ಮನೆ ಮನೆ ವ್ಯಾಪಾರಸ್ಥರ ಬಗ್ಗೆ ಜಾಗೃತರಾಗಿ ಅನುಮಾನ ಬಂದರೆ ಕರೆ ಮಾಡಿ ವಿಷಯ ತಿಳಿಸಿ

0

ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಮನೆಮನೆಗೆ ಬಂದು ವಿವಿಧ ವಸ್ತುಗಳನ್ನು ಮಾರಾಟ ಮಾಡುವವರು ಕಡ್ಡಾಯವಾಗಿ ಪಂಚಾಯಾತ್ ಪರವಾನಗೆ ಪಡೆದುಕೊಂಡು ಗ್ರಾಮದಲ್ಲಿ ವ್ಯಾಪಾರ ಮಾಡಬೇಕು ಎಂದು ಕಾನೂನು ಮಾಡಿದ್ದರೂ ಪಂಚಾಯತ್‌ಗೆ ತಿಳಿಯದಂತೆ ವ್ಯಾಪಾರ ಮಾಡುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸಲಾಗಿದ್ದು, ಮನೆಮನೆ ವ್ಯಾಪಾರಿಗಳ ಮೇಲೆ ಯಾವುದೇ ಅನುಮಾನ ಬಂದರೂ ನೇರವಾಗಿ ಪಂಚಾಯತ್‌ಗೆ ಅಥವಾ ಪೊಲೀಸ್‌ಗೆ ಕರೆಮಾಡುವಂತೆ ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ತಿಳಿಸಲಾಯಿತು.


ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಅ.27 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಹೇಶ್ ಕೇರಿಯವರು, ಪಂಚಾಯತ್ ಪರವಾನಗೆ ಪಡೆದುಕೊಳ್ಳದೇ ಮನೆಮನೆಗೆ ಬಂದು ವ್ಯಾಪಾರ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಈ ಬಗ್ಗೆ ಗ್ರಾಮಸ್ಥರು ಎಚ್ಚರದಿಂದರಬೇಕಾಗಿದೆ. ಮನೆಮನೆಗೆ ಬರುವ ವ್ಯಾಪಾರಸ್ಥರಲ್ಲಿ ನಿಮ್ಮಲ್ಲಿ ಪಂಚಾಯತ್ ಪರವಾನಗೆ ಇದೆಯಾ ಎಂದು ಗ್ರಾಮಸ್ಥರು ಪ್ರಶ್ನಿಸಬೇಕು. ಕಡಿಮೆ ದರಕ್ಕೆ ವಸ್ತುಗಳನ್ನು ಕೊಡುತ್ತಾರೆ ಎಂದು ಮೋಸ ಹೋಗಬಾರದು ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್‌ರವರು ಈಗಾಗಲೇ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಜಾಗೃತಿ ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಮತ್ತೊಮ್ಮೆ ಹೊಸ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತದೆ. ಈ ಬ್ಯಾನರ್‌ಗಳಲ್ಲಿ ಪಂಚಾಯತ್ ಹಾಗೂ ಪೊಲೀಸ್ ದೂರವಾಣಿ ಸಂಖ್ಯೆಗಳನ್ನು ನಮೂದಿಸಲಾಗಿದ್ದು ಗ್ರಾಮಸ್ಥರಿಗೆ ಮನೆಮನೆ ವ್ಯಾಪಾರಿಗಳ ಬಗ್ಗೆ ಯಾವುದೇ ಅನುಮಾನ, ಸಂದೇಹ ಬಂದರೂ ಆ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಬಹುದು ಎಂದರು. ಇದಕ್ಕೆ ಎಲ್ಲಾ ಸದಸ್ಯರು ಸಹಮತ ಸೂಚಿಸಿದರು.
ಒಣ ಕಸ ವಿಲೇವಾರಿ ಬಗ್ಗೆ ಈಗಾಗಲೇ ಕುಂಬ್ರ ಪೇಟೆಯಲ್ಲಿ ಹಾಗೂ ಗ್ರಾಮದ ಮನೆಮನೆಗಳಲ್ಲಿ ಜಾಗೃತಿ ಮೂಡಿಸುವ ಮೊದಲ ಹಂತದ ಕೆಲಸ ಆಗಿದೆ. ಗ್ರಾಮದ ಒಳಭಾಗದ ಮನೆಗಳಲ್ಲೂ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಯಾ ವಾರ್ಡ್‌ನ ಸದಸ್ಯರುಗಳಿಂದ ಆಗಬೇಕು ಎಂದು ಅಭಿವೃದ್ಧಿ ಅಧಿಕಾರಿಯವರು ಹೇಳಿದರು. ಪೇಟೆಯ ಪ್ರತಿಯೊಂದು ಅಂಗಡಿ ವ್ಯಾಪಾರಸ್ಥರು ಹಾಗೂ ವಾಣಿಜ್ಯ ಕಟ್ಟಡದವರು ಕಡ್ಡಾಯವಾಗಿ ತಮ್ಮಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪಂಚಾಯತ್‌ನ ಸ್ವಚ್ಛವಾಹಿನಿ ವಾಹನಕ್ಕೆ ನೀಡಬೇಕು. ಈಗಾಗಲೇ ಪ್ರತಿ ಅಂಗಡಿ, ಮಳಿಗೆಗಳಿಗೆ ಗೋಣಿ ಚೀಲ ಹಾಗೂ ಕರಪತ್ರವನ್ನು ನೀಡಲಾಗಿದೆ ಎಂದರು.
ಗ್ರಾಮದಲ್ಲಿರುವ ಸ್ಮಶಾನ ಹಾಗೂ ಖಬರ್‌ಸ್ಥಾನಗಳು ಪಂಚಾಯತ್ ಸೊತ್ತು ಆಗಿರುವುದರಿಂದ ಇವುಗಳನ್ನು ರಕ್ಷಿಸುವುದು ಪಂಚಾಯತ್ ಜವಬ್ದಾರಿ ಆಗಿದೆ ಆದ್ದರಿಂದ ಗ್ರಾಮದಲ್ಲಿರುವ ಸ್ಮಶಾನ ಮತ್ತು ಖಬರ್‌ಸ್ಥಾನಗಳಿಗೆ ಗಡಿಗುರುತು ಮಾಡಿಕೊಡುವಂತೆ ಸರ್ವೆ ಇಲಾಖೆಗೆ ಬರೆದುಕೊಳ್ಳುವ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು ಅದರಂತೆ ನಿರ್ಣಯಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸರಕಾರದ ಸುತ್ತೋಲೆ, ಸಾರ್ವಜನಿಕರ ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್, ಬಿ.ಸಿ ಚಿತ್ರಾ, ಶಾರದಾ, ನಿಮಿತಾ ರೈ, ನಳಿನಾಕ್ಷಿ, ವನಿತಾ ಕುಮಾರಿ, ರೇಖಾ, ಪ್ರದೀಪ್, ಲತೀಪ್, ಮಹೇಶ್ ಕೇರಿ ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ ಸಹಕರಿಸಿದ್ದರು.

LEAVE A REPLY

Please enter your comment!
Please enter your name here