ಉಪ್ಪಿನಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿ ವಿಧಿ ವಿಭಾಗದ ಆಶಯದಂತೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ನೇತೃತ್ವದಲ್ಲಿ ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಅಂಬೇಡ್ಕರ್ ಕಾಲನಿ ಹಾಗೂ ನಟ್ಟಿಬೈಲ್‌ನ ಶ್ರೀ ನಗರದ ಸೇವಾಬಸ್ತಿ ಕಾಲನಿಗಳಲ್ಲಿ ದೀಪಾವಳಿ ಹಬ್ಬದೊಂದಿಗೆ ‘ಸಾಮರಸ್ಯದ ಹೊಸ ಮನ್ವಂತರ’ ಎಂಬ ಧ್ಯೇಯ ವಾಕ್ಯದೊಂದಿಗೆ ‘ತುಡರ್’ ಕಾರ್ಯಕ್ರಮಕ್ಕೆ ಶ್ರೀ ದೇವಳದಲ್ಲಿ ದೀಪ ಪ್ರದಾನ ಮಾಡುವ ಮೂಲಕ ಆದಿತ್ಯವಾರದಂದು ಚಾಲನೆ ನೀಡಲಾಯಿತು.
ಶ್ರೀ ದೇವಾಲಯದಿಂದ ಬೆಳಗಿಸಲ್ಪಟ್ಟ ದೀಪವನ್ನು ಕಾಲನಿಯ ಮುಂದಾಳುಗಳಿಗೆ ಪ್ರದಾನಗೈದು ಮಾತನಾಡಿದ ಒಡಿಯೂರು ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದ ಮಯಿಯವರು, ವ್ಯಕ್ತಿ ವ್ಯಕ್ತಿಯಲ್ಲೂ, ಪ್ರಾಣಿ ಪಕ್ಷಿಗಳಲ್ಲಿಯೂ ಸಾಲದೆಂಬಂತೆ ಅಣು ಅಣುವಿನಲ್ಲೂ ದೇವರನ್ನು ಕಂಡ ಹಿಂದೂ ಸಮಾಜಕ್ಕೆ ಅದ್ಯಾವ ವಿಷ ಗಳಿಗೆಯಲ್ಲಿ ಅಶ್ಪೃಶ್ಯತೆ ಎಂಬ ಶಾಪ ತಟ್ಟಿತೋ ತಿಳಿಯದು. ತಪ್ಪನ್ನು ತಿದ್ದಿ, ಸಮಾಜದಲ್ಲಿ ಸಹೋದರತೆಯ ನಂಟನ್ನು ಬೆಸೆಯೋಣ. ಈ ದಿಶೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಯತ್ನಕ್ಕೆ ಎಲ್ಲರೂ ಬೆಂಬಲವನ್ನು ನೀಡಿ ಸಾಮರಸ್ಯದ ನವ್ಯ ಯುಗಕ್ಕೆ ಜೊತೆಯಾಗಿ ಸಾಗೋಣ ಎಂದರು.
ಈ ಸಂದರ್ಭದಲ್ಲಿ ಸತೀಶ್ಚಂದ್ರ, ರವೀಂದ್ರ ದಕ್ಷ, ಕರುಣಾಕರ ಸುವರ್ಣ, ಪ್ರೇಮಲತಾ ಕಾಂಚನ, ಹರಿಣಿ ಕೆ, ಸುಧಾಕರ ಶೆಟ್ಟಿ ಗಾಂಽಪಾರ್ಕ್, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ ಕೋಟೆ, ಹರಿರಾಮಚಂದ್ರ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಗಣೇಶ್ ಕುಲಾಲ್, ಜಯಂತ ಪೊರೋಳಿ, ಕೆ. ಜಗದೀಶ್ ಶೆಟ್ಟಿ, ರಾಮಚಂದ್ರ ಕೋಡಿಂಬಾಡಿ, ಧನಂಜಯ, ಕಿಶೋರ್ ಕುಮಾರ್ ಜೋಗಿ, ರಾಜು ಅಲಗುರಿ ಮಜಲು, ಚಂದ್ರಾವತಿ, ವಿನಯಾ ಆರ್ ರೈ, ಕೃಷ್ಣಪ್ಪ ಪೂಜಾರಿ, ನವೀನಾ ಶೆಟ್ಟಿ, ಹರೀಶ್ ಭಂಡಾರಿ, ಕೃಷ್ಣಪ್ರಸಾದ್, ಗಂಗಾಧರ ಟೈಲರ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಅಂಗವಾಗಿ ಕಜೆಕ್ಕಾರ್ ಕಾಲನಿಯ ಬಂಧುಗಳಿಂದ ಹುಲಿ ನರ್ತನ ಕಾರ್ಯಕ್ರಮವು ವಿಶೇಷವಾಗಿ ಗಮನ ಸೆಳೆಯಿತು.