ಪುತ್ತೂರು: 4 ವರ್ಷಗಳ ಹಿಂದೆ ಕೌಡಿಚ್ಚಾರಿನಲ್ಲಿ ನಡೆದ ದರೋಡೆಯತ್ನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಬಿಹಾರ ರಾಜ್ಯದ ಸರಾಯಿ ಜಿಲ್ಲೆಯ ವಿಷ್ಣುಪುರ ಗ್ರಾಮದ ವಿಜಯರಾಜ್ ಅವರ ಪುತ್ರ ಅಂಕುಶ್ ರಾಜ್ ಯಾನೆ ನಿಶಾಂತ್ ರಾಜ್ (27ವ.) ಬಂಧಿತ ಆರೋಪಿ. ಅಂಕುಶ್ ರಾಜ್ ಸಹಿತ ಇತರ ಆರೋಪಿಗಳು 2018 ರಲ್ಲಿ ಕೌಡಿಚ್ಚಾರ್‌ನಲ್ಲಿ ದರೋಡೆ ಯತ್ನ ನಡೆಸಿದ್ದರು. ಈ ಬಗ್ಗೆ ಆರೋಪಿಗಳ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಅಂಕುಶ್ ರಾಜ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿಲ್ಲವೆಂದು ವಾರಂಟ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್‌ಚಂದ್ರರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ಅಧೀಕ್ಷಕ ಡಾ| ವೀರಯ್ಯ ಹಿರೇಮಠ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್ ರವರ ನಿರ್ದೇಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಉದಯರವಿ ಮತ್ತು ರಾಮಕೃಷ್ಣರ ಮಾರ್ಗದರ್ಶನದಲ್ಲಿ ನ. 2ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಹರೀಶ್, ಶಿವಾನಂದ ಮತ್ತು ಮುನಿಯ ನಾಯ್ಕರವರು ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ.5 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.