ಗಂಡನ ಆಸ್ತಿ ಕಬಳಿಸಲು ಇನ್ನೊಂದು ಪತ್ನಿ ಸೃಷ್ಠಿಸಿ ಮೋಸ, ಬೆದರಿಕೆ

0

ಮಹಿಳೆ ದೂರು-ಐವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಪುತ್ತೂರು: ಗಂಡನಿಂದ ನನಗೆ ಬರಬೇಕಾದ ಆಸ್ತಿ ಹಾಗೂ ಪಾಲನ್ನು ಲಪಟಾಯಿಸುವ ಉದ್ದೇಶದಿಂದ ಗಂಡನಿಗೆ ಇನ್ನೊಂದು ಹೆಂಡತಿಯಿದ್ದಾಳೆ ಎಂದು ಸುಳ್ಳು ಕಥೆ ಸೃಷ್ಟಿ ಮಾಡಿ ಮೋಸ ಮಾಡಿರುವುದಾಗಿ ಮಹಿಳೆಯೋರ್ವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮತ್ತು ಪೊಲೀಸರು ಐದು ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.

ಪುತ್ತೂರು ಕ್ಯಾಂಪ್ಕೋ ಉದ್ಯೋಗಿಯಾಗಿದ್ದ ದಿ.ಗಣೇಶ್ ಪ್ರಸಾದ್‌ರವರ ಪತ್ನಿ ಹಾಸನ ನಗರದ ಹೇಮಾವತಿ ಆಸ್ಪತ್ರೆ ಎರಡನೇ ಕ್ರಾಸ್ ಹೊಸಲೈನ್ ನಿವಾಸಿ ಪ್ರಭಾಕರ್ ಎಂಬವರ ಪುತ್ರಿ ಪುಷ್ಪಾ ದೂರು ನೀಡಿದವರು. ನನ್ನನ್ನು ದಿನಾಂಕ 31/05/2013ರಂದು ಕ್ಯಾಂಪ್ಕೋ ಉದ್ಯೋಗಿಯಾಗಿದ್ದ ಗಣೇಶ್ ಪ್ರಸಾದ್ ಎಂಬವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಬಳಿಕ ಗಂಡನ ಮನೆ ಬನ್ನೂರು ಅನಿಲಕೋಡಿ ಎಂಬಲ್ಲಿ ಗಂಡನ ತಾಯಿ ದೇವಕಿ ಅಮ್ಮ, ಅಕ್ಕ ವಸಂತಿ ಯಾನೆ ವಸಂತ ಲಕ್ಷ್ಮಿ ಜೊತೆ ನಾನು ವಾಸ್ತವ್ಯವಿದ್ದೆ. ಆ ಸಂದರ್ಭದಲ್ಲಿ ಗಂಡನ ಸಹೋದರರಾದ ರವೀಶ ಮತ್ತು ದೇವಿಪ್ರಸಾದ ಎಂಬವರು ಮನೆಯಲ್ಲಿ ವಾಸ್ತವ್ಯವಿಲ್ಲದೆ ಇದ್ದರೂ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಒಂದೂವರೆ ವರ್ಷ ನಾನು ಗಂಡನೊಂದಿಗೆ ಸಂಸಾರ ನಡೆಸಿದ್ದೆ. ಬಳಿಕ ಅವರೆಲ್ಲರೂ ನನ್ನ ಗಂಡನೊಂದಿಗೆ ಜಗಳ ಮಾಡುತ್ತಿದ್ದು ನಂತರ ಗಂಡನ ಮನೆಯ ಸಹವಾಸ ಬೇಡವೆಂದು ನಾನು ಗಂಡನ ಕ್ವಾರ್ಟರ‍್ಸ್‌ನಲ್ಲಿ ವಾಸವಾಗಿದ್ದೆ. ಅಲ್ಲಿಗೂ ಅವರು ಬಂದು ಜಗಳವಾಡುತ್ತಿದ್ದರು. ನನ್ನ ಗಂಡನ ಕುಟುಂಬದವರು ಕೃಷಿಕರಾಗಿದ್ದು ಸಾಕಷ್ಟು ಚರಸೊತ್ತುಗಳಿದ್ದವು. ಈ ಮಧ್ಯೆ ನಾನು ಹಾಸನಕ್ಕೆ ಹೋಗಿದ್ದೆ 25/03/2019ರಂದು ನನ್ನ ಗಂಡ ಗಣೇಶ್ ಪ್ರಸಾದ್‌ರವರು ಮೃತಪಟ್ಟ ಬಗ್ಗೆ ಗಂಡನ ಅಕ್ಕ ನನಗೆ ಫೋನ್ ಮಾಡಿ ತಿಳಿಸಿದ್ದರು. ವಿಷಯ ತಿಳಿದ ನಾನು ಮನೆಗೆ ಬಂದಾಗ ನನ್ನ ಗಂಡನ ಮೃತದೇಹ ನೋಡಲು ಬಿಡದೆ ಅಂತ್ಯಕ್ರಿಯೆ ನಡೆಸಿರುತ್ತಾರೆ. ಬಳಿಕ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ನಾನು ಹಾಸನಕ್ಕೆ ಹೋಗಿ ವಾಸವಾಗಿದ್ದು ಕ್ಯಾಂಪ್ಕೋದಿಂದ ಸಿಗಬೇಕಾದ ನನ್ನ ಗಂಡನ ಭವಿಷ್ಯನಿಧಿ, ಸಂಬಳ ಹಾಗೂ ಇತರ ಭತ್ಯೆಗಳನ್ನು ಪಡೆಯುವ ಸಲುವಾಗಿ ನನಗೆ ವಾರಿಸುದಾರ ದೃಢಪತ್ರದ ಅವಶ್ಯಕತೆ ಇದ್ದ ಕಾರಣ ಹಾಸನದ ಸುಮಾ ಎಂಬ ವಕೀಲರನ್ನು ನೇಮಕ ಮಾಡಿಕೊಂಡು ಹಾಸನದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಿರುತ್ತೇನೆ. ಆ ಬಳಿಕ ಅತ್ತಿಗೆ ವಸಂತಿ ಯಾನೆ ವಸಂತಲಕ್ಷ್ಮಿ, ಬಾವ ದೇವಿಪ್ರಸಾದ್‌ರವರು ಸೇರಿ ನನ್ನನ್ನು ಪುತ್ತೂರಿಗೆ ಕರೆಸಿ ಗಂಡನಿಂದ ಬರಬೇಕಾದ ಹಣವನ್ನು ಕೊಡುತ್ತೇವೆ ಹಾಗೂ ಆಸ್ತಿಯನ್ನು ಕೊಡುತ್ತೇವೆ ಎಂದು ನಂಬಿಸಿ ಆಸೆ, ಅಮಿಷ ಒಡ್ಡಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲವೊಂದು ಸಹಿ ಹಾಗೂ ಖಾಲಿ ಹಾಳೆಯಲ್ಲಿ ಸಹಿ ಪಡೆದಿರುತ್ತಾರೆ. ಅಲ್ಲದೆ ನನ್ನ ಗಂಡನ ಕಾರು, ಜೀಪು ಹಾಗೂ ಇನ್ಸೂರೆನ್ಸ್ ಹಣವನ್ನು ವರ್ಗಾವಣೆ ಮಾಡಿಸಿ ಕೊಡುತ್ತೇವೆ ಎಂದು ನಂಬಿಸಿ ಸಹಿ ಪಡೆದಿರುತ್ತಾರೆ. ನನ್ನ ವಕೀಲರಾದ ಸುಮಾರವರು ಪುತ್ತೂರಿನಲ್ಲಿ ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ಪುತ್ತೂರಿಗೆ ಹೋಗಬೇಕೆಂದು ಕರೆದುಕೊಂಡು ಬಂದಾಗ ನನ್ನನ್ನು ಗಂಡನ ಕುಟುಂಬದವರು ಒಂದು ಹೆಂಗಸನ್ನು ತೋರಿಸಿ ಈಕೆ ರಶ್ಮಮ್ಮ ನಿನ್ನ ಗಂಡನ ಮೊದಲನೇ ಹೆಂಡತಿ ಎಂದು ಹೇಳಿ ಗಂಡನ ಪರಿಹಾರ ಧನದಲ್ಲಿ ಹಾಗೂ ಗಂಡನ ಆಸ್ತಿಯಲ್ಲಿ ನಿನಗೆ ಯಾವುದೇ ಹಕ್ಕು ಇಲ್ಲ. ನೀನು ಎರಡನೇ ಹೆಂಡತಿಯಾಗಿರುವುದರಿಂದ ನೀನು ಗಂಡನಿಗೆ ಸಂಬಂಧಿಸಿದ ಪರಿಹಾರ ಕೇಳಿದರೆ ನಿನ್ನ ಗಂಡನ ಮೊದಲನೇ ಹೆಂಡತಿ ರಶ್ಮಮ್ಮರವರು ನಿನ್ನ ಮೇಲೆ ಕೇಸು ದಾಖಲಿಸಿ ಜೈಲಿಗೆ ಹಾಕುತ್ತಾರೆ. ಆದರೆ ನಾವು ಆಕೆಯ ಜೊತೆ ಮಾತನಾಡಿ ಒಪ್ಪಿಸಿದ್ದೇವೆ. ನಿನಗೆ ನಿನ್ನ ಗಂಡನಿಂದ ಬರಬೇಕಾದ ಪರಿಹಾರದ ಮೊತ್ತವನ್ನು ಕೊಡಿಸುತ್ತೇವೆ. ಇಲ್ಲದೇ ಇದ್ದಲ್ಲಿ ನಿನ್ನನ್ನು ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಸಿ ನನ್ನಿಂದ ಸಹಿ ಪಡೆದುಕೊಂಡು ನಂಬಿಸಿದ್ದು ಆ ಸಮಯ ತಾನು ಅಘಾತಕ್ಕೆ ಒಳಗಾಗಿದ್ದು ಆ ಬಳಿಕ ತನಗೆ ಈ ವಿಚಾರದಲ್ಲಿ ಸಂಶಯ ಬಂದು ಪರಿಶೀಲನೆಗೆ ಹೋದಾಗ ಸದ್ರಿ ರಶ್ಮಮ್ಮ ಮೈಸೂರಿನ ಕೆ.ಆರ್. ನಗರದ ಬಳ್ಳಾರು ನಿವಾಸಿಯಾಗಿದ್ದು ಬೆಂಗಳೂರಿನ ಜೈಕುಮಾರ ಎಂಬವರ ಪತ್ನಿಯಾಗಿರುತ್ತಾರೆ ಎಂದು ತಿಳಿದು ಬಂದಿರುತ್ತದೆ. ನನ್ನ ಯಜಮಾನರ ಕುಟುಂಬದಲ್ಲಿ ಸಾಕಷ್ಟು ಪಿತ್ರಾರ್ಜಿತ ಆಸ್ತಿಗಳಿದ್ದು ಅವುಗಳ ವಿಲೇವಾರಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಸದ್ರಿ ಆಸ್ತಿಯಲ್ಲಿ ತನ್ನ ಗಂಡನಿಗೂ ಹಕ್ಕು ಇರುವುದರಿಂದ ಆಸ್ತಿಗಳನ್ನು ಲಪಟಾಯಿಸುವ ದುರುದ್ದೇಶದಿಂದ ಆರೋಪಿಗಳಾದ ಬನ್ನೂರು ಅನಿಲಕೋಡಿಯವರಾದ ನನ್ನ ಅತ್ತಿಗೆ ವಸಂತಿ ಯಾನೆ ವಸಂತ ಲಕ್ಷ್ಮೀ, ಬಾವಂದಿರಾದ ರವೀಶ, ದೇವಿಪ್ರಸಾದ್ ಅಲ್ಲದೆ ಪಡ್ನೂರು ಕೆದಿಲದ ರಾಜಶೇಖರ ಮತ್ತು ಬೆಂಗಳೂರಿನ ರಶ್ಮಮ್ಮ ಎಂಬವರು ಸೇರಿಕೊಂಡು ಸಮಾನ ಉದ್ಧೇಶದಿಂದ ತನ್ನ ಗಂಡನಿಗೆ ಮೊದಲ ಹೆಂಡತಿ ರಶ್ಮಮ್ಮ ಎಂಬವರು ಇರುವುದಾಗಿ ಸೃಷ್ಟಿ ಮಾಡಿ, ಹೆದರಿಸಿ ಬೆದರಿಸಿ ಕಾಗದ ಪತ್ರಗಳಿಗೆ ಸಹಿ ಪಡೆದುಕೊಂಡು ನಕಲಿ ದಾಖಲೆ ಸೃಷ್ಟಿಸಿ, ವಂಚನೆ ಮಾಡಿರುತ್ತಾರೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಪುಷ್ಪಾರವರು ದೂರು ನೀಡಿದ್ದಾರೆ. ಈ ಐವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ 192, 196, 197, 198, 199, 200, 205, 209, 417, 419, 420, 506 ಮತ್ತು 34ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here