ಉಪ್ಪಿನಂಗಡಿ: 2021ರ ಡಿಸೆಂಬರ್ 6 ರಂದು ಉಪ್ಪಿನಂಗಡಿಯ ಮೀನು ಮಾರಾಟ ಮಳಿಗೆಗೆ ದಾಳಿ ನಡೆಸಿ ಮೂವರು ಹಿಂದೂ ತರುಣರ ಹತ್ಯಾ ಯತ್ನ ಪ್ರಕರಣದ ಹಾಗೂ ಸದ್ರಿ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಕ್ಕೆ ಡಿ. 14 ರಂದು ದಿನವಿಡೀ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ರಾತ್ರಿ ವೇಳೆ ಠಾಣೆಗೆ ದಾಳಿ ನಡೆಸಿದ ಪ್ರಕರಣದ ಹಿಂದಿನ ಶಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಇಡೀ ಪ್ರಕರಣವನ್ನು ಎನ್‌ಐಎ ತನಿಖಾ ವ್ಯಾಪ್ತಿಗೆ ತರಲು ಸರಕಾರ ಮುಂದಾಗಬೇಕೆಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಶ್ರೀ ಮಹಾಕಾಳಿ ದೇವಾಲಯಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ದೇಶ ದ್ರೋಹಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಸರಕಾರ ಶೂನ್ಯ ಸಂವೇದನೆಯನ್ನು ಪ್ರದರ್ಶಿಸಬೇಕೆಂದು ತಾನು ಆಶಿಸುವುದಾಗಿ ತಿಳಿಸಿದರು.
ಮುತಾಲಿಕ್‌ರವರಿಗೆ ಶ್ರೀ ದೇವಳದ ವತಿಯಿಂದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಂತ ಪೊರೋಳಿ ಹಾಗೂ ಹರಿರಾಮಚಂದ್ರ ಶಾಲು ಹಾಕಿ ಗೌರವಿಸಿದರು. ಮುತಾಲಿಕ್‌ರವರೊಂದಿಗೆ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸಂದೀಪ್ ಕುಪ್ಪೆಟ್ಟಿ, ಚಿದಾನಂದ ಪಂಚೇರು, ಅನಿಲ್ ಬಂಡಾಡಿ, ನವೀನ್ ಬಂಡಾಡಿ, ಸುಜೀತ್ ಬೊಳ್ಳಾವು, ಧನ್ಯರಾಜ್ ಬೊಳ್ಳಾರ್, ಗಣೇಶ್ ಬೊಳ್ಳಾರ್, ಧನುಷ್ ಪಿಲಿಗೂಡು, ರಾಜೇಶ್ ಕೊಡಂಗೆ, ಮುಕುಂದ, ಸುಧಾಕರ ಗಾಂಧಿಪಾರ್ಕ್, ರಂಜಿತ್ ಅಡೆಕ್ಕಲ್, ನಿತಿನ್ ಇಳಂತಿಲ, ಪ್ರಮುಖರಾದ ಸುಧಾಕರ ಗಾಂಧಿಪಾರ್ಕ್, ನವೀನ್ ರೈ, ಕೃಷ್ಣಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.