ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕರ ದಿನದ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

0

ಮೊ|ಪತ್ರಾವೋರವರ ಕೊಡುಗೆಯ ಫಲವನ್ನಿಂದು ನಾವು ಅನುಭವಿಸುತ್ತಿದ್ದೇವೆ-ವಂ|ವಲೇರಿಯನ್ ಡಿ’ಸೋಜ

ಪುತ್ತೂರು: ಕುಗ್ರಾಮವೆನಿಸಿದ ಪುತ್ತೂರಿನ ಈ ಗ್ರಾಮೀಣ ಪ್ರದೇಶದಲ್ಲಿ ಅಂದು ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರು ತಮ್ಮ ದೂರದೃಷ್ಟಿತ್ವದ ಕನಸಿನ ಚಿಂತನೆಯ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನೆಬ್ಬಿಸಿದ ಮೇರುಚೇತನ ಅವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೊಡುಗೆಯ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ ಎಂದು ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಮಾಜಿ ಸಂಚಾಲಕರಾದ ವಂ|ವಲೇರಿಯನ್ ಡಿ’ಸೋಜರವರು ಹೇಳಿದರು.

ಶಿಕ್ಷಣ ಶಿಲ್ಪಿ ಎಂದೇ ಕರೆಯಲ್ಪಡುವ ಮೊ|ಆಂಟನಿ ಪತ್ರಾವೋರವರ ಹೆಸರಿನಲ್ಲಿ ಹಮ್ಮಿಕೊಳ್ಳಲಾಗುವ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವು ಅ.28 ಹಾಗೂ 29 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ್ದು, ಈ ಕ್ರೀಡಾಕೂಟದಲ್ಲಿ ಅವರು ಕ್ರೀಡಾಧ್ವಜಾರೋಹಣಗೈಯ್ದು, ಬಲೂನ್‌ಗಳ ಗೊಂಚಲನ್ನು ಆಗಸಕ್ಕೆ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

90ರ ಹುಟ್ಟುಹಬ್ಬವನ್ನು ಪೂರೈಸಿರುವ ನನಗೆ ತಾನು ಸಂಚಾಲಕತ್ವವನ್ನು ವಹಿಸಿದ್ದ ಈ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಯ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ನನ್ನ ಅವಿಷ್ಮರಣೀಯ ಕ್ಷಣವಾಗಿದೆ.

ಮಾಯಿದೆ ದೇವುಸ್ ಚರ್ಚ್‌ನಲ್ಲಿ ತಾನು ಏಳು ವರ್ಷ ಐದು ತಿಂಗಳು ಸಂಚಾಲಕರಾಗಿ ಸೇವೆಗೈಯ್ದಿರುತ್ತೇನೆ. ಅಂದಿನ ಪೂಜ್ಯ ಬಿಷಪರು ತನ್ನನ್ನು ಸಂಚಾಲಕರಾಗಿ ಮಾಯಿದೆ ದೇವುಸ್ ಚರ್ಚ್‌ಗೆ ಹೋಗಬೇಕು ಎಂದಾಗ ನನಗೆ ಏನೋ ಅಂಜಿಕೆ ಆಗಿತ್ತು. ಯಾಕೆಂದರೆ ಇಲ್ಲಿ ಮೊ|ಪತ್ರಾವೋರವರು ಸಂಚಾಲಕರಾಗಿದ್ದು, ಅವರ ಸ್ಥಾನವನ್ನು ನಾನು ಹೇಗೆ ತುಂಬಲಿ ಎನ್ನುವುದೇ ನನ್ನ ಅಂಜಿಕೆಯ ಹಿಂದಿನ ಉದ್ದೇಶವಾಗಿತ್ತು ಎಂದ ಅವರು ಶಿಸ್ತಿಗೆ ಹೆಸರುವಾಸಿಯಾಗಿರುವ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿ ಕ್ರೀಡಾಪಟುಗಳು ಕ್ರೀಡೆಯನ್ನು ಕ್ರೀಡಾಸ್ಫೂರ್ತಿಯಿಂದ ಆಡಬೇಕು, ಆಡಿ ಪ್ರಜ್ವಲಿಸಬೇಕು ಎಂದು ಹೇಳಿ ತಾನು ಸೇವೆಗೈಯ್ದ ಸಂದರ್ಭದಲ್ಲಿ ಸಂಸ್ಥೆಯನ್ನು ಬೆಳೆಸಿದ ಗಣ್ಯ ವ್ಯಕ್ತಿಗಳಾದ ವಂ|ಸೆರಾವೋ, ಮಿಸ್ ಫೆರ್ನಾಂಡೀಸ್, ಮಿಸ್ ಡೋರಿನ್ ಮಿನೇಜಸ್, ಡೆನ್ನಿಸ್ ಡಿ’ಸೋಜ, ಮೇಜರ್ ವೆಂಕಟ್ರಾಮಯ್ಯ ಹಾಗೂ ಲೂವಿಸ್ ಮಸ್ಕರೇನ್ಹಸ್(ಎನ್‌ಡಿಎಸ್)ರವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.


ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯೊಂದಿಗೆ ಭಾಗವಹಿಸಿ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ್ದ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳು ಅಂದಿನಿಂದ ಇಂದಿನವರೆಗೆ ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾದ ಮಹಾನ್ ಚೇತನರಾಗಿರುವ ಮೊ|ಪತ್ರಾವೋರವರಿಗೆ ನಮಿಸುತ್ತಾ ಅವರಿಗೆ ಇಂದು ನಾವು ಕೃತಜ್ಞತೆ ಸಲ್ಲಿಸಬೇಕಾಗಿದೆ. ನಮ್ಮ ವಿದ್ಯಾಸಂಸ್ಥೆಗಳ ಉದ್ದೇಶ ಎಲ್ಲರಲ್ಲೂ ಏಕತೆ ಮೂಡಿಸುವಂತಹುದು. ದೇವಮಾತೆಯ ಸಂಸ್ಥೆಯಲ್ಲಿ ನಾವೆಲ್ಲರೂ ಒಂದೇ ಎಂಬಂತೆ ಬದುಕುವ ಮೂಲಕ ಜೀವನದಲ್ಲಿ ಸಾರ್ಥಕೈ ಪಡೆಯಬೇಕಾಗಿದೆ. ಮಾಯಿದೆ ದೇವುಸ್ ಚರ್ಚ್‌ಗೆ ಸೇರಿದ ಏಳು ವಿದ್ಯಾಸಂಸ್ಥೆಗಳು ಒಗ್ಗೂಡಿ ಉತ್ಸವ ಎಂಬಂತೆ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದ ಅವರು ಇದೇ ಅಕ್ಟೋಬರ್ ತಿಂಗಳಿನ 15ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿ ಇಲ್ಲಿಗೆ ಆಗಮಿಸಿರುವ ವಂ|ವಲೇರಿಯನ್ ಡಿ’ಸೋಜರವರ ಉತ್ಸುಕತೆಯು ಯುವಸಮೂಹವನ್ನು ನಾಚಿ ನೀರಾಗಿಸುವಂತಹುದು. ವಂ|ವಲೇರಿಯನ್ ಡಿ’ಸೋಜರವರಂತೆ ಚೈತನ್ಯವು ನಾವೆಲ್ಲರೂ ಪಡೆಯೋಣ. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಸಂಸ್ಥೆಗೆ ಹೆಸರು ತರುವಂತಾಗಲಿ ಎಂದು ಅವರು ಹೇಳಿದರು.


ಮೊ|ಪತ್ರಾವೋ ಪ್ರತಿಮೆಗೆ ಹಾರಾರ್ಪಣೆ:
ಸಭಾ ಕಾರ್ಯಕ್ರಮದ ಆರಂಭದಲ್ಲಿ ಫಿಲೋಮಿನಾ ಕಾಲೇಜು ಕ್ಯಾಂಪಸ್ಸಿನ ಫಿಲೋಮಿನಾ ಪ್ರೌಢಶಾಲಾ ಬಳಿಯಿರುವ ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋರವರ ಪ್ರತಿಮೆಗೆ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಮಾಜಿ ಸಂಚಾಲಕ ವಂ|ವಲೇರಿಯನ್ ಡಿ’ಸೋಜರವರು ಹಾರಾರ್ಪಣೆ ಮಾಡಿ ನಮಸ್ಕರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಬ್ಯಾಂಡ್ ವಾದ್ಯದ ವಿದ್ಯಾರ್ಥಿನಿ ಅತಿಥಿಗಳಿಗೆ ರಾಯಲ್ ಸೆಲ್ಯೂಟ್ ಹೊಡೆಯುವ ಮೂಲಕ ಬ್ಯಾಂಡ್ ವಾದ್ಯ, ಬೆಟ್ಟಂಪಾಡಿಯ ಯುವಕರ ಚೆಂಡೆ ವಾದ್ಯ, ಗೊಂಬೆ ಕುಣಿತದೊಂದಿಗೆ ಅತಿಥಿಗಳನ್ನು ಮೆರವಣಿಗೆಯ ಮೂಲಕ ವೈಭವಯುತವಾಗಿ ವೇದಿಕೆಗೆ ಕರೆ ತರಲಾಯಿತು.

ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಸ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೌರಿಸ್ ಕುಟಿನ್ಹಾ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೊ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಮೇಶ್ ಸಿ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆರಿ ಡಿ’ಸೋಜ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ್ ಪೈ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿ’ಸೋಜ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸಂಹಿತಾ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಸ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗುರುರಾಜ್, ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್, ಧರ್ಮಭಗಿನಿಯರು ಸಹಿತ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಿಲೋಮಿನಾ ಕಾಲೇಜಿನ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ವಂದಿಸಿ, ಫಿಲೋಮಿನಾ ಪದವಿ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರ ಮುಂದಾಳತ್ವದಲ್ಲಿ ಆಯಾ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರು, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ ವೃಂದ, ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವೃಂದ ಸಹಕರಿಸಿದರು.

ಕ್ರೀಡಾಜ್ಯೋತಿ ಮೆರವಣಿಗೆ….
ಕ್ರೀಡಾಕೂಟದ ಪ್ರಯುಕ್ತ ಆರಂಭದಲ್ಲಿ ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಉರಿಸಿದ ಕ್ರೀಡಾಜ್ಯೋತಿಯನ್ನು ಫಿಲೋಮಿನಾ ಕಾಲೇಜಿನ ರಾಷ್ಟ್ರ ಮಟ್ಟದ ಕ್ರೀಡಾಪಟು ದಿಲನ್ ರೈಯವರ ಕೈಗಿತ್ತು, ಬಳಿಕ ಉರಿಸಿದ ಕ್ರೀಡಾಜ್ಯೋತಿಯೊಂದಿಗೆ ಹಿರಿಯ-ಕಿರಿಯ ವಿದ್ಯಾರ್ಥಿ ಕ್ರೀಡಾಪಟುಗಳು ನಗರದ ಮುಖ್ಯರಸ್ತೆ ಮೂಲಕ ಸಾಗಿ ಕಲ್ಲಾರೆ-ದರ್ಬೆ ಮುಖೇನ ಫಿಲೋಮಿನಾ ಕ್ರೀಡಾಂಗಣಕ್ಕೆ ಪ್ರವೇಶಿಸಿ, ಕ್ರೀಡಾಂಗಣಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕ್ರೀಡಾಜ್ಯೋತಿಯನ್ನು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾದ ತ್ರಿಶೂಲ್ ಹಾಗೂ ರಕ್ಷಾ ಅಂಚನ್‌ರವರು ಮುಖ್ಯ ಅತಿಥಿ ವಂ|ವಲೇರಿಯನ್ ಡಿ’ಸೋಜರವರಿಗೆ ಹಸ್ತಾಂತರಿಸಿದರು. ವಂ|ವಲೇರಿಯನ್ ಡಿ’ಸೋಜರವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡೋತ್ಸವಕ್ಕೆ ಚಾಲನೆಯಿತ್ತರು. ಬಳಿಕ ಕ್ರೀಡಾಜ್ಯೋತಿಯನ್ನು ಕಾಲೇಜ್‌ನ ಸಿಲ್ವರ್ ಜ್ಯುಬಿಲಿ ಸಭಾಂಗಣದ ಮೇಲಿನ ಪೀಠದಲ್ಲಿ ಇರಿಸಿ ಉರಿಸಲಾಯಿತು.

ಆಕರ್ಷಕ ಪಥಸಂಚಲನ…
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಾದ ಫಿಲೋಮಿನಾ ಕಾಲೇಜು, ಫಿಲೋಮಿನಾ ಪ.ಪೂರ್ವ ಕಾಲೇಜು, ಫಿಲೋಮಿನಾ ಪ್ರೌಢಶಾಲೆ, ವಿಕ್ಟರ್ ಬಾಲಿಕಾ ಪ್ರೌಢಶಾಲೆ, ವಿಕ್ಟರ್ ಆಂಗ್ಲ ಮಾ.ಹಿ.ಪ್ರಾ ಶಾಲೆ, ಮಾಯಿದೆ ದೇವುಸ್ ಹಿ.ಪ್ರಾ. ಶಾಲೆ, ಫಿಲೋಮಿನಾ ಆಂಗ್ಲ ಮಾ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳು, ಫಿಲೋಮಿನಾ ಪಿಯು ಹಾಗೂ ಪದವಿ ಕಾಲೇಜಿನ ಎನ್‌ಸಿಸಿ ಘಟಕದ ೪೮ ಕೆಡೆಟ್‌ಗಳು, ಎನ್‌ಎಸ್‌ಎಸ್ ವಿದ್ಯಾರ್ಥಿ ಘಟಕ ಸೇರಿದಂತೆ ಸುಮಾರು ೩ ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಆಯಾ ಶಾಲಾ ಧ್ವಜದೊಂದಿಗೆ ಆಕರ್ಷಕ ಪಥಸಂಚಲನದಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಂಡು ಮುಖ್ಯ ಅತಿಥಿ ವಂ|ವಲೇರಿಯನ್ ಡಿ’ಸೋಜರವರಿಂದ ಗೌರವ ವಂದನೆ ಸ್ವೀಕರಿಸಿದರು. ಪದವಿ ವಿದ್ಯಾರ್ಥಿನಿ, ಸೀನಿಯರ್ ಅತ್ಲೀಟ್ ಬ್ಯೂಲಾ ಪಿ.ಟಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಗೌರವಾರ್ಪಣಾ ಸನ್ಮಾನ..
ಮಾಯಿದೆ ದೇವುಸ್ ಚರ್ಚ್‌ನಲ್ಲಿ 7 ವರ್ಷ ಪ್ರಧಾನ ಧರ್ಮಗುರುಗಳಾಗಿ, ಶಾಲಾ-ಕಾಲೇಜು ಸಂಚಾಲಕರಾಗಿ ಸೇವೆಗೈಯ್ದ ಸಂದರ್ಭದಲ್ಲಿ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬದ ಸಭಾಭವನ ನಿರ್ಮಾಣ, ಗುರುದೀಕ್ಷೆಯ 25 ಸಂವತ್ಸರಗಳನ್ನು ಪೂರೈಕೆ, ಮಾಯಿದೆ ದೇವುಸ್ ಶಾಲಾ ಕಟ್ಟಡ ಹಾಗೂ ಚರ್ಚ್ ಆವರಣದ ಹೊರಗೆ ಅಂಗಡಿ ಸಂಕೀರ್ಣದ ನಿರ್ಮಾಣ, ಮಾಯಿದೆ ದೇವುಸ್ ಚರ್ಚ್‌ನಲ್ಲಿ ಧರ್ಮಗುರುಗಳ ನಿವಾಸದ ನಿರ್ಮಾಣದ ಜೊತೆಗೆ ಕಳೆದ ಅಕ್ಟೋಬರ್‌ನಲ್ಲಿ 90 ವರ್ಷವನ್ನು ಪೂರೈಸಿದ ವಂ|ವಲೇರಿಯನ್ ಡಿ’ಸೋಜರವರನ್ನು ಸಂಸ್ಥೆಯ ವತಿಯಿಂದ ಗೌರವಾರ್ಪಣಾ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ವಂ|ವಲೇರಿಯನ್ ಡಿ’ಸೋಜರವರು, ತನಗೆ ಇಂದಿಲ್ಲಿ ಮಾಡಿದ ಸನ್ಮಾನವನ್ನು ನಾನು ಮೊ|ಪತ್ರಾವೋರವರಿಗೆ ಅರ್ಪಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ವಂ|ಆಂಟನಿ ಮೊಂತೇರೊರವರ ಮುಂದಾಳತ್ವದಲ್ಲಿ ಕಾಲೇಜು ಡೀಮ್ಡ್ ಯೂನಿವರ್ಸಿಟಿಯಾಗಿ ಹೊರ ಹೊಮ್ಮಲಿ ಎಂದರು.

LEAVE A REPLY

Please enter your comment!
Please enter your name here