ಶಿಥಿಲಗೊಂಡ ಪಂಚೋಡಿ-ಗಾಳಿಮುಖ-ಕರ್ನೂರು ರಸ್ತೆ ದುರಸ್ತಿಗಾಗ್ರಹಿಸಿ ನಾಗರಿಕರ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ತಿಂಗಳೊಳಗೆ ದುರಸ್ತಿ ಮಾಡದೇ ಇದ್ದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ : ಕಾವು ಹೇಮನಾಥ ಶೆಟ್ಟಿ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಅಂತರ್ರಾಜ್ಯ ಸಂಪರ್ಕ ರಸ್ತೆಯಾಗಿರುವ ಪಂಚೋಡಿ-ಗಾಳಿಮುಖ- ಕರ್ನೂರು ರಸ್ತೆಯು ತೀರಾ ಹದಗೆಟ್ಟಿದೆ. ರಸ್ತೆ ದುರಸ್ತಿಗಾಗ್ರಹಿಸಿ ಕಳೆದ ಹಲವು ವರ್ಷಗಳಿಂದ ಇಲ್ಲಿನ ನಾಗರಿಕರು ಪ್ರತಿಭಟನೆ, ಹೋರಾಟ ಮಾಡುತ್ತಿದ್ದರೂ ಇದುವರೆಗೂ ಇಲ್ಲಿನ ರಸ್ತೆ ಅಭಿವೃದ್ದಿ ಕಾಣಲಿಲ್ಲ, ಮುಂದಿನ ಒಂದು ತಿಂಗಳೊಳಗೆ ಈ ರಸ್ತೆಯನ್ನು ದುರಸ್ತಿ ಮಾಡದೇ ಇದ್ದಲ್ಲಿ ನಾಗರಿಕರ ಜೊತೆ ಸೇರಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ರಸ್ತೆ ದುರಸ್ತಿಗಾಗ್ರಹಿಸಿ ಗಾಳಿಮುಖ ಜಂಕ್ಷನ್‌ನಲ್ಲಿ ನ.4 ರಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.‌

ಈ ರಸ್ತೆ ಕಳೆದ 40 ವರ್ಷಗಳಿಂದ ಸಮಸ್ಯೆಯಲ್ಲಿದೆ. ವಿನಯ ಕುಮಾರ್ ಸೊರಕೆ ಪುತ್ತೂರಿನ ಶಾಸಕರಾಗಿ, ಜನಾರ್ದನ ಪೂಜಾರಿ ಸಂಸದರಾಗಿದ್ದ ವೇಳೆ ಇಲ್ಲಿನ ರಸ್ತೆ ನಿರ್ಮಾಣ ಕಾರ್ಯ ನಡೆದು ಅಂದು ಈ ರಸ್ತೆ ಡಾಮರೀಕರಣವಾಗಿತ್ತು. ಆ ಬಳಿಕದ ಜನಪ್ರತಿನಿಧಿಗಳು ಈ ರಸ್ತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಈ ರಸ್ತೆ ಕೇರಳವನ್ನು ಸಂಪರ್ಕಿಸುವ ರಸ್ತೆಯಾದರೂ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಶಾಸಕರಾದವರು ಏನು ಮಾಡಿದ್ದಾರೆ?: ಮಲ್ಲಿಕಾಪ್ರಸಾದ್ ಈ ಭಾಗದವರೇ ಆಗಿರುವ ಕಾರಣ ಅವರು ಶಾಸಕರಾದಾಗ ರಸ್ತೆ ಅಭಿವೃದ್ದಿಯಾಗಬಹುದು ಎಂದು ಇಲ್ಲಿನ ಜನ ಖುಷಿ ಪಟ್ಟಿದ್ದರು ಆದರೆ ಅವರು ರಸ್ತೆಗೆ ನಯಾ ಪೈಸೆ ಅನುದಾನವನ್ನು ನೀಡಿಲ್ಲ. ಆ ಬಳಿಕ ಶಾಸಕರಾದ ಶಕುಂತಳಾ ಶೆಟ್ಟಿಯವರು ಕೇವಲ ಭರವಸೆಯನ್ನು ಮಾತ್ರ ನೀಡಿದ್ದರು, ಚುನಾವಣೆ ಸಮಯದಲ್ಲಿ ಭರವಸೆ ಕೊಟ್ಟು ಹೋದವರು ಮತ್ತೆ ಈ ಭಾಗಕ್ಕೆ ತಲೆ ಎತ್ತಿ ನೋಡಲಿಲ್ಲ. ಈಗಿನ ಶಾಸಕ ಸಂಜೀವ ಮಠಂದೂರು ಅವರು ಕೂಡಾ ಈ ರಸ್ತೆ ಅಭಿವೃದ್ದಿಗೆ ಅನುದಾನವನ್ನು ನೀಡುತ್ತಿಲ್ಲ. ಯಾವ ಕಾರಣಕ್ಕೆ ಈ ರಸ್ತೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ. ನಾವು ರಸ್ತೆಗಾಗಿ ರಾಜಕೀಯ ರಹಿತ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ರಸ್ತೆ ಅಭಿವೃದ್ದಿಯಲ್ಲಿ ರಾಜಕೀಯ ಮಾಡಿದರೆ ಅದನ್ನು ದೇವರು ಮೆಚ್ಚಲಾರ. ಜಾತಿ, ಧರ್ಮ ನೋಡಿ ರಾಜಕಾರಣ ಮಾಡಬೇಡಿ. ಶಾಸಕರಾದವರು ಕ್ಷೇತ್ರದ ಎಲ್ಲಾ ಧರ್ಮದವರ ಶಾಸಕರಾಗಿರುತ್ತಾರೆ. ಧರ್ಮ ರಾಜಕಾರಣ ಮಾಡುವುದು ಸರಿಯಲ್ಲ. ಕಾಲ ಎಂದೂ ಒಂದೇ ರೀತಿ ಇರುವುದಿಲ್ಲ, ಜನಪ್ರತಿನಿಧಿಗಳು ದೇವರು ಮೆಚ್ಚದ ಕೆಲಸವನ್ನು ಮಾಡಬೇಡಿ ಎಂದು ಹೇಳಿದ ಹೇಮನಾಥ ಶೆಟ್ಟಿ, ನಾವು ಈ ರಸ್ತೆಯನ್ನು ಅಭಿವೃದ್ದಿ ಮಾಡಿಕೊಡಿ ಎಂದು ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಒಂದು ತಿಂಗಳೊಳಗೆ ಅಭಿವೃದ್ದಿ ಮಾಡದೇ ಇದ್ದಲ್ಲಿ ಆಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದರು.

ಜನಪ್ರತಿನಿಧಿಗಳು ಭರವಸೆ ಮಾತ್ರ ಕೊಟ್ಟಿದ್ದಾರೆ; ಅಶ್ರಫ್ ಕೊಟ್ಯಾಡಿ: ಸ್ಥಳೀಯ ಮುಂದಾಳು ಅಶ್ರಫ್ ಕೊಟ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪಂಚೋಡಿ- ಗಾಳಿಮುಖ ರಸ್ತೆಯನ್ನು ದುರಸ್ಥಿ ಮಾಡಿ ಎಂದು ನಾವು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದೇವೆ. ಪುತ್ತೂರಿನ ಶಾಸಕರಾಗಿದ್ದ ಮಲ್ಲಿಕಾಪ್ರಸಾದ್, ಶಕುಂತಳಾ ಶೆಟ್ಟಿ, ಹಾಲಿ ಶಾಸಕರಾದ ಸಂಜೀವ ಮಠಂದೂರು ಅವರು ಈ ರಸ್ತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಯಾವ ಕಾರಣಕ್ಕೆ ಕಡೆಗಣಿಸಿದ್ದಾರೆ ಎಂಬುದು ಗೊತ್ತಿಲ್ಲ. ಈ ರಸ್ತೆಯು ಅನೇಕ ಪುಣ್ಯ ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಕಳೆದ ಬಾರಿ ಪ್ರತಿಭಟನೆ ನಡೆಸಿದಾಗ ಶಾಸಕ ಮಠಂದೂರು ಅವರು ಈ ರಸ್ತೆಯನ್ನು ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿಸುತ್ತೇನೆ ಎಂದು ಹೇಳಿದ್ದರು. ಆ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ನಾವು ಅಧಿಕಾರಿಗಳ, ಜನಪ್ರತಿನಿದಿಗಳ ವಿರುದ್ದ ಪ್ರತಿಭಟನೆಯನ್ನು ನಡೆಸಿದ್ದು ನಮ್ಮ ಹೋರಾಟವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದು ನಮ್ಮ ಆರಂಭಿಕ ಹೋರಾಟವಾಗಿದ್ದು ದುರಸ್ತಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಹಂತದ ಪ್ರತಿಭಟನೆ , ಸತ್ಯಾಗ್ರಹಗಳು ನಡೆಯಲಿದೆ ಎಂದು ಹೇಳಿದರು.

ಶಾಸಕರ ಪತ್ರ ಇದ್ರೆ ದುರಸ್ಥಿ ಮಾಡುತ್ತಾರಂತೆ; ಅನಿತಾ ಹೇಮನಾಥ ಶೆಟ್ಟಿ: ಈ ರಸ್ತೆಯನ್ನು ದುರಸ್ತಿ ಮಾಡಿ ಎಂದು ನಾನು ಹಲವು ಬಾರಿ ಶಾಸಕರಿಗೆ, ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ಶಾಸಕರ ಪತ್ರ ಇಲ್ಲದೆ ನಾವು ಏನೂ ಮಾಡುವ ಹಾಗಿಲ್ಲ ಎಂದು ಹೇಳುತ್ತಿದ್ದಾರೆ. ಶಾಸಕರ ಪತ್ರಕ್ಕಾಗಿ ನೆಟ್ಟಣಿಗೆ ಮುಡ್ನೂರು ಗ್ರಾಪಂನಿಂದ ಪ್ರೊಪೋಸಲ್ ಲೆಟರ್ ಕಳುಹಿಸಲಾಗಿದೆ. ಶಾಸಕರು ಮನಸ್ಸು ಮಾಡಿದರೆ ರಸ್ತೆಗೆ ಅನುದಾನ ಇಡುವುದಕ್ಕೆ ಏನೂ ಕಷ್ಟವಾಗದು. ನಮ್ಮ ರಸ್ತೆ ನಮ್ಮ ಹಕ್ಕು. ನಾವು ತೆರಿಗೆ ಕಟ್ಟಿದ ಹಣದಿಂದಲೇ ರಸ್ತೆಗೆ ಅನುದಾನವನ್ನು ನೀಡಲಾಗುತ್ತದೆ. ಕಳೆದ 40 ವರ್ಷಗಳಿಂದ ಈ ರಸ್ತೆಯ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳಾಗಿದ್ದ ಶಾಸಕರುಗಳು, ಸಂಸದರು ನಿರ್ಲಕ್ಷ್ಯ ಮಾಡಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಗಡಿನಾಡ ಅಭಿವೃದ್ದಿಯಿಂದ ಅನುದಾನ ತಂದು ಶಾಸಕರಿಗೆ ಈ ರಸ್ತೆಯನ್ನು ದುರಸ್ತಿ ಮಾಡಬಹುದಿತ್ತು, ಅದಕ್ಕೆ ಅವಕಾಶವೂ ಇತ್ತು ಎಂದು ಜಿಪಂ ನಿಕಟಪೂರ್ವ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಕಾಂಗ್ರೆಸ್ ಬೆಲ್ಟ್ ಎಂಬ ಕಾರಣಕ್ಕೆ ಶಾಸಕರು ಅನುದಾನ ನೀಡುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ತಾಳ್ಮೆ ದೌರ್ಬಲ್ಯವಲ್ಲ; ಪ್ರಸಾದ್ ಪಾಣಾಜೆ: ಇಲ್ಲಿನ ಜನರ ತಾಳ್ಮೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ದೌರ್ಬಲ್ಯ ಎಂದು ತಿಳಿದುಕೊಳ್ಳಬೇಡಿ. ತಾಳ್ಮೆಯ ಕಟ್ಟೆ ಒಡೆದರೆ ಜನ ಶಕ್ತಿ ಏನು ಎಂಬುದು ಎಲ್ಲರಿಗೂ ಅರ್ಥವಾಗಬಹುದು. ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಸುರತ್ಕಲ್ ಟೋಲ್‌ಗೇಟ್ ಮಾದರಿಯಲ್ಲಿ ಹೋರಾಟದ ಅಗತ್ಯವಿದೆ. ಅನೇಕ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಈ ರಸ್ತೆಯನ್ನು ನಿರ್ಲಕ್ಷ್ಯ ಮಾಡಿದರೆ ದೇವರು ಕೂಡಾ ಸುಮ್ಮನೆ ಬಿಡಲಾರನು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ ಹೇಳಿದರು.

ಉದ್ದೇಶ ಪೂರ್ವಕವಾಗಿಯೇ ಅಭಿವೃದ್ಧಿ ಮಾಡುತ್ತಿಲ್ಲ: ಸ್ಥಳೀಯ ಯುವ ಮುಖಂಡರಾದ ಸಹದ್ ಕರ್ನೂರು ಮಾತನಾಡಿ ನಾವು ರಸ್ತೆಗಾಗಿ ಬೀದಿಗಿಳಿದಿದ್ದೇವೆ, ಕಳೆದ ಹಲವು ವರ್ಷಗಳಿಂದ ನಾವು ನರಕಯಾತನೆ ಅನುಭವಿಸುತ್ತಿದ್ದೇವೆ. ಗಡಿನಾಡ ಭಾಗದ ಈ ರಸ್ತೆಯನ್ನು ಉದ್ದೇಶಪೂರ್ವಕವಾಗಿಯೇ ಅಭಿವೃದ್ದಿ ಮಾಡುತ್ತಿಲ್ಲ ಎಂದು ಭಾಸವಾಗುತ್ತಿದೆ. ಜನ ಇನ್ನೂ ಸುಮ್ಮನೆ ಕೂರಲು ಸಾಧ್ಯವಿಲ್ಲ ನಾವು ಹೋರಾಟದ ಹಾದಿಗೆ ಧುಮುಕಲಿದ್ದೇವೆ ಎಂದು ಹೇಳಿದರು.

ಇಸಾಖ್ ಸಾಲ್ಮರ ಮಾತನಾಡಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯುವ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಶಿಹಾಬ್ ನೆಯ್ಯತ್ತಡ್ಕ ಮಾತನಾಡಿ ಹೋರಾಟದ ಕಿಚ್ಚು ಆರಂಭವಾಗಿದ್ದು , ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಂಕಷ್ಟವನ್ನು ಅರಿತುಕೊಂಡು ತಕ್ಷಣವೇ ರಸ್ತೆಯನ್ನು ಅಭಿವೃದ್ದಿ ಮಾಡಬೇಕೆಂದು ವಿನಂತಿಸಿದರು. ಸ್ಥಳೀಯರಾದ ಶಮೀಮ್ ಗಾಳಿಮುಖ ಮತ್ತು ಶಾಫಿ ಕರ್ನೂರು ಪ್ರತಿಭಟನೆಯನ್ನು ಆಯೋಜಿಸಿದ್ದರು.

ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಮುಖಂಡ ಅಬ್ದುಲ್‌ರಹಿಮಾನ್ ಮೇನಾಲ, ಫಾರೂಕ್ ಬಾಯಬೆ, ಹನೀಫ್ ಪುಂಚತ್ತಾರ್, ರಿಯಾಝ್ ನೆಯ್ಯಡ್ಕ, ಶಿಹಾಬ್ ನೆಯ್ಯಡ್ಕ, ಬಾತಿಷಾ ಗಾಳಿಮುಖ, ಶಮೂನ್ ಗಾಳಿಮುಖ, ಜಿ ಎಸ್ ಖಾದರ್, ಮಹಾಬಲ ರೈ, ಶ್ರೀಧರ್, ಶಬೀರ್, ಸುಮಯ್ಯಾ, ಶುಬೈಬ್, ಭಾಶಿತ್, ರಫೀಕ್ ಅಡ್ಕ, ಅಬ್ದುಲ್ ರಹಿಮಾನ್ ಅಡ್ಕ, ಮಹಮ್ಮದ್ ಬೆದ್ರೋಡಿ, ಸಂಶುದ್ದೀನ್ ಅಜ್ಜಿನಡ್ಕ, ಶಾನವಾಜ್ ಬಪ್ಪಳಿಗೆ,ಸಯ್ಯದ್ ಕಬಕ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.