ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ. ಪ್ರಜಾಪ್ರಭುತ್ವದ  (ಜನರ) ಜೀವ ಮಂತ್ರವಾಗಲಿ. ಲಂಚ, ಭ್ರಷ್ಟಾಚಾರ ಮುಕ್ತಕ್ಕೆ ಕಾರಣವಾಗಲಿ.

0

ವೈದ್ಯ ವೃತ್ತಿ ಬಿಟ್ಟು ಪತ್ರಿಕೋದ್ಯಮಕ್ಕೆ ಕಾಲಿರಿಸಲು ಲಂಚ, ಭ್ರಷ್ಟಾಚಾರ ವಿರುದ್ಧದ ಹೋರಾಟವೇ ಮುಖ್ಯ ಕಾರಣವಾಯಿತು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. 1985ರಲ್ಲಿ ಬಳಕೆದಾರರ ವೇದಿಕೆಯಿಂದ ಸುಳ್ಯದ ಅತೀ ದೊಡ್ಡ ಭ್ರಷ್ಟಾಚಾರಿ ಯಾರು ಎಂದು ಚುನಾವಣೆ ನಡೆದಿತ್ತು. ಕಾಂಬ್ಲೆ ಎಂಬ ಸಬ್ ಇನ್ಸ್‌ಪೆಕ್ಟರನ್ನು ಜನತೆ ಅತೀ ದೊಡ್ಡ ಭ್ರಷ್ಟಾಚಾರಿ ಎಂದು ಗುರುತಿಸಿದ್ದರು. ಅದರಿಂದ ಆದ ತೊಂದರೆಗಳನ್ನು ಎದುರಿಸಲು ಸಂಭಾವ್ಯ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗ್ಡೆ, ವೀರಪ್ಪ ಮೊಯ್ಲಿ, ಬಂಗಾರಪ್ಪರ ವಿರುದ್ಧ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅದರ ಪರಿಣಾಮವಾಗಿ ಸಮಸ್ಯೆಗಳಿಂದ ಹೊರಬಂದಿದ್ದೆ. ಅದರ ನಂತರ ಜನರಿಗೆ ಮಾಹಿತಿಯೇ ಬಹಳ ಮುಖ್ಯ ಎಂಬ ಕಾರಣಕ್ಕೆ ಪ್ರಾರಂಭಿಸಿದ ಮಾಹಿತಿ ಆಧಾರಿತ ಸಮುದಾಯ ಪತ್ರಿಕೆಯೇ ಸುದ್ದಿ ಬಿಡುಗಡೆ

ಅಂದು ಭ್ರಷ್ಟಾಚಾರಿ ಎಂದು ಗುರುತಿಸಿದ್ದರೆ ಇಂದು ಲಂಚ ರಹಿತ ಉತ್ತಮ ಸೇವೆ ನೀಡುವವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಭ್ರಷ್ಟಾಚಾರಿಗಳಿಗೆ ಬಹಿಷ್ಕಾರ ಮಾಡುವ ಆಂದೋಲನವನ್ನು ಜನರ ಮುಂದಿಟ್ಟಿದ್ದೇವೆ. ಈ ವರ್ಷದ ಜನವರಿಯಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಮೂಲಕ ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನ ಸೇವೆ ಮತ್ತು ದೇಶ ಸೇವೆ. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ. ಲಂಚ, ಭ್ರಷ್ಟಾಚಾರ ಅಂದರೆ ದರೋಡೆ, ದೇಶ ದ್ರೋಹ. ಲಂಚ ಮುಕ್ತ ಊರು ತಾಲೂಕು, ಜಿಲ್ಲೆ, ರಾಜ್ಯ ನಮ್ಮದಾಗಲಿ ಎಂಬ ಘೋಷಣೆಯ ಫಲಕವನ್ನು ಬಿಡುಗಡೆಗೊಳಿಸಿದ್ದೇವೆ. ಶಾಲಾ ಮಕ್ಕಳು, ಸಾರ್ವಜನಿಕರು, ಸಂಘ ಸಂಸ್ಥೆಯವರು, ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ಸಂಸದರು, ಶಾಸಕರು, ಡಾ| ವೀರೆಂದ್ರ ಹೆಗ್ಡೆ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಮೊದಲಾದ ಪ್ರಮುಖರು ಫಲಕವನ್ನು ಹಿಡಿದು ಅದಕ್ಕೆ ಬೆಂಬಲವನ್ನು ಘೋಷಿಸಿದ್ದಾರೆ. ಹಲವಾರು ಪಂಚಾಯತ್‌ನವರು ನಿರ್ಣಯ ಮಾಡಿದ್ದಾರೆ.

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಲಂಚ ರಹಿತ ಉತ್ತಮ ಸೇವೆ ನೀಡುವ ನೂರಕ್ಕೂ ಮಿಕ್ಕಿ ಅಧಿಕಾರಿಗಳನ್ನು ಜನರು ಗುರುತಿಸಿದ್ದಾರೆ. ಸಾರ್ವಜನಿಕವಾಗಿ ಸನ್ಮಾನ ಮಾಡಿದ್ದಾರೆ. ಇದು ಲಂಚಕೋರ ಅಧಿಕಾರಿಗಳ ಮನ ಪರಿವರ್ತನೆಗೆ ಕಾರಣವಾಗುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಜನರು ಬ್ರೋಕರ್‌ಗಳನ್ನು ಅವಲಂಬಿಸದೆ ಅಧಿಕಾರಿಗಳೊಂದಿಗೆ ನೇರವಾಗಿ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಪ್ರಶ್ನಿಸಲಾರಂಭಿಸಿದ್ದಾರೆ. ಇದು ಲಂಚ, ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಯನ್ನು ಉಂಟು ಮಾಡುತ್ತಿದೆ. ಅದು ಈಗ ಜಿಲ್ಲೆ, ರಾಜ್ಯಕ್ಕೂ ಹರಡಿ ಅಲ್ಲಿ ಸದ್ದು ಮಾಡುತ್ತಿದೆ. ಪರ್ಸಂಟೇಜ್ ಸರಕಾರಗಳು ಎಂಬ ಸ್ಪರ್ಧೆ ಏರ್ಪಟ್ಟಿದ್ದು, ಚುನಾವಣೆಯ ವಿಷಯವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಜನಾಂದೋಲನ ನಮ್ಮೂರು, ಜಿಲ್ಲೆ, ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಜನರ ಜೀವನದ ಅಂಧಕಾರವನ್ನು ನಿವಾರಿಸಿ, ಅವರಿಗೆ ಉತ್ತಮ ಸೇವೆ ದೊರಕುವಂತೆ ಮಾಡಲಿ. ಜನರಿಗೆ ಆ ಶಕ್ತಿಯನ್ನು ಈ ದೀಪಾವಳಿ ನೀಡಲೆಂದು ಹಾರೈಸುತ್ತೇನೆ.

ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಕೃಷಿಕರಿಗೆ ಮನೆ ಬಾಗಿಲಿಗೆ ಸೇವೆ,
ಕೃಷಿಕೋದ್ಯಮ, ಕೃಷಿ ಪ್ರವಾಸೋದ್ಯಮ, ಕೃಷಿಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಿ

ಇದೇ ಅಗಸ್ಟ್ 15 ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಕೃಷಿಕರಿಗೆ ಪೂರ್ಣ ಸ್ವಾತಂತ್ರ್ಯ ಎಂಬ ಘೋಷಣೆಯನ್ನು ಸುದ್ದಿ ಕೃಷಿ ಸೇವಾ ಕೇಂದ್ರ ಮಾಡಿದೆ. ಕೃಷಿಕರು ನಮ್ಮ ಊರಿನ, ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದ್ದರೂ ಅವರು ಅತ್ಯಂತ ಶೋಷಣೆಗೆ ಒಳಗಾಗುವವರಾಗಿದ್ದಾರೆ. ಅವರು ಎಲ್ಲಾ ಕೆಲಸಗಳಿಗೂ ಪರಾವಲಂಬಿಗಳಾಗಿದ್ದು, ಹೆಚ್ಚು ಕಷ್ಟ, ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ ಕೃಷಿಕರ ಮನೆ ಬಾಗಿಲಿಗೆ ಸೇವೆ, ತರಬೇತಿ, ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ, ಇಲಾಖಾ ಸೌಲಭ್ಯಗಳ ಮಾಹಿತಿ, ಮಾರಾಟ, ಖರೀದಿಯ ವ್ಯವಸ್ಥೆ, ಅವರಿಗೆ ಯಾವುದೇ ವಿಷಯದಲ್ಲಿ ಇಲಾಖೆಗಳಲ್ಲಿ ಅನ್ಯಾಯವಾಗದಂತೆ, ನ್ಯಾಯ ದೊರಕುವಂತೆ ಮಾಡುವ ಕೃಷಿ ಸೇವಾ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ಪುತ್ತೂರು ತಾಲೂಕಿನಲ್ಲಿ ಈಗಾಗಲೇ ಕಾರ್ಯಾಚರಣೆ ಮಾಡುತ್ತಿದ್ದು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿಗೆ ವಿಸ್ತರಿಸಲಿದೆ. ಈ ಕೇಂದ್ರದಲ್ಲಿ ಕೃಷಿಕರಿಗೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಉಚಿತವಾಗಿ ನೀಡಲಾಗುವುದು. ಬೀಜ, ಗಿಡ, ನರ್ಸರಿಯಿಂದ ಹಿಡಿದು ಅದಕ್ಕೆ ಬೇಕಾದ ಕೃಷಿಯ ಮಾಹಿತಿ, ಗೊಬ್ಬರ, ಕೀಟನಾಶಕ, ಸಲಕರಣೆಗಳು, ಮಾರಾಟದ ಮತ್ತು ಖರೀದಿಯ ಪೂರ್ಣ ಮಾಹಿತಿ ಒದಗಿಸಲಾಗುವುದು. ಕೃಷಿ ತಜ್ಞರ ಮೂಲಕ ತರಬೇತಿಯ ವ್ಯವಸ್ಥೆ ಏರ್ಪಡಿಸಲಾಗುವುದು. ಈ ಸಂಬಂಧ ಸರಕಾರದಿಂದ ಮತ್ತು ಇಲಾಖೆಗಳಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೃಷಿಕರಿಗೆ ತಲುಪಿಸಲು ಪ್ರಯತ್ನಿಸಲಾಗುವುದು. ಈಗಿನ ಆಧುನಿಕ ತಂತ್ರಜ್ಞಾನದ ಮೂಲಕ ಮನೆಬಾಗಿಲಿಗೆ ಸೇವೆ ಒದಗಿಸುವ ಪ್ರಯತ್ನ ನಡೆಸಲಾಗುವುದು.

ಕೃಷಿಯನ್ನು ಉದ್ಯಮವನ್ನಾಗಿ ಮಾಡಲು ಬೇಕಾದ ಮಾಹಿತಿ ಹಾಗೂ ತಂತ್ರಜ್ಞಾನವನ್ನು, ಅದಕ್ಕೆ ಬೇಕಾದ ಮಾರುಕಟ್ಟೆಯನ್ನು ಒದಗಿಸಲು ಸುದ್ದಿ ಕೃಷಿ ಕೇಂದ್ರ ಪ್ರಯತ್ನಿಸಲಿದೆ. ಕೃಷಿಕರ ಸ್ಥಳಗಳಿಗೆ, ಕೃಷಿ ಮೇಳಗಳಿಗೆ ಪ್ರವಾಸವನ್ನು ಏರ್ಪಡಿಸುವ ಮೂಲಕ ವ್ಯವಹಾರದ ಮತ್ತು ಕೃಷಿ ಜ್ಞಾನದ ಅಭಿವೃದ್ಧಿಗೆ ಕಾರಣವಾಗಲಿದ್ದೇವೆ. ಈ ಯೋಜನೆಯ ಅಂಗವಾಗಿ ಕೃಷಿಕರ ತೋಟಗಳಿಗೆ ಭೇಟಿಗೆ, ಸಂವಾದಕ್ಕೆ ವ್ಯವಸ್ಥೆ ಏರ್ಪಡಿಸಲಿದ್ದೇವೆ. ಕೃಷಿಕೋಧ್ಯಮ ಮತ್ತು ಕೃಷಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸುವ ಮೂಲಕ ಕೃಷಿಕರು ಆಧುನಿಕ ಜಗತ್ತಿಗೆ, ಮಾರುಕಟ್ಟೆಗೆ, ವ್ಯವಹಾರಕ್ಕೆ ಹೊಂದಿಕೊಳ್ಳುವಂತೆ ಮಾಡಲಿದ್ದೇವೆ.ಗ್ರಾಹಕ ಮತ್ತು ಕೃಷಿಕ ಮಧ್ಯೆ ನೇರ ಸಂಪರ್ಕ ಒದಗಿಸುವುದು ನಮ್ಮ ಉದ್ಧೇಶವಾಗಿದೆ. ಒಟ್ಟಿನಲ್ಲಿ ಕೃಷಿಕರ ಸಮಯ, ಶ್ರಮ, ಖರ್ಚು ಉಳಿತಾಯವಾಗಿ ಅವರ ಬೆಳೆಗಳಿಗೆ ಉತ್ತಮ ದರ ದೊರಕುವಂತೆ ಹಾಗೂ ಅವರ ಖರೀದಿಯಲ್ಲಿ ಅವರಿಗೆ ಉತ್ತಮ ದರ ದೊರಕುವಂತೆ ಮಾಡಿ ಕೃಷಿಕರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು, ಕೃಷಿಕರು ಸ್ವಾವಲಂಬಿಗಳಾಗಿ ತಲೆ ಎತ್ತಿ ಬದುಕುವಂತೆ ಮಾಡಿ, ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯದ ಅನುಭವ ದೊರಕುವಂತೆ ಮಾಡವುದು ಸುದ್ದಿ ಕೃಷಿ ಸೇವಾ ಕೇಂದ್ರದ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here