ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಉದ್ಯೋಗ ಕೋಶ ಇವುಗಳ ಸಂಯುಕ್ತಾಶ್ರಯದಲ್ಲಿ, ವಿಜ್ಞಾನ ಪದವೀಧರರಿಗೆ ಕ್ಯಾಂಪಸ್ ರಿಕ್ರೂಟ್ಮೆಂಟ್ ಅ. 28 ರಂದು ಜರಗಿತು. ಮಂಗಳೂರು, ಉಡುಪಿ ಹಾಗೂ ಮಡಿಕೇರಿ ಸೇರಿದ ವಿವಿಧ ಪದವಿ ಕಾಲೇಜುಗಳಿಂದ ಸುಮಾರು ನೂರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು.
ಮಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿ, ಮೈಸೂರು, ಯುಎಸ್ಎ ಹಾಗೂ ಫಿಲಿಪೈನ್ಸ್ ನಲ್ಲಿ ತಮ್ಮ ಕಾರ್ಯ ವ್ಯಾಪ್ತಿ ಹೊಂದಿರುವ ಹೆಸರಾಂತ ಕಂಪೆನಿಯಾದ ಗ್ಲೋ ಟಚ್ ಟೆಕ್ನಾಲಜೀಸ್, ಮಂಗಳೂರು ಇವರು ವಿವಿಧ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದರು. ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿಯವರ ಮಾರ್ಗದರ್ಶನದಲ್ಲಿ ಜರುಗಿದ ಈ ಉದ್ಯೋಗ ಮೇಳವು, ಉದ್ಯೋಗ ಕೋಶದ ಸಂಚಾಲಕರಾದ ಪ್ರೊ. ಅನಂತ್ ಭಟ್, ಐಕ್ಯುಎಸಿ ಸಂಚಾಲಕ ಡಾ. ಕಾಂತೇಶ್ ಎಸ್. ಇವರ ನೇತೃತ್ವದಲ್ಲಿ ಜರಗಿತು. ಗ್ಲೋಟಚ್ ಟೆಕ್ನಾಲಜಿಸ್ ಇದರ ನಿರ್ದೇಶಕರಾದ (ಟ್ಯಾಲೆಂಟ್ ಅಕ್ವಿಸಿಷನ್) ಶ್ರಿನಿವಾಸ್ ಭಟ್ ಮತ್ತು ತಂಡದವರು ನೇಮಕಾತಿ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಾಲೇಜಿನ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಅನುಷ್ಠಾನದಲ್ಲಿ ಸಹಕರಿಸಿದರು.