ಪುತ್ತೂರು: ಅ.2ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಜ್ಞಾನ ದೀವಿಗೆ ಶಿರೋನಾಮೆಯ ಉಪನ್ಯಾಸ ಕೌಶಲ್ಯ ತರಬೇತಿ ಘಟಕದ ಉದ್ಘಾಟನಾ ಸಮಾರಂಭವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಟುಕುಕ್ಕೆ ಇಲ್ಲಿನ ಪ್ರಾಂಶುಪಾಲರಾದ ಪದ್ಮನಾಭ ಶೆಟ್ಟಿ ಅವರು “ಪ್ರತಿಯೊಬ್ಬ ವಿದ್ಯಾರ್ಥಿಗೂ ಅಂತರ್ಗತವಾದ ಶಕ್ತಿ ಇದೆ, ಆ ಶಕ್ತಿಯನ್ನು ಗುರುತಿಸಿ ಪೂರ್ಣತೆಯೆಡೆಗೆ ಕೊಂಡೊಯ್ಯಬೇಕು. ಶಿಕ್ಷಕ / ಶಿಕ್ಷಕಿಯಾಗುವುದು ನೀವು ಆಯ್ಕೆ ಮಾಡಿಕೊಂಡ ವೃತ್ತಿಯಾಗಬೇಕೇ ಹೊರತು ಆಕಸ್ಮಿಕವಾಗಿ ಪಡೆದ ವೃತ್ತಿಯಾಗಬಾರದು.
ವಿದ್ಯಾಬ್ಯಾಸದ ಜೊತೆಗೆ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ದೈರ್ಯ ಇರಬೇಕು. ಶಿಕ್ಷಕ ಪರಿಣಾಮಕಾರಿಯಾಗಿ ವಿಷಯವನ್ನು ಬೋಧಿಸಲು ಕೌಶಲ್ಯದ ಅಗತ್ಯ ಇರುತ್ತದೆ. ಆ ಕೌಶಲ್ಯವನ್ನು ಕಲಿಸಲು ಜ್ಞಾನದೀವಿಗೆ ಸಹಕಾರಿಯಾಗಿದೆ.” ಎಂದು ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ವರದರಾಜ ಚಂದ್ರಗಿರಿ ಇವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಸಂವಹನ ಕೌಶಲ್ಯವೆಂಬುದು ಕೇವಲ ಶಿಕ್ಷಕ ವೃತ್ತಿಯಲ್ಲಿ ಮಾತ್ರವಲ್ಲ, ಎಲ್ಲಾ ವೃತ್ತಿಗಳಿಗೆ ಅಗತ್ಯವಾಗಿದೆ. ಈ ಉಪನ್ಯಾಸ ಕೌಶಲ್ಯ ತರಬೇತಿ ಘಟಕ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಕಾಂತೇಶ್ . ಎಶ್ ಇವರು ಶಿಕ್ಷಕ ವೃತ್ತಿಯು ಸುಲಭದ ವೃತ್ತಿಯಲ್ಲ. ಅಪಾರವಾದ ಜ್ಞಾನವನ್ನು, ಸಂವಹನ ಕೌಶಲ್ಯವನ್ನು ಹೊಂದಿರಬೇಕು.ಜ್ಞಾನದೀವಿಗೆ ಜ್ಞಾನದ ವೇದಿಕೆಯಾಗಿದೆ ಎಂದು ಹೇಳಿದರು.
ಪ್ರಸ್ತಾವಿಕ ನುಡಿಗಳನ್ನಾಡುತ್ತಾ ಕಾರ್ಯಕ್ರಮನ್ನು ಆರಂಭಿಸಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ. ತಿಮ್ಮಯ್ಯ .ಎಲ್. ಎಮ್ ಅವರು ಜ್ಞಾನದೀವಿಗೆ ಎಂಬ ಉಪನ್ಯಾಸ ಕೌಶಲ್ಯ ತರಬೇತಿ ಘಟಕ ಹಾಗೂ ಇದರ ಉದ್ದೇಶದ ಬಗ್ಗೆ ಸರಳವಾಗಿ ವಿವರಿಸಿ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಗಣ್ಯವ್ಯಕ್ತಿಗಳನ್ನು ಸ್ವಾಗತಿಸಿದರು.
ಅರ್ಥಶಾಸ್ತ್ರದ ಉಪನ್ಯಾಸಕಿ ಜ್ಯೋತಿ ರೈ ವಂದಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿಆಶಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.