ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮ: ಫಲಾನುಭವಿಗಳ ಸಮಾವೇಶ: 25 ಸಾವಿರ ಮಂದಿಗೆ ವಸ್ತ್ರ ವಿತರಣೆ

0

`ಧರ್ಮಾತ್ಮ’ ಕೃತಿ ಬಿಡುಗಡೆ-ಸ್ವಾಭಿಮಾನಿ ಬಡವರಿಗೆ ಸನ್ಮಾನ: ಗೂಡುದೀಪ ಸ್ಪರ್ಧೆ
ಸಾಂಸ್ಕೃತಿಕ ವೈವಿಧ್ಯ: ಹರಿದು ಬಂದ ಜನ ಸಾಗರ: 14 ಕೌಂಟರ್‌ಗಳಲ್ಲಿ ಸಹಭೋಜನ
ತುಂಬಿ ತುಳುಕಿದ ಕಿಲ್ಲೆ ಮೈದಾನ: ಪೊಲೀಸರಿಂದ ಸುಗಮ ಸಂಚಾರದ ವ್ಯವಸ್ಥೆ

* ಅಶೋಕ್ ರೈಯವರಿಗೆ ಭಗವಂತನ ಅನುಗ್ರಹ ಇದೆ-ಒಡಿಯೂರು ಶ್ರೀ
* ಇಂತಹ ಕಾರ್ಯಕ್ರಮ ಇದುವರೆಗೆ ನೋಡಿಲ್ಲ: ಡಿ.ವಿ. ಸದಾನಂದ ಗೌಡ
* ಬಡವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಅಶೋಕ್ ರೈ-ರಮಾನಾಥ ರೈ
* ಅಶೋಕ್ ರೈಯಂತವರು ಎಲ್ಲಾ ಮನೆಯಲ್ಲಿಯೂ ಹುಟ್ಟಿ ಬರಬೇಕು-ಶಕುಂತಳಾ ಶೆಟ್ಟಿ
* ಇತಿಹಾಸ ನಿರ್ಮಾಣ ಆಗಿದೆ-ಜಯಂತ ನಡುಬೈಲು
* ದೇಶಕ್ಕೆ ಮಾದರಿ ಕಾರ್ಯಕ್ರಮ-ಕೆ.ಆರ್.ಹುಸೈನ್ ದಾರಿಮಿ
* ಅದ್ಬುತ ಕಾರ್ಯಕ್ರಮವಾಗಿದೆ-ಲಾರೆನ್ಸ್ ಮಸ್ಕರೇನಸ್
* ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿ ಇಂತಹ ಸಭೆ-ಶಶಿಕುಮಾರ್ ರೈ

ಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈಯವರ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮ, ಟ್ರಸ್ಟ್ ಫಲಾನುಭವಿಗಳ ಸಮಾವೇಶ, ಸ್ವಾಭಿಮಾನಿ ಬಡವರಿಗೆ ಸನ್ಮಾನ, ಗೂಡುದೀಪ ಸ್ಪರ್ಧೆ, `ಧರ್ಮಾತ್ಮ’ ಸ್ಮರಣ ಸಂಚಿಕೆ ಬಿಡುಗಡೆ, ದೀಪಾವಳಿ ಹಬ್ಬದ ಪ್ರಯುಕ್ತ 25 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರ ವಿತರಣೆ, ಸಾಂಸ್ಕೃತಿಕ ವೈವಿಧ್ಯ ಮತ್ತು ಸಹಭೋಜನ ಕಾರ್ಯಕ್ರಮ ಅ.26ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅಚ್ಚುಕಟ್ಟಾಗಿ ನೆರವೇರಿತು. `ದಶ ಸಂಭ್ರಮ’ದಲ್ಲಿ ಸಾವಿರಾರು ಮಂದಿ ಭಾಗವಹಿಸುವುದರೊಂದಿಗೆ ಮೈದಾನ ಮತ್ತು ಆಸುಪಾಸಿನ ರಸ್ತೆಗಳು ತುಂಬಿ ತುಳುಕಿದ್ದರೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನೆರವೇರುವ ಮೂಲಕ ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿತು.


ಅಶೋಕ್ ರೈಯವರಿಗೆ ಭಗವಂತನ ಅನುಗ್ರಹ ಇದೆ-ಒಡಿಯೂರು ಶ್ರೀ:
ಕಿಲ್ಲೆ ಮೈದಾನದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿದ್ದ `ಕೀರ್ತಿಶೇಷ ಕೆ.ಪಿ. ಸಂಜೀವ ರೈ ವೇದಿಕೆ’ಯಲ್ಲಿ ಬೆಳಿಗ್ಗೆ ಅಶೋಕ್ ಕುಮಾರ್ ರೈಯವರ ತಾಯಿ ಗಿರಿಜಾ ಎಸ್.ರೈಯವರು ದೀಪ ಬೆಳಗಿಸಿ `ದಶ ಸಂಭ್ರಮ’ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ `ಗೀತ-ಸಾಹಿತ್ಯ-ಸಂಭ್ರಮ’ ನಡೆಯಿತು. ನಂತರ ನಡೆದ ಸರ್ವಧರ್ಮದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅಶೋಕ್ ರೈಯವರ ಟ್ರಸ್ಟ್ ದಶ ಸಂಭ್ರಮದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಇಲ್ಲಿ ಜಾತ್ರೆಯ ಸಂಭ್ರಮ ಕಾಣಬಹುದು. ಸಹಸ್ರಾರು ಜನರಿಗೆ ವಸ್ತ್ರದಾನ ಮಾಡುವುದಲ್ಲದೆ, ಜನರ ಸಂಕಷ್ಟಗಳಿಗೆ ಸ್ಪಂದನೆ ನೀಡುವ ಮೂಲಕ ಜನಪರವಾದ ಕಾರ್ಯ ಮಾಡುತ್ತಿರುವ ಅಶೋಕ್ ರೈಯವರಿಗೆ ಭಗವಂತನ ಅನುಗ್ರಹವಿದೆ ಎಂದರು. ರಾಜಕೀಯ ರಹಿತವಾಗಿ ಕಾರ್ಯ ನಡೆಸುತ್ತಿರುವ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಸ್ವಾಮೀಜಿಯವರು ಸಮಾಜದ ಕಟ್ಟ ಕಡೆಯವರನ್ನೂ ಸನ್ಮಾನಿಸಿರುವುದು ಆದರ್ಶ ಕಾರ್ಯಕ್ರಮವಾಗಿದೆ ಎಂದರು. ಸಂಪತ್ತನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ಅರಿತಿರುವ ಅಶೋಕ್ ರೈಯವರು ಲಾಭದ ಉದ್ದೇಶ ಇಲ್ಲದೆ ದಾನ ಮಾಡಿ ತ್ಯಾಗ ಪೂರ್ಣವಾದ ಸೇವೆ ನೀಡಿದ್ದಾರೆ. ಅಶೋಕ್ ರೈಯವರು ಯಾರನ್ನೂ ಅನುಕರಣೆ ಮಾಡಿಲ್ಲ. ಜನರ ಆವಶ್ಯಕತೆಗಳಿಗೆ ತಕ್ಕಂತೆ ಸ್ಪಂದನೆ ನೀಡುವ ಕಾರ್ಯ ಮಾಡಿದ್ದಾರೆ ಎಂದು ಒಡಿಯೂರು ಶ್ರೀ ಹೇಳಿದರು.

ಇಂತಹ ಕಾರ್ಯಕ್ರಮ ನೋಡಿಲ್ಲ: ಡಿ.ವಿ. ಸದಾನಂದ ಗೌಡ:
ಸ್ವಾಭಿಮಾನಿ ಬಡವರಿಗೆ ಸನ್ಮಾನ ನೆರವೇರಿಸಿದ ಕೇಂದ್ರದ ಮಾಜಿ ಸಚಿವರೂ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಮಾತನಾಡಿ, ಪುತ್ತೂರಿನಿಂದ ಕೇಂದ್ರದ ತನಕ ಹೋಗಿ ಪ್ರಧಾನಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಹೊರತಾಗಿ ಎಲ್ಲಾ ಸ್ಥಾನಗಳನ್ನು ಪಡೆದರೂ ನಾನು ಇಂತಹ ಕಾರ್ಯಕ್ರಮ ಇದುವರೆಗೆ ನೋಡಿಲ್ಲ ಎಂದರು. ಹೊಸ ಹೊಸ ಯೋಚನೆಯೊಂದಿಗೆ ಕಾರ್ಯಕ್ರಮ ಆಯೋಜಿಸುತ್ತಿರುವ ಅಶೋಕ್ ರೈಯವರು ಅಡಿಕೆ ತೋಟಕ್ಕೆ ಮದ್ದು ಬಿಡುವವರು, ನಾಟಿ ವೈದ್ಯರು ಸೇರಿದಂತೆ ಜನ ಸಾಮಾನ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಮಾಡಿರುವುದು ಸಾಮಾಜಿಕ ಸಾಮರಸ್ಯ, ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವುದಕ್ಕೆ ಸಾಕ್ಷಿಯಾಗಿದೆ ಎಂದ ಅವರು ಎಂಟು ವರ್ಷದ ಹಿಂದೆ ದೇಶದಲ್ಲಿ ಶೇ 40ರಷ್ಟಿದ್ದ ಬಡತನ ಇಂದು ಶೇ.11ಕ್ಕೆ ಬಂದಿದೆ, ಅಭಿವೃದ್ಧಿ ಕಾರ್ಯಗಳು ಅಶೋಕ್ ರೈಯವರಂತಹ ಸಾವಿರಾರು ಮಂದಿಯ ಯೋಗದಾನದಿಂದ ಸಾಧ್ಯವಾಗಿದೆ ಎಂದರು. ರೈಯವರ ಟ್ರಸ್ಟ್ ಮೂಲಕ ಸರಕಾರಿ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಕೆಲಸವಾಗಿದೆ. ಇಡೀ ತಾಲೂಕು ನನ್ನ ಕುಟುಂಬ ಎಂದು ಜನರನ್ನು ಒಟ್ಟು ಸೇರಿಸಿ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಿರುವುದು ಅದ್ಬುತ ಕಾರ್ಯಕ್ರಮವಾಗಿದೆ. ಆದರ್ಶನೀಯ ಕಾರ್ಯಕ್ರಮ ನಡೆಸಿ ಅಶೋಕ್ ರೈಯವರು ಮಾದರಿಯಾಗಿದ್ದಾರೆ ಎಂದು ಹೇಳಿದ ಸದಾನಂದ ಗೌಡರವರು ಸಮಾಜದಿಂದ ಗಳಿಸಿದ ಒಂದಂಶವನ್ನು ಸಮಾಜಕ್ಕೇ ಅರ್ಪಣೆ ಮಾಡುವ ಅದ್ಬುತ ಕಾರ್ಯವನ್ನು ಅಶೋಕ್ ರೈ ಮಾಡುತ್ತಿದ್ದಾರೆ. ಭಾವನೆಗಳು ಉತ್ತಮ ಅಗಿದ್ದರೆ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ಅಶೋಕ್ ರೈ ತೋರಿಸಿದ್ದಾರೆ. ಸಮಾಜದವರನ್ನು ಒಟ್ಟು ಸೇರಿಸುವ ಕೆಲಸ ಮಾಡಿರುವ ನನ್ನ ಆತ್ಮೀಯ ಸ್ನೇಹಿತ ಅಶೋಕ್ ರೈ ಉತ್ತಮ ಕಾರ್ಯ ಮಾಡುತ್ತಿರುವುದು ನನಗೂ ಹೆಮ್ಮೆ ತಂದಿದೆ ಎಂದು ಹೇಳಿದರು.

ಬಡವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಅಶೋಕ್ ರೈ-ರಮಾನಾಥ ರೈ:
ಅಶೋಕ್ ರೈಯವರ ಕುರಿತಾದ `ಧರ್ಮಾತ್ಮ… ಬಡವರ ಬೆಳಕು’ ಕೃತಿ ಬಿಡುಗಡೆ ಮಾಡಿದ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಮಾತನಾಡಿ, ಸಂಪತ್ತು ಇದ್ದರೆ ಸಾಲದು. ಅದರಲ್ಲಿ ದಾನ ಮಾಡುವ ಮನಸ್ಸಿರಬೇಕು. ಕೆಲವರಿಗೆ ಸಂಪತ್ತು ಇದ್ದದನ್ನು ಕೊಡಲು ಮನಸ್ಸು ಇರುವುದಿಲ್ಲ. ಆದರೆ, ಅಶೋಕ್ ರೈಯವರು ತನ್ನ ಸೇವಾ ಮನೋಭಾವದೊಂದಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು. ಜಾತಿ, ಧರ್ಮ ಮೀರಿ ಎಲ್ಲಾ ವರ್ಗದ ಜನರನ್ನು ಕೈಬೀಸಿ ಕರೆಯುವಂತಹ ಕಾರ್ಯಕ್ರಮ ಇದಾಗಿದೆ. ಅನೇಕ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ತೊಡಗಿದ ಅಶೋಕ್ ರೈಯವರು ಬಡವರ ಕಷ್ಟ ಕಾರ್ಪಣ್ಯಗಳಿಗೆ ತನ್ನ ಕೈಲಾದ ಸಹಕಾರ ನೀಡಿದವರು ಎಂದು ಹೇಳಿದ ರಮಾನಾಥ ರೈಯವರು ಇಚ್ಛಾಶಕ್ತಿ ಇಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಶೋಕ್ ರೈಯವರು ಇಷ್ಟೊಂದು ಜನರಿಗೆ ವಸ್ತ್ರದಾನ ಮಾಡುವುದು ಸಣ್ಣ ಕೆಲಸ ಅಲ್ಲ ಎಂದು ಹೇಳಿದರು.

ಅಶೋಕ್ ರೈಯಂತವರು ಎಲ್ಲಾ ಮನೆಯಲ್ಲಿಯೂ ಹುಟ್ಟಿ ಬರಬೇಕು-ಶಕುಂತಳಾ ಶೆಟ್ಟಿ:
ಮುಖ್ಯ ಅಭ್ಯಾಗತರಾಗಿದ್ದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಅಶೋಕ್ ರೈಯವರು ಪುತ್ತೂರಿನ ಮೂಲೆ, ಮೂಲೆಯಲ್ಲಿರುವವರನ್ನು ಒಟ್ಟು ಸೇರಿಸಿದ್ದಾರೆ. ಇವರು ಇಪ್ಪತ್ತನೇ ವರ್ಷದ ಸಂಭ್ರಮದಲ್ಲಿ ಒಂದು ಲಕ್ಷ ಜನರಿಗೆ ವಸ್ತ್ರ ವಿತರಣೆ ಮಾಡುವಂತಾಗಲಿ ಎಂದರು. ದಶ ಸಂಭ್ರಮದ ಕಾರ್ಯಕ್ರಮ ಜನಮಾನಸದಲ್ಲಿ ಉಳಿಯುವ ಕಾರ್ಯವಾಗಲಿ. ಸಂಜೀವ ರೈ ಮತ್ತು ಗಿರಿಜಾ ದಂಪತಿಯ ಮೂವರು ಪುತ್ರರಲ್ಲಿ ಅಶೋಕ್ ರೈಯವರು ಸಮಾಜ ಸೇವಕರಾಗಿ ಬೆಳೆದಿದ್ದಾರೆ. ಬಡತನದಲ್ಲಿ ಬೆಳೆದವರು ಇಂದು ಬಡವರ ಸೇವೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಶಕುಂತಳಾ ಶೆಟ್ಟಿಯವರು ಎಲ್ಲಾ ಮನೆಯಲ್ಲಿಯೂ ಅಶೋಕ್ ರೈಯಂತವರು ಹುಟ್ಟಿ ಬರಬೇಕು ಎಂದರು. ಗ್ರಾಮ ಗ್ರಾಮಗಳಲ್ಲಿ ಜನರ ಸಂಕಷ್ಟಗಳಿಗೆ ನೆರವಾಗುವ ಮೂಲಕ ಅಶೋಕ್ ರೈ ಸರ್ವದಾನಿಯಾಗಿದ್ದಾರೆ ಎಂದು ಹೇಳಿದ ಶಕುಂತಳಾ ಶೆಟ್ಟಿಯವರು ಅಶೋಕ್ ರೈಯವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ದೊರೆಯಲಿ ಎಂದರಲ್ಲದೆ ನಾನು, ನೀವು ತಾಂಟುವಂತೆ ಆಗುವುದು ಬೇಡ ಎಂದರು.

ಇತಿಹಾಸ ನಿರ್ಮಾಣ ಆಗಿದೆ-ಜಯಂತ ನಡುಬೈಲು:
ಅಕ್ಷಯ ಕಾಲೇಜಿನ ಚೆಯರ್‌ಮೆನ್ ಜಯಂತ ನಡುಬೈಲು ಮಾತನಾಡಿ, ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ದಶ ಸಂಭ್ರಮದಲ್ಲಿ ಇತಿಹಾಸ ನಿರ್ಮಾಣ ನಡೆದಿದೆ ಎಂದರು. ಅಶೋಕ್ ಕುಮಾರ್ ರೈಯವರು ಬೇಡಿದ್ದನ್ನು ಕೊಡುವ ಪುತ್ತೂರಿನ ಕಾಮಧೇನು ಆಗಿದ್ದಾರೆ ಎಂದು ಬಣ್ಣಿಸಿದ ಜಯಂತ ನಡುಬೈಲುರವರು ತನ್ನ ಟ್ರಸ್ಟ್‌ನ ಮೂಲಕ ಒಂದೇ ಸೂರಿನಡಿಯಲ್ಲಿ ಜನಸೇವೆ ನೀಡುವ ಮಹಾಹೃದಯಿಯಾಗಿದ್ದಾರೆ ಎಂದರು. ಭಗವಂತ ಮೆಚ್ಚುವ ಕೆಲಸ ಅಶೋಕ್ ರೈಯವರಿಂದ ಆಗಿದೆ. ಅವರ ಮೂಲಕ ಸೇವೆ ಪಡೆದುಕೊಂಡವರು ಅವರ ಕೊಡುಗೆಯನ್ನು ಮರೆಯಬಾರದು. ಕೃತಜ್ಞತೆ ಭಾವನೆ ಎಲ್ಲರಲ್ಲಿರಬೇಕು. ರಾಜಕೀಯ ಇಚ್ಚಾಶಕ್ತಿ ದೊರೆತು ಇನ್ನಷ್ಟು ಜನಸೇವೆ ನೀಡುವ ಅವಕಾಶ ದೊರೆಯಲಿ ಎಂದು ಅವರು ಹೇಳಿದರು.

ಅದ್ಬುತ ಕಾರ್ಯಕ್ರಮವಾಗಿದೆ-ಲಾರೆನ್ಸ್ ಮಸ್ಕರೇನಸ್:
ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ವಂ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಅಶೋಕ್ ಕುಮಾರ್ ರೈಯವರು ಆಯೋಜಿಸಿರುವ ಅದ್ಬುತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಮಾನವೀಯತೆ ಮೆರೆಯುವ, ಎಲ್ಲರೂ ಪ್ರೇರಣೆ ಪಡೆಯುವ ಕಾರ್ಯಕ್ರಮ ಆಗಿದೆ ಎಂದರು. ದೇವರ ಪುಸ್ತಕದಲ್ಲಿ ದಾಖಲಾಗುವ ಕಾರ್ಯಕ್ರಮ ಇದಾಗಿದೆ, ಬಡವರ, ಸಂಕಷ್ಟದಲ್ಲಿರುವವರ ಸೇವೆ ಮಾಡುವ ಮೂಲಕ ದೇವರು ಮೆಚ್ಚುವ ಕೆಲಸವಾಗಿದೆ ಎಂದ ಅವರು ಅಶೋಕ್ ರೈಯವರು ಜನರ ಪ್ರೀತಿ ಗಳಿಸಿದ್ದಾರೆ. ನಾವು ತೆಗೆದುಕೊಳ್ಳುವವರು ಮಾತ್ರವಲ್ಲ. ಕೊಡುವವರೂ ಆಗಬೇಕು. ನಮ್ಮಲ್ಲಿರುವ ಅವಕಾಶದಲ್ಲಿ ಸಹಾಯ ಮಾಡಬೇಕು. ನಾವೆಲ್ಲಾ ಅಶೋಕ್ ರೈಯವರಂತಾಗಬೇಕು. ಅಗ ಸಮಾಜವೂ ಉತ್ತಮವಾಗಿರಲಿದೆ ಎಂದರು. ದೀಪಾವಳಿ ಸಮಯದಲ್ಲಿ ವಸ್ತ್ರ ವಿತರಣೆ ಮಾಡುವ ಮೂಲಕ ಬಡವರ ಕುಟುಂಬಕ್ಕೆ ಅಶೋಕ್ ರೈ ಬೆಳಕು ನೀಡುತ್ತಿದ್ದಾರೆ ಎಂದು ಲಾರೆನ್ಸ್ ಮಸ್ಕರೇನಸ್ ಹೇಳಿದರು.

ದೇಶಕ್ಕೆ ಮಾದರಿ ಕಾರ್ಯಕ್ರಮ-ಕೆ.ಆರ್. ಹುಸೈನ್ ದಾರಿಮಿ:
ಧಾರ್ಮಿಕ ಮುಖಂಡ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ, ಸಾವಿರಾರು ಜನರನ್ನು ಸೇರಿಸಿಕೊಂಡು ಮಹತ್ತರವಾದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಈ ಸಮಾವೇಶ ದೇಶಕ್ಕೆ ಮಾದರಿಯಾಗಿದೆ. ಬಡವರ ಸೇವೆ ಮಾಡುವ ಮೂಲಕ ಅವರು ದೇವರನ್ನು ಕಂಡಿದ್ದಾರೆ. ಜಾತಿ, ಧರ್ಮ, ಪಂಥ ಮೀರಿ ಬಡವರ, ದೀನ ದಲಿತರ, ಸಂಕಷ್ಟದ ಜನರ ಸೇವೆ ಮಾಡಿದ್ದಾರೆ. ರಾಜಕೀಯ ರಹಿತವಾದ ಸೇವೆ ನೀಡಿ ಅಪಾರ ಸಂಖ್ಯೆಯಲ್ಲಿ ಜನರನ್ನು ಒಟ್ಟುಗೂಡಿಸಿದ್ದಾರೆ ಎಂದರು. ರಮಾನಾಥ ರೈ, ಡಿ.ವಿ. ಸದಾನಂದ ಗೌಡರವರನ್ನು ಮತ್ತು ಶಕುಂತಳಾ ಶೆಟ್ಟಿಯವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಮೆಚ್ಚುವ ಕಾರ್ಯಕ್ರಮವಾಗಿ ಮೂಡಿಬಂದಿದ್ದು ಪುತ್ತೂರಿನ ಅಭಿವೃದ್ಧಿಯಲ್ಲಿ ರಾಜಕೀಯ ನಾಯಕರಿಗೂ ಪ್ರೇರಣೆ ನೀಡುವ ಕೆಲಸವಾಗಿದೆ ಎಂದರು.


ಸಮಾಜ ಸೇವೆಗೆ ಇಲ್ಲಿ ಸೇರಿರುವ ಜನರೇ ಸಾಕ್ಷಿ-ಅಶೋಕ್ ರೈ:
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಮಾತನಾಡಿ, ಹಿರಿಯರ ಮಾರ್ಗದರ್ಶನದಂತೆ ಕಿಲ್ಲೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ತ್ರೀಶಕ್ತಿ ಒಗ್ಗೂಡುವ ಮೂಲಕ ನನಗೆ ಶಕ್ತಿ ನೀಡಿದ್ದಾರೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ನೀಡಿದ ಉತ್ತಮ ಸಮಾಜ ಸೇವೆಗಳಿಗೆ ಇಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆ. ಬಹಳ ವರ್ಷದಿಂದ ಬಡವರ ಸೇವೆ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ. ಟ್ರಸ್ಟ್‌ನಿಂದ ನಿರಂತರ ಸೇವೆ ನೀಡುತ್ತಾ ಬರಲಾಗುತ್ತಿದೆ. ಆದರೂ ಚುನಾವಣಾ ಸಂದರ್ಭದಲ್ಲಿ ಸೇವೆ ಮಾಡುತ್ತಾರೆ, ನಂತರ ಬಂದ್ ಮಾಡುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಟ್ರಸ್ಟ್‌ನಿಂದ ಕಳೆದ 10 ವರ್ಷಗಳಲ್ಲಿ 15,800 ಕುಟುಂಬದ ಕಣ್ಣೀರು ಒರೆಸುವ ಕಾರ್ಯ ಮಾಡಿದೆ. ಇದಕ್ಕಾಗಿ ಯಾರಿಂದಲೂ ದೇಣಿಗೆ ಪಡೆದಿಲ್ಲ. ಟ್ರಸ್ಟ್‌ಗೆ ಯಾರೂ ದೇಣಿಗೆ ನೀಡಿಲ್ಲ. ದುಡಿದ ಹಣದಲ್ಲಿ ಒಂದು ಪಾಲು ಸಮಾಜಕ್ಕೆ ವಿನಿಯೋಗ ಮಾಡಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದೇನೆ ಎಂದರು. ಅಶೋಕ್ ರೈಯವರು ರಾಜಕೀಯಕೋಸ್ಕರ ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಸಮಾಜ ಸೇವೆಯಲ್ಲಿ ಸಮಾಧಾನವಿದೆ. ಇಲ್ಲಿ ಇಷ್ಟು ಜನ ಸೇರಿದ್ದು ನಾನು ನೀಡುವ ಸೀರೆಗಾಗಿ ಅಲ್ಲ. ನನ್ನ ಮೇಲಿನ ಪ್ರೀತಿಯಿಂದ ಬಂದಿದ್ದಾರೆ. ಕೆಲವರು ಈ ಕಾರ್ಯಕ್ರಮಕ್ಕೆ ಹೋಗದಂತೆ ತಡೆಯುವ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ನೀವು ವಸ್ತ್ರ ವಿತರಿಸಿ, ನೀವೂ ಜನ ಸೇವೆ ಮಾಡಿ, ನಿಮ್ಮಲ್ಲಿಯೂ ಹಣವಿದೆ. ನಾನು ಯಾವುದೇ ಪಕ್ಷದ ಚಿಹ್ನೆ ಬಳಸಿ ಕಾರ್ಯಕ್ರಮ ಮಾಡುತ್ತಿಲ್ಲ. ಪ್ರೀತಿಯ ಬಂಧುಗಳನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದೇನೆ ಎಂದರು.


ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿ ಇಂತಹ ಸಭೆ-ಶಶಿಕುಮಾರ್ ರೈ ಬಾಲ್ಯೊಟ್ಟು:
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಸಭೆ ನಡೆದಿದೆ. ಕಷ್ಟದಿಂದ ಬಂದಿರುವ ಅಶೋಕ್ ರೈಯವರು ಬಡವರಿಗೆ ಅಭಿವೃದ್ಧಿಗೆ ಪೂರಕವಾದ ಸೇವೆ ನೀಡುತ್ತಿದ್ದಾರೆ ಎಂದರು. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಅಶೋಕ್ ರೈಯವರು ದೇವಳದ ಜೀರ್ಣೋದ್ಧಾರ ಸಂದರ್ಭದಲ್ಲಿ ಕರಸೇವಕರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಕಾರ್ಯಕ್ರಮಗಳಲ್ಲಿ ಜನ ಸಾಮಾನ್ಯನಂತೆ ಬೆರೆಯುತ್ತಿದ್ದರು ಎಂದ ಅವರು ಸಂಪಾದನೆಯ ಒಂದು ಭಾಗವನ್ನು ಅಶೋಕ್ ರೈ ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಇವರ ಸಮಾಜ ಸೇವೆಗೆ ಪತ್ನಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.


ರಚನಾ ಚಾವಡಿ ತಿಂಗಳಾಡಿ, ಕವಿತಾ ಕೈಪ ಕೋಡಿಂಬಾಡಿ, ಪವಿತ್ರಾ ಕೈಪ ಕೋಡಿಂಬಾಡಿ ಮತ್ತು ಪ್ರಸಕ್ತ ರೈ ಸರೋಳಿ ಕೋಡಿಂಬಾಡಿ ತಂಡದವರು ಪ್ರಾರ್ಥಿಸಿದರು. ಯೋಗೀಶ್ ಸಾಮಾನಿ, ಪುರುಷೋತ್ತಮ ಕೋಲ್ಪೆ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರಾಜೀವ ಶೆಟ್ಟಿ ಎಡ್ತೂರು, ಸುದೇಶ್ ಶೆಟ್ಟಿ ಶಾಂತಿನಗರ ಮತ್ತು ಜಗನ್ನಾಥ ಶೆಟ್ಟಿ ನಡುಮನೆ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಬದಿನಾರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶೃಂಗೇರಿ ಶ್ರೀಶಾರದ ಅಂಧರ ಗೀತಗಾಯನ ಕಲಾ ಸಂಘದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.

`ಧರ್ಮಾತ್ಮ’ ಕೃತಿ ಬಿಡುಗಡೆ-ಸನ್ಮಾನ

ಅಶೋಕ್ ಕುಮಾರ್ ರೈಯವರ ಕುರಿತಾಗಿ ಹೊರ ತರಲಾಗುತ್ತಿರುವ `ಧರ್ಮಾತ್ಮ…ಬಡವರ ಬೆಳಕು’ ಕೃತಿಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ಕಿಲ್ಲೆ ಮೈದಾನದ ಪ್ರವೇಶ ದ್ವಾರದಿಂದ ಕೊಂಬು ವಾದ್ಯದ ಮೂಲಕ ತೊಟ್ಟಿಲಿನಲ್ಲಿ ಕೃತಿಯನ್ನು ವೇದಿಕೆಗೆ ತರಲಾಯಿತು. ನಂತರ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ `ಧರ್ಮಾತ್ಮ’ ಕೃತಿಯ ಸಂಪಾದಕರಾದ ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹಸಂಪಾದಕರಾದ ಎ.ಜತೀಂದ್ರ ಶೆಟ್ಟಿ ಅಲಿಮಾರ ಮತ್ತು ಜಯಪ್ರಕಾಶ್ ಬದಿನಾರು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ್ ಕುಮಾರ್ ಶಾಂತಿನಗರ ಅವರು, ಧರ್ಮಾತ್ಮ ಕೃತಿಯಲ್ಲಿ ಅಶೋಕ್ ರೈಯವರ ಬಾಲ್ಯ, ವಿದ್ಯಾಭ್ಯಾಸ, ಉದ್ಯಮ, ಅವರ ಸಾಧನೆಗಳು, ಮುಂದಿನ ಯೋಜನೆಗಳು, ಟ್ರಸ್ಟ್ ಮೂಲಕ ನಡೆದ ಸಮಾಜ ಸೇವಾ ಕಾರ್ಯಗಳು, ಅಶೋಕ್ ರೈಯವರ ನೇತೃತ್ವದಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆದ ದೇವಸ್ಥಾನ, ದೈವಸ್ಥಾನಗಳ ಪ್ರಮುಖರ ಅನಿಸಿಕೆಗಳು, ಧರ್ಮಗುರುಗಳ ಶುಭ ಸಂದೇಶ, ಅಶೋಕ್ ರೈಯವರ ಕುಟುಂಬಸ್ಥರ ಶುಭ ಹಾರೈಕೆ, ಫಲಾನುಭವಿಗಳ ಅನಿಸಿಕೆ ಒಳಗೊಂಡಿದೆ ಎಂದರು. ದಶಸಂಭ್ರಮದ ಸಂಭ್ರಮಕ್ಕೆ ಸಾಕ್ಷಿಯಾಗಿ ರಚಿಸಲಾಗಿರುವ ಧರ್ಮಾತ್ಮ ಕೃತಿ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೊರ ಬರಲಿದೆ ಎಂದು ಸಂತೋಷ್ ತಿಳಿಸಿದರು. ಕೃತಿಯ ಸಹಸಂಪಾದಕಿ ಸುಮಾ ಅಶೋಕ್ ರೈ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಭಿಮಾನಿ ಬಡವರಿಗೆ ಸನ್ಮಾನ

ಬಡತನದಲ್ಲಿದ್ದರೂ ಸ್ವಾಭಿಮಾನಿಗಳಾಗಿ ದುಡಿದು ತನ್ನ ಮನೆಯವರನ್ನು ಬೆಳೆಸಿರುವ ಸ್ವಾಭಿಮಾನಿ ಬಡವರನ್ನು ದಶ ಸಂಭ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಡಿಕೆ ಮರಕ್ಕೆ ಔಷಧಿ ಸಿಂಡಿಸುವ ಅಜಿತ್ ಪಡ್ನೂರು, ಬಟ್ಯ ಕೊಡಂಗೆ, ಬೋರ ಕೋಡಿಂಬಾಡಿ, ಚಂದ್ರಗೌಡ ಬೀತಲಪ್ಪು, ಕಿರಣ ನಾಯ್ಕ ಪಂಜಿಗುಡ್ಡೆ, ಕುಂಞಣ್ಣ ನಾಯ್ಕ ಪೆರ್ನೆ, ಮನೋಜ್ ನಾಯ್ಕ ಪಡ್ನೂರು, ಸಾಂತಪ್ಪ ನಾಯ್ಕ ಪಂಜಿಗುಡ್ಡೆ, ಸೀತಾರಾಮ ನಾಯ್ಕ ಕೊಡಪಟ್ಯ, ತಿಮ್ಮಪ್ಪ ದಾರಂದಕುಕ್ಕು, ಅಂಚೆ ಪಾಲಕರಾದ ಅಬ್ದುಲ್ ರಹಿಮಾನ್ ಸಂಪ್ಯ, ಸಂಜೀವ ಇಡ್ಕಿದು, ಹೈನುಗಾರಿಕೆಯ ಸಾಧಕ ಅಣ್ಣು ಬೀತಲಪ್ಪು, ವಿದ್ಯುತ್ ಕಂಬ ಅಳವಡಿಸುವ ಬಾಬು ನೆಕ್ಕರೆ, ಮೊಮ್ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಆರೈಕೆ ಮಾಡುತ್ತಿರುವ ಭೀಪಾತುಮ್ಮ ಕಲೆಂಬಿ, ತಾನು ದುಡಿದು ಹೆಣ್ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಾ ಆರೈಕೆ ಮಾಡುತ್ತಿರುವ ಚಂದ್ರಾವತಿ ಕೊಡಿಪ್ಪಾಡಿ, ಬುಟ್ಟಿ ಹೆಣೆಯುವ ಚೋಮು ಕೆಮ್ಮಿಂಜೆ, ಅಪಘಾತ ರಹಿತ ಚಾಲನೆ ಮಾಡಿರುವ ಆಟೋ ಚಾಲಕ ದೇವಪ್ಪ ಗೌಡ ಕೆಮ್ಮಿಂಜೆ, ಕೂಲಿ ಕೆಲಸ ಮಾಡಿ ಪುತ್ರನಿಗೆ ಡಾಕ್ಟರೇಟ್ ಪದವಿ ಕೊಡಿಸಿದ ಗಿರಿಜಾ ಪಡುಮಲೆ, ಬಡತನದಲ್ಲಿ ಮಕ್ಕಳ ಪೋಷಣೆ ಮಾಡಿದ ಹೇಮಾವತಿ ರೈ ಅಲಿಮಾರ, ಆಟೋ ಚಾಲಕರಾದ ಶೇಖರ ನಾಕ್, ವಿಠಲ ನಾಕ್ ಪುರುಷರಕಟ್ಟೆ, ಮ್ಯಾಕ್ಸಿಮ್ ಡಿ’ ಕ್ರಾಸ್ತಾ ಬೆಳ್ಳಿಪ್ಪಾಡಿ, ಸೆಂಟ್ರಿಂಗ್ ಕೆಲಸಗಾರ ಮೋನಪ್ಪ ಕುಲಾಲ್ ಬನ್ನೂರು, ಪಂಪು ಚಾಲಕ ಪದ್ಮನಾಭ ಪೂಜಾರಿ ಮಣಿಯ, ಶ್ವಾನ ರಕ್ಷಕ ರಾಜೇಶ್ ಬನ್ನೂರು, ಸಮಾಜ ಸೇವಕ ರಾಜೇಶ್ ಪ್ರಸಾದ್, ಮೆಸ್ಕಾಂ ಪವರ್‌ಮೆನ್ ರವಿ ವಾಲ್ಟರ್ ಡಿ ಸೋಜ ಇಡ್ಕಿದು, ತಂದೆ-ತಾಯಿಯ ಆರೈಕೆ ಮಾಡುತ್ತಿರುವ ಸಂಧ್ಯಾ ಅಂಬಟಮೂಲೆ, ಬುಟ್ಟಿ ಹೆಣೆಯುವ ಸುಂದರಿ ಕೊರಗ ಸೇಡಿಯಾಪು, ಹಾವು ಹಿಡಿಯುವ ತೇಜಸ್ ಕುಮೆರಡ್ಕ, ನಾಟಿ ವೈದ್ಯರಾದ ಲೀಲಾವತಿ ಪೂಜಾರಿ ಗೆಜ್ಜೆಗಿರಿ, ಮೇರಿ ಪಾಯಸ್ ವಿಟ್ಲಮುಡ್ನೂರು, ವಿಶ್ವನಾಥ ಪೂಜಾರಿ ಪಡುಮಲೆ ಮತ್ತು ಭಜನೆ ಮೂಲಕ ಭಕ್ತಿ ಸಿಂಚನ ಮಾಡುವ ವಿಶ್ವನಾಥ ರೈ ಕೋಡಂದೂರುರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಶೋಕ್ ಕುಮಾರ್ ರೈ ಹಾಗೂ ಸುಮಾ ಅಶೋಕ್ ರೈ ದಂಪತಿಯನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೋಟ್ಟುರವರ ವತಿಯಿಂದ ಸಂಸದ ಡಿ.ವಿ ಸದಾನಂದ ಗೌಡ ಮತ್ತು ಶಶಿಕುಮಾರ್‌ ರೈ ಬಾಲ್ಯೊಟ್ಟುರವರು  ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ನಿರಂಜನ ರೈ ಮಠಂತಬೆಟ್ಟು ಅವರು ಸನ್ಮಾನಪತ್ರ ವಾಚಿಸಿದರು.

ಗೂಡು ದೀಪ ಸ್ಪರ್ಧೆ:
ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಗೂಡು ದೀಪ ಸ್ಪರ್ಧೆಯಲ್ಲಿ ಗಿರೀಶ್ ಸೇಡಿಯಾಪು ಪ್ರಥಮ, ಸುಲೋಚನಾ ನಿಡ್ಪಳ್ಳಿ ದ್ವಿತೀಯ ಮತ್ತು ಶೆಟ್ಟಿ ಮಂಗಳೂರು ತೃತೀಯ ಬಹುಮಾನ ಗಳಿಸಿದರು. ಪ್ರಥಮ ಬಹುಮಾನ 7500 ರೂ, ದ್ವಿತೀಯ ಬಹುಮಾನ  5000 ರೂ ಹಾಗೂ ತೃತೀಯ 2500 ರೂ ನಗದು ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

20 ಕೌಂಟರ್‌ಗಳಲ್ಲಿ ವಸ್ತ್ರ ವಿತರಣೆ: 25 ಸಾವಿರ ಮಂದಿಗೆ ವಸ್ತ್ರದಾನ; 14 ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುರುಷರಿಗೆ ಪಂಚೆ ಮತ್ತು ಶಾಲು, ಮಹಿಳೆಯರಿಗೆ ಸೀರೆ ಮತ್ತು ಮಕ್ಕಳಿಗೆ ಶಾಲು ವಿತರಿಸಲಾಯಿತು. ಒಟ್ಟು 20 ಕೌಂಟರ್‌ಗಳಲ್ಲಿ ಪ್ರತ್ಯೇಕವಾಗಿ ವಸ್ತ್ರ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 25 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರದಾನ ಮಾಡಲಾಯಿತು. ಪ್ರತಿಯೊಬ್ಬರಿಗೂ ಸಹಭೋಜನದ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 14 ಕೌಂಟರ್‌ಗಳಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಸಿಹಿ ತಿಂಡಿ ವಿತರಣೆಯೂ ನಡೆಯಿತು.

ಹರಿದು ಬಂದ ಜನ ಸಾಗರ:
ದಶ ಸಂಭ್ರಮ ಕಾರ್ಯಕ್ರಮಕ್ಕೆ ಜನಸಾಗರ ಹರಿದು ಬಂದಿತ್ತು. ಕಿಲ್ಲೆ ಮೈದಾನದಲ್ಲಿ ಅಳವಡಿಸಲಾದ ವಿಶಾಲ ಸಭಾಂಗಣದಲ್ಲಿ ಹಾಗೂ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲಾ ಆಸನಗಳು ಭರ್ತಿಯಾಗಿತ್ತು. ಸಭಾಂಗಣದ ಸುತ್ತ ಮುತ್ತ ಮಾತ್ರವಲ್ಲದೆ ರಸ್ತೆ ಬದಿಯಲ್ಲಿಯೂ ಜನ ತುಂಬಿ ತುಳುಕಿತ್ತು. ಪುತ್ತೂರು ನಗರದ ರಸ್ತೆಗಳೂ ಜನರಿಂದ ತುಂಬಿ ತುಳುಕುತ್ತಿತ್ತು. ಪುತ್ತೂರು ನಗರ ಠಾಣೆ ಮತ್ತು ಸಂಚಾರ ಠಾಣಾ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಜನರನ್ನು ನಿಯಂತ್ರಿಸಲು ಖಾಸಗಿ ಸಂಸ್ಥೆಯ ಬೌನ್ಸರ್‌ಗಳನ್ನು ನಿಯೋಜಿಸಲಾಗಿತ್ತು.

ಭ್ರಷ್ಟಾಚಾರ, ಬಡವರ ಮೇಲಿನ ಅನ್ಯಾಯ ತಡೆಯಬೇಕು-ಅಶೋಕ್ ರೈ:

ಭ್ರಷ್ಟಾಚಾರ ಮತ್ತು ಬಡವರ ಮೇಲಿನ ಅನ್ಯಾಯ ತಡೆಯಲು ರಾಜಕೀಯ ಶಕ್ತಿಯೂ ಬೇಕು ಎಂದು ಸಭಾಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಹೇಳಿದರು. ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಎಷ್ಟೋ ಮಂದಿಗೆ 94ಸಿ ಹಕ್ಕು ಪತ್ರ ಸಿಗುತ್ತಿಲ್ಲ. 94 ಸಿ, ಅಕ್ರಮ ಸಕ್ರಮಗಳಿಗೆ ಟೇಬಲ್ ಅಡಿಯಲ್ಲಿ ಹಣ ನೀಡಬೇಕಾದ ಸ್ಥಿತಿ ಬಂದಿದೆ. ನಾನು ಹಣ ಮಾಡಲು ರಾಜಕೀಯಕ್ಕೆ ಬರುವುದಿಲ್ಲ. ನನಗೆ ದೇವರು ನೀಡಿದ್ದಾರೆ. ಕಷ್ಟದ ಹಾದಿಯಲ್ಲಿ ಬಂದು ಬಡವರ ಸೇವೆ ಮಾಡುತ್ತಿದ್ದೇನೆ. ಇನ್ನಷ್ಟು ಜನರ ಸೇವೆ ಮಾಡಲು ರಾಜಕೀಯ ಶಕ್ತಿ ಬೇಕಾಗಿದೆ. ರಾಜಕೀಯದಲ್ಲಿ ಶಕುಂತಳಾ ಶೆಟ್ಟಿ ಹಾಗೂ ನಾನು ತಾಂಟುವ ಪ್ರಶ್ನೆಯೇ ಇಲ್ಲ. ನೀವು ಆಶೀರ್ವಾದ ಮಾಡಿದರೆ ಮಾತ್ರ ನಾನು ರಾಜಕೀಯಕ್ಕೆ ಬರುತ್ತೇನೆ. ಬಡವರ ಸೇವೆ ಮಾಡಲು, ಅವರ ಅನ್ಯಾಯ ತಡೆಯಲು ರಾಜಕೀಯ ಶಕ್ತಿ ಬೇಕು. ಭ್ರಷ್ಟಾಚಾರ ತಡೆಯಬೇಕು, ಬಡವರು ತಮ್ಮ ಹಕ್ಕು ಪಡೆಯಬೇಕು. ಬಡವ ಬಡವರಾಗಿ ಇರಬಾರದು ಇದಕ್ಕಾಗಿ ರಾಜಕೀಯ ಶಕ್ತಿ ಬೇಕು ಎಂದು ಹೇಳಿದ ಅಶೋಕ್ ರೈಯವರು ಮುಂದಿನ ದಿನಗಳಲ್ಲಿ ರಾಜಕೀಯ ಶಕ್ತಿ ದೊರೆತರೆ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದರು. ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ 50 ಸಾವಿರ ಜನರಿಗೆ ವಸ್ತ್ರ ವಿತರಣೆ ಮಾಡುತ್ತೇನೆ. ಈ ಭಾಗದಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದವರಿದ್ದಾರೆ, ಮನೆ ಇಲ್ಲದ ವಿಧವೆಯರಿದ್ದಾರೆ ಅಂತವರಿಗೆ ಇನ್ನಷ್ಟು ಸೇವೆ ನೀಡುತ್ತೇನೆ. ಅವಕಾಶ ದೊರೆತೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಕಡೆಗಳಲ್ಲಿ 5 ಎಕ್ರೆ ಜಾಗ ಖರೀದಿಸಿ ಪ್ರತಿಯೊಬ್ಬರಿಗೆ 3 ಸೆಂಟ್ಸ್ ಜಾಗ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದರು. ದಶ ಸಂಭ್ರಮದ ಕಾರ್ಯಕ್ರಮಕ್ಕೆ ಕಳೆದ ಹಲವಾರು ದಿನಗಳಿಂದ ಸುಮಾರು 1 ಸಾವಿರ ಮಂದಿ ಪ್ರೀತಿಯಿಂದ ಸಹಕಾರ ನೀಡಿದ್ದಾರೆ, ರಾಜಕೀಯ ಶಕ್ತಿ ದೊರೆತಾಗ ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಸರಕಾರಿ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರ, ಅನ್ಯಾಯಗಳಿಗೆ ವಿರುದ್ಧ ಹೋರಾಡಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಅಶೋಕ್ ರೈ ಹೇಳಿದರು.

ಶಿಸ್ತುಬದ್ಧ ವ್ಯವಸ್ಥೆ

ದಶಸಂಭ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರೂ ಯಾವುದೇ ಲೋಪ ಕಾಣದೆ ಸುಸೂತ್ರವಾಗಿ ಕಾರ್ಯಕ್ರಮ ನಡೆಯಿತು. ಅಚ್ಚುಕಟ್ಟುತನ, ಶಿಸ್ತುಬದ್ಧ ವ್ಯವಸ್ಥೆ, ಸಮಯ ಪಾಲನೆಯ ಮೂಲಕ ಕಾರ್ಯಕ್ರಮ ಗಮನ ಸೆಳೆಯಿತು. ಸಂಜೆಯವರೆಗೂ ಸರತಿ ಸಾಲಿನಲ್ಲಿ ಜನರು ಬಂದು ಸಹಭೋಜನದಲ್ಲಿ ಭಾಗವಹಿಸಿ ವಸ್ತ್ರ ಸ್ವೀಕರಿಸಿದರು. ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ಅಶೋಕ್ ರೈಯವರ ಪತ್ನಿ ಸುಮಾ ಅಶೋಕ್ ರೈ, ಮಕ್ಕಳಾದ ರಿಧಿ ರೈ, ಪ್ರದಿಲ್ ರೈ, ಶೃಧಿ ರೈ, ಸಹೋದರರಾದ ಸುಬ್ರಮಣ್ಯ ರೈ, ರಾಜ್‌ಕುಮಾರ್ ರೈ, ಅಕ್ಕಂದಿರಾದ ವಿಶಾಲಾಕ್ಷಿ ವಿ.ರೈ, ನಳಿನಾಕ್ಷಿ ಪಿ. ಶೆಟ್ಟಿ, ಸೋದರಳಿಯ ನಿಹಾಲ್ ಶೆಟ್ಟಿ ಕಲ್ಲಾರೆ ಮುಂಚೂಣಿಯಲ್ಲಿದ್ದರು.

`ಸುದ್ದಿ’ಯಲ್ಲಿ ನೇರಪ್ರಸಾರ
ದಶಸಂಭ್ರಮ ಕಾರ್ಯಕ್ರಮ ಸುದ್ದಿ ಯೂ ಟ್ಯೂಬ್ ಚಾನೆಲ್ ಮತ್ತು ಸುದ್ದಿ ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಸುದ್ದಿಯ ಮೂಲಕ ಕಿಲ್ಲೆ ಮೈದಾನದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು.

ಚಿತ್ರ ಕೃಪೆ: ಅಶ್ವಿನಿ ಪುತ್ತೂರು

LEAVE A REPLY

Please enter your comment!
Please enter your name here