ಷಗಾನದಲ್ಲಿ ದಕ್ಷನಾಗಿ, ಶೂರ್ಪಣಕಿಯಾಗಿ, ಶತ್ರುಘ್ನನಾಗಿ, ಮಹಿಷನಾಗಿ, ವ್ಯಾಘ್ರವಾಗಿ, ದೇವಿಯಾಗಿ, ಶಾಂಭವಿಯಾಗಿ, ಕಾಂತಬಾರೆ, ಬೂದಬಾರೆಯಾಗಿ, ದೇವೇಂದ್ರನಾಗಿ, ಧೂಮ್ರಾಕ್ಷನಾಗಿ ಹೀಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯ, ಪ್ರಸ್ತುತ ಯಕ್ಷನಂದನದಲ್ಲಿ ಸಹ ತರಬೇತುದಾರರಾಗಿ ಹಾಗೂ ಯಕ್ಷ ಶಿಕ್ಷಕಿಯಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಲ್ನಾಡು ನಿವಾಸಿ ವಿಸ್ಮಿತ್‌ರವರ ಪತ್ನಿ ಶೃತಿ ವಿಸ್ಮಿತ್‌ರವರನ್ನು ವೊಕೇಶನಲ್ ಸರ್ವಿಸ್‌ನಡಿಯಲ್ಲಿ `ರೋಟರಿ ಸ್ವರ್ಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅಭಿನಂದನೆ..
ದಿ.ಕಳುವಾಜೆ ಸೋಮಪ್ಪ ಗೌಡ ಹಾಗೂ ದಿ.ಶ್ರೀಮತಿ ಬಾಲಕ್ಕ ಇವರ ಸ್ಮರಣಾರ್ಥ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ತನ್ನ ಸ್ವಂತ ಜಾಗದಲ್ಲಿ ಸುಮಾರು ರೂ.1 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣಗೊಂಡು ಸ್ವರ್ಣ ಕ್ಲಬ್ ಮುಖಾಂತರ ಲೋಕಾರ್ಪಣೆಗೊಳ್ಳಲು ಕಾರಣಕರ್ತರಾದ ಕ್ಲಬ್ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರ ಅಳಿಯ ಎ.ವಿ ನಾರಾಯಣ ಹಾಗೂ ಪುತ್ರಿ ಪ್ರತಿಭಾ ದೇವಿರವರನ್ನು ಮತ್ತು ಸಂಜೆಯ ಸಮಾರಂಭದ ಪ್ರಾಯೋಜಕತ್ವ ವಹಿಸಿದ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರ ಪುತ್ರ ಜಯಪ್ರಕಾಶ್ ಕಳುವಾಜೆ ಹಾಗೂ ಸೊಸೆ ಉಷಾ ಕಳುವಾಜೆರವರನ್ನು ಅಭಿನಂದಿಸಲಾಯಿತು.

ಕ್ಲಬ್ ಕಾರ್ಯಕ್ರಮಗಳ ವಿವರ..
ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರನ್ನು ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತಿಸಿ, ಬಳಿಕ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆಯಲಾಯಿತು. ಕ್ಲಬ್ ಸದಸ್ಯ ರೊಯ್‌ಸ್ಟನ್ ಡಾಯಸ್‌ರವರ ಮನೆಯಲ್ಲಿ ಬೆಳಗ್ಗಿನ ಲಘು ಉಪಹಾರ ಸೇವಿಸಿದ ಬಳಿಕ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಸ್ವರ್ಣ ಕ್ಲಬ್ ವತಿಯಿಂದ ನಡೆಸಲ್ಪಡುವ ಸಮಾಜಮುಖಿ ಕಾರ್ಯಕ್ರಮಗಳಾದ ಪುತ್ತೂರು ಬ್ರಹ್ಮನಗರ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ಶುದ್ಧ ಕುಡಿಯುವ ನೀರಿನ ಘಟಕದ ಹಸ್ತಾಂತರ ಹಾಗೂ ಕು|ಯಶೋಧ ಇವರ ಮನೆಗೆ ಭೇಟಿ ನೀಡಿ ಮನೆಗೆ ನೀಡಿದ ಅನುದಾನದ ವೀಕ್ಷಣೆ, ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ನಿರ್ಮಾಣಗೊಂಡ ನೂತನ ಸಾರ್ವಜನಿಕ ಬಸ್ ತಂಗುದಾಣದ ಉದ್ಘಾಟನೆ ಹಾಗೂ ಹಸ್ತಾಂತರ, ನರಿಮೊಗರು ಮತ್ತು ಮುಕ್ವೆ ಅಂಗನವಾಡಿಗಳ ಮಕ್ಕಳಿಗೆ ಚಪ್ಪಲಿ ವಿತರಣೆ, ಕೈಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡಿಕೆ ತೋಟದ ವೀಕ್ಷಣೆ, ಪಡ್ನೂರು ಔಷಧಿ ವನಕ್ಕೆ ಭೇಟಿ, ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳೊಂದಿಗೆ ಮಧ್ಯಾಹ್ನದ ಭೋಜನ ಹಾಗೂ ಸಹಾಯಧನ ವಿತರಣೆಗೈಯುವ ಮೂಲಕ ಪಾಲ್ಗೊಂಡರು.

LEAVE A REPLY

Please enter your comment!
Please enter your name here