ನಾಡಿನ ಎಲ್ಲಾ ಜನರ ಭಾವನೆ ಮತ್ತೊಮ್ಮೆ ಉದ್ದೀಪನ – ಸಂಜೀವ ಮಠಂದೂರು
ಪುತ್ತೂರು: 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಎಲ್ಲಾ ಕಡೆ ಏಕ ಕಾಲದಲ್ಲಿ ಹಾಡುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಅ.28ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಸುಮಾರು 3ಸಾವಿರ ಮಂದಿಯಿಂದ ಕೋಟಿ ಕಂಠ ಗಾಯನ ಮೊಳಗಿತು.
ನಾಡು ನುಡಿಯ ಬಗ್ಗೆ ಅಭಿಯಾನ ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ, ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು, ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುವ ದೃಷ್ಟಿಯಿಂದ ಸರಕಾರದ ವತಿಯಿಂದ ಆಯೋಜಿಸಲಾದ ’ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮ ರಾಜ್ಯದ ಎಲ್ಲಾ ಕಡೆ ಏಕ ಕಾಲದಲ್ಲಿ ’ನನ್ನ ನಾಡು – ನನ್ನ ಹಾಡು ’ ಸಮೂಹ ಗೀತಗಾಯನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲೂ ನಡೆಯಿತು.
ನಾಡಿನ ಎಲ್ಲಾ ಜನರ ಭಾವನೆ ಮತ್ತೊಮ್ಮೆ ಉದ್ದೀಪನ:
ಕೋಟಿ ಕಂಠ ಗಾಯನದ ಕೊನೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಈ ನಾಡಿನ ಎಲ್ಲಾ ಜನರ ಭಾವನೆ ಮತ್ತೊಮ್ಮೆ ಉದ್ದೀಪನಗೊಳಿಸುವ ಕೆಲಸ ಸರಕಾರದಿಂದ ಆಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ ಮಂಗಳೂರು, ತಾಲೂಕು ಆಡಳಿತ ಪುತ್ತೂರು ಇದರ ವತಿಯಿಂದ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಸೀಲ್ದಾರ್ ನಿಸರ್ಗಪ್ರಿಯ, ಪೌರಾಯುಕ್ತ ಮಧು ಎಸ್ ಮನೋಹರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ನಗರಸಭಾ ಸದಸ್ಯರು ಸಹಿತ ವಿವಿಧ ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ಸೇರಿ ಒಟ್ಟು ೩ಸಾವಿರ ಮಂದಿ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ, ಉದಯವಾಗಲಿ ಕನ್ನಡ ನಾಡು, ಭಾರಿಸು ಕನ್ನಡ ಡಿಂಡಿಮವಾ,ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಒಟ್ಟು ಆರು ಗಾಯನ ಹಾಡಲಾಯಿತು.
ವಿದುಷಿ ಸುಚಿತ್ರಾ ಹೊಳ್ಳ, ವಿದುಷಿ ಶುಭಾ ರಾವ್, ವಿದುಷಿ ಪವಿತ್ರಾ ರೂಪೇಶ್, ಸ್ಮಿತಾಶ್ರೀ ಬಿ, ಶಶಿಕಲಾ ಟಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಅವರು ಹಾಡು ಹಾಡುತ್ತಿದ್ದಂತೆ ಎಲ್ಲರು ಧ್ವನಿಗೂಡಿಸಿದರು. ಹಾಡಿನ ಕೊನೆಯಲ್ಲಿ ಕೊಂಬೆಟ್ಟು ಸ.ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಸಂತ ಮೂಲ್ಯ ಕೋಟಿ ಕಂಠ ಸಂಕಲ್ಪ ವಿಧಿ ಕಾರ್ಯಕ್ರಮ ನಡೆಯಿತು. ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಉಪನ್ಯಾಸಕ ಈಶ್ವರ ಭಟ್ ಸ್ವಾಗತಿಸಿದರು. ಶಿವರಾಮ ಕಾರಂತ ಪ್ರೌಢಶಾಲೆಯ ಮುಖ್ಯಗುರು ಜಲಜಾಕ್ಷಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.