ಉಪ್ಪಿನಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿ ವಿಧಿ ವಿಭಾಗದ ಆಶಯದಂತೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ನೇತೃತ್ವದಲ್ಲಿ ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್‌ನ ಡಾ. ಬಿ.ಆರ್. ಅಂಬೇಡ್ಕರ್ ಕಾಲನಿಯಲ್ಲಿ ದೀಪಾವಳಿ ಹಬ್ಬದೊಂದಿಗೆ ಸಾಮರಸ್ಯದ ಹೊಸ ಮನ್ವಂತರ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದ ಇತರ ಬಂಧುಗಳ ಭಾಗವಹಿಸುವಿಕೆಯೊಂದಿಗೆ ‘ತುಡರ್’ ಕಾರ್ಯಕ್ರಮ ಭಾನುವಾರ ರಾತ್ರಿ ನಡೆಯಿತು. ಒಡಿಯೂರು ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದ ಮಯಿಯವರು ಆಶೀರ್ವಚನ ನೀಡಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ದೇವರ ದೀಪದಿಂದ ಉರಿಸಿ ತಂದ ಜ್ಯೋತಿಯನ್ನು ಕಾಲನಿಯ ದೈವದ ಕಟ್ಟೆಯಲ್ಲಿಟ್ಟು ಪೂಜಿಸಲಾಯಿತು. ಬಳಿಕ ಕಾಲನಿಯ ಪ್ರತಿ ಮನೆಗಳಿಗೆ ಸಾದ್ವಿ ಶ್ರೀ ಮಾತಾನಂದಮಯಿಯವರು ಅದೇ ಜ್ಯೋತಿಯಿಂದ ದೀಪವನ್ನು ಉರಿಸಿ ನೀಡಿದರು. ಬಳಿಕ ಕಾಲನಿಯ ಕಮಲ ಲೋಕಯ್ಯ ದಂಪತಿಯ ಮನೆಯಲ್ಲಿ ಭಜನಾ ಕಾರ್ಯಕ್ರಮ, ಗೋ ಪೂಜೆ, ದೀಪಾವಳಿ ಸಂಭ್ರಮಾಚರಣೆ ನಡೆಯಿತು. ಬಳಿಕ ಕಾಲನಿಯ ಮಂದಿಯೇ ತಯಾರಿಸಿದ ಸಿಹಿ ಭೋಜನವನ್ನು ಸಕುಟಿಂಬಿಕರಂತೆ ಎಲ್ಲರೂ ಸವಿದರು.
ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಅಲ್ಲಿದ್ದ ಸಾದ್ವಿ ಶ್ರೀ ಮಾತಾನಂದಮಯಿಯವರು ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಹರಸಿ, ಆಶೀರ್ವಚನ ನೀಡಿ, ಅಶ್ಪೃಶ್ಯತೆಯನ್ನು ಆಚರಿಸಿದ ಕೆಲವರಿಂದಾಗಿ ದಿವ್ಯವೋ ಭವ್ಯವೋ ಆಗಿರುವ ಹಿಂದೂ ಧರ್ಮದ ಸಂಸ್ಕೃತಿಗೆ ಅನ್ಯಾಯವೆಸಗಲಾಗಿದೆ. ಪ್ರಕೃತಿ ಮತ್ತು ಅದರಿಂದ ಪ್ರಭಾವಿತವಾದ ಸಂಸ್ಕೃತಿಯ ನಡುವೆ ಸ್ವಾರ್ಥಿಗಳ ಕುತಂತ್ರದಿಂದಾಗಿ ಅಶ್ಪೃಶ್ಯತೆ ವಿಕೃತಿ ನುಸುಳಿ ಸಮಾಜವನ್ನು ನರಳಿಸಿವಂತಾಗಿದೆ. ಇದನ್ನು ಸರಿಪಡಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದರಲ್ಲದೆ, ಈ ದಿಶೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಯತ್ನ ಶ್ಲಾಘನೀಯವೆಂದರು.
ಶಾಂತಿನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ ಮಾತನಾಡಿ, ವೇದಗಳ ಕಾಲದಲ್ಲಿ ಇಲ್ಲದ ಈ ಅಶ್ಪೃಶ್ಯತೆ ಬಳಿಕದ ದಿನಗಳಲ್ಲಿ ವಿದ್ರೋಹಿ ಮಾನಸಿಕತೆಯ ಮಂದಿಯಿಂದ ಮೇಲು ಕೀಳೆಂಬ ಭಾವನೆಯನ್ನು ಬಿತ್ತಲಾಯಿತು. ಸ್ವಾರ್ಥ ಸಾಧಕರು ಅದನ್ನು ನೀರೆರೆದು ಸಲಹಿದ ಪರಿಣಾಮ ಅದು ವ್ಯಾಪಕವಾಯಿತು. ಸ್ವ ಹಿತಕ್ಕಾಗಿ ಒಂದು ಸಮುದಾಯವನ್ನು ದುರ್ವ್ಯಸನಗಳ ದಾಸರನ್ನಾಗಿಸಿದ ಕಾರಣ ಈ ಎಲ್ಲಾ ಅವಾಂತರಗಳು ಸೃಷ್ಟಿಯಾದವು. ಇದನ್ನು ತಮ್ಮ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ವಿದೇಶಿ ಶಕ್ತಿಗಳು ಮತಾಂತರದಂತಹ ಹೀನ ಕೃತ್ಯಗಳಿಗೆ ಮುಂದಾಗಿದ್ದಾರೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಸುನೀಲ್ ಅನಾವು, ಮಹೇಶ್ ಬಜತ್ತೂರು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಕೋಡಿಂಬಾಡಿ, ಆರೆಸ್ಸೆಸ್ಸ್‌ನ ಸಾಮರಸ್ಯ ಗತಿ ವಿಧಿ ವಿಭಾಗದ ರವೀಂದ್ರ ದಕ್ಷ, ಹರಿರಾಮಚಂದ್ರ, ಪ್ರಮುಖರಾದ ಸುಧಾಕರ ಶೆಟ್ಟಿ ಕೋಟೆ, ಜಯರಾಮ ಶೆಟ್ಟಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ವಿಶ್ವನಾಥ, ಶರತ್ ಕೋಟೆ, ಬಿಪಿನ್ ನೆಕ್ಕಿಲಾಡಿ, ಕೃಷ್ಣಪ್ರಸಾದ್, ಸುಜಯ್, ಗಣೇಶ್ ಕುಲಾಲ್, ನಿತೇಶ್ ಕುಮಾರ್ ನೆಕ್ಕಿಲಾಡಿ, ಗಂಗಾಧರ ಟೈಲರ್, ಭಾರತಿ, ಸುನಂದ, ಗೀತಾ, ಮೋಹಿನಿ, ರಾಜೇಶ, ಸತೀಶ, ರವಿ, ಶಂಕರ, ಸುಂದರ, ಶೀನ ನೆಡ್ಚಿಲು ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಶಾರದಾ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಆರೆಸ್ಸೆಸ್ಸ್‌ನ ಸಾಮರಸ್ಯ ಗತಿ ವಿಧಿ ವಿಭಾಗದ ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.