ಅವಕಾಶ ಸದುಪಯೋಗಪಡಿಸಿಕೊಂಡು ಬೆಳೆಯಬೇಕು; ಸಚಿವ ಎಸ್.ಅಂಗಾರ
ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇದರ ಸಹಯೋಗದಲ್ಲಿ ಎರಡು ದಿನ ನಡೆಯುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ 2022-23ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಉದ್ಘಾಟನಾ ಸಮಾರಂಭ ಅ.28ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಚಿವರು, ತಮ್ಮಲ್ಲಿನ ಪ್ರತಿಭೆ ಗುರುತಿಸಿಕೊಳ್ಳಬೇಕಾದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ಇದರಿಂದ ನಮಲ್ಲಿರುವ ಪ್ರತಿಭೆ ಸಾರ್ವಜನಿಕವಾಗಿ ಬಹಿರಂಗಗೊಂಡು ಇತರರಿಂದಲೂ ಪ್ರೋತ್ಸಾಹ, ಪ್ರೇರಣೆ ಸಿಗಲಿದೆ. ಪ್ರತಿಭೆಗೂ ಗೌರವ ದೊರೆತು ವ್ಯಕ್ತಿತ್ವವೂ ಬೆಳೆಯಲಿದೆ. ಆದ್ದರಿಂದ ಸಿಗುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಬೆಳೆಯಬೇಕು. ಈ ಮೂಲಕ ನಮ್ಮ ಬೆಳವಣಿಗೆಯೂ ವೃದ್ಧಿಸಿಕೊಳ್ಳಬೇಕೆಂದು ಹೇಳಿದರು. ಜಾತಿಗೆ ಪೈಪೋಟಿ ನೀಡುವುದರಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿರುವ ನೀತಿಯಿಂದ ಪೈಪೋಟಿ ನೀಡಬೇಕು. ಇದಕ್ಕೆ ಸಮಾಜವೂ ತಲೆಬಾಗುತ್ತದೆ. ಇದರಿಂದ ಜಾತಿಗೂ, ನೀತಿಗೂ ಗೌರವ ಸಿಗಲಿದೆ. ವಿದ್ಯಾರ್ಥಿಗಳು ಈ ಬಗ್ಗೆ ತಿಳಿದುಕೊಂಡು ಸಾಧನೆ ಮಾಡಬೇಕೆಂದು ಸಚಿವ ಎಸ್.ಅಂಗಾರ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ, ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಶಾಲೆಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಡೆದಿಲ್ಲ. ಶಿಕ್ಷಣ ನೀಡುವುದೇ ಮುಖ್ಯವಲ್ಲ. ಶಿಕ್ಷಣದ ನಡುವೆ ಮಕ್ಕಳು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಅವರ ಮಾನಸಿಕ, ದೈಹಿಕ ಸಾಮರ್ಥ್ಯ ವೃದ್ಧಿಯಾಗಿ ಅವರು ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಶಿಕ್ಷಣ ಸಿಗಲು ತಪಸ್ಸು ಮಾಡಬೇಕು. ಇದರಿಂದ ಪೋಷಕರ ಕನಸು ನನಸು ಆಗಲಿದೆ. ಇದಕ್ಕೆ ಪ್ರತಿಭಾ ಕಾರಂಜಿಯೂ ಪೂರಕವಾಗಿದೆ ಎಂದು ಹೇಳಿದ ಅವರು, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಸಲು ರಾಮಕುಂಜೇಶ್ವರ ವಿದ್ಯಾಸಂಸ್ಥೆಯವರು ಸಹಕಾರ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ವಿಶೇಷ ಆಹ್ವಾನಿತರಾಗಿದ್ದ ನಾಟಕ, ಚಲನಚಿತ್ರ ಕಲಾವಿದ ರವಿ ರಾಮಕುಂಜ ಮಾತನಾಡಿ, ಪ್ರತಿ ವಿದ್ಯಾರ್ಥಿಗಳಲ್ಲೂ ಪ್ರತಿಭೆಗಳಿದ್ದು ಇದನ್ನು ಪ್ರದರ್ಶಿಸುವ ಮೂಲಕ ಇತಿಹಾಸದ ಪುಟಕ್ಕೆ ಸೇರಬೇಕೆಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ. ಮಾತನಾಡಿ, ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯುತ್ತಿರುವುದು ಅತೀವ ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ನಡೆದಲ್ಲಿ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗಲಿದೆ. ಇದೊಂದು ಮಾದರಿ ಕಾರ್ಯಕ್ರಮ ಎಂದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ಕಾರ್ಯದರ್ಶಿ ಶೇಷಪ್ಪ ರೈ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕಿ ಅಮೃತಕಲಾ, ಸಮನ್ವಯಾಧಿಕಾರಿ ನವೀನ್ ವೇಗಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್‌ಕುಮಾರ್ ನೆಲ್ಯಾಡಿ, ಪುತ್ತೂರು ತಾಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ, ಪುತ್ತೂರು ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಕಡಬ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಕಾರ್ಯದರ್ಶಿ ದೇವಿಪ್ರಸಾದ್, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್‌ಕುಮಾರ್ ರೈ, ಕಾರ್ಯದರ್ಶಿ ನಾಗೇಶ್ ಪಾಟಾಳಿ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಪ್ರೌಢಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ, ಪಿಡಬ್ಲ್ಯುಡಿ ಇಂಜಿನಿಯರ್ ಪ್ರಮೋದ್‌ಕುಮಾರ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಟಿ.ನಾರಾಯಣ ಭಟ್, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ. ಸ್ವಾಗತಿಸಿ, ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ರತ್ನಾಕುಮಾರಿ ವಂದಿಸಿದರು. ಶಿಕ್ಷಕ ದಿನೇಶ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.
ಸನ್ಮಾನ:
ತುಳು ಚಲನಚಿತ್ರ, ನಾಟಕ ಕಲಾವಿದ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ರವಿ ರಾಮಕುಂಜರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್‌ರವರು ರವಿ ರಾಮಕುಂಜ ಅವರನ್ನು ಪರಿಚಯಿಸಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಚಲನಚಿತ್ರ ನಟ ರವಿ ರಾಮಕುಂಜ ಇವರು ನೀಡಿದ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿನಿ ಅಶ್ವಿನಿಯವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಉದ್ಘಾಟಕರಾದ ಸಚಿವ ಎಸ್.ಅಂಗಾರ, ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಅವರಿಗೆ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.