ದನಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ವಿತರಣೆ ಪೂರ್ವಭಾವಿ ಸಭೆ

0

* ಕಳೆದ ಬಾರಿಯ ಇನ್‌ಸೆಂಟಿವ್ ನೀಡದಿದ್ದರೆ ಈ ಬಾರಿ ಲಸಿಕೆ ವಿತರಿಸದಿರಲು ನಿರ್ಧಾರ-ಕಾರ್ಯದರ್ಶಿಯವರ ಸಂಘಗಳ ಒಕ್ಕೂಟ
* ಒಂದು ತಿಂಗಳ ಕಾಲ ಲಸಿಕೆ ವಿತರಣೆ
* ನ.7ರಂದು ಲಸಿಕೆ ವಿತರಣೆಗೆ ಚಾಲನೆ

ಪುತ್ತೂರು;ಕಳೆದ ಬಾರಿಯ ಕಾಲು ಬಾಯಿ ಲಸಿಕೆ ವಿತರಣೆಯ ಇನ್‌ಸೆಂಟಿವ್ ಮೊತ್ತವನ್ನು ನಮಗೆ ಪಾವತಿಸಿಲ್ಲ. ಹೀಗಾಗಿ ಈ ಬಾರಿಯ ಕಾಲು ಬಾಯಿ ಲಸಿಕೆ ವಿತರಣೆಯಲ್ಲಿ ನಾವು ಕಾರ್ಯನಿರ್ವಹಿಸುವುದಿಲ್ಲ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯವರು ತಮ್ಮ ನಿರ್ಧಾರವನ್ನು ತಿಳಿಸಿರುವ ಘಟನೆ ಮೂರನೇ ಹಂತದ ಕಾಲುಬಾಯಿ ನಿರೋಧಕ ಲಸಿಕೆ ವಿತರಣೆಯ ಪೂರ್ವ ಭಾವಿ ಸಭೆಯಲ್ಲಿ ನಡೆದಿದೆ.

ಪೂರ್ವಭಾವಿ ಸಭೆಯು ನ.5ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕುಂಬ್ರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶೇಖರ ರೈಯವರು ಮಾತನಾಡಿ, ಕಳೆದ ಬಾರಿ ಲಸಿಕೆ ವಿತರಣೆ ಮಾಡಿರುವ ನಮಗೆ ಇನ್‌ಸೆಂಟಿವ್ ಮೊತ್ತ ಇನ್ನೂ ಬಂದಿಲ್ಲ. ಹೀಗಾಗಿ ಈ ಬಾರಿ ನಾವು ಲಸಿಕೆ ವಿತರಿಸದಿರಲು ತೀರ್ಮಾನಿಸಿರುವುದಾಗಿ ಸಭೆಗೆ ತಿಳಿಸಿದರು. ಇನ್‌ಸೆಂಟಿವ್ ನೀಡುವುದಾಗಿ ಸರಕಾರ ನಮಗೆ ಭರವಸೆ ನೀಡಿತ್ತು. ಆದರೆ ಈತನಕ ನೀಡಿಲ್ಲ. ಈ ಭಾಗ ಗುಡ್ಡಗಾಡು ಪ್ರದೇಶ. ಒಂದು ಮನೆಯಿಂದ ಇನ್ನೊಂದು ಮನೆಗೆ ಬಹಳಷ್ಟು ದೂರವಿದೆ. ನಾವು ಕೈಯಿಂದ ಪೆಟ್ರೋಲ್ ಹಾಕಿಸಿಕೊಂಡು ಮನೆ ಮನೆಗಳಿಗೆ ಭೇಟಿ ನೀಡಿ ಲಸಿಕೆ ವಿತರಿಸಿದ್ದೇವೆ. ಆದರೂ ನಮಗೆ ಭದ್ರತೆಯಿಲ್ಲ ಎಂದು ಸಭೆಯಲ್ಲಿದ್ದವರು ತಮ್ಮ ನೋವನ್ನು ಸಭೆಗೆ ತಿಳಿಸಿದರು. ದ.ಕ ಹಾಲು ಒಕ್ಕೂಟದ ವೈದ್ಯಾಧಿಕಾರಿ ಜಿತೇಂದ್ರ ಮಾತನಾಡಿ, ಸರಕಾರ ಇನ್‌ಸೆಂಟಿವ್ ನೀಡುವುದಾಗಿ ಭರವಸೆ ನೀಡಿದ್ದು, ಆ ಮೊತ್ತ ಬಂದೇ ಬರುತ್ತದೆ. ಯಾವುದೇ ಕಾರಣಕ್ಕೂ ಬಾಕಿಯಾಗುವುದಿಲ್ಲ. ಈ ಬಾರಿ ಲಸಿಕೆ ವಿತರಣೆಗೆ ಒಕ್ಕೂಟದಿಂದ ದನವೊಂದಕ್ಕೆ ಮೂರು ರೂಪಾಯಿಯಂತೆ ನೀಡಲಾಗುವುದು. ಕಳೆದ ಅವಧಿಯದ್ದು ತಾಂತ್ರಿಕ ತೊಂದರೆಗಳಿಂದ ಬಾಕಿಯಾಗಿರುವುದಾಗಿ ತಿಳಿಸಿದರು. ಕಾಲುಬಾಯಿ ಲಸಿಕೆ ವಿತರಣೆಯು ಪಶುಸಂಗೋಪನಾ ಇಲಾಖೆ ಹಾಗೂ ದ.ಕ ಹಾಲು ಉತ್ಪಾದಕರ ಒಕ್ಕೂಟ ಜಂಟಿಯಾಗಿ ವಿತರಿಸಲಾಗುತ್ತಿದ್ದು ಸಹಕರಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಇಲಾಖೆಯ ಉಪನಿರ್ದೇಶಕರು ಹಾಗೂ ಆಡಳಿತ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ತಿಳಿಸಿದರು.

25 ರೂಪಾಯಿ ನೀಡಬೇಕು:

ಲಸಿಕೆ ವಿತರಣೆಗೆ ಗ್ರಾಮಾಂತರ ಪ್ರದೇಶದಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಲು ಬಹಳಷ್ಟು ದೂರವಿದೆ. ನೀವು ಕೊಡುವ ಮೂರು ರೂಪಾಯಿ ನಮಗೆ ಪೆಟ್ರೋಲ್‌ಗೆ ಸಾಕಾ ಎಂದು ಪ್ರಶ್ನಿಸಿ, ದನವೊಂದಕ್ಕೆ ತಲಾ 25 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ಒತ್ತಡ ಹಾಕುವಂತಿಲ್ಲ;

ಲಸಿಕೆ ವಿತರಣೆಗೆ ನಮ್ಮ ಮೇಲೆ ಒತ್ತಡ ಹಾಕಲಾಗುತ್ತಿದೆ. ದನಕ್ಕೆ ತಲಾ 3 ರೂಪಾಯಿ ನೀಡುವುದಾಗಿ ನೀವು ಪದೇ ಪದೇ ಹೇಳುತ್ತೀರಿ. ನಮ್ಮ ಮೇಲೆ ಒತ್ತಡ ಹಾಕಲು ನಾವು ಸರಕಾರದ ನೌಕರರಲ್ಲ. ಒಕ್ಕೂಟದ ನೌಕರರೂ ಅಲ್ಲ ಎಂದು ಶೇಖರ ರೈಯವರು ಗರಂ ಆಗಿಯೇ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಲಸಿಕೆ ವಿತರಣಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಬೇಕು. ನಿಮ್ಮ ಸಮಸ್ಯೆಗಳು ನಮಗೂ ಅರಿವಾಗುತ್ತಿದೆ. ಇದಕ್ಕಾಗಿ ಗ್ರಾ.ಪಂನಿಂದ ವಾಹನ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಲಸಿಕೆಗಳು ಈಗಾಗಲೇ ಸರಬರಾಜು ಆಗಿದೆ. ವಿತರಣೆಯ ಸಂದರ್ಭದಲ್ಲಿ ವ್ಯರ್ಥವಾಗದಂತೆ ಮುಂಜಾಗ್ರತೆ ವಹಿಸಬೇಕು. ಲಸಿಕೆ ವಿತರಿಸಿರುವ ಬಗ್ಗೆ ದಾಖಲಿಸಬೇಕು. ದನದ ಕಿವಿಯ ಟ್ಯಾಗ್ ಕಳೆದುಹೋಗಿದ್ದಲ್ಲಿ ಅಳವಡಿಸಬೇಕು. ಆವಶ್ಯವಿರುವಲ್ಲಿ ಚರ್ಮಗಂಟು ರೋಗ ನಿರೋಧಕ ಲಸಿಕೆಗಳನ್ನು ವಿತರಿಸಬೇಕು. ಗಬ್ಬದ ದನಗಳಿಗೂ ಲಸಿಕೆ ವಿತರಿಸಬಹುದು. 4 ತಿಂಗಳು ಮೇಲ್ಪಟ್ಟ ಕರುಗಳಿಗೂ ಲಸಿಕೆ ನೀಡಬಹುದು. ಲಸಿಕೆ ವಿತರಣೆಗೆ ಆರು ತಂಡಗಳಾಗಿ ಕಾರ್ಯನಿರ್ವಹಿಸಲಿದೆ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ತಿಳಿಸಿದರು.

ನ.7ರಂದು ಚಾಲನೆ:

ಮೂರನೇ ಹಂತದ ಕಾಲು ಬಾಯಿ ರೋಗ ನಿರೋಧಕ ಲಸಿಕೆ ವಿತರಣೆಯು ನ.7ರಿಂದ ಪ್ರಾರಂಭಗೊಂಡು ಡಿ.7 ರತನಕ ನಡೆಯಲಿದೆ. ನ.7ರಂದು ಹಿರೇಬಂಡಾಡಿಯಲ್ಲಿರುವ ಶಾಸಕ ಸಂಜೀವ ಮಠಂದೂರುರವರ ಮನೆಯಲ್ಲಿ ಬೆಳಿಗ್ಗೆ 8.30ಕ್ಕೆ ತಾಲೂಕು ಮಟ್ಟದ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಮಾಹಿತಿ ನೀಡಿದರು.

ದ.ಕ ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್, ತಾ.ಪಂ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಲಾಖೆಯ ಅಧಿಕಾರಿ ಹಾಗೂ ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here