ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರನ್ನು ಅವಮಾನಿಸಿದ ಆರೋಪ; ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

0

ಶ್ಯಾಮ್ ಸುದರ್ಶನ್ ಪತ್ತೆಗೆ ಸಿಸಿಬಿ, ಸೆನ್, ಮಹಿಳಾ ಪೊಲೀಸ್ ತಂಡದಿಂದ ಶೋಧ

ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸುತ್ತಿರುವ ಶ್ಯಾಮ್ ಸುದರ್ಶನ್

ಪುತ್ತೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಆಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕಿ ಪ್ರತಿಭಾ ಕುಳಾಯಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರಿನ ಕಹಳೆ ನ್ಯೂಸ್ ಸಂಸ್ಥೆಯ ಸಂಪಾದಕ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕುಳಾಯಿ ಫೌಂಡೇಶನ್ ಟ್ರಸ್ಟ್ ಮುಖ್ಯಸ್ಥೆಯೂ ಆಗಿರುವ ಪ್ರತಿಭಾ ಕುಳಾಯಿ ನೀಡಿದ ದೂರಿನಂತೆ ಐಪಿಸಿ 354, 509, ಐ.ಟಿ. ಕಾಯ್ದೆ 67 ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಡಿ ಶ್ಯಾಮ್ ಸುದರ್ಶನ್ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳಲಾಗಿದ್ದು ತನಿಖೆ ಆರಂಭಿಸಲಾಗಿದೆ.

ಸುರತ್ಕಲ್ ನಲ್ಲಿರುವ ಅಕ್ರಮ ಟೋಲ್ ಗೇಟ್ ತೆರವು ಮಾಡುವಂತೆ ಆಗ್ರಹಿಸಿ ಸಮಾನ ಮನಸ್ಕರ ನೇತೃತ್ವದಲ್ಲಿ ಅ.18ರಂದು ನಡೆದಿದ್ದ ಪ್ರತಿಭಟನೆಯ ವೇಳೆ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿ ಪ್ರತಿಭಾ ಕುಳಾಯಿ ಅವರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ್ದ ಭಾವಚಿತ್ರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಶ್ಯಾಮ್ ಸುದರ್ಶನ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಪ್ರತಿಭಾ ಕುಳಾಯಿ ಅವರು ಪೊಲೀಸ್ ದೂರು ನೀಡಿದ ಬಳಿಕ ಶ್ಯಾಮ್ ಸುದರ್ಶನ್ ಅವರು ಸ್ಪಷ್ಟನೆ ನೀಡಿರುವ ವೀಡಿಯೋ ವೈರಲ್ ಆಗಿದ್ದು ಕಮೆಂಟ್ ಹಾಕಿರುವುದನ್ನು ಅವರು ಇದರಲ್ಲಿ ಒಪ್ಪಿಕೊಂಡಿದ್ದು ಇದು ಅವರ ವಿರುದ್ಧ ಪ್ರಕರಣ ದಾಖಲಾಗಲು ಸಾಕ್ಷಿಯಾದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

ತನ್ನ ವಿರುದ್ಧ ಕೇಸು ದಾಖಲಾಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಅವರು ತಲೆ ಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಪೊಲೀಸರ ಮೂರು ತಂಡ ರಚಿಸಿದ್ದಾರೆ. ಸಿಸಿಬಿ, ಸೆನ್ ಮತ್ತು ಮಹಿಳಾ ಪೊಲೀಸ್ ಘಟಕದ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಶ್ಯಾಮ್ ಸುದರ್ಶನ್ ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಪೈಕಿ ಒಂದು ತಂಡ ಅ.22ರಂದು ಸಂಜೆ ವೇಳೆ ಪುತ್ತೂರು ಪತ್ರಿಕಾ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೊಂದು ತಂಡ ರಾತ್ರಿ ಶ್ಯಾಮ್ ಸುದರ್ಶನ್ ಅವರ ಇಳಂತಿಲದಲ್ಲಿರುವ ಮನೆಗೆ ಭೇಟಿ ನೀಡಿ ಶೋಧ ಮಾಡಿದೆ. ಇನ್ನೊಂದು ತಂಡ ಅ.23ರಂದು ಮಧ್ಯಾಹ್ನ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಆಪ್ತರೋರ್ವರ ಮನೆಗೆ ಭೇಟಿ ನೀಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಎಲ್ಲಿಯೂ ಶ್ಯಾಮ್ ಸುದರ್ಶನ್ ಅವರು ಪತ್ತೆಯಾಗದೇ ಇರುವುದರಿಂದ ಅವರು ಕೇರಳ ಭಾಗಕ್ಕೆ ತೆರಳಿರಬೇಕು ಎಂಬ ಶಂಕೆಯ ಮೇರೆಗೆ ಪೊಲೀಸರ ತಂಡ ತನಿಖೆ ಮುಂದುವರಿಸಿದೆ. ಈ ಮಧ್ಯೆ ರಾತ್ರಿ ವೇಳೆ ಶ್ಯಾಮ್ ಸುದರ್ಶನ್ ಮಂಗಳೂರಿನಿಂದ ಉಪ್ಪಿನಂಗಡಿಗೆ ಕಾರಿನಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಮಾಣಿಯಲ್ಲಿ ನಾಕಾಬಂಧಿ ಏರ್ಪಡಿಸಿ ವಾಹನಗಳನ್ನು ತಪಾಸಣೆ ನಡೆಸಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕಿಯಾಗಿರುವ ಪ್ರತಿಭಾ ಕುಳಾಯಿಯವರ ಮಾನಹಾನಿ ಮಾಡಿರುವ ಶ್ಯಾಮ್ ಸುದರ್ಶನ್ ಅವರನ್ನು ಬಂಧಿಸಲೇಬೇಕು ಎಂದು ಹಲವು ಪ್ರಭಾವಿಗಳಿಂದ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ತಕ್ಷಣವೇ ಶ್ಯಾಮ್ ಸುದರ್ಶನ್ ಅವರನ್ನು ಬಂಧನ ಮಾಡುವಂತೆ ಸಿಸಿಬಿ, ಸೆನ್ ಮತ್ತು ಮಹಿಳಾ ಘಟಕದ ಇನ್ಸ್ಪೆಕ್ಟರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮೂರೂ ತಂಡ ಶ್ಯಾಮ್ ಸುದರ್ಶನ್ ಪತ್ತೆಗೆ ಶೋಧ ಮುಂದುವರಿಸಿದೆ. ಈ ಮಧ್ಯೆ ಶ್ಯಾಮ್ ಸುದರ್ಶನ್ ಭಟ್ ಅವರು ನಿರೀಕ್ಷಣಾ ಜಾಮೀನು ಪಡೆಯುವುದಕ್ಕಾಗಿ ವಕೀಲರನ್ನು ಸಂಪರ್ಕಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಭಾ ಕುಳಾಯಿ ಅವರನ್ನು ನಿಂದಿಸಿರುವ ಆರೋಪಿ ಶ್ಯಾಮಸುದರ್ಶನ್ ಹೊಸಮೂಲೆ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಭಟ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ, ಬೆಳ್ತಂಗಡಿ ಶಾಸಕ ವಸಂತ ಬಂಗೇರ ಸೇರಿದಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿ, ಪ್ರತಿಭಟನೆ ಎಚ್ಚರಿಕೆ ನೀಡಿದ್ದರು.

ಶ್ಯಾಮ್ ಸುದರ್ಶನ್ ಭಟ್ ಅವರ ಕಮೆಂಟ್ ಕುರಿತ ಆಕ್ರೋಶ ಮುಂದುವರಿದಿದೆ. ಬಿಲ್ಲವ ಸಮಾಜದವರ ಆಕ್ರೋಶಕ್ಕೂ ಇದು ಕಾರಣವಾಗಿದೆ ಎಂದು ವೈರಲ್ ಆಗಿದೆ.

ನಾನು ಬರೆದುದನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ

‘ಪ್ರತಿಭಾ ಕುಳಾಯಿಯವರು ಟೋಲ್‌ಗೇಟ್ ವಿವಾದಕ್ಕೆ ಸಂಬಂಧಿಸಿ ಅವರು ಓವರ್ ರಿಯಾಕ್ಟ್ ಮಾಡಿದ್ದರು. ಅದು ಇಡೀ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಾ ಇತ್ತು. ಆ ಕುರಿತು ಯಾರೋ ಹಾಕಿದ್ದ ಪೋಸ್ಟನ್ನು ಶೇರ್ ಮಾಡಿ ನಾನೂ ಒಂದು ಬರೆದೆ. ಅದನ್ನು ಅವರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಒಂದು ಹೆಣ್ಣು ಮಗುವಿಗೆ ಯಾವ ರೀತಿ ಗೌರವ ಕೊಡಬೇಕು ಯಾವ ರೀತಿ ನಡ್ಕೊಳ್ಬೇಕು ಎನ್ನುವ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಬಂದವನು ನಾನು. ಅವರು ಗ್ರಹಿಸಿರುವ ರೀತಿಯಲ್ಲಿ ನಾನು ಬರೆದಿಲ್ಲ ಎನ್ನುವ ಸ್ಪಷ್ಟತೆ ಕೂಡಾ ನನಗಿದೆ. ಅವರು ಅದನ್ನು ಗ್ರಹಿಸಿಕೊಂಡು ಏನೋ ಹೇಳಿಕೆಗಳನ್ನು ಕೊಟ್ಟರು. ನಂತರ ನಿರಂತರವಾಗಿ ನನ್ನ ಮೇಲೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರಮಣಗಳು ನಡೆಯುತ್ತಾ ಇದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ನಾನಂದುಕೊಳ್ಳುತ್ತೇನೆ. ನಾನ್ಯಾವುದೋ ಹಿಂದೂ ಪರವಾಗಿ ಗುರುತಿಸಿಕೊಂಡಿದ್ದೇನೆ ಎನ್ನುವ ಕಾರಣಕ್ಕಾಗಿ ಈ ರೀತಿಯ ಆಕ್ರಮಣಗಳು ಅತ್ಯಂತ ನೋವು ಮತ್ತು ಆಘಾತಕಾರಿಯಾಗಿದೆ. ನನಗೂ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ನಾನು ಯಾವತ್ತೂ ನ್ಯಾಯದ ಪರ, ಧರ್ಮದ ಪರ ಮತ್ತು ಸತ್ಯದ ಪರ. ಯಾವುದೇ ಕಾರಣಕ್ಕೂ ನಾನು ಇದರಿಂದ ವಿಚಲಿತನಾಗುವುದಿಲ್ಲ ಎಂದು ಶ್ಯಾಮ್‌ಸುದರ್ಶನ್ ಸ್ಪಷ್ಟನೆ ನೀಡಿರುವ ವೀಡಿಯೋ ಕೂಡಾ ವೈರಲ್ ಆಗಿದೆ.

LEAVE A REPLY

Please enter your comment!
Please enter your name here