ವಿಟ್ಲ: ಸರಿಸುಮಾರು 130 ಕೋಟಿ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ವಿಶ್ವಸುಂದರಿ, ಮಿಸ್ ಇಂಡಿಯಾದಂತಹ ಶ್ರೇಷ್ಠ ಪ್ರಶಸ್ತಿಗಳಿಗೆ ಬಂಟ ಸುಂದರಿಯರು ಭಾಜನರಾಗುತ್ತಿರುವುದು, ಬಂಟರ ಶ್ರೇಷ್ಠತೆಯನ್ನು, ಗೌರವವನ್ನು ಎತ್ತಿ ತೋರಿಸುತ್ತದೆ ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.
ಮಾಣಿ ವಲಯ ಬಂಟರ ಸಂಘದ ಆಶ್ರಯದಲ್ಲಿ ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ಜರಗಿದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಂಟರು ಇನ್ನೊಬ್ಬರನ್ನು ಯಾವತ್ತೂ ಅನುಕರಣೆ ಮಾಡುವವರಲ್ಲ. ನಮ್ಮದೇ ಆದ ವ್ಯಕ್ತಿತ್ವ ನಮಗಿದೆ. ಇದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮಾತ್ರವಲ್ಲದೆ ಇನ್ನೊಬ್ಬರ ಕಷ್ಟದಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಸಮಾಜಮುಖಿಗಳಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪುತ್ತೂರು ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಕು. ಹಸ್ತಾ.ಪಿ.ಶೆಟ್ಟಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕಾರ್ಯಕಾರಿ ಸಮಿತಿ ಸದಸ್ಯ ಮುಂಡಡ್ಕಗುತ್ತು ರತ್ನಾಕರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ.ಎಸ್.ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ವಿಜೇತ ಗಂಗಾಧರ ರೈ ಅನಂತಾಡಿ, ಅರಣ್ಯಾಧಿಕಾರಿ ಕು.ಹಸ್ತಾ.ಪಿ.ಶೆಟ್ಟಿ, ಕ್ರೀಡಾ ಸಾಧಕರಾದ ಧನುಶ್ ಶೆಟ್ಟಿ, ರಿಷಬ್ ರೈ ಇವರನ್ನು ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭ:
ಬೆಳಗ್ಗೆ ಜರಗಿದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ.ಗಂಗಾಧರ ರೈ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲ ಶೆಟ್ಟಿಯವರು ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶೇಖರ ಶೆಟ್ಟಿ ಭಾಗವಹಿಸಿದ್ದರು.
ಸಂಘದ ಮಾಜಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಗೌರವಾಧ್ಯಕ್ಷೆ ಪ್ರಫುಲ್ಲಾ.ಆರ್.ರೈ, ಗೌರವ ಸಲಹೆಗಾರ ಪುಷ್ಪರಾಜ್ ಹೆಗ್ಡೆ, ನಿಕಟಪೂರ್ವಾಧ್ಯಕ್ಷ ಪ್ರವೀಣ್ ರೈ ಕಲ್ಲಾಜೆ ಮತ್ತು ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಗಂಗಾಧರ ರೈ ತುಂಗೆರೆಕೋಡಿ ಸ್ವಾಗತಿಸಿದರು. ಕಾರ್ಯದರ್ಶಿ ರತ್ನಾಕರ ರೈ ಶಬರಿ, ಕೋಶಾಧಿಕಾರಿ ಸಜಿತ್ ಶೆಟ್ಟಿ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ವಿಜೇತ್ ರೈ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಮಾಜ ಬಾಂಧವರಿಗೆ ವೈಯಕ್ತಿಕ ಮತ್ತು ಗುಂಪು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.