ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಆಶ್ರಯದಲ್ಲಿ ಅಂಶಿಕ ಸೂರ್ಯಗ್ರಹಣವನ್ನು ದೂರದರ್ಶಕದ ಮೂಲಕ ಅ.26 ರಂದು ವೀಕ್ಷಿಸಲಾಯಿತು.
ನಕ್ಷತ್ರ ವೀಕ್ಷಣೆ, ಖಗೋಳ ವಿಜ್ಞಾನ ಉಪನ್ಯಾಸ, ಕಾರ್ಯಾಗಾರ ಮೊದಲಾದ ಕಾರ್ಯಕ್ರಮಗಳ ಮೂಲಕ ಖಗೋಳ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಲು ಅಂಶಿಕ ಸೂರ್ಯಗ್ರಹಣ ವೀಕ್ಷಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು, ಚಂದ್ರನ ನೆರಳು ಭೂಮಿ ಮೇಲೆ ಬಿದ್ದಾಗ ಆ ಭಾಗದಲ್ಲಿರುವ ಜನರಿಗೆ ಸಂಪೂರ್ಣ ಅಥವಾ ಅಂಶಿಕ ಸೂರ್ಯಗ್ರಹಣ ಕಾಣಿಸುತ್ತದೆ. ಸೂರ್ಯಗ್ರಹಣದ ವೀಕ್ಷಣೆಗೆ ಸೌರ ಕನ್ನಡಕದ ಕೂಡ ವ್ಯವಸ್ಥೆ ಮಾಡಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ ಮತ್ತು ಹಲವು ವಿದ್ಯಾರ್ಥಿಗಳು ಸೂರ್ಯಗ್ರಹಣವನ್ನು ವೀಕ್ಷಿಸಿ ಸಂಭ್ರಮಿಸಿದರು. ಖಗೋಳ ವೀಕ್ಷಕರ ಸಂಘದ ಸಂಚಾಲಕರಾದ ಡಾ|ಎ.ಪಿ. ರಾಧಾಕೃಷ್ಣ, ವಿಪಿನ್ ಎನ್ ಕಾರ್ಯಕ್ರಮ ಸಂಘಟಿಸಿದರು. ನವೀನ್ ಡಿ’ಸೋಜ, ಹರ್ಷಲ್ ಡಿ’ಸೋಜ ಸಹಕರಿಸಿದರು.